ಬೆಂಗಳೂರು : ಐಎನ್ಡಿಐಎ (I.N.D.IA.) ಒಕ್ಕೂಟದವರಿಗೆ ನೀತಿ, ನಿಯತ್ತು ಯಾವುದೂ ಇಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Prahald joshi) ಟೀಕಿಸಿದರು. ಒಕ್ಕೂಟ ಎಂಬುದು ಒಂದು ಫೋಟೋ ಶೂಟ್ ಅಷ್ಟೇ ಸೀಮಿತ ಆಗಿತ್ತು. ಅದೊಂದು ಅಸಹಜ, ಅಸ್ವಾಭಾವಿಕ ಒಪ್ಪಂದ ಆಗಿತ್ತು. ಹಾಗಾಗಿ ಐಎನ್ಡಿಐಎ ಒಕ್ಕೂಟ ಸಾಯುತ್ತಿದೆ ಎಂದರು.
ನಿತೀಶ್ ಕುಮಾರ್ ಬಿಜೆಪಿಗೆ (BJP) ಸೇರುವ ಬಗ್ಗೆ ಪ್ರತಿಕ್ರಿಯಿಸಿ, ನಾನು ಆ ಬಗ್ಗೆ ಏನೂ ಮಾತಾಡಲ್ಲ. ಅವರು ಪಕ್ಷ ಸೇರ್ಪಡೆ ಬಗ್ಗೆ ನನಗೆ ಗೊತ್ತಿಲ್ಲ. ಅದರ ಬಗ್ಗೆ ಮಾತಾಡಲು ನಾನು ಸೂಕ್ತವೂ ಅಲ್ಲ ಎಂದರು.
ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ ವೇಳೆ ಪ್ರಲ್ಹಾದ್ ಜೋಶಿ ಗೈರು ವಿಚಾರವಾಗಿ ಮಾತನಾಡಿ, ಉಪರಾಷ್ಟ್ರಪತಿ ಜೊತೆ ಸಭೆಯಲ್ಲಿದ್ದ ಕಾರಣ ಭಾಗಿಯಾಗಿಲ್ಲ. ಶೆಟ್ಟರ್ ಪಕ್ಷ ಸೇರ್ಪಡೆ ವೇಳೆ ಇನ್ನೊಂದು ಅರ್ಧ ಗಂಟೆಯಲ್ಲಿ ಸೇರ್ಪಡೆ ಆಗುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ನನಗೆ ಕರೆ ಮಾಡಿ ಹೇಳಿದ್ದರು. ಜಗದೀಶ್ ಶೆಟ್ಟರ್ ಅವರು ಬಿಜೆಪಿಯಲ್ಲೇ ಇದ್ದವರು. ಶೆಟ್ಟರ್ ವಾಪಸ್ ಬಂದಿದ್ದು ಪಕ್ಷಕ್ಕೆ ಒಳ್ಳೆಯದಾಗುತ್ತದೆ. ಶೆಟ್ಟರ್ ಅವರು ಬಂದಿದ್ದು ಬಿಜೆಪಿಗೆ ಅನುಕೂಲ ಆಗುತ್ತದೆ ಎಂದರು.
ಯಾರು ನಮ್ಮ ಪಕ್ಷದ ಸಿದ್ಧಾಂತ, ಮೋದಿ ನಾಯಕತ್ವ ಒಪ್ಪಿ ಬರುತ್ತಾರೋ ಸ್ವಾಗತ ಕೋರುತ್ತೇವೆ. ಅವರೆಲ್ಲರನ್ನೂ ಹಂತಹಂತವಾಗಿ ವಾಪಸ್ ಕರೆತರುವ ಬಗ್ಗೆ ರಾಷ್ಟ್ರೀಯ ಘಟಕ, ರಾಜ್ಯ ಘಟಕಗಳಲ್ಲಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
ರಾಘವೇಂದ್ರರನ್ನು ಹೊಗಳಿಕೆ ಬಿಜೆಪಿಗೆ ಆಶೀರ್ವಾದ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಸಂಸದ ಬಿವೈ ರಾಘವೇಂದ್ರ ಅವರನ್ನು ಹೊಗಳಿದ್ದು ಬಿಜೆಪಿಗೆ ಆಶೀರ್ವಾದ ಎಂದು ಜೋಶಿ ಹೇಳಿದರು.