ಪ್ರತಿ ವರ್ಷ ಬಜೆಟ್ ಮಂಡನೆ ಪೂರ್ವದಲ್ಲಿ ಹೆಚ್ಚಾಗಿ ಚರ್ಚೆಯಾಗುವ ಮತ್ತು ಪರಿಶೀಲನೆಗೆ ಒಳಪಡುವ ವಿಷಯ ಎಂದರೆ ವಿತ್ತೀಯ ಕೊರತೆ. ವಿತ್ತೀಯ ಕೊರತೆ ಮಿತಿಯನ್ನು ಕಾಯ್ದುಕೊಳ್ಳುವುದು ಸರ್ಕಾರದ ನೈತಿಕ ಜವಾಬ್ದಾರಿ. ಯಾವ ಸರ್ಕಾರ ವಿತ್ತೀಯ ಕೊರತೆ ಮಿತಿಯನ್ನು ಕಾಯ್ದುಕೊಳ್ಳುತ್ತದೋ ಆ ಸರ್ಕಾರ ಆರ್ಥಿಕ ಶಿಸ್ತನ್ನು ಪಾಲಿಸುತ್ತಿದೆ ಎಂದೇ ಅರ್ಥ.
ವಿತ್ತೀಯ ಕೊರತೆ ಮಿತಿ ಮೀರಿದರೆ ಅದು ಸರ್ಕಾರದ ಆರ್ಥಿಕ ಅಶಿಸ್ತು ಮತ್ತು ವಿತ್ತ ಸಚಿವರ ಅಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ವಿಶೇಷ ಸಂದರ್ಭಗಳಲ್ಲಿ ವಿತ್ತೀಯ ಕೊರತೆ ಮಿತಿ ಮೀರಿದರೆ ಅದು ಸರ್ಕಾರ ಆರ್ಥಿಕ ಇಶಿಸ್ತಾಗಲೀ, ವಿತ್ತ ಸಚಿವರ ಅಸಾಮರ್ಥ್ಯವಾಗಲೀ ಅಲ್ಲ. ಉದಾಹರಣೆಗೆ ಕೋವಿಡ್ ಸಂಕಷ್ಟ ಕಾಲ!
ಕೋವಿಡ್-19 ಭಾರತಕ್ಕೆ ಕಾಲಿಟ್ಟು ಹೆಚ್ಚು ಕಮ್ಮಿ ಎರಡು ವರ್ಷಗಳಾಗುತ್ತಾ ಬಂದಿದೆ. ಲಾಕ್ಡೌನ್ ಆದ ದಿನವನ್ನು ಲೆಕ್ಕಕ್ಕೆ ತೆಗೆದುಕೊಂಡರೆ 22 ತಿಂಗಳುಗಳಾಗಿವೆ. ಈ ಅವಧಿಯಲ್ಲಿ ಆರ್ಥಿಕತೆ ತೀವ್ರಗತಿಯಲ್ಲಿ ಏರಿಳಿತ ಕಂಡಿದೆ. ಲಾಕ್ಡೌನ್ ಮಾಡುವಾಗ ಕೊಂಚ ವಿವೇಚನೆ ಬಳಸಿದ್ದರೆ ಇಷ್ಟೆಲ್ಲ ಅನಾಹುತಗಳಾಗುತ್ತಿರಲಿಲ್ಲ ಎಂಬ ಮಾತುಗಳೂ ಇವೆ. ಅದೇನೇ ಇರಲಿ, ವಿತ್ತೀಯ ಕೊರತೆ ಪ್ರಮಾಣವು ಐತಿಹಾಸಿಕ ಗರಿಷ್ಠ ಪ್ರಮಾಣಕ್ಕೆ ಜಿಗಿದಿರುವುದಕ್ಕೆ ಕೋವಿಡ್ ಸೋಂಕು ಮತ್ತು ಅದರಿಂದಾದ ದುಷ್ಪರಿಣಾಮಗಳೇ ಕಾರಣ.
2020-21 ನೇ ಸಾಲಿನಲ್ಲಿ ವಿತ್ತೀಯ ಕೊರತೆ ಪ್ರಮಾಣವು ಶೇ.9.4ಕ್ಕೆ ಏರಿತ್ತು. ಇದು ಉದಾರಿಕಣೋತ್ತರದ ಅವಧಿಯಲ್ಲೇ ಅತಿ ಗರಿಷ್ಠ ವಿತ್ತೀಯ ಕೊರತೆ. 1998 ಮತ್ತು 2009ರಲ್ಲಿ ಮಾತ್ರ ವಿತ್ತೀಯ ಕೊರತೆ ಪ್ರಮಾಣವು ಶೇ.6ರ ಗಡಿದಾಟಿತ್ತು. ಉಳಿದಂತೆ ವಿತ್ತೀಯ ಕೊರತೆ ಪ್ರಮಾಣವು ಆಯಾ ಕಾಲಕ್ಕೆ ಬಜೆಟ್ ನಲ್ಲಿ ಘೋಷಿತ ಮಿತಿಯ ಆಜುಬಾಜಿನಲ್ಲೇ ಇದೆ. 1998-2004ರ ವಾಜಪೇಯಿ ಸರ್ಕಾರದ ಅವಧಿಯಲ್ಲಿ ವಿತ್ತೀಯ ಕೊರತೆಯು ಸರಾಸರಿ ಶೇ.5.5ರ ಆಜುಬಾಜಿನಲ್ಲಿತ್ತು. 2004ರಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಿ ಹುದ್ದೆಗೇರಿದ ನಂತರ ವಿತ್ತೀಯ ಕೊರತೆ ಪ್ರಮಾಣ ಗಣನೀಯವಾಗಿ ಕುಗ್ಗತ್ತಾ ಬಂತು.2007ರಲ್ಲಿ ಇದು ಶೇ.2.54ಕ್ಕೆ ತಗ್ಗಿ ದಾಖಲೆಯಾಗಿತ್ತು. 2008ರಲ್ಲಿ ಆದ ಜಾಗತಿಕ ಆರ್ಥಿಕ ಕುಸಿತದಿಂದಾಗಿ ವಿತ್ತೀಯ ಕೊರತೆ ಪ್ರಮಾಣ ತ್ವರಿತವಾಗಿ ಜಿಗಿಯಿತು. 2009ರಲ್ಲಿ ಶೇ.6ರ ಗಟಿ ದಾಟಿತು. ನಂತರದ ವರ್ಷಗಳಲ್ಲಿ ಮನಮೋಹನ್ ಸಿಂಗ್ ಸರ್ಕಾರವು ವಿತ್ತೀಯ ಕೊರತೆಯನ್ನು ತಗ್ಗಿಸಲು ಹಲವು ವಿತ್ತೀಯ ಬಲವರ್ಧನಾ ಕ್ರಮಗಳನ್ನು ಕೈಗೊಂಡಿತ್ತು.
2014ರ ಹೊತ್ತಿಗೆ ಶೇ.4ಕ್ಕಿಂತ ಕಡಮೆ ಮಟ್ಟಕ್ಕೆ ಬರುವಂತೆ ನೋಡಿಕೊಂಡಿತು. 2014ರ ನಂತರದಲ್ಲೂ ವಿತ್ತೀಯ ಕೊರತೆ ಶೇ.3.5.- 3.8ರ ಆಜುಬಾಜಿನಲ್ಲೇ ಇತ್ತು. 2016ರಲ್ಲಿ ಜಾರಿಗೆ ಅಪನಗದೀಕರಣದ (ನೋಟ್ ಬ್ಯಾನ್) ಮಧ್ಯಮಾವಧಿ ಪರಿಣಾಮಗಳಿಂದಾಗಿ ಮತ್ತು ಸರಕು ಮತ್ತು ಸೇವಾ ತೆರಿಗೆ ತರಾತುರಿ ಜಾರಿಯಿಂದಾಗಿ 2019ರ ವೇಳೆಗೆ ಶೇ.4ರ ಗಡಿದಾಟಿತ್ತು. 2020-21ಯಲ್ಲಿ ಆಘಾತಕಾರಿಯಾಗಿ ಶೇ.9.4ಕ್ಕೆ ಜಿಗಿದಿದೆ. 2021-22ರಲ್ಲಿ ವಿತ್ತೀಯ ಕೊರತೆಯು ಶೇ.6.8ಕ್ಕೆ ತಗ್ಗಬಹುದು ಎಂದು ವಿವಿಧ ಅರ್ಥಶಾಸ್ತ್ರಜ್ಞರು ಅಂದಾಜಿಸಿದ್ದಾರೆ.
ವಾಸ್ತವಿಕ ಸಮಸ್ಯೆ ಏನು?
ಅಷ್ಟಕ್ಕೂ ವಿತ್ತೀಯ ಕೊರತೆ ಎಂದರೇನು? ಸರ್ಕಾರಕ್ಕೆ ಬರುವ ಎಲ್ಲಾ ರೂಪದ ಆದಾಯಗಳು ಮತ್ತು ಸರ್ಕಾರ ಮಾಡುವ ಎಲ್ಲಾ ವಿಧವಾದ ಖರ್ಚುಗಳ ನಡುವಿನ ಅಂತರವೇ ವಿತ್ತೀಯ ಕೊರತೆ. ವಿತ್ತೀಯ ಕೊರತೆ ಹೆಚ್ಚಾದಷ್ಟೂ ದೇಶದ ಆರ್ಥಿಕತೆಯ ಮೇಲಿನ ಒತ್ತಡ ಹೆಚ್ಚುತ್ತದೆ. ಇದು ಹೆಚ್ಚೆಚ್ಚು ಸಾಲ ಮಾಡಲೇಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ. ಹೆಚ್ಚೆಚ್ಚು ಸಾಲ ಮಾಡಿದ ಸಂದರ್ಭಗಳಲ್ಲಿ ಬಂಡವಾಳ ವೆಚ್ಚವು ಗಣನೀಯವಾಗಿ ತಗ್ಗುತ್ತದೆ, ಆದಾಯ ವೆಚ್ಚವು ಹಿಗ್ಗುತ್ತದೆ. ಭವಿಷ್ಯದಲ್ಲಿ ದೇಶಕ್ಕೆ ಆಸ್ತಿಗಳಾಗಬಹುದಾದ, ಹೆದ್ದಾರಿ, ವಿಮಾನ ನಿಲ್ದಾಣ, ರೈಲು ಮಾರ್ಗಗಳು, ವಸತಿಗಳು, ಜಲಮಾರ್ಗಗಳು, ಬಂದರುಗಳು- ಇಂತಹವುಗಳ ಮೇಲೆ ಹೂಡಿಕೆ ಮಾಡುವುದು ಬಂಡವಾಳ ವೆಚ್ಚ, ವೇತನ, ಪಿಂಚಣಿ ಪಾವತಿ, ವಿವಿಧ ಇಲಾಖೆಗಳ ಖರ್ಚುಗಳು ಎಲ್ಲವೂ ಆದಾಯವೆಚ್ಚಗಳಾಗುತ್ತವೆ.
ಆದಾಯ ವೆಚ್ಚವು ಬಂಡವಾಳ ವೆಚ್ಚಕ್ಕಿಂತ ಹೆಚ್ಚಾದರೆ, ಭವಿಷ್ಯದಲ್ಲಿ ಆರ್ಥಿಕತೆ ಸದೃಢವಾಗಿ ಬೆಳೆಯಲು ತೊಡಕಾಗುತ್ತದೆ. ವಿತ್ತೀಯ ಕೊರತೆ ತಗ್ಗಿದಷ್ಟೂ ಬಂಡವಾಳ ವೆಚ್ಚ ಮಾಡಲು ಅನುಕೂಲವಾಗುತ್ತದೆ. ವಿತ್ತೀಯ ಕೊರತೆ ಹಿಗ್ಗಿದಷ್ಟೂ ಇರುವ ಆಸ್ತಿಗಳನ್ನೂ ನಗದೀಕರಣದ ಹೆಸರಿನಲ್ಲಿ ಖಾಸಗಿಯವರಿಗೆ ಮಾರಾಟ ಮಾಡಬೇಕಾಗುತ್ತದೆ. ಭವಿಷ್ಯದಲ್ಲಿ ದೇಶದ ಆಸ್ತಿಯು ಖಾಸಗಿಯವರ ಪಾಲಾಗಿ, ಈಗಾಗಲೇ ಹೆಚ್ಚಿರುವ ಉಳ್ಳವರು- ಇಲ್ಲದವರ ನಡುವಿನ ಮತ್ತಷ್ಟು ಹಿಗ್ಗುತ್ತದೆ. ದೀರ್ಘಕಾಲದಲ್ಲಿ ಇದು ಆರ್ಥಿಕ ಸಮಸ್ಯೆಯಾಗಷ್ಟೇ ಉಳಿಯದೇ ಸಾಮಾಜಿಕ ಕ್ಷೋಭೆಗೂ ಕಾರಣವಾಗಬಹುದು. ಈ ಕಾರಣದಿಂದಲೇ ಪ್ರತಿ ವರ್ಷವೂ ಬಜೆಟ್ ಘೋಷಣೆ ಮಾಡುವಾಗಲೇ ವಿತ್ತೀಯ ಕೊರತೆ ಮಿತಿಯನ್ನು ನಿಗದಿ ಮಾಡಲಾಗುತ್ತದೆ ಮತ್ತು ಮಿತಿಯನ್ನು ಕಾಯ್ದುಕೊಳ್ಳಲು ಪ್ರಯತ್ನಿಸಲಾಗುತ್ತದೆ.