ರಾಜ್ಯ ರಾಜಕಾರಣದ ಮಟ್ಟಿಗೆ ಇದು ನಿಜಕ್ಕೂ ಅಚ್ಚರಿ ಬೆಳವಣಿಗೆಯೇ ಸರಿ. ಇಂಥಾ ಸಾಧ್ಯಾಸಾಧ್ಯತೆಗಳನ್ನು ಅಲ್ಲಗೆಳೆಯೊಕ್ಕೂ ಆಗುವುದಿಲ್ಲ. ಏಕಂದರೆ, ರಾಜಕಾರಣವೇ ಹಾಗೆ. ಇಲ್ಲಿ ಎಲ್ಲವೂ ಹೀಗೆಯೇ ಇರಬೇಕೆನ್ನುವ ಲಿಖಿತ ನಿಯಮಗಳೇನು ಇಲ್ಲ. ರಾಜ್ಯ ರಾಜಕಾರಣ ಸಾಕಷ್ಟು ಸನ್ನಿವೇಶಗಳಲ್ಲಿ ಅಂತದ್ದೊಂದಷ್ಟು ಸ್ಥಿತ್ಯಂತರಗಳಿಗೆ ಸಾಕ್ಷಿಯಾದದ್ದೂ ಇದೆ.
ಈಗ ನಡೆಯಲಿರಬಹುದಾದ ಆ ಬೆಳವಣಿಗೆಯೂ ಇದೇ ಸಾಲಿಗೆ ಸೇರಬಹುದಾದಂಥಾ ವಿಚಾರ ಕೂಡ ಹೌದು. ಇದು ಮಾಜಿ ಸಿಎಂ ಬಿ.ಎಸ್ ವೈ ಹಾಗೂ ಪುತ್ರ ಬಿ.ವೈ.ವಿಜಯೇಂದ್ರ ಹಾಗೂ ಅವರ ಆಪ್ತೇಷ್ಟರಿಗೆ ಸಂಬಂಧಿಸಿದ ವಿಚಾರ ಇದು. ಅಧಿಕಾರದಿಂದ ಕೆಳಗಿಳಿದ ಮೇಲೆ ಒಂದು ರೀತಿ ರಾಜಕೀಯ ನಿರುದ್ಯೋಗಿಗಳಾಗಿರುವಂತ ಅಪ್ಪ ಬಿಎಸ್ ಯಡಿಯೂರಪ್ಪ, ಮಗ ವಿಜಯೇಂದ್ರ ಹಾಗೂ ಅವರ ಸಾಕಷ್ಟು ನಿಷ್ಠರು ಸೇರಿಕೊಂಡು ರಾಜ್ಯ ರಾಜಕಾರಣದಲ್ಲಿ ಹೊಸದೊಂದು ಅಧ್ಯಾಯ ಬರೆಯಲಿಕ್ಕೆ ಹೊರಟಿದ್ದಾರೆನ್ನುವ ಸಂಗತಿ ಹೊರಬಿದ್ದಿದೆ.
ಈ ವಿಷಯಕ್ಕೆ ರೆಕ್ಕೆಪುಕ್ಕ ಸಿಗೊಕ್ಕೆ ಕಾರಣ, ರಾಜಕೀಯ ಚುನಾವಣಾ ತಂತ್ರಗಾರ, ಚುನಾವಣಾ ಚಾಣಕ್ಯ ಎಂದೆನಿಸಿಕೊಂಡಿರುವ ಪ್ರಶಾಂತ್ ಕಿಶೋರ್ ಅವರೊಂದಿಗಿನ ಬಿಎಸ್ ವೈ ಹಾಗೂ ಮಗ ವಿಜಯೇಂದ್ರ ನಿರಂತರ ಸಂಪರ್ಕ. ಇದೆಲ್ಲಕ್ಕೂ ಪುಷ್ಟಿ ನೀಡುವಂತೆ ಇವತ್ತು ಖುದ್ದು ಪ್ರಶಾಂತ್ ಕಿಶೋರ್ ಅವರೇ ರಾಜಧಾನಿ ಬೆಂಗಳೂರಿಗೆ ಆಗಮಿಸಿದ್ದಾರೆ ಎಂಬ ಸುದ್ದಿಯೂ ಇದೆ.
ಗೌಪ್ಯ ಸ್ಥಳದಲ್ಲಿ ಅಪ್ಪಮಗನ ಜತೆ ಸೇರಿಕೊಂಡು ಸಮಾಲೋಚನೆ ನಡೆಸಿದ್ದಾರೆನ್ನುವ ಸುದ್ದಿ ಕೇಳಿಬಂದಿದೆ. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಮೇಲೆ ಯಡಿಯೂರಪ್ಪ ಬಹುತೇಕ ರಾಜಕೀಯ ನಿರುದ್ಯೋಗಿಯಾಗಿದ್ದಾರೆನ್ನುವುದು ಅವರ ಆಪ್ತ ಬಳಗದಿಂದಲೇ ಕೇಳಿಬಂದಿದೆ. ತಾನು ಹೇಳಿದಂತೆಯೇ ತನ್ನ ಆಪ್ತ ಬಸವರಾಜ ಬೊಮ್ಮಾಯಿ ಅವರನ್ನು ಹೈಕಮಾಂಡ್ ಸಿಎಂ ಗದ್ದುಗೆಯನ್ನು ನೀಡಲಾಯಿತಾದರೂ ಅದರಿಂದ ಯಡಿಯೂರಪ್ಪ ಅವರಿಗೆ ರಾಜಕೀಯವಾಗಿ ಲಾಭವಾಗಿದ್ದಂತೂ ಶೂನ್ಯ. ಸಿಎಂ ಗಾದಿಯಲ್ಲಿ ಕುಳಿತು ದರ್ಬಾರ್ ನಡೆಸಿದ ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿಯುತ್ತಿದ್ದಂತೆ ವಿಚಲಿತರಾಗಿದ್ದಂತೂ ಸತ್ಯ. ತಮ್ಮ ಅಣತಿಯಂತೆ ಬಸವರಾಜ ಬೊಮ್ಮಾಯಿ ನಡೆದುಕೊಳ್ಳುತ್ತಿದ್ದಾರೆನ್ನುವ ಸತ್ಯ ಗೊತ್ತಿದ್ದ ಹೊರತಾಗ್ಯೂ ಅದರಿಂದ ಪೂರ್ಣ ಪ್ರಮಾಣದ ತೃಪ್ತಿ-ಸಮಾಧಾನ ಇರಲಿಲ್ಲ ಎನ್ನುವುದು ಕೂಡ ಅಷ್ಟೇ ವಾಸ್ತವ.

ಇದು ಯಡಿಯೂರಪ್ಪ ಅವರ ಕಥೆಯಾದರೆ ಮಗ ವಿಜಯೇಂದ್ರ ಅವರ ಕಥೆ ಮತ್ತೊಂದು ರೀತಿಯದ್ದು. ಅಪ್ಪ ಅಧಿಕಾರದಲ್ಲಿದ್ದಷ್ಟು ದಿನ ಶ್ಯಾಡೋ ಸಿಎಂ, ಸೂಪರ್ ಸಿಎಂ ಆಗಿ ಕೆಲಸ ಮಾಡಿ ಸಾಕಷ್ಟು ಲಾಭ ಪಡೆದಿದ್ದನ್ನು ರಾಜ್ಯದ ಜನತೆ ನೋಡಿದ್ದಾರೆ. ಸರ್ಕಾರದಲ್ಲಿರುವ ಸಾಕಷ್ಟು ಸಹದ್ಯೋಗಿಗಳೇ ವಿಜಯೇಂದ್ರ ಅವರ ಹಸ್ತಕ್ಷೇಪ ಹೆಚ್ಚಾಯಿತು. ಅವರಿಗೆ ಲಗಾಮು ಹಾಕಬೇಕೆಂದು ಹೈಕಮಾಂಡ್ ಮಟ್ಟದಲ್ಲಿ ಚಾಡಿ ಹೇಳಿದರೆನ್ನುವುದು ಕೂಡ ಭಾರೀ ಚರ್ಚೆಯಾಗಿತ್ತು.ಅಪ್ಪನ ಮುಖ್ಯಮಂತ್ರಿ ಸ್ಥಾನಕ್ಕೆ ಸಂಚಕಾರ ತಂದಿದ್ದೇ ವಿಜಯೇಂದ್ರ ಹಾಗೂ ಅವರ ಅತಿಯಾದ ಹಸ್ತಕ್ಷೇಪ ಎನ್ನುವ ಮಾತುಗಳೂ ಕೇಳಿ ಬಂದಿದ್ದವು.
ಬಸವರಾಜ ಬೊಮ್ಮಾಯಿ ಕೂಡ ಹೈಕಮಾಂಡ್ ಸೂಚನೆ ಮೇರೆಗೆ ವಿಜಯೇಂದ್ರ ಅವರಿಂದ ಅಂತರ ಕಾಯ್ದುಕೊಳ್ಳೊಕ್ಕೆ ಶುರುಮಾಡಿದರೆನ್ನುವ ಸಂಗತಿಗಳಿವೆ. ಇದು ಅಪ್ಪ ಯಡಿಯೂರಪ್ಪ ಹಾಗೂ ಮಗ ವಿಜಯೆಂದ್ರ ಬಿಜೆಪಿ ಸಾಂಗತ್ಯ ಮತ್ತು ಸಂಪರ್ಕದಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದರೆನ್ನುವ ಮಾತುಗಳು ಬಿಜೆಪಿ ಪಾಳೆಯದಿಂದಲೇ ಕೇಳಿಬಂದಿದ್ವು. ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳುವ ಹಿಂದೆ ಹೊಸ ಪಕ್ಷ ಸ್ಥಾಪನೆಯ ಚಿಂತನೆ-ಉದ್ದೇಶ ಇತ್ತೆನ್ನುವ ಮಾತುಗಳಿವೆ.
ಕೆಜೆಪಿ ಪಕ್ಷದ ಮೂಲಕ ಪ್ರಯೋಗ ಮಾಡಿ ಒಂದಷ್ಟು ರಾಜಕೀಯ ಅನುಭವದೊಂದಿಗೆ ಜನಬೆಂಬಲ ಪಡೆದ ಹಿನ್ನಲೆ ಈಗಾಗಲೇ ಯಡಿಯೂರಪ್ಪ ಅವರಿಗಿದೆ. ಇದನ್ನೇ ಹಿನ್ನಲೆಯಾಗಿಟ್ಟುಕೊಂಡು ತಮ್ಮದೇ ಆದ ಹೊಸದೊಂದು ಪ್ರಾದೇಶಿಕ ಪಕ್ಷ ಸ್ಥಾಪಿಸಿದರೆ ರಾಜ್ಯ ರಾಜಕೀಯದಲ್ಲಿ ನಿರ್ಣಾಯಕರಾಗಬಹುದೇ ಎನ್ನುವ ನಿಟ್ಟಿನಲ್ಲಿ ಆಲೋಚನೆ ಅಪ್ಪ-ಮಕ್ಕಳಲ್ಲಿ ಮೂಡಿದೆಯಂತೆ,
ಅದರ ಬಗ್ಗೆ ಚರ್ಚಿಸಲೆಂದೇ ರಾಜಕೀಯ ಚಾಣಕ್ಯ ಪ್ರಶಾಂತ್ ಕಿಶೋರ್ ಅವರನ್ನು ದೆಹಲಿಯಲ್ಲಿ ಈ ಹಿಂದೆಯೇ ಅಪ್ಪ-ಮಗ ಸಂಪರ್ಕಿಸಿದ್ದರು.ಪ್ರಶಾಂತ್ ಕಿಶೋರ್ ಜತೆ ಸಮಾಲೋಚನೆ ನಡೆಸಿದ್ದರು. ತಮ್ಮ ಇರಾದೆ, ಇಂಗಿತವನ್ನೂ ಹಂಚಿಕೊಂಡಿದ್ದರು. ಅದಕ್ಕೆ ಪ್ರಶಾಂತ್ ಕಿಶೋರ್ ಕೂಡ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದರು ಎನ್ನಲಾಗಿದೆ.
ಇದಕ್ಕಾಗಿ ಬ್ಲ್ಯೂಪ್ರಿಂಟ್ ಸಿದ್ಧಪಡಿಸುವುದಾಗಿಯೂ ಭರವಸೆ ಕೊಟ್ಟಿದ್ದರು. ಅದರ ಭಾಗವಾಗಿಯೇ ಪ್ರಶಾಂತ್ ಕಿಶೋರ್ ಬೆಂಗಳೂರಿಗೆ ಬಂದಿದ್ದಾರೆ ಎಂದು ಹೇಳಲಾಗಿದೆ. ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರೇ ಪ್ರಶಾಂತ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಖಾಸಗಿ ಸ್ಥಳದಲ್ಲಿ ಗೌಪ್ಯ ಮಾತುಕತೆ ನಡೆಸಿದ್ದಾರೆ ಎನ್ನಲಾಗ್ತಿದೆ.
ಯಡಿಯೂರಪ್ಪ ಹಾಗೂ ವಿಜಯೇಂದ್ರ ಪ್ರಾದೇಶಿಕ ಪಕ್ಷ ಕಟ್ಟಿದರೆ ಅವರೊಂದಿಗೆ ಯಾರ್ಯಾರೆಲ್ಲಾ ಬರುತ್ತಾರೆ..? ಅವರ ಶಕ್ತಿಯೇನು..? ಹೊಸ ಪಕ್ಷ ಉದಯವಾದಲ್ಲಿ ಅದಕ್ಕೆ ಜನರ ಪ್ರತಿಕ್ರಿಯೆ, ಬೆಂಬಲ ಹಾಗೂ ಪಾಲ್ಗೊಳ್ಳುವಿಕೆ ಹೇಗೆ ಇರಬಲ್ಲದು…? ಕೆಜೆಪಿ ವಿಫಲ ಪ್ರಯೋಗದ ನಂತರ ಮತ್ತೊಂದು ಪ್ರಾದೇಶಿಕ ಪಕ್ಷದ ಉದಯದಿಂದ ಆಗಬಹುದಾದ ಲಾಭ-ನಷ್ಟಗಳೇನು..? ಪ್ರಾ
ದೇಶಿಕ ಪಕ್ಷ ಉದಯವಾದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯೊಕ್ಕೆ ಇರುವ ಅವಕಾಶಗಳು ಹಾಗು ಸಾಧ್ಯಾಸಾಧ್ಯತೆಗಳೇನು..? ಜಾತಿ ಲೆಕ್ಕಾಚಾರದ ಮೇಲೆ ಅಧಿಕಾರ ಕೈಗೆ ತೆಗೆದುಕೊಳ್ಳಬಹುದಾ..? ಕೇವಲ ಲಿಂಗಾಯಿತವೀರಶೈವ ಮತದಾರರ ಫ್ಯಾಕ್ಟರ್ ಮೇಲೆ ಚುನಾವಣೆ ನಡೆಸಬಹುದಾ..? ಅಥವಾ ಇತರೆ ಸಮುದಾಯಗಳ ವಿಶ್ವಾಸ ಪಡೆದುಕೊಂಡರೆ ಒಳ್ಳೆಯದಾಗುತ್ತಾ..? ಬೇರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡರೆ ಫಾರ್ಮಲಾ ವರ್ಕೌಟ್ ಆಗಬಹುದಾ..? ಈ ರೀತಿಯ ಸಾಕಷ್ಟು ವಿಷುಯಗಳ ಬಗ್ಗೆ ಪ್ರಶಾಂತ್ ಕಿಶೋರ್ ಅಪ್ಪ-ಮಗನ ಜತೆ ಮಾತುಕತೆ ನಡೆಸಿ ಒಂದಷ್ಟು ಇನ್ ಪುಟ್ ಪಡೆದಿದ್ದಾರೆ ಎನ್ನಲಾಗಿದೆ.

ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ಪ್ರಶಾಂತ ಕಿಶೋರ್ ತನ್ನ ತಂಡದ ಮುಖೇನ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸರ್ವೆ-ಸಮೀಕ್ಷೆ ಪ್ರಾರಂಭಿಸಿದ್ದಾರೆ ನ್ನುವ ಮತ್ತೊಂದು ಮಾಹಿತಿಯೂ ಹೊರಬಿದ್ದಿದೆ. ಸಮೀಕ್ಷೆಯ ಕೆಲವು ಸ್ಯಾಂಪಲ್ಸ್ ಕೂಡ ಸಿದ್ಧವಾಗಿದ್ದು ಆ ಬಗ್ಗೆಯೂ ಚರ್ಚೆ ನಡೆಸಿದ್ದಾರೆಂದು ತಿಳಿದುಬಂದಿದೆ. ಪ್ರಾದೇಶಿಕ ಪಕ್ಷ ಕಟ್ಟಿ ಬೆಳೆಸಿ ಆ ಮೂಲಕ ಅಧಿಕಾರ ಹಿಡಿಯೊಕ್ಕೆ ಸಹಕಾರಿಯಾಗಬಹುದಾದ ಅಂಶಗಳ ಬಗ್ಗೆಯೂ ಪ್ರಶಾಂತ್ ಕಿಶೋರ್ ಕೆಲವು ಸಲಹೆ ನೀಡಿದ್ದಾರೆನ್ನಲಾಗುತ್ತಿದೆ.
ಯಾವ ರೀತಿ ಚುನಾವಣಾ ರಣನೀತಿ ರೂಪಿಸಬೇಕು. ತಂತ್ರಗಾರಿಕೆ ಸೃಷ್ಟಿಸಬೇಕು. ಯಾವ ಅಂಶಗಳನ್ನು ಮುಂದಿಟ್ಟುಕೊಂಡ ಮತದಾರರ ಬಳಿ ಹೋಗಬೇಕು ಎನ್ನುವುದರ ಬಗ್ಗೆಯೂ ಸಲಹೆ ನೀಡಿದ್ದಾರೆ ಎನ್ನಲಾಗ್ತಿದೆ. ಒಟ್ಟಿನಲ್ಲಿ ಕರ್ನಾಟಕದ ಪ್ರಸಕ್ತ ರಾಜಕಾರಣದ ಸನ್ನಿವೇಶ ಮತ್ತೊಂದು ಪ್ರಾದೇಶಿಕ ಪಕ್ಷದ ಹುಟ್ಟುಬೆಳವಣಿಗೆ ಮತ್ತು ಅಧಿಕಾರ ಹಿಡಿಯೊಕ್ಕೆ ಸಹಕಾರಿಯಾಗುವ ಮಟ್ಟದಲ್ಲಂತೂ ಇದೆ ಎನ್ನುವ ಸಂಗತಿಯನ್ನು ಪ್ರಶಾಂತ್ ಕಿಶೋರ್ ಹೇಳಿದ್ದಾರೆ ಎನ್ನಲಾಗ್ತಿದೆ.
ಇದೆಲ್ಲವನ್ನೂ ಗಮನಿಸಿದಾಗ ಬಿಎಸ್ ಯಡಿಯೂರಪ್ಪ ತನ್ನ ಮಗ ವಿಜಯೇಂದ್ರ ಹಾಗೂ ಬೆನ್ನಿಗಿರುವ ಒಂದಷ್ಟು ನಂಬಿಗಸ್ತ ಮುಖಂಡರು ಮತ್ತು ಕಾರ್ಯಕರ್ತರನ್ನು ಕಟ್ಟಿಕೊಂಡು ಹೊಸ ಪ್ರಾದೇಶಿಕ ಪಕ್ಷದ ಮೂಲಕ ರಾಜಕೀಯ ಅಸ್ಥಿತ್ವ ಹಾಗೂ ಪುನರುತ್ಥಾನ ಕಾಣೊಕ್ಕೆ ಮಾನಸಿಕವಾಗಿ ಸನ್ನದ್ಧವಾಗಿದ್ದಾರೆನ್ನುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ.