ಎಲ್ಲವೂ ಸುಸೂತ್ರವಾಗಿ ಮುಗಿಯಿತು ಎಂದು ಅಂದುಕೊಳ್ಳುತ್ತಿರುವಾಗಲೇ, ಪಂಜಾಬ್ ರಾಜಕೀಯದಲ್ಲಿ ಮತ್ತೆ ನಾಯಕತ್ವ ಬದಲಾವಣೆಯ ಗಾಳಿ ಬೀಸುತ್ತಿದೆ. ಕಾಂಗ್ರೆಸ್ ಶಾಸಕರ ದೊಡ್ಡ ಗುಂಪೊಂದು ಅತೀ ಮುಖ್ಯವಾದ ಶಾಸಕಾಂಗ ಸಭೆಯನ್ನು ಕರೆಯಲು ಆಗ್ರಹಿಸಿದೆ. ಈ ಸಭೆಯಲ್ಲಿ ಕ್ಯಾ. ಅಮರೀಂದರ್ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವ ಕುರಿತಾಗಿ ಚರ್ಚೆ ನಡೆಸುವ ಎಲ್ಲಾ ಸಾಧ್ಯತೆಗಳು ತೆರೆದುಕೊಂಡಿವೆ.
ಕಾಂಗ್ರೆಸ್ ಪಂಜಾಬ್ ಘಟಕದ ಉಸ್ತುವಾರಿಯಾಗಿರುವ ಹರೀಶ್ ರಾವತ್ ಅವರು ಈ ಕುರಿತಾಗಿ ಸ್ಪಷ್ಟನೆ ನಿಡಿದ್ದಾರೆ. “ಕಾಂಗ್ರೆಸ್ ಶಾಸಕರ ದೊಡ್ಡ ನಿಯೋಗವೊಂದು ಎಐಸಿಸಿಯನ್ನು ಸಂಪರ್ಕಿಸಿದೆ. ತುರ್ತಾಗಿ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲು ಈ ನಿಯೋಗ ಆಗ್ರಹಿಸಿದೆ. ಸೆಪ್ಟೆಂಬರ್ 18ರ ಸಂಜೆ ಐದು ಗಂಟೆಗೆ ಈ ಸಭೆ ನಡೆಯಲಿದೆ,” ಎಂದು ಅವರು ಟ್ವೀಟ್ ಮೂಲಕ ಹೇಳಿದ್ದಾರೆ.
ಈ ಸಭೆಗೆ ತಯಾರಿ ನಡೆಸಲು ಎಐಸಿಸಿ ನಿರ್ದೇಶನ ನೀಡಿದೆ. ಪಂಜಾಬ್’ನ ಎಲ್ಲಾ ಕಾಂಗ್ರೆಸ್ ಶಾಸಕರು ಈ ಸಭೆಯಲ್ಲಿ ಭಾಗವಹಿಸಬೇಕೆಂದು ವಿನಂತಿಸುತ್ತಿದ್ದೇನೆ, ಎಂದು ಹರೀಶ್ ರಾವತ್ ಹೇಳಿದ್ದಾರೆ.
ಎಐಸಿಸಿ ಪರವಾಗಿ ಹರೀಶ್ ಚೌಧರಿ ಹಾಗು ಅಜಯ್ ಮಾಕೆನ್ ಅವರು ವೀಕ್ಷಕರಾಗಿ ಸಭೆಗೆ ಆಗಮಿಸಲಿದ್ದಾರೆ. ಸಭೆಯನ್ನು ಸೂಚಿಸಿದ ಸಮಯದಲ್ಲಿ ನಡೆಸಲು ತಯಾರಿ ನಡೆಸಲಾಗಿದೆ ಎಂದು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಟ್ವೀಟ್ ಮಾಡಿದ್ದಾರೆ. ಆದರೆ, ಈ ಸಭೆಯ ಕುರಿತಾಗಿ ಕ್ಯಾ. ಅಮರಿಂದರ್ ಸಿಂಗ್ ಅವರು ಮಾತ್ರ ಮೌನ ತಾಳಿದ್ದಾರೆ.
ಕಳೆದ ತಿಂಗಳು ನಾಲ್ಕು ಜನ ಸಚಿವರು ಹಾಗೂ ಸುಮಾರು ಇಪ್ಪತ್ತೈದು ಶಾಸಕರು ಸಿಎಂ ಸಿಂಗ್ ವಿರುದ್ದ ದೂರುಗಳ ಸುರಿಮಳೆಗೈದಿದ್ದರು. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವ ಶಕ್ತಿ ಅವರಿಗಿಲ್ಲ ಎಂದು ಕಟು ಟೀಕೆ ಮಾಡಿದ್ದರು. ಕಳೆದ ಮೇ ತಿಂಗಳಿನಿಂದಲೂ ಪಂಜಾಬ್ ಕಾಂಗ್ರೆಸ್ ಎಂಬುದು ಸುಪ್ತ ಜ್ವಾಲಾಮುಖಿಯಂತೆ ಕುದಿಯುತ್ತಿದೆ. ಇನ್ನೇನು ಭಿನ್ನಮತ ಸ್ಫೋಟಗೊಳ್ಳುತ್ತದೆ ಎಂದಾಗ ಹೈಕಮಾಂಡ್ ತಕ್ಷಣದ ಪರಿಹಾರಕ್ಕೆ ಮುಂದಾಗುತ್ತಿದೆ. ಆದರೆ, ಇಲ್ಲಿಯವರೆಗೂ ಭಿನ್ನಮತವನ್ನು ಸಂಪೂರ್ಣವಾಗಿ ಶಮನಗೊಳಿಸುವಲ್ಲಿ ಹೈಕಮಾಂಡ್ ಸಫಲವಾಗಿಲ್ಲ.
ದೊಡ್ಡ ಮಟ್ಟದ ಭಿನ್ನಮತ ಎದುರಾಗಿದ್ದರೂ, ಎಐಸಿಸಿ ನಾಯಕರು ಮಾತ್ರ ಏನೂ ನಡೆದೇ ಇಲ್ಲ ಎಂಬಂತಹ ಹೇಳಿಕೆ ನೀಡುತ್ತಿದ್ದಾರೆ. “ಪಂಜಾಬ್’ನಲ್ಲಿ ನಿರ್ಭೀತ ನಾಯಕರಿದ್ದಾರೆ. ಅವರು ತಮ್ಮ ಅಭಿಪ್ರಾಯವನ್ನು ಹೊರಹಾಕುತ್ತಿದ್ದಾರೆ ಅಷ್ಟೇ. ಇದರಿಂದಾಗಿ ಅವರ ಮಧ್ಯೆ ವೈಮನಸ್ಯ ಇದೆ ಎಂದು ತಿಳಿದುಕೊಳ್ಳುವುದು ತಪ್ಪು. ಅವರ ಸಮಸ್ಯೆಗಳನ್ನು ಅವರೇ ಬಗೆಹರಿಸಿಕೊಳ್ಳುತ್ತಾರೆ. ನಾವೇನೂ ಮಾಡುತ್ತಿಲ್ಲ,” ಎಂದು ಇತ್ತೀಚಿಗೆ ಹರೀಶ್ ರಾವತ್ ಅವರು ಹೇಳಿದ್ದರು.
ಇನ್ನೊಂದೆಡೆ, ಕಳೆದ ಆರು ತಿಂಗಳಲ್ಲಿ ಬಿಜೆಪಿಯು ನಾಲ್ಕು ಜನ ಮುಖ್ಯಮಂತ್ರಿಗಳನ್ನು ಬದಲಾಯಿಸಿದೆ. ವಿಜಯ್ ರೂಪಾನಿ, ಬಿ ಎಸ್ ಯಡಿಯೂರಪ್ಪ, ತೀರಥ್ ಸಿಂಗ್ ಸಿಂಗ್ ರಾವತ್ ಹಾಗೂ ತ್ರಿವೇಂದ್ರ ರಾವತ್ ಈಗಾಗಲೇ ಗೇಟ್ ಪಾಸ್ ಪಡೆದಿದ್ದಾರೆ. ಗುಜರಾತ್ ಮತ್ತು ಉತ್ತರಾಖಂಡ್’ಗಳಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಪಂಜಾಬ್ ಕುಡಾ ಚುನಾವಣೆಗೆ ಸಜ್ಜಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಸಿಎಂ ಬದಲಾವಣೆ ಮಾಡಿ ಸರ್ಕಾರದ ಕುರಿತು ಜನರಿಗಿರುವ ಭಾವನೆಗಳನ್ನು ಬದಲಾಯಿಸಬೇಕು ಎಂಬ ಆಲೋಚನೆ ಕಾಂಗ್ರೆಸ್ ಶಾಸಕರದ್ದು.
ಈಗಾಗಲೇ ಮುಂದಿನ ಚುನಾವಣೆಯೂ ಕ್ಯಾ. ಅಮರೀಂದರ್ ಸಿಂಗ್ ನೇತೃತ್ವದಲ್ಲಿಯೇ ನಡೆಯಲಿದೆ ಎಂದು ಎಐಸಿಸಿ ಘೋಷಿಸಿದ್ದರೂ, ರಾಜಕೀಯದಲ್ಲಿ ಯಾವ ಭರವಸೆಗಳೂ ಶಾಶ್ವತವಲ್ಲ ಎಂದು ರಾಜಕೀಯ ಮುತ್ಸದ್ದಿ ಸಿಎಂ ಸಿಂಗ್ ಅವರಿಗೂ ಗೊತ್ತು. ಹಾಗಾಗಿ ಇಂದಿನ ಸಭೆಯಲ್ಲಿ ನಡೆಯುವ ವಿದ್ಯಾಮಾನಗಳು ಅಮರೀಂದರ್ ಸಿಂಗ್ ಅವರ ಭವಿಷ್ಯವನ್ನು ನಿರ್ಧರಿಸಲಿದೆ.