ವಿಶ್ವಕಪ್ ಸರಣಿಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಟೀಂ ಇಂಡಿಯಾ ರೋಚಕ ಗೆಲುವು ಸಾಧಿಸಿ ಫೈನಲ್ ತಲುಪಿದೆ. ಈ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿರುವ ಮಹಮ್ಮದ್ ಶಮಿ ಅವರು ಬರೋಬ್ಬರಿ 7 ವಿಕೆಟ್ ಪಡೆದು ಸೆಮಿಯಿಂದ ಫೈನಲ್ಗೆ ತಲುಪುವ ಟೀಂ ಇಂಡಿಯಾದ ಹಾದಿಯನ್ನು ಸುಗಮಗೊಳಿಸಿದ್ದಾರೆ. ಟೀಂ ಇಂಡಿಯಾದ ವಿಜಯವನ್ನು ದೇಶವೇ ಕೊಂಡಾಡುತ್ತಿದ್ದರೂ, ಕೋಮುವಾದಿಗಳು ಹಾಗೂ ಧ್ರುವೀಕರಣ ರಾಜಕಾರಣಿಗಳು ಟೀಂ ಇಂಡಿಯಾದ ಆಟಗಾರರಲ್ಲೂ ಧರ್ಮ ನೋಡಿ ತಾರತಮ್ಯ ಮಾಡುತ್ತಿದ್ದಾರೆ.
ಫೈನಲ್ಗೆ ತಲುಪಲು ಶಮಿಯ ನಿರ್ಣಾಯಕ ಕೊಡುಗೆಯನ್ನು ಕಡೆಗಣಿಸಿ ಕೇವಲ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಅವರ ಹೆಸರನ್ನು ಮಾತ್ರ ಉಲ್ಲೇಖಿಸಿ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಟ್ವೀಟ್ ಮಾಡಿ ನೆಟ್ಟಿಗರಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ.
“ವಿಶ್ವಕಪ್ ಸೆಮಿ ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ರೋಮಾಂಚನಕಾರಿ ಆಟದ ಮೂಲಕ ಗೆಲುವಿನ ಕಿರೀಟವನ್ನು ಮುಡಿಗೇರಿಸಿದ ಭಾರತೀಯ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು ಹಾಗೂ ಶತಕದ ಗಡಿ ದಾಟಿ ದಾಖಲೆ ನಿರ್ಮಿಸಿದ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಅವರಿಗೆ ಅಭಿನಂದನೆಗಳು. ಫೈನಲ್ ಪಂದ್ಯದಲ್ಲೂ ಗೆಲುವು ನಿಮ್ಮದಾಗಲಿ, ಅಂದರೆ ನಮ್ಮೆಲ್ಲರದ್ದಾಗಲಿ” ಎಂದು ಸಚಿವ ಜೋಷಿ ಟ್ವೀಟ್ ಮಾಡಿದ್ದಾರೆ.
ಜೋಷಿ ಅಭಿನಂದನಾ ಸಂದೇಶದಲ್ಲಿ ಶಮಿಯ ಹೆಸರು ಇಲ್ಲದೇ ಇರುವುದನ್ನು ಗಮನಿಸಿದ ನೆಟ್ಟಿಗರು, ಆಡದಲ್ಲೂ ಧರ್ಮ ರಾಜಕಾರಣ ತರುತ್ತಿದ್ದೀರಿ ಎಂದು ಆಕ್ರೋಶ ಹಾಕಿದ್ದಾರೆ.
ಕನ್ನಡದ ಚಿಂತಕ ಪ್ರೊ. ಬಿಳಿಮಲೆಯವರು ಪ್ರತಿಕ್ರಿಯಿಸಿ, “ನಿನ್ನೆಯ ಕ್ರಿಕೆಟ್ ಆಟದಲ್ಲಿ ಮಹಮ್ಮದ್ ಶಾಮಿ ಅವರು ವಿಲಿಯಂಸನ್ ಮತ್ತು ಮಿಚೆಲ್ ಅವರನ್ನು ಆಟದ ನಿರ್ಣಾಯಕ ಹಂತದಲ್ಲಿ ಪೆವಿಲಿಯನ್ ಗೆ ಕಳಿಸದೇ ಇದ್ದಿದ್ದರೆ ಭಾರತದ ಗೆಲುವು ಕಷ್ಟವಿತ್ತು. ಇವರಿಬ್ಬರೂಔಟಾದಾಗ ನಮ್ಮ ಆಟಗಾರರ ಕಳೆಗುಂದಿದ್ದ ಮುಖದಲ್ಲಿ ಹೇಗೆ ಮತ್ತೆ ಉತ್ಸಾಹ ಮೂಡಿತು ಎಂಬುದನ್ನು ನಾವೆಲ್ಲರೂ ಗಮನಿಸಿದ್ದೇವೆ. ಏಳು ವಿಕೆಟ್ ತಗೊಂಡ ಶಾಮಿ ಸಹಜವಾಗಿಯೇ ಮ್ಯಾನ್ ಆಫ್ ದಿ ಮ್ಯಾಚ್ ಆದರು.ಅದನ್ನು ನಮ್ಮ ಶತಕವೀರರಾದ ಕೊಹ್ಲಿ ಮತ್ತು ಅಯ್ಯರ್ ಸೇರಿದಂತೆ ಇಡೀ ಟೀಂ ಸಂಭ್ರಮಿಸಿತು ಕೂಡಾ. ಇದ್ಯಾವುದೂ ಶ್ರೀ ಪ್ರಹ್ಲಾದ ಜೋಷಿಯವರಿಗೆ ಅರ್ಥವಾಗಲೇ ಇಲ್ಲ. ಇಂಥವರೇ ನಮ್ಮ ನಾಡಿನ ಇತಿಹಾಸವನ್ನು ಹೀಗೆಯೇ ಬರೆದದ್ದು ಮತ್ತು ಬರೆಯ ಬಯಸುವುದು ಎಂಬುದನ್ನು ಮರೆಯದಿರೋಣ” ಎಂದು ಬರೆದಿದ್ದಾರೆ.
“ಯಾಕ್ರೀ ಜೋಶಿಯವರಾ ಸಾಬರ ಶಮಿ ಆಟ ಇಷ್ಟ ಆಗಲಿಲ್ಲೆನ್ ನಿಮಗ? ಎಷ್ಟ್ ತಾರತಮ್ಯ ಪಕ್ಷಪಾತ ಮಾಡ್ತೀರಿ ರೀ? ಸಾಮಾಜಿಕವಾಗಿ ದಲಿತರನ್ನ ಮಾಡ್ತಿದ್ರಿ ಈಗ ದೇಶದ ತಂಡವನ್ನ ಫೈನಲ್ ಗೆ ಕಳಿಸಿದ ಮುಸ್ಲಿಮನನ್ನ ಅವಮಾನ ಮಾಡಕತ್ತೀರಿ …😐. ನೀವು ಏನಾದರೆನ್ ನಿಮ್ಮ ಪಕ್ಷಪಾತ ನೀತಿ ಬಿಡಲ್ಲ ಅಂತ ಇದರಿಂದ ಸಾಬೀತಾಗಿದೆ ಬಿಡಿ.” ಎಂದು ನೆಟ್ಟಿಗರೊಬ್ಬರು ಆಕ್ರೋಶ ಹೊರ ಹಾಕಿದ್ದಾರೆ.
ನೆಟ್ಟಿಗರಿಂದ ಟೀಕೆಗಳು ಬರುತ್ತಿದ್ದಂತೆ ಫೇಸ್ಬುಕ್ನಲ್ಲಿ ಕನ್ನಡದಲ್ಲಿ ಹಾಕಲಾಗಿದ್ದ ಪೋಸ್ಟ್ ಅನ್ನು ತಿದ್ದಿದ ಜೋಷಿ ಶಮಿ ಹೆಸರನ್ನು ಹಾಕಿಸಿದ್ದಾರೆ. ಆದರೆ, ಅವರ ಟ್ವೀಟ್ ಮತ್ತು ಇಂಗ್ಲಿಷ್ನಲ್ಲಿ ಬರೆದ ಪೋಸ್ಟ್ನಲ್ಲಿ ಶಮಿ ಹೆಸರು ಉಲ್ಲೇಖಿಸಲಾಗಿಲ್ಲ. ಜೋಷಿಗೆ ಮುಸ್ಲಿಂ ಆಟಗಾರ ಭಾರತ ತಂಡದ ಗೆಲುವಿಗೆ ಕಾರಣವಾಗಿರುವುದು ಸಹಿಸಲು ಆಗುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದ ನೆಟ್ಟಿಗರು, ಆಟಗಾರರಲ್ಲೂ ಧರ್ಮ ರಾಜಕಾರಣ ಮಾಡುತ್ತಿದ್ದಾರೆ ಎಂದು ಛೀಮಾರಿ ಹಾಕಿದ್ದಾರೆ.