
ಹಾಸನದ ಮಾಜಿ ಸಂಸದ, ಜೆಡಿಎಸ್ ನಾಯಕ ಪ್ರಜ್ವಲ್ ರೇವಣ್ಣ ಎಸ್ಐಟಿ ಕಸ್ಟಡಿ ವಿಸ್ತರಣೆ ಮಾಡಲಾಗಿದೆ. ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದ ಆರೋಪಿಯನ್ನು ಎಸ್ಐಟಿ ಬಂಧಿಸಿದೆ. ಬೆಂಗಳೂರಿನ ವಿಶೇಷ ಕೋರ್ಟ್ಗೆ ಗುರುವಾರ ಎಸ್ಐಟಿ ಪೊಲೀಸರು ಪ್ರಜ್ವಲ್ ರೇವಣ್ಣ ಹಾಜರುಪಡಿಸಿದ್ದರು. ಎಸ್ಐಟಿ ಪರವಾಗಿ ವಾದ ಮಂಡಿಸಿದ ಎಸ್ಪಿಪಿ ಅಶೋಕ್ ನಾಯಕ್ ಪ್ರಜ್ವಲ್ ರೇವಣ್ಣ ಕಸ್ಟಡಿ ಅವಧಿ ವಿಸ್ತರಣೆಗೆ ಮನವಿ ಮಾಡಿದರು.ಎಸ್ಐಟಿ ವಾದವನ್ನು ಪುರಸ್ಕರಿಸಿದ ಕೋರ್ಟ್ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಎಸ್ಐಟಿ ವಶದ ಅವಧಿಯನ್ನು ಜೂನ್ 10ರ ತನಕ ವಿಸ್ತರಣೆ ಮಾಡಿತು. ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಮೂರು ಪ್ರಕರಣಗಳ ತನಿಖೆಯನ್ನು ಎಸ್ಐಟಿ ನಡೆಸುತ್ತಿದೆ. ಈ ಪ್ರಕರಣದಲ್ಲಿ ಪೊಲೀಸರು ಶ್ರೀ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯರ ತಂಡದ ವರದಿಗಾಗಿ ಕಾಯುತ್ತಿದ್ದಾರೆ.