ಧಾರವಾಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಆಗಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ರಾಜಕೀಯವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜಕೀಯಕ್ಕೆ ದಿಂಗಾಲೇಶ್ವರ ಶ್ರೀಗಳು ಎಂಟ್ರಿಯಾಗಿದ್ದು, ಪ್ರಹ್ಲಾದ್ ಜೋಷಿ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಘೋಷಣೆ ಮಾಡಿದ್ದಾರೆ. ಪ್ರಹ್ಲಾದ್ ಜೋಷಿ ಲಿಂಗಾಯತ ಸಮುದಾಯವನ್ನು ತುಳಿದು ರಾಜಕಾರಣ ಮಾಡ್ತಾರೆ ಎನ್ನುವುದು ದಿಂಗಾಲೇಶ್ವರ ಶ್ರೀಗಳ ನೇರ ಆರೋಪ. ಅಖಿಲ ಭಾರತ ವೀರಶೈವ ಮಹಾಸಭಾದಲ್ಲಿ ಸಭೆ ನಡೆಸಿದ ಬಳಿಕ ಮಾಧ್ಯಮಗಳ ಎದುರು ಈ ವಿಚಾರ ಸ್ಪಷ್ಟಪಡಿಸಿದ್ದಾರೆ.

ಕಳೆದ ಬಾರಿ 9 ಮಂದಿ ವೀರಶೈವ ಸಮುದಾಯದ ನಾಯಕರು ಸಂಸತ್ ಪ್ರವೇಶ ಮಾಡಿದ್ದರು. ಒಬ್ಬರಿಗೂ ಕೇಂದ್ರದಲ್ಲಿ ಕ್ಯಾಬಿನೆಟ್ ಮಂತ್ರಿ ಸ್ಥಾನಮಾನ ನೀಡಲಿಲ್ಲ. ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸೋಮಣ್ಣ ಅವರನ್ನು ಕಣಕ್ಕಿಳಿಸಿ ತೇಜಸ್ವಿಯನ್ನು ತುಮಕೂರಿಗೆ ಕಳುಹಿಸಬೇಕಿತ್ತು. ಆಗ ಯಾರ ಶಕ್ತಿ ಎಷ್ಟು ಅನ್ನೋದನ್ನು ನೋಡಬಹುದಿತ್ತು ಎಂದಿರುವ ದಿಂಗಾಲೇಶ್ವರ ಸ್ವಾಮೀಜಿ, ತುಮಕೂರಿಗೆ ಸೋಮಣ್ಣನನ್ನು ಕಳುಹಿಸಿ, ಅಲ್ಲಯೂ ಸೋಮಣ್ಣ ವಿರುದ್ಧ ಲಿಂಗಾಯತರು ತಿರುಗಿ ಬೀಳುವಂತೆ ಮಾಡಿದ್ದಾರೆ. ಇದು ಬಿಜೆಪಿ ಒಡೆದು ಆಳುವ ನೀತಿಗೆ ಸಾಕ್ಷಿ ಎಂದಿದ್ದಾರೆ.

ಬಿಜೆಪಿ ಪಕ್ಷ ಪ್ರಬಲವಾಗಿ ಬೆಳೆಯಲು ಲಿಂಗಾಯತ, ಕುರುಬ, ರೆಡ್ಡಿ ಸಮುದಾಯವೇ ಕಾರಣ ಆದರೂ ಕುರುಬ ಸಮುದಾಯದ ಈಶ್ವರಪ್ಪಗೆ ಟಿಕೆಟ್ ಕೊಡಲಿಲ್ಲ, ಈಶ್ವರಪ್ಪ ಪುತ್ರನಿಗೂ ಹಾವೇರಿಯಿಂದ ಟಿಕೆಟ್ ಕೊಡಲಿಲ್ಲ. ಇನ್ನು ಲಿಂಗಾಯತ ಸಮುದಾಯದ ನಾಯಕರು ಎರಡ್ಮೂರು ಬಾರಿ ಟಿಕೆಟ್ ಕೊಟ್ಟ ಬಳಿಕ ಬದಲಾವಣೆ ಮಾಡ್ತಾರೆ. ಆದರೆ ಬೇರೆ ಸಮುದಾಯದ ನಾಯಕರಿಗೆ ಹತ್ತು ಬಾರಿ ಅವಕಾಶ ಕೊಡ್ತಾರೆ ಎನ್ನುವ ಮೂಲಕ ಪ್ರಹ್ಲಾದ್ ಜೋಷಿಗೆ ನಿರಂತರವಾಗಿ ಟಿಕೆಟ್ ಕೊಡ್ತಿರೋ ಬಿಜೆಪಿ ಹೈಕಮಾಂಡ್ ನಡೆಯನ್ನು ಟೀಕಿಸಿದ್ದಾರೆ. ಪ್ರಹ್ಲಾದ್ ಜೋಷಿ ಉಳಿದ ಸಮುದಾಯಗಳನ್ನು ಕಡೆಗಣಿಸುತ್ತಿದ್ದಾರೆ. ತಮ್ಮ ಸಮುದಾಯದ ಬೆಳವಣಿಗೆಯನ್ನು ಮಾತ್ರ ನೋಡ್ತಾರೆ ಎಂದು ಕುಟುಕಿದ್ದಾರೆ.
ಪ್ರಹ್ಲಾದ್ ಜೋಷಿ ಅವರ ಹಿಂಬಾಲಕರು ಜಾಲತಾಣದಲ್ಲಿ ಟಾರ್ಗೆಟ್ ಮಾಡುತ್ತಿದ್ದಾರೆ. ಆದರೆ ಆ ಷಡ್ಯಂತ್ರ ಎಲ್ಲಾ ನನ್ನ ಮುಂದೆ ನಡೆಯಲ್ಲ. ಜೋಷಿ ಅವರ ದುರಾಡಳಿತದ ಬಗ್ಗೆ ಜನರು ತೀರ್ಮಾನ ಮಾಡ್ತಾರೆ. ಹೈಕಮಾಂಡ್ ಮೊದಲೇ ಗಮನಹರಿಸಬೇಕಿತ್ತು. ಆದರೆ ಗಮನಹರಿಸಲಿಲ್ಲ ಅನ್ನೋ ಕಾರಣಕ್ಕೆ ನಾನು ಸ್ಪರ್ಧೆ ಮಾಡಬೇಕಾಯ್ತು. ಈ ಚುನಾವಣೆ ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಸ್ವಾಭಿಮಾನದ ಯುದ್ಧ ಎಂದಿದ್ದಾರೆ. ಈಶ್ವರಪ್ಪಗೆ 6 ತಿಂಗಳ ಹಿಂದೆಯೇ ಹೇಳಿದ್ದೆ, ಪ್ರಹ್ಲಾದ್ ಜೋಷಿ ನಂಬಬೇಡ ಎಂದು. ಆದರೂ ಮಾತು ಕೇಳಲಿಲ್ಲ. ಈಶ್ವರಪ್ಪ ಹಾಗು ಅವರ ಪುತ್ರನಿಗೆ ಟಿಕೆಟ್ ತಪ್ಪಿಸಿದ್ದು ಪ್ರಹ್ಲಾದ್ ಜೋಷಿ ಎಂದು ನೇರ ಆರೋಪ ಮಾಡಿದ್ದಾರೆ.
ಕೃಷ್ಣಮಣಿ