ಎರಡು ವಾರಗಳಲ್ಲಿ 12ನೇ ಬಾರಿ ಏರಿಕೆ ಆಗುತ್ತಿರುವ ತೈಲ ಬೆಲೆಯು “ಪ್ರಧಾನ ಮಂತ್ರಿ ಜನ್ ಧನ್ ಲೂಟ್ ಯೋಜನೆ” ಯ ಭಾಗವಾಗಿದೆ ಎಂದು ಸೋಮವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸಿದ್ದಾರೆ.
ಸತತವಾಗಿ 2 ವಾರಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರುತ್ತಿದೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬೈಕ್, ಕಾರು, ಟ್ರಾಕ್ಟರ್ ಮತ್ತು ಟ್ರಕ್ಗಳಿಗೆ ಫುಲ್ ಟ್ಯಾಂಕ್ ಇಂಧನದ ಪ್ರಸ್ತುತ ವೆಚ್ಚ ಮತ್ತು 2014ರಲ್ಲಿ ಹೋಲಿಸುವ ಗ್ರಾಫಿಕ್ ಅನ್ನು ಗಾಂಧಿ, “ಪ್ರಧಾನ ಮಂತ್ರಿ ಜನ್ ಧನ್ ಲೂಟ್ ಯೋಜನೆ” ಎಂದು ಅವರು ಶೀರ್ಷಿಕೆಯಡಿ ಟ್ವೀಟ್ ಮಾಡಿದ್ದಾರೆಡ.
ತೈಲ ಬೆಲೆ ಏರಿಕೆ ಬಗ್ಗೆ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಟ್ವೀಟ್ ಮಾಡಿ, ಮೋದಿ ಸರ್ಕಾರದ ಅಡಿಯಲ್ಲಿ ಪ್ರತಿದಿನ ಬೆಳಗ್ಗೆ ಉತ್ಸಾಹಕ್ಕಿಂತ ಹಣದುಬ್ಬರದ ದುಃಖ ತರುತ್ತದೆ. ಇಂದು ಹೊಸ ಕಂತು ಇಂಧನ ಲೂಟಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಪ್ರತಿ ಲೀಟರ್ಗೆ 40ಪೈಸೆ ಹೆಚ್ಚಿಸಲಾಗಿದೆ ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಮುಂಬೈನಲ್ಲಿ ಲೀಟರ್ ಪೆಟ್ರೋಲ್ ರೂ.118.83, ಡೀಸೆಲ್ ರೂ. 103.07ಕ್ಕೆ ಮಾರಾಟವಾಗುತ್ತಿದೆ. ಅದೇ ರೀತಿ ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 109.34 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 99.42 ರೂಪಾಯಿ ಇದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 113.03 ರೂ. ಡೀಸೆಲ್ ಬೆಲೆ ಲೀಟರ್ಗೆ 97.82 ರೂ. ಆಗಿದೆ. ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 108.99 ರೂ. ತಲುಪಿದ್ದು, ಡೀಸೆಲ್ ಬೆಲೆ 92.83 ರೂ. ಏರಿಕೆಯಾಗಿದೆ.