ಮೈಸೂರಿನಲ್ಲಿ ಗುಂಬಜ್ ಮಾದರಿಯಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ ಎನ್ನುವುದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಆರೋಪ. ಇದರಲ್ಲಿ ಕಿಂಚಿತ್ತು ಕಾಂಗ್ರೆಸ್ ಪಾತ್ರ ಇಲ್ಲ. ಯಾಕಂದ್ರೆ ಈ ಬಸ್ ನಿಲ್ದಾಣ ನಿರ್ಮಾಣ ಆಗಿರೋದು ಬಿಜೆಪಿ ಶಾಸಕ ಎಸ್.ಎ ರಾಮದಾಸ್ ಆಯ್ಕೆಯಾಗಿರುವ ಕೃಷ್ಣರಾಜ ಕ್ಷೇತ್ರದಲ್ಲಿ. ಅದೂ ಕೂಡ ಶಾಸಕರ ಅನುದಾನದಿಂದ. ಪರಿಸ್ಥಿತಿ ಹೀಗಿರುವಾಗ ಸಂಸದ ಪ್ರತಾಪ್ ಸಿಂಹ ಆಕ್ರೋಶ ಹೊರ ಹಾಕಿದ್ದು ಯಾರ ವಿರುದ್ಧ..? ಸ್ವತಃ ಬಿಜೆಪಿ ಪಕ್ಷದಿಂದಲೇ ಮೈಸೂರು – ಕೊಡುಗು ಸಂಸದರಾಗಿರುವ ಪ್ರತಾಪ್ ಸಿಂಹ, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧವೇ ತಿರುಗಿ ಬಿದ್ದಿದ್ದು ಯಾಕೆ..? ಅನ್ನೋ ಅನುಮಾನ ಕಾಡುವುದಕ್ಕೆ ಶುರುವಾಗಿದೆ. ಸಿಂಹ ಸ್ವಂತ ಕ್ಷೇತ್ರದಲ್ಲಿಯೇ ವಿರೋಧಕ್ಕೆ ಒಳಗಾಗಿದ್ದು, ಒಂಟಿಯಾಗಿಯೇ ಜನರನ್ನು ಆಕರ್ಷಣೆ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ ಅನ್ನೋದು ಮೈಸೂರು ಜನರ ಮಾತು.
ಮೈಸೂರಿನಲ್ಲಿ ನಡೆದಿದ್ದ ಯೋಗಾ ದಿನಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದರು. ಮಹಾರಾಜ ಮೈದಾನದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಜನರು ಭಾಗಿಯಾಗುವ ವಿಚಾರಕ್ಕೆ ಎಸ್.ಎ ರಾಮದಾಸ್ ಹಾಗು ಸಂಸದ ಪ್ರತಾಪ್ ಸಿಂಹ ವಿರುದ್ಧ ವಾಕ್ಸಮರ ನಡೆದಿತ್ತು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೈಸೂರಿಗೆ ಕರೆದುಕೊಂಡು ಬರುತ್ತಿರುವುದೇ ನಾನು. ಈ ಕಾರ್ಯಕ್ರಮ ರೂಪಿಸಿದ್ದು ನಾನು ಎಂದು ಮಾಧ್ಯಮಗಳ ಎದುರು ಜಂಭ ಕೊಚ್ಚಿಕೊಂಡಿದ್ದ ಪ್ರತಾಪ್ ಸಿಂಹಗೆ ಭಾರೀ ಮುಜುಗರ ಆಗಿತ್ತು. ಮೈಸೂರಿಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ, ಎಸ್.ಎ ರಾಮದಾಸ್ ಅವರನ್ನು ಪಕ್ಕಕ್ಕೆ ಕರೆದು ಬೆನ್ನಿನ ಮೇಲು ಎರಡು ಏಟು ಹಾಕಿದ್ದರು. ಕುಶಲೋಪರಿ ವಿಚಾರಣೆ ಮಾಡಿದ್ದರು. ನಆನು ರಾಮದಾಸ್ಗೆ ಆತ್ಮೀಯ ಎನ್ನುವುದನ್ನು ಹಾವ ಭಾವದಿಂದಲೇ ತೋರಿಸಿದ್ದರು. ವೇದಿಕೆ ಮೇಲಿದ್ದ ಸಂಸದ ಪ್ರತಾಪ್ ಸಿಂಹ ಅವರನ್ನು ಮಾತನಾಡಿಸಿರಲಿಲ್ಲ. ಆ ಕೋಪ ಈಗ ಪ್ರತಿಫಲನ ಆಗ್ತಿದೆ ಎನ್ನುವ ಮಾತುಗಳು ಕೇಸರಿ ಮನೆಯಲ್ಲಿ ಕೇಳಿ ಬರುತ್ತಿವೆ.

ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆ ವಿಚಾರದಲ್ಲೂ ಇದೇ ರೀತಿ ಶಾಸಕ ರಾಮದಾಸ್ ಹಾಗು ಸಂಸದ ಪ್ರತಾಪ್ ಸಿಂಹ ನಡುವೆ ಜಟಾಪಟಿ ನಡೆದಿತ್ತು. ಅಂದಿನಿಂದ ಇಂದಿನ ತನಕ ಇಬ್ಬರು ಕೇಸರಿ ನಾಯಕರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ಸಣ್ಣಪುಟ್ಟದ್ದನ್ನು ಸಂಸದ ಪ್ರತಾಪ್ ಸಿಂಹ ದೊಡ್ಡದು ಮಾಡಿ ಮಾನ ಕಳೆಯುವ ಕೆಲಸ ಮಾಡ್ತಿದ್ದಾರೆ. ಇನ್ನು ಬೇರೆ ಶಾಸಕರ ಜೊತೆಗೆ ಸಂಸದರು ಚೆನ್ನಾಗಿದ್ದಾರಾ..? ಅಂದ್ರೆ ಇಲ್ಲ. ಯಾಕಂದ್ರೆ ಗ್ಯಾಸ್ ಪೈಪ್ಲೈನ್ ಹಾಕುವಾಗ ರಸ್ತೆ ಅಗೆಯುವಂತಿಲ್ಲ ಎಂದು ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ ಅಡ್ಡಿ ಮಾಡಿದ್ದರು. ನಾವು 300 ಕೋಟಿ ಅನುದಾನ ತಂದು ರಸ್ತೆ ಮಾಡಿದ ಮೇಲೆ ಕೇಂದ್ರದ ಯೋಜನೆ ಹೆಸರಲ್ಲಿ ರಸ್ತೆ ಕಿತ್ತು ಹೋದರೆ ರಸ್ತೆ ಮಾಡಿಸೋದು ಯಾರು ಅನ್ನೋ ಪ್ರಶ್ನೆ ಎತ್ತಿದ್ದರು. ಆ ಬಳಿಕ ರಾಮದಾಸ್ ಹಾಗು ನಾಗೇಂದ್ರ ವಿರುದ್ಧ ಹರಿಹಾಯ್ದಿದ್ದ ಸಂಸದ ಪ್ರತಾಪ್ ಸಿಂಹ, ಮಹಾರಾಜರನ್ನು ಬಿಟ್ಟರೆ ಅತಿ ಹೆಚ್ಚು ಮತಗಳಿಂದ ನನ್ನನ್ನು ಜನರು ಗೆಲ್ಲಿಸಿದ್ದಾರೆ. ನಾನು ಜನರಿಗಾಗಿ ಏರ್ಪೋರ್ಟ್, ಬೆಂಗಳೂರು-ಮೈಸೂರು ಹೆದ್ದಾರಿ ತಂದಿದ್ದು ನಾನು, ಪಾಸ್ಪೋರ್ಟ್ ಸೇವಾ ಕೇಂದ್ರ ಮಾಡಿಸಿದ್ದು ನಾನು ಎಂದು ಟಾಂಗ್ ಕೊಟ್ಟಿದ್ದರು. ಅದಕ್ಕೆ ತಿರುಗೇಟು ಕೊಟ್ಟಿದ್ದ ನಾಗೇಂದ್ರ, ನೀನು ಸಂಸದನಾಗಿದ್ದು, ನಮ್ಮ ಕೆಲಸದಿಂದಲೇ ಹೊರತು ನಿನ್ನ ಸಾಧನೆಯಿಂದಲ್ಲ. ತಾಕತ್ ಇದ್ರೆ ನಿಮ್ಮ ಊರಿನಲ್ಲಿ ಒಂದೇ ಒಂದು ಜಿಲ್ಲಾ ಪಂಚಾಯ್ತಿ, ಗ್ರಾಮ ಪಂಚಾಯ್ತಿ ಕ್ಷೇತ್ರದಲ್ಲಿ ಗೆದ್ದು ತೋರಿಸು ಎಂದು ಕಿಡಿಕಾರಿದ್ದರು.
ಇಷ್ಟೆಲ್ಲಾ ಆದ್ಮೇಲೆ ಸಿಎಂ ಬಸವರಾಜ ಬೊಮ್ಮಾಯಿ ಅವರೇ ಸಮಾಧಾನ ಮಾಡುವ ಕೆಲಸ ಮಾಡಿದ್ದರು. ಸಂಸದರು ಶಾಸಕರನ್ನು ಕರೆದು ಮಾತನಾಡ್ತೇನೆ ಎಂದಿದ್ದರು. ಆದರೆ ಸಮಾಧಾನ ಆದ್ರಾ ಅನ್ನೋದು ಮಾತ್ರ ಗೊತ್ತಿಲ್ಲ. ಆದರೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಬಳಿಕ ಫೈಲ್ ಒಂದನ್ನು ತೆಗೆದುಕೊಂಡು ಬಂದಿದ್ದ ಸಂಸದ ಪ್ರತಾಪ್ ಸಿಂಹ ವಿರುದ್ಧ ಸಿಎಂ ಕೆಂಡಾಮಂಡಲ ಆಗಿದ್ರು. ಸರ್, ಫೈಲ್ ಜೊತೆಗೆ ಒಂದು ಫೋಟೋ ತೆಗೆದುಕೊಳ್ತೇವೆ ಎಂದಾಗ ಸಿಡಿಮಿಡಿಗೊಂಡಿದ್ದ ಸಿಎಂ ನನ್ ಜೊತೆಗೆ ಬೇಡ, ಅತಿ ಬುದ್ಧಿವಂತರ ಜೊತೆಗೆ ಕೆಲಸ ಮಾಡಲು ಆಗಲ್ಲ ಎಂದು ಮೂಗು ಮುರಿದಿದ್ದರು. ಈ ಘಟನೆ ವೇಳೆ ಸಿಎಂ ಹಿಂಬದಿಯಲ್ಲಿ ನಾಗೇಂದ್ರ ನಿಂತಿದ್ದರು. ಅಂದರೆ ಸಿಎಂ ಮಾತಿಗೆ ಸಂಸದರು ಬೆಲೆ ಕೊಟ್ಟಿರಲಿಲ್ಲ, ತನ್ನದೇ ಆದ ಪ್ರತಿಷ್ಠೆ ತೋರಿಸಿದ್ದರು ಎನ್ನುವುದು ಎಲ್ಲರಿಗೂ ಅರ್ಥ ಆಗುವ ವಿಚಾರ. ಹೀಗಾಗಿ ಸಂಸದ ಪ್ರತಾಪ್ ಸಿಂಹ, ತನ್ನದೇ ಆದ ರೀತಿಯಲ್ಲಿ ಮೈಸೂರು, ಕೊಡಗು ಜನರ ಗಮನ ಸೆಳೆಯುವ ಕೆಲಸ ಮಾಡ್ತಿದ್ದಾರೆ. ಹಿಂದುತ್ವ, ಟಿಪ್ಪು ವಿಚಾರ ಬಂದಾಗ ಜನರನ್ನು ಪ್ರಚೋದಿಸುವ ಕೆಲಸ ಮಾಡ್ತಿದ್ದಾರೆ. ನಾನು ಏಕಾಂಗಿ ಆದರೂ ಮುಂದಿನ ಲೋಕಸಭೆಯಲ್ಲಿ ಗೆದ್ದು ಬರಬೇಕು, ಈ ಮೂಲಕ ಎಲ್ಲರಿಗೂ ಸಡ್ಡು ಹೊಡೆಯಬೇಕು ಅನ್ನೋ ಹಠಕ್ಕೆ ಬಿದ್ದಿದ್ದಾರೆ. ಆದರೆ ಶಾಸಕರು ಮಾತ್ರ ಕೈಕೊಡುವ ಪ್ಲ್ಯಾನ್ನಲ್ಲಿದ್ದಾರೆ ಎನ್ನಲಾಗ್ತಿದೆ.
ಮೂಲ : ಕೃಷ್ಣಮಣಿ











