ಭಾರತದ (india) ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ (isro)ತಾನಂದುಕೊಂಡಂತೆಯೇ ಚಂದ್ರಯಾನ 3 ಯೋಜನೆಯನ್ನೂ ಶೇ.100ರಷ್ಟು ಯಶಸ್ಸಿನೊಂದಿಗೆ ಪೂರ್ಣಗೊಳಿಸಿದ್ದು, ಇದೀಗ ಚಂದ್ರ ಮೇಲೆ ಇಳಿದಿರುವ ಪ್ರಗ್ಯಾನ್ ರೋವರ್, ವಿಕ್ರಮ್ ಲ್ಯಾಂಡರ್ ನಿದ್ರೆಗೆ ಜಾರುವ ಕಾಲ ಹತ್ತಿರವಾಗಿದೆ ಅಂತ ಇಸ್ರೋ ಮಾಹಿತಿ ನೀಡಿದೆ.
ಚಂದ್ರಯಾನ 3 ರ ರೋವರ್ ಮತ್ತು ಲ್ಯಾಂಡರ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಈಗಾಗಲೇ ರೋವರ್ ಮತ್ತು ಲ್ಯಾಂಡರ್ ಚಂದ್ರನ ಕುರಿತ ಸಾಕಷ್ಟು ನಿಗೂಢ ಅಂಶಗಳ ಮೇಲೆ ಬೆಳಕು ಚೆಲ್ಲಿವೆ. ಚಂದ್ರನ ಮೇಲ್ಮೈ ವಾತಾವರಣದ ತಾಪಮಾನ, ಸಲ್ಫರ್ ಇರುವಿಕೆ, ಚಂದ್ರನೊಳಗಿನ ಕಂಪನಗಳು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದೆ. ಇದೀಗ ಚಂದ್ರನಲ್ಲಿ ರಾತ್ರಿ ಆವರಿಸುತ್ತಿದ್ದು ಹೀಗಾಗಿ ಇಸ್ರೋ ತನ್ನ ಪ್ರಗ್ಯಾನ್ ರೋವರ್ ಮತ್ತು ವಿಕ್ರಮ್ ಲ್ಯಾಂಡರ್ ಗಳನ್ನು ಸ್ಲೀಪಿಂಗ್ ಮೋಡ್ ಅಂದರೆ ನಿದ್ರೆಯಲ್ಲಿರಿಸಲು ಸಿದ್ಧತೆ ನಡೆಸಿದೆ.
ಈ ಸುದ್ದಿಯನ್ನು ಒಮ್ಮೆ ಓದಿ: ಡೆಂಗ್ಯೂಗೆ ಸನಾತನಧರ್ಮ ಹೋಲಿಕೆ | ಹೇಳಿಕೆಗೆ ಬದ್ಧ ಎಂದ ಉದಯ ನಿಧಿ ಸ್ಟಾಲಿನ್
ಚಂದ್ರನಲ್ಲಿ ಒಂದು ರಾತ್ರಿ (night) ಎಂದರೆ ಭೂಮಿಯಲ್ಲಿ ಸುಮಾರು 14 ದಿನಗಳು. ಇಷ್ಟು ದಿನ ಇದ್ದ ಹಗಲು ಸುಮಾರು 14 ದಿನಗಳ ಕಾಲ ಇತ್ತು. ಹೀಗಾಗಿ ಈ 14 ದಿನಗಳ ಕಾಲ ರೋವರ್ ಮತ್ತು ಲ್ಯಾಂಡರ್ ನಿರಂತರವಾಗಿ ಕಾರ್ಯ ನಿರ್ವಹಿಸಿತ್ತು. ಇದೀಗ ಚಂದ್ರನಲ್ಲಿ ರಾತ್ರಿಯಾಗುತ್ತಿದ್ದು, ಈ ವೇಳೆ ಚಂದ್ರನ ಮೇಲೆ ಸೂರ್ಯನ ಬೆಳಕು ಬೀಳುವುದಿಲ್ಲ. ಹೀಗಾಗಿ ಆ ಕಾರ್ಗತ್ತಲ್ಲಿನಲ್ಲಿ ಕೆಲಸ ಮಾಡುವುದು ಅಸಾಧ್ಯ. ಇದೇ ಕಾರಣಕ್ಕೆ ಇಸ್ರೋ ರೋವರ್ ಮತ್ತು ಲ್ಯಾಂಡರ್ ಗಳನ್ನು ನಿದ್ರೆಗೆ ಜಾರಿಸಲು ಮುಂದಾಗಿದೆ. ಈ ಬಗ್ಗೆ ಸ್ವತಃ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಶನಿವಾರ ಮಾಹಿತಿ ನೀಡಿದ್ದು, ಚಂದ್ರನ ಮೇಲಿನ ರಾತ್ರಿಯನ್ನು ತಡೆದುಕೊಳ್ಳಲು ಅವುಗಳನ್ನು ಶೀಘ್ರದಲ್ಲೇ “ನಿದ್ರೆ” ಮಾಡಿಸಲಾಗುವುದು ಎಂದು ಹೇಳಿದ್ದಾರೆ.