2023ರ ವಿಧಾನಸಭೆ ಚುನಾವಣೆಗೆ ದಳಪತಿಗಳು ಭರ್ಜರಿ ಸಿದ್ಧತೆ ನಡೆಸಿಕೊಂಡಿದ್ದಾರೆ. ಅದರಲ್ಲೂ ಜೆಡಿಎಸ್ ಭದ್ರಕೋಟೆ ಹಾಸನದಲ್ಲಿ ಗೌಡರ ಕುಟುಂಬ ಬಿಜೆಪಿಗೆ ಅಷ್ಟದಿಗ್ಬಂಧನ ಹಾಕಲು ತಯಾರಿ ನಡೆಸಿದೆ. ಹಾಸನ ಕ್ಷೇತ್ರದಲ್ಲಿ ಗೆದ್ದ ಶಾಸಕ ಪ್ರೀತಂ ಗೌಡಗೆ ತಕ್ಕಪಾಠ ಕಲಿಸಲು ದೊಡ್ಡಗೌಡರ ಸೊಸೆ ಖುದ್ದು ಅಖಾಡಕ್ಕೆ ಇಳಿದಿದ್ದಾರೆ.
ರಾಜ್ಯದಲ್ಲಿ ಪರಿಷತ್ ಮಿನಿ ಸಮರಕ್ಕೆ ವೇದಿಕೆ ಸಜ್ಜಾಗಿದೆ. ಮೇಲ್ಮನೆಯಲ್ಲಿ ಮೋಡಿ ಮಾಡಲು ಮೂರು ಪಕ್ಷಗಳು ಅಬ್ಬರದ ಪ್ರಚಾರ ನಡೆಸಿವೆ. ಅದೇ ರೀತಿ ದಳಪತಿಗಳು ತಾವು ಸ್ಪರ್ಧಿಸಿರೋ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಬಿಗ್ ಪ್ಲಾನ್ ಮಾಡಿದ್ದಾರೆ. ಅದರಲ್ಲೂ ಹಾಸನದಲ್ಲಿ ಪರಿಷತ್ ಚುನಾವಣೆ ಗೆಲ್ಲುವ ಮೂಲಕ ಮುಂದಿನ ಚುನಾವಣೆಗೆ ಅಡಿಪಾಯ ಹಾಕಲು ಸಜ್ಜಾಗಿದ್ದಾರೆ. ಈ ಮೂಲಕ ಹಾಸನದ ಬಿಜೆಪಿ ಶಾಸಕ ಪ್ರೀತಂ ಗೌಡಗೆ ಅಷ್ಟದಿಗ್ಬಂಧನ ವಿಧಿಸಲು ಹೆಚ್.ಡಿ. ರೇವಣ್ಣ ಪತ್ನಿ ಭವಾನಿ ರೇವಣ್ಣ ಭಾರೀ ರಣತಂತ್ರ ಹೆಣೆದಿದ್ದಾರೆ. ಪ್ರೀತಂ ಗೌಡರ ಹಣೆಯಲ್ಲಿ ಬೆವರು ತರುವಂತಹ ಅಷ್ಟ ಅಸ್ತ್ರಗಳನ್ನ ಸಿದ್ಧಪಡಿಸಿದ್ದಾರೆ.
ಹಾಸನ ಕ್ಷೇತ್ರದಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ದಳಪತಿಗಳು ವ್ಯೂಹ ರಚಿಸಿದ್ದಾರೆ. ಎಲ್ಲ ಲೆಕ್ಕಾಚಾರ ಹಾಕಿಯೇ ಸೂರಜ್ ರೇವಣ್ಣಗೆ ಹಾಸನ ಪರಿಷತ್ ಟಿಕೆಟ್ ನೀಡಿದ್ದಾರೆ. ಇನ್ನು ಸೂರಜ್ ರೇವಣ್ಣಗೆ ಟಿಕೆಟ್ ನೀಡಬೇಕೆಂದು ಭವಾನಿ ರೇವಣ್ಣ ಪಟ್ಟು ಹಿಡಿದಿದ್ರು ಎನ್ನಲಾಗಿದೆ.
ಭವಾನಿ ರೇವಣ್ಣರ ಮಾತಿಗೆ ಕಟ್ಟುಬಿದ್ದು, ಸೂರಜ್ಗೆ ಗೌಡರಿಗೆ ಟಿಕೆಟ್ ನೀಡಲಾಗಿದೆಯಂತೆ. ಈ ಮೂಲಕ ಸೂರಜ್ರನ್ನು ಪರಿಷತ್ಗೆ ಕಳುಹಿಸಿ ಹಾಸನವನ್ನ ತನ್ನ ತೆಕ್ಕೆಗೆ ಹಾಕಿಕೊಳ್ಳಲು ದಳ ಪ್ಲಾನ್ ಮಾಡಿದೆ ಎನ್ನಲಾಗಿದೆ.
ಈಗಾಗಲೇ ಹಾಸನದಲ್ಲಿ ಜೆಡಿಎಸ್ ಪಾರುಪತ್ಯ ಮೆರೆದಿದೆ. ಅಲ್ಲದೇ ಭದ್ರಕೋಟೆಯನ್ನೂ ರಚಿಸಿಕೊಂಡಿದೆ. ಇದರ ಮಧ್ಯೆ ಬಿಜೆಪಿ ಕೋಟೆಗೆ ಲಗ್ಗೆ ಹಾಕಲು ಅಷ್ಟ ಸೂತ್ರಗಳನ್ನ ಭವಾನಿ ರೇವಣ್ಣ ರಚಿಸಿದ್ದಾರೆ ಎನ್ನಲಾಗಿದೆ.
ಹೆಚ್.ಡಿ.ರೇವಣ್ಣ ಸದ್ಯ ಹೊಳೆನರಸೀಪುರ ಕ್ಷೇತ್ರದ ಶಾಸಕ. ಇತ್ತ ಹೆಚ್.ಡಿ. ರೇವಣ್ಣರ ಪುತ್ರ ಪ್ರಜ್ವಲ್ ರೇವಣ್ಣ ಹಾಸನದ ಲೋಕಸಭಾ ಸದಸ್ಯ. ಇದೀಗ ಇನ್ನೊಬ್ಬ ಪುತ್ರ ಸೂರಜ್ ರೇವಣ್ಣರನ್ನ ಮೇಲ್ಮನೆಗೆ ಕಳುಹಿಸೋದು ಭವಾನಿ ರೇವಣ್ಣ ಅಷ್ಟದಿಗ್ಬಂಧನದ ಪ್ಲಾನ್ ಆಗಿದೆ. ಈ ಮೂಲಕ 2023ರ ವಿಧಾನಸಭಾ ಚುನಾವಣೆಗೆ ಭವಾನಿ ರೇವಣ್ಣ ಕೂಡಾ ಸಿದ್ಧತೆ ನಡೆಸ್ತಿದ್ದಾರೆ ಎನ್ನಲಾಗಿದೆ.

ಹಾಸನ ಕ್ಷೇತ್ರದಿಂದ ಕಣಕ್ಕಿಳಿಯಲು ತೆರೆಮರೆಯಲ್ಲಿ ತಯಾರಿಯನ್ನೂ ಆರಂಭಿಸಿದ್ದಾರಂತೆ. ಈ ಮೂಲಕ ಪ್ರೀತಂಗೌಡ ವಿರುದ್ಧ ಪ್ರಬಲ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿಯಲು ಭವಾನಿ ರೇವಣ್ಣ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಹಾಸನ ಕ್ಷೇತ್ರವನ್ನ ಕೇಂದ್ರೀಕರಿಸಿ ಮುಂದಿನ ಚುನಾವಣೆ ಎದುರಿಸೋದು ದೇವೇಗೌಡರ ಸೊಸೆಯ ರಣತಂತ್ರವಂತೆ.
ಈ ಹಿಂದೆ 2018ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹಾಸನ ಜಿಲ್ಲೆಯ ಒಂದು ಕ್ಷೇತ್ರದಲ್ಲಿ ಅಚ್ಚರಿಯ ಫಲಿತಾಂಶ ಹೊರಬಿದ್ದಿತ್ತು. ಇಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿ ಜಯಗಳಿಸಿದ್ದು, ಜಿಲ್ಲೆಯಲ್ಲಿ ಬಿಜೆಪಿ ಖಾತೆ ತೆರೆದಂತಾಗಿತ್ತು. ಆದ್ರೆ, ಇದೇ ಫಲಿತಾಂಶ 2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲೂ ಮರುಕಳುಹಿಸುತ್ತದೆ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಏಕೆಂದರೆ, 201ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿರುವ ಪ್ರೀತಂಗೌಡರನ್ನು ಸೋಲಿಸಲು ಹೆಚ್.ಡಿ.ದೇವೇಗೌಡರ ಪುತ್ರ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಮಾಸ್ಟರ್ಪ್ಲಾನ್ ಈಗಾಗಲೇ ರೂಪಿಸಿದ್ದಾರೆ.
ಅಚ್ಚರಿಯ ಫಲಿತಾಂಶದ ಮೂಲಕ ಹಾಸನದಲ್ಲಿ ಖಾತೆ ತೆರೆದ ಬಿಜೆಪಿಗೆ, 2023 ರಲ್ಲಿ ಸೋಲಿನ ರುಚಿ ತೋರಿಸಲೇಬೇಕೆಂದು ಹೆಚ್.ಡಿ.ರೇವಣ್ಣ ಸರ್ವ ಸನ್ನದ್ಧರಾಗುತ್ತಿದ್ದು, ತೆರೆಮರೆಯಲ್ಲಿಯೇ ಮಾಸ್ಟರ್ಪ್ಲಾನ್ ತಯಾರಿ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ.
2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದ ದಂಗಲ್ ಈಗಿನಿಂದಲೇ ಶುರುವಾಗಿದ್ದು, ಪ್ರೀತಂಗೌಡ ಎಚ್ಚರಿಕೆಯಿಂದಿರಬೇಕಾಗಿದೆ. ಸ್ವಲ್ಪ ಯಾಮಾರಿದ್ರೂ, ರೇವಣ್ಣ ಅಂಡ್ ಟೀಂ ಪ್ರೀತಂಗೌಡರನ್ನು ಮನೆಯಲ್ಲಿ ಕೂರವಂತೆ ಮಾಡುವುದು ನಿಶ್ಚಿತ ಅನ್ನೋದು ಕ್ಷೇತ್ರದಲ್ಲಿ ಕೇಳಿ ಬರುತ್ತಿರುವ ಬಲವಾದ ಅಭಿಪ್ರಾಯ.
ಏನದು ಮಾಸ್ಟರ್ ಪ್ಲಾನ್ ಮತ್ತು ಅಷ್ಟ ಅಸ್ತ್ರಗಳು?
- ಜಿಲ್ಲಾ ಮಟ್ಟದಲ್ಲಿರುವ ಎಲ್ಲಾ ಬಿಜೆಪಿ ಮುಖಂಡರನ್ನು ಜೆಡಿಎಸ್ಗೆ ಕರೆತರುವುದು
- ಪರಿಷತ್ ಚುನಾವಣೆಯಲ್ಲಿ ಸೂರಜ್ ಗೌಡರನ್ನು ಗೆಲ್ಲಿಸಿ ಪ್ರೀತಂ ಗೌಡ ಶಕ್ತಿ ಕುಂದಿಸುವುದು
- ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಅವಧಿಯಲ್ಲಾದ ಕೆಲಸಗಳ ಬಗ್ಗೆ ಪ್ರಚಾರ
- ಮುಂದೆ ಎದುರಾಗಲಿರುವ ಎಲ್ಲಾ ಚುನಾವಣೆಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳನ್ನೇ ಗೆಲ್ಲಿಸುವುದು
- ಈಗಿನಿಂದಲೇ ಪ್ರೀತಂ ಗೌಡಗೆ ಮತದಾರರೊಂದಿಗೆ ಇರುವ ಸಂಪರ್ಕ ಹೇಗಾದರೂ ಸರಿ ಕಡಿತಗೊಳಿಸುವುದು
- ಪ್ರೀತಂ ಗೌಡ ಕ್ಷೇತ್ರದಲ್ಲಿ ಬೇರೆಯಾದ ಜೆಡಿಎಸ್ ಕಾರ್ಯಕರ್ತರನ್ನು ಒಂದು ಮಾಡುವುದು
- ಜೆಡಿಎಸ್ ಪಕ್ಷ ಸಂಘಟನೆ ಜೊತೆಗೆ ಅಭಿವೃದ್ಧಿ ಕೆಲಸಗಳನ್ನು ಮಾಡಿಸುವುದು
- ಮುಂದಿನ ಚುನಾವಣೆ ವೇಳೆಗೆ ಪ್ರೀತಂ ಗೌಡ ರಿಪೋರ್ಟ್ ಕಾರ್ಡ್ ಹಿಡಿದು ಬಿಜೆಪಿ ವಿರುದ್ಧ ಏನು ಕೆಲಸ ಮಾಡಿಲ್ಲ ಎಂದು ಪ್ರಚಾರ ಮಾಡೋದು..