ಬೆಂಗಳೂರು: ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ, ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ರನ್ನು 6 ದಿನಗಳ ಕಾಲ ಎಸ್ ಐಟಿ ಕಸ್ಟಡಿಗೆ ಕೋರ್ಟ್ ನೀಡಿದೆ.
ನಗರದ 42ನೇ ಎಸಿಎಂಎಂ ಕೋರ್ಟ್ 6 ದಿನ ವಿಶೇಷ ತನಿಖಾ ತಂಡದ (SIT) ಕಸ್ಟಡಿಗೆ ವಹಿಸಿದೆ. ಜರ್ಮನಿಯ ಮ್ಯೂನಿಕ್‌ನಿಂದ (Munich Airport) ತಡರಾತ್ರಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ (Bengaluru Airport) ಬಂದಿಳಿದ ಪ್ರಜ್ವಲ್ ಅವರನ್ನು ಪೊಲೀಸರು ಬಂಧಿಸಿ ಸಿಐಡಿ, ಎಸ್‌ಐಟಿ ಕಚೇರಿಗೆ ಕರೆ ತಂದಿದ್ದರು.
ಎಸ್‌ಐಟಿ ಕಚೇರಿಯಲ್ಲೇ ರಾತ್ರಿ ಕಳೆದ ಪ್ರಜ್ವಲ್ ನನ್ನು ಬೆಳಗ್ಗೆ ವೈದ್ಯಕೀಯ ಪರೀಕ್ಷೆಗೆ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಸ್ಪತ್ರೆ ತುರ್ತು ನಿಗಾ ಘಟಕದ ಕಟ್ಟಡದಲ್ಲಿ ಬಿಪಿ, ಶುಗರ್, ಪಲ್ಸ್, ಹಾರ್ಟ್ ರೇಟ್, ಯೂರಿನ್, ರಕ್ತ ಪರೀಕ್ಷೆ ನಡೆಸಲಾಯಿತು.
ನಂತರ ಪೊಲೀಸರು 42ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ವಿಚಾರಣೆ ಸಂದರ್ಭದಲ್ಲಿ ಎಸ್ ಐಟಿ ಅಧಿಕಾರಿಗಳು 15 ದಿನ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. ಆದರೆ, ಸುದೀರ್ಘ ವಿಚಾರಣೆ ನಡೆಸಿದ ಕೋರ್ಟ್ 6 ದಿನಗಳ ಕಾಲ ಕಸ್ಟಡಿಗೆ ನೀಡಿದೆ.