ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರ ಫೆಬ್ರವರಿ 1ರಂದು ತನ್ನ ಒಂಭತ್ತನೇ ಬಜೆಟ್ ಮಂಡಿಸುತ್ತಿದೆ. ವರ್ಷದಿಂದ ವರ್ಷಕ್ಕೆ ಬಜೆಟ್ ‘ಜನಪ್ರಿಯ’ವಾಗುತ್ತಿದೆ. ಬಜೆಟ್ ಬಗ್ಗೆ ವಿರೋಧ ಪಕ್ಷಗಳ ಟೀಕೆಗಳ ಹೊರತಾಗಿ ವಾಸ್ತವಿಕ ವಿಮರ್ಶೆಗಳೇ ಬರುತ್ತಿಲ್ಲ. ಎಲ್ಲರೂ ಕೊಂಡಾಡುತ್ತಾರೆ. ಕೊಂಡಾಡುವವರೆಲ್ಲರದೂ ಸುದ್ದಿಯಾಗುತ್ತದೆ. ಮಾಡಿದ ಟೀಕೆಗಳು ಸುದ್ದಿಯಾಗುವುದೇ ಇಲ್ಲ.
ಮೋದಿ ಸರ್ಕಾರ ಮಾಡುತ್ತಿರುವ ಬಂಡವಾಳ ವೆಚ್ಚಗಳು ಮಿತಿ ಮೀರಿ ಏರುತ್ತಿವೆ. ವಿತ್ತೀಯ ಕೊರತೆಯಂತೂ ಹಿಂದೆಂದೂ ಕಂಡೂ ಕಾಣದ ಮಟ್ಟಕ್ಕೆ ಹಿಗ್ಗಿದೆ. ವ್ಯಾಪಾರ ಕೊರತೆಯೂ ಹಿಗ್ಗುತ್ತಿದೆ. ವರ್ಷದಿಂದ ವರ್ಷಕ್ಕೆ ತಗ್ಗಬೇಕಾದ ದೇಶದ ಬಡಜನರ ಸಂಖ್ಯೆಯೂ ಹೆಚ್ಚುತ್ತಿದೆ. ನಿರುದ್ಯೋಗವಂತೂ ಸರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದೆ. ಇಷ್ಟಾದರೂ ಮೋದಿ ಸರ್ಕಾರದ ಬಜೆಟ್ ಜನಪ್ರಿಯವಾಗುತ್ತಿದೆ. ಆದರೆ, ಮೋದಿ ಸರ್ಕಾರದ ಬಜೆಟ್ ಎಂದೂ ‘ಜನಪರ’ವಾಗಿಲ್ಲ!
ಜನಪರ ಬಜೆಟ್ಟುಗಳನ್ನು ಕಾರ್ಪೊರೆಟ್ ಕುಳಗಳು ಹೊಗಳುವುದಿಲ್ಲ. ಸರ್ಕಾರದ ಕೃಪಾಪೋಷಿತ ಆರ್ಥಿಕತಜ್ಞರು ಶ್ಲಾಘಿಸುವುದಿಲ್ಲ. ಮಾಧ್ಯಮಗಳೂ ಸಕಾರಾತ್ಮಕವಾಗಿ ವಿಶ್ಲೇಷಿಸುವುದಿಲ್ಲ. ಏಕೆಂದರೆ ಜನಪರ ಬಜೆಟ್ ಮೂಲ ಆಶಯವು ಸಮಾಜದ ಕಟ್ಟಕಡೆಯ ವಕ್ತಿಗೂ ಗೌರವಯುತವಾಗಿ ಬದುಕುವ ಹಕ್ಕು ಮತ್ತು ಸೌಲಭ್ಯ ನೀಡುವ ಸದಾಶಯ ಹೊಂದಿರುತ್ತದೆ. ಈ ಸದಾಶಯದ ಈಡೇರಿಕೆಗೆ ಉಳ್ಳವರ ಮೇಲೆ ಭಾರಿ ತೆರಿಗೆ ಹೊರೆ ಹೇರಲಾಗುತ್ತದೆ. ಮುಖ್ಯವಾಗಿ ಪ್ರತಿವರ್ಷವೂ ಸಾವಿರಾರು ಕೋಟಿ ರೂಪಾಯಿ ಲಾಭಗಳಿಸುವ ಕಾರ್ಪೊರೆಟುಗಳ ಮೇಲೆ ಭಾರಿ ತೆರಿಗೆ ವಿಧಿಸಲಾಗುತ್ತದೆ. ಬೆಲೆಗಳು ನಿಯಂತ್ರಣದಲ್ಲಿರುತ್ತವೆ. ಗ್ರಾಮೀಣ ಪ್ರದೇಶದಲ್ಲಿ ರಸ್ತೆ, ಆಸ್ಪತ್ರೆ, ಶಾಲೆ, ಕುಡಿಯುವ ನೀರು ಮತ್ತಿತರ ಮೂಲಭೂತ ಸೌಲಭ್ಯಗಳಿಗಾಗಿ ಹೆಚ್ಚಿನ ಹಣವನ್ನು ವಿನಿಯೋಗ ಮಾಡಲಾಗುತ್ತದೆ. ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಯೋಜನೆಯಡಿ ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗ ಒದಗಿಸಲಾಗುತ್ತದೆ. ಆ ಜನರೂ ಆರ್ಥಿಕವಾಗಿ ಸದೃಢರಾಗುತ್ತಾರೆ.
ಮನಮೋಹನ ಸಿಂಗ್ ಅವರು ಆಡಳಿತದ ಹತ್ತು ವರ್ಷಗಳಲ್ಲಿ ಬಡತನ ತ್ವರಿತಗತಿಯಲ್ಲಿ ನಿವಾರಣೆಯಾಗುತ್ತಾ ಬಂತು, ನಿರುದ್ಯೋಗ ಗಣನೀಯವಾಗಿ ತಗ್ಗುತ್ತಾ ಬಂತು, ದೇಶದ ಆರ್ಥಿಕತೆ ಪ್ರಬಲವಾಗುತ್ತಾ ಬಂತು, ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವಯುತ ಸ್ಥಾನ ದೇಶಕ್ಕೆ ದಕ್ಕಿತು- ಏಕೆಂದರೆ ಮನಮೋಹನ್ ಸಿಂಗ್ ಅವರು ಮಂಡಿಸಿದ ಎಲ್ಲಾ ಬಜೆಟ್ಟುಗಳೂ ‘ಜನಪರ’ವಾಗಿದ್ದವು.
ಮನಮೋಹನ್ ಸಿಂಗ್ ಅವರು ಎಂದೂ ತಮಗಾಗಿ 8,500 ಕೋಟಿ ರುಪಾಯಿ ದುಂದುವೆಚ್ಚ ಮಾಡಿ ವಿಮಾನ ಖರೀದಿಸಿರಲಿಲ್ಲ. ತಮ್ಮದೇ ಸುರಕ್ಷತೆಗಾಗಿ ಐಷಾರಾಮಿ ಕಾರುಗಳನ್ನು ಹೊಸದಾಗಿ ಖರೀದಿಸಿರಲಿಲ್ಲ. ವಿಸ್ತ್ಟಾ ಯೋಜನೆಗಳಿಗಾಗಿ ದುಂದು ವೆಚ್ಚ ಮಾಡಲಿಲ್ಲ. ಬೃಹತ್ ಪ್ರತಿಮೆಗಳನ್ನೂ ನಿರ್ಮಿಸಲಿಲ್ಲ. ಆ ಕಾರಣಕ್ಕಾಗಿ ಆ ಹೊತ್ತಿಗೆ ಮನಮೋಹನ್ ಸಿಂಗ್ ಅವರನ್ನು ವ್ಯಾಪಕವಾಗಿ ಟೀಕಿಸಿದ್ದವರೂ ಈಗ ಮನಮೋಹನ್ ಸಿಂಗ್ ಅವಧಿಯನ್ನು ಚಿನ್ನದಂತ ಕಾಲ ಎಂದು ಒಪ್ಪಿಕೊಳ್ಳುತ್ತಾರೆ. ಮನಮೋಹನ್ ಸಿಂಗ್ ಕಾಲದಲ್ಲಿ ಸಂಪುಟ ಸಭೆಯಲ್ಲಿ ವ್ಯಾಪಕವಾಗಿ ಚರ್ಚೆ ಆದ ನಂತರವೇ ಯೋಜನೆ ಅನುಷ್ಠಾನವಾಗುತ್ತಿತ್ತು. ಪ್ರಧಾನಮಂತ್ರಿ ಕಾರ್ಯಾಲಯವು ತಟಸ್ಥವಾಗಿರುತ್ತಿತ್ತು. ಸಂಪುಟದ ಸಹೋದ್ಯೋಗಿಗಳು ಮಾಧ್ಯಮಗಳಲ್ಲಿ ಮುಕ್ತವಾಗಿ ಮಾತನಾಡುತ್ತಿದ್ದರು. ಎಂದೂ ವ್ಯಕ್ತಿಪೂಜೆ ಮಾಡುತ್ತಿರಲಿಲ್ಲ. ಆಯಾ ಸಚಿವಾಲಯದ ಯೋಜನೆಗಳನ್ನು ಆಯಾ ಸಚಿವರೇ ಘೋಷಿಸುತ್ತಿದ್ದರು, ಉದ್ಘಾಟಿಸುತ್ತಿದ್ದರು ಮಾಧ್ಯಮಗಳಿಗೆ ಮಾಹಿತಿ ನೀಡುತ್ತಿದ್ದರು. ಮನಮೋಹನ್ ಸಿಂಗ್ ಎಂದೂ ಎಲ್ಲವನ್ನೂ ತಾವೇ ಮಾಡುವ ಚಟಕ್ಕೆ ಬಿದ್ದವರಲ್ಲ.

2020-21ನೇ ಸಾಲಿನಲ್ಲಿ 44 ಲಕ್ಷ ಕೋಟಿ ರೂಪಾಯಿ ಬಂಡವಾಳ ವೆಚ್ಚ ಮಾಡಲಾಗಿದೆ. ಅಷ್ಟು ದುಡ್ಡು ಎಲ್ಲಿ ಹೋಗಿದೆ, 2021-22ನೇ 55 ಲಕ್ಷ ಕೋಟಿ ರೂಪಾಯಿ ಬಂಡವಾಳ ವೆಚ್ಚ ಮಾಡಲಾಗುತ್ತಿದೆ. ಆದರೂ ನಿರುದ್ಯೋಗ ಸುಧಾರಿಸಿಲ್ಲ. ಬಡತನ ನಿವಾರಣೆಯಾಗಿಲ್ಲ, ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ದರ ಗರಿಷ್ಠಮಟ್ಟಕ್ಕೇರಿವೆ. ಆ ದುಡ್ಡೆಲ್ಲವೂ ಎಲ್ಲಿ ಹೋಯಿತು? ಮೋದಿ ಸರ್ಕಾರ ಘೋಷಿಸುತ್ತಿರುವ ಬಹುತೇಕ ಆರ್ಥಿಕ ಪ್ರೋತ್ಸಾಹಕ ಕ್ರಮಗಳು ಕಾರ್ಪೊರೆಟ್ ವಲಯಕ್ಕೆ ಹೋಗುತ್ತಿವೆ. ಮೊದಲನೆಯದಾಗಿ ಕಾರ್ಪೊರಟ್ ತೆರಿಗೆಯನ್ನು ತಗ್ಗಿಸಿದ ಮೋದಿ ಸರ್ಕಾರವು ಪ್ರತಿ ವರ್ಷವೂ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ 1.50 ಲಕ್ಷ ಕೋಟಿ ರೂಪಾಯಿ ಕೊರತೆಯಾಗುವಂತೆ ಮಾಡಿದ್ದಾರೆ.
ಕೊವಿಡ್ ಸಂಕಷ್ಟಕಾಲದಲ್ಲಿ ಉತ್ಪಾದನಾ ಆಧಾರಿತ ಪ್ರೋತ್ಸಾಹ ನೀಡಲಾಗುತ್ತಿದೆ. ಇದೆಲ್ಲವೂ ಕಾರ್ಪೊರೆಟ್ ಕಂಪನಿಗಳಿಗೆ ಹೋಗುತ್ತಿದೆ. ಅಸಂಘಟಿತ ವಲಯಕ್ಕೆ ಯಾವ ಪ್ರೋತ್ಸಾಹಕ ಕ್ರಮಗಳನ್ನೂ ಪ್ರಕಟಿಸದ ಕಾರಣ, ನಿರುದ್ಯೋಗ ಮತ್ತು ಬಡತನ ಹೆಚ್ಚುತ್ತಲೇ ಇದೆ. 2016-17ರಿಂದ 2020-21ರವರೆಗಿನ ಐದು ವರ್ಷದ ಅವಧಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿಂದ ಪಡೆದಿರುವ ಲಾಭಾಂಶವೇ 4.12 ಲಕ್ಷ ಕೋಟಿ ರೂಪಾಯಿಗಳು. ಈ ಪೈಕಿ 2018-19ರಲ್ಲಿ ಪಡೆದ 1 ಲಕ್ಷ ರೂಪಾಯಿ ಆರ್ಬಿಐ ಮೀಸಲು ನಿಧಿಯೂ ಸೇರಿದೆ. ಕೋವಿಡ್ ಸಂಕಷ್ಟಕಾಲದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರು ಕಂತುಗಳಲ್ಲಿ ಆರು ದಿನಗಳ ಕಾಲ ಮಾಧ್ಯಮಗೋಷ್ಠಿಯಲ್ಲಿ ಘೋಷಿಸಿದ ಸುಮಾರು 22 ಲಕ್ಷ ಕೋಟಿ ರೂಪಾಯಿಗಳಿಗೆ ಲೆಕ್ಕವೇ ಇಲ್ಲ. ಕೊಟ್ಟಿದ್ದೆಷ್ಟು ಬಿಟ್ಟಿದ್ದೆಷ್ಟು ಗೊತ್ತಾಗಲೇ ಇಲ್ಲ.
22 ಲಕ್ಷ ಕೋಟಿ ಘೋಷಣೆಯಿಂದ ಜನಪ್ರಿಯತೆ ಬಂತೇ ಹೊರತು ಜನರಿಗೆ ದುಡ್ಡು ಸೇರಲಿಲ್ಲ. ಮೋದಿ ಸರ್ಕಾರ ಐದು ವಿಧಾನಸಭಾ ಚುನಾವಣೆಗಳನ್ನು ಎದುರಿಸುತ್ತಿದೆ. ಉತ್ತರ ಪ್ರದೇಶವನ್ನು ಧರ್ಮ- ಜಾತಿಯ ಹೆಸರಿನಲ್ಲಿ ಗೆಲ್ಲುವುದು ಸಾಧ್ಯವಿಲ್ಲ ಎಂಬುದನ್ನು ಪ್ರಾಥಮಿಕ ಸಮೀಕ್ಷೆಗಳು ಸಾಬೀತು ಮಾಡಿವೆ. ಚುನಾವಣೆ ಗೆಲ್ಲಲಾದರೂ ಮೋದಿ ಸರ್ಕಾರ ‘ಜನಪ್ರಿಯತೆ’ ಗೀಳು ಬಿಟ್ಟು ‘ಜನಪರ’ ಬಜೆಟ್ ಮಂಡಿಸಲಿದೆಯೇ?






