ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೋವಿಡ್ ಹಾಗೂ ಓಮಿಕ್ರಾನ್ ಪ್ರಕರಣಗಳು ಮೂರನೇ ಅಲೆಗೆ ಮುನ್ನುಡಿಯನ್ನು ಬರೆದಿವೆ. ಆದರೆ, ಈ ಮಧ್ಯೆ ಪಂಚರಾಜ್ಯ ಚುನಾವಣೆಗಳು ಸಹ ಸಮೀಪಿಸುತ್ತಿದ್ದು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ನಡೆಸುವಂತೆ ಸಲಹೆ ನೀಡಿದ್ದಾರೆ.
ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ್, ಗೋವಾ ಮತ್ತು ಮಣಿಪುರ ರಾಜ್ಯ ವಿಧಾನಸಭೆಗೆ ನಡೆಯುವ ಚುನಾವಣೆಗಳಿಗೆ ಇನ್ನು ಚುನಾವಣಾ ಆಯೋಗ ದಿನಾಂಕವನ್ನ ಘೋಷಿಸಿಲ್ಲ. ಈ ಪಂಚ ರಾಜ್ಯಗಳಲ್ಲಿನ ಕೋವಿಡ್ ಸ್ಥಿತಿಗತಿ ಹಾಗೂ ಲಸಿಕೆ ಅಭಿಯಾನದ ಕುರಿತು ಕೇಂದ್ರ ಆರೋಗ್ಯ ಇಲಾಖೆಯ ಅಧಿಕಾರಿಗಳು ಚುನಾವಣಾ ಆಯೋಗದ ಮುಂದೆ ವಿವರಿಸಿದ್ದರು. ಈ ರಾಜ್ಯಗಳಲ್ಲಿ ಲಸಿಕೆ ಅಭಿಯಾನವು ಕುಂಟುತ್ತಾ ಸಾಗಿದ್ದು ಲಸಿಕೆ ಅಭಿಯಾನವನ್ನು ಹೆಚ್ಚಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಶಾಂತ್, ʻಚುನಾವಣೆ ನಡೆಯುವ ರಾಜ್ಯಗಳಲ್ಲಿ ಆ ರಾಜ್ಯದ ಒಟ್ಟು ಜನಸಂಖ್ಯೆಯ ಶೇ.80ರಷ್ಟು ಜನರಿಗೆ ಲಸಿಕೆ ನೀಡಬೇಕು ಎಂದು ಆಯೋಗ ಅಲ್ಲಿನ ರಾಜ್ಯಸರ್ಕಾರಗಳಿಗೆ ಆದೇಶಿಸಬೇಕು. ದೇಶದಲ್ಲಿ ಸೋಂಕು ಹೆಚ್ಚುತ್ತಿರುವ ಸಮಯದಲ್ಲಿ ಚುನಾವಣೆ ನಡೆಸಲು ಇದು ಸುರಕ್ಷಿತ ಮಾರ್ಗ. ಸಾಂಕ್ರಾಮಿಕವು ಒಂದು ಶಾಪವಾಗಿಬಿಟ್ಟಿದೆ ಮತ್ತು ಜನರು ಸಹ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸದೇ ಇರುವುದು ದೇಶದಲ್ಲಿ ಕೋವಿಡ್ ಉಲ್ಬಣವಾಗುವುದಕ್ಕೆ ಕಾರಣʼ ಎಂದು ಟ್ವೀಟ್ ಮಾಡಿದ್ದಾರೆ.
ದೇಶದಲ್ಲಿ ಹೆಚ್ಚುತ್ತಿರುವ ಸೋಂಕಿನ ನಡುವೆ ಚುನಾವಣೆಯನ್ನು ಕೆಲವು ತಿಂಗಳುಗಳ ಕಾಲ ಮುಂದೂಡುವಂತೆ ಆಯೋಗಕ್ಕೆ ಅಲಹಾಬಾದ್ ಹೈಕೋರ್ಟ್ ಸಲಹೆ ನೀಡಿತ್ತು ಮತ್ತು ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿನ ಕೋವಿಡ್ ಸ್ಥಿತಿಗತಿ ಪರಿಶೀಲಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವಂತೆ ಸಲಹೆಯನ್ನ ನೀಡಿತ್ತು.
ಈ ಪಂಚರಾಜ್ಯಗಳಲ್ಲಿ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ನಡೆಸಿದ ಸಮಾವೇಶಗಳು ಕೋವಿಡ್ ಸೂಪರ್ ಸ್ರ್ಪೆಡರ್ ಆಗಲಿವೆ ಎಂದು ವ್ಯಾಪಕವಾಗಿ ಟೀಕೆಗಳು ಕೇಳಿ ಬಂದ ನಂತರ ರಾಜಕೀಯ ಪಕ್ಷಗಳು ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ರದ್ದುಗೊಳಿಸಿದ್ದವು.
ಆದರೆ, ಕೇಂದ್ರ ಸರ್ಕಾರವು ಚುನಾವಣಾ ಆಯೋಗಕ್ಕೆ ಓಮಿಕ್ರಾನ್ ಸೋಂಕಿನ ಪ್ರಕರಣಗಳು ಅಷ್ಟಾಗಿ ಕಾಣಿಸಿಕೊಳ್ಳದ ಕಾರಣ ಚುನಾವಣಾ ರ್ಯಾ್ಲಿಗಳ ಮೇಲೆ ಹೇರಿರುವ ನಿಷೇಧವನ್ನು ಹಿಂಪಡೆಯುವಂತೆ ಮನವಿ ಮಾಡಿದೆ.
ಡೆಲ್ಟಾಗೆ ಹೋಲಿಸಿದರೆ ಲಸಿಕೆ ಹಾಕಿಸಿಕೊಂಡವರಲ್ಲಿ ಓಮಿಕ್ರಾನ್ ಸೋಂಕಿನ ತೀವ್ರತೆ ಅಷ್ಟಾಗಿ ಪರಿಣಾಮವನ್ನು ಬೀರುವುದಿಲ್ಲ. ಆದರೆ, ರೂಪಾಂತರಿಯನ್ನು ಕಡೆಗಣಿಸುವಂತಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ಹಳೇ ರೂಪಾಂತರಿಗಳಂತೆ ಓಮಿಕ್ರಾನ್ ಸಹ ಜನರನ್ನು ಆಸ್ಪತ್ರೆಗೆ ಅಲೆಯುವಂತೆ ಮಾಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಕ್ಷ ಟೆಡ್ರೋಸ್ ಅದನಮ್ ಹೇಳಿದ್ದಾರೆ.