—–ನಾ ದಿವಾಕರ—–
ಸ್ವತಂತ್ರ ಭಾರತದ ರಾಜಕೀಯದಲ್ಲಿ ಸೈದ್ದಾಂತಿಕ ನೆಲೆಗಳು ಸದಾ ಅಧಿಕಾರಾಧೀನವಾಗಿಯೇ ಇದೆ

ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಎರಡನೆ ಅಧಿಕಾರಾವಧಿಯಲ್ಲಿ ಎರಡು ವರ್ಷಗಳನ್ನು ಪೂರೈಸುತ್ತಿರುವ ಸಿದ್ಧರಾಮಯ್ಯ ಸಾರ್ವಜನಿಕವಾಗಿ ಹೆಚ್ಚು ಚರ್ಚೆಗೊಳಗಾಗುವುದು ಅವರ ಆಡಳಿತ ಕ್ಷಮತೆ ಅಥವಾ ದಕ್ಷತೆಗಾಗಿ ಅಲ್ಲ. ಬದಲಾಗಿ ಅವರ ಸೈದ್ಧಾಂತಿಕ ನಿಲುವುಗಳು, ತಾತ್ವಿಕ ನಡವಳಿಕೆಗಳು ಮತ್ತು ರಾಜ್ಯ-ರಾಷ್ಟ್ರ ರಾಜಕಾರಣವನ್ನು ಪ್ರಧಾನವಾಗಿ ಆವರಿಸಿರುವ ಜಾತಿ ಕೇಂದ್ರಿತ ರಾಜಕೀಯದಲ್ಲಿ ಅವರ ಸ್ಪಷ್ಟ ನಿಲುವುಗಳಿಗಾಗಿ. ಈ ಪ್ರಶ್ನೆಗಳನ್ನು ನಿರ್ದಿಷ್ಟ ವ್ಯಕ್ತಿಗತ ನೆಲೆಯಿಂದಾಚೆ ನೋಡಿದಾಗ, ಕಳೆದ ನಾಲ್ಕು ದಶಕಗಳ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಏಕೆಂದರೆ ಸ್ವತಂತ್ರ ಭಾರತ ಆಯ್ಕೆ ಮಾಡಿಕೊಂಡ ಸಾಂವಿಧಾನಿಕ ತತ್ವಗಳಾದ ಜಾತ್ಯತೀತತೆ (Secularism)̧ ಸಮಾನತೆ, ಬಂಧುತ್ವ ಮತ್ತು ಬಹುಸಾಂಸ್ಕೃತಿಕ ಸಮಾಜದ ಸಮನ್ವಯದ ಹಾದಿಗಳಲ್ಲಿ ತೀವ್ರತೆರನಾದ ಪಲ್ಲಟಗಳು ಕಾಣಿಸಿಕೊಂಡಿದ್ದು, ಜಾಗತೀಕರಣ ಭಾರತವನ್ನು ಪ್ರವೇಶಿಸಿದ 1980ರ ದಶಕದ ಅನಂತರದಲ್ಲೇ.

ವಿಶಾಲ ರಾಜಕೀಯ ನೆಲೆಯಲ್ಲಿ ಭಾರತದ ರಾಜಕಾರಣವನ್ನು ಮಾರ್ಕ್ಸ್‌ವಾದ, ಅಂಬೇಡ್ಕರ್‌ವಾದ ಮತ್ತು ಲೋಹಿಯಾ ಸಮಾಜವಾದ ಹೆಚ್ಚು ಪ್ರಭಾವಿಸಿರುವುದನ್ನು ಆರಂಭದಿಂದಲೂ ಗಮನಿಸಬಹುದು. ಆದರೆ 1970ರ ದಶಕದ ಸಾಮಾಜಿಕ-ಆರ್ಥಿಕ ಪಲ್ಲಟಗಳು ಮತ್ತು ಸಾಂಸ್ಕೃತಿಕ ವ್ಯತ್ಯಯಗಳು ಅಧಿಕಾರ ರಾಜಕಾರಣದ ನೆಲೆಗಳನ್ನು ಹೆಚ್ಚಿನ ಮಟ್ಟಿಗೆ ಲೋಹಿಯಾ ಸಮಾಜವಾದದ ಕಡೆಗೇ ವಾಲುವಂತೆ ಮಾಡಿತ್ತು. ತುರ್ತುಪರಿಸ್ಥಿತಿಯ ಹೋರಾಟ ಮತ್ತು ತದನಂತರದಲ್ಲಿ ಪ್ರಾದೇಶಿಕ ಪಕ್ಷಗಳ ಉಗಮ ಪ್ರಜಾಪ್ರಭುತ್ವದ ಬೇರುಗಳನ್ನು ಸೈದ್ಧಾಂತಿಕವಾಗಿ ಗಟ್ಟಿಗೊಳಿಸುವುದಕ್ಕಿಂತಲೂ ಹೆಚ್ಚಾಗಿ, ನಿರ್ದಿಷ್ಟ ಜಾತಿ ಕೇಂದ್ರಿತ ರಾಜಕೀಯ ಪಕ್ಷಗಳು ಉದಯಿಸಿದ್ದು, ಭಾರತಕ್ಕೆ ಹೊಸ ರಾಜಕೀಯ ಆಯಾಮವನ್ನು ನೀಡಲಾರಂಭಿಸಿತು. ಇಲ್ಲಿ ಮುಖ್ಯವಾಗಿ ಗಮನಿಸಬೇಕಾಗಿರುವುದು, ಲೋಹಿಯಾ ಸಮಾಜವಾದವಾಗಲೀ ಅಥವಾ ಭಾರತೀಯ ಸೆಕ್ಯುಲರಿಸಂ ಆಗಲೀ ಪಾಶ್ಚಿಮಾತ್ಯ ಅಥವಾ ಐರೋಪ್ಯ ಚಿಂತನೆಗಳಿಂದ ಭಿನ್ನವಾಗಿಯೇ ನಿರ್ವಚಿಸಲ್ಪಟ್ಟಿದ್ದು.
ಮಾರ್ಕ್ಸ್ ಪ್ರತಿಪಾದಿಸಿದ ಸಮತಾವಾದದ ನೆಲೆಯಲ್ಲಿನ ವೈಜ್ಞಾನಿಕ ಸಮಾಜವಾದವಾಗಲೀ, ಐರೋಪ್ಯ ದೇಶಗಳ ಮತ-ಧರ್ಮವನ್ನು ಪ್ರಭುತ್ವದಿಂದ ಬೇರೆ ಇರಿಸುವ ಸೆಕ್ಯುಲರಿಸಂ ಆಗಲೀ ಭಾರತದಲ್ಲಿ ಊರ್ಜಿತವಾಗಲೇ ಇಲ್ಲ. ಬದಲಾಗಿ ಇದರ ಅಪಭ್ರಂಶಗಳ ರೂಪದಲ್ಲಿ ಸರ್ವಧರ್ಮ ಸಮಭಾವ, ಅರೆಸಮಾಜವಾದ ಅಥವಾ ಔದಾರ್ಯದ ಬಂಡವಾಳಶಾಹಿ ನೀತಿಗಳು ಬಹುಮಟ್ಟಿಗೆ ಸ್ವೀಕೃತವಾದವು. ಇಂತಹ ಒಂದು ರಾಜಕೀಯ ವಾತಾವರಣದಲ್ಲಿ ಕರ್ನಾಟಕದ ರಾಜಕಾರಣದಲ್ಲಿ ಹೊರಹೊಮ್ಮಿದ್ದು, ಹಾಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ. ವ್ಯಕ್ತಿಗತ ನೆಲೆಯಲ್ಲಿ ಸಮಾಜವಾದ, ಸಮತಾವಾದ, ಸೆಕ್ಯುಲರಿಸಂ ಹೀಗೆ ಎಲ್ಲ ತತ್ವಗಳನ್ನೂ ಅಪ್ಪಿಕೊಳ್ಳುವ ಸಿದ್ಧರಾಮಯ್ಯ ಅವರನ್ನು ಅಧಿಕಾರ ರಾಜಕಾರಣದ ಚೌಕಟ್ಟಿನೊಳಗೆ ವಿಮರ್ಶಿಸುವಾಗ, ಈ ಮೇಲಿನ ವಿಶಾಲ ರಾಜಕಾರಣದ ವೈರುಧ್ಯಗಳನ್ನೂ ಗಮನದಲ್ಲಿಡಬೇಕಾಗುತ್ತದೆ. ಪ್ರಸ್ತುತ ʼ ಸಮಾಜಮುಖಿ ʼ ಚರ್ಚೆಯನ್ನು ಈ ನೆಲೆಯಲ್ಲೇ ವಿಸ್ತರಿಸಲು ಪ್ರಯತ್ನಿಸುತ್ತೇನೆ.
ತತ್ವ ರಾಜಕಾರಣ-ರಾಜಕೀಯ ತತ್ವ
ಲೋಹಿಯಾ ಸಮಾಜವಾದದ ಹರಿಕಾರರೆಂದೇ ಹೇಳಲಾಗುವ ಜಯಪ್ರಕಾಶ್ ನಾರಾಯಣ್-ಜಾರ್ಜ್ ಫರ್ನಾಂಡಿಸ್ ಅವರಿಂದ, ವರ್ತಮಾನದ ನೀತಿಶ್ ಕುಮಾರ್-ಸಿದ್ಧರಾಮಯ್ಯ ಅವರವರೆಗೂ ವಿಸ್ತರಿಸಿ ನೋಡಿದಾಗ, ಭಾರತದಲ್ಲಿ ತತ್ವ ಮತ್ತು ಸಿದ್ಧಾಂತಗಳು ವ್ಯಕ್ತಿಗತ ನೆಲೆಯಲ್ಲೇ ಅಡಕವಾಗಿದೆಯೇ ಹೊರತು, ವಿಶಾಲಾರ್ಥದ ಅಧಿಕಾರ ರಾಜಕಾರಣದಲ್ಲಿ ತನ್ನ ಬೇರುಗಳನ್ನು ಕಂಡುಕೊಂಡಿಲ್ಲ ಎನ್ನುವುದನ್ನು ಗುರುತಿಸಬಹುದು. ಇದಕ್ಕೆ ರಾಜ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಹ ಹೊರತಲ್ಲ. ಹಾಲಿ ಕಾಂಗ್ರೆಸ್ ಸರ್ಕಾರದ ಜನಕಲ್ಯಾಣ ನೀತಿಗಳನ್ನು (ಗ್ಯಾರಂಟಿ ಯೋಜನೆಗಳು), ನೈಜ ಸಮಾಜವಾದದ ಚೌಕಟ್ಟಿನಲ್ಲಿ ನಿರ್ವಚಿಸುವ ತಪ್ಪು ಮಾಡದೆ ಹೋದರೆ, ನವ ಉದಾರವಾದಿ-ಬಂಡವಾಳಶಾಹಿ-ಕಾರ್ಪೋರೇಟ್ ಮಾರುಕಟ್ಟೆ ಸ್ನೇಹಿಯಾದ ಆರ್ಥಿಕ ನೀತಿಗಳು ಪ್ರಧಾನವಾಗಿ ಜಾಗತಿಕ ಬಂಡವಾಳದ ಮತ್ತು ಸ್ಥಳೀಯ ಕಾರ್ಪೋರೇಟ್ ಮಾರುಕಟ್ಟೆಯ ವಾಹಕಗಳಾಗಿಯೇ ಕಾಣಲು ಸಾಧ್ಯ.

ಹಾಗಾಗಿ ಈ ಬಂಡವಾಳಶಾಹಿ ವ್ಯವಸ್ಥೆಯಲ್ಲಿ, ಆಡಳಿತಾತ್ಮಕವಾಗಿ ಒಂದು ಅಂಶಿಕ ಭಾಗವಾಗಿಯೇ ರೂಪುಗೊಳ್ಳುವ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಭಾರತೀಯ ಪರಂಪರೆಯ ಕುಟುಂಬ ರಾಜಕಾರಣವನ್ನು ಪ್ರತ್ಯೇಕಿಸಿ ನೋಡಲಾಗುವುದಿಲ್ಲ. ಸಿದ್ಧರಾಮಯ್ಯ ಪರಿಕಲ್ಪನೆಯ ಗ್ಯಾರಂಟಿ ಯೋಜನೆಗಳೂ ಸಹ ತಳಮಟ್ಟದ ಆರ್ಥಿಕ ಅಸಮಾನತೆಗಳನ್ನು ಅಥವಾ ಬಡತನವನ್ನು ಹೋಗಲಾಡಿಸುವುದಿಲ್ಲ, ಬದಲಾಗಿ ತಾತ್ಕಾಲಿಕವಾಗಿ ಈ ಜನತೆಯ ಬದುಕನ್ನು ಸುಗಮಗೊಳಿಸುತ್ತವೆ. ಇದರಿಂದ ಹೊರತಾಗಿ ನೋಡಿದಾಗ ರಾಜ್ಯ ಕಾಂಗ್ರೆಸ್ ಸರ್ಕಾರವೂ ಸಹ ನವ ಉದಾರವಾದಿ ಕಾರ್ಪೋರೇಟ್ ಮಾರುಕಟ್ಟೆ ಆರ್ಥಿಕತೆಯನ್ನೇ ಅನುಸರಿಸುತ್ತಿದೆ. ಹಾಗಾಗಿ ಸದಾ ಲಾಭಗಳಿಕೆಯತ್ತಲೇ ಮುಖ ಮಾಡಿರುವ ಕಾರ್ಪೋರೇಟ್ ಮಾರುಕಟ್ಟೆಯೊಡನೆ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅಧಿಕಾರಶಾಹಿ ಮತ್ತು ಕಾರ್ಯಾಂಗಗಳು ಭ್ರಷ್ಟಾಚಾರದ ವಿವಿಧ ಮಾರ್ಗಗಳನ್ನು ಆಯ್ದುಕೊಳ್ಳುತ್ತವೆ.

ಹಾಗಾಗಿಯೇ ಕೇಂದ್ರ ಅಥವಾ ರಾಜ್ಯಗಳಲ್ಲಿ ವ್ಯಕ್ತಿಗತವಾಗಿ ಪ್ರಾಮಾಣಿಕ-ನಿಷ್ಕಳಂಕ ನಾಯಕರೇ ಸರ್ಕಾರವನ್ನು ನಡೆಸಿದರೂ, ಅವರ ಸುತ್ತಲಿನ ಭ್ರಷ್ಟತೆಯ ಕೂಟಗಳನ್ನು (Coteries) ನಿಯಂತ್ರಿಸಲಾಗುವುದಿಲ್ಲ ಮುಖ್ಯಮಂತ್ರಿಗಳ ಅಥವಾ ಪ್ರಧಾನ ಮಂತ್ರಿಗಳ ಪ್ರಾಮಾಣಿಕ-ಸ್ವಚ್ಚ ವ್ಯಕ್ತಿತ್ವವೂ ಸಹ ಕಾರ್ಪೋರೇಟ್ ಮಾರುಕಟ್ಟೆಗೆ ಬಂಡವಾಳವಾಗಿ ಪರಿಣಮಿಸುತ್ತದೆ. ರಾಜ್ಯದಲ್ಲಿ ನಾವು ಕಾಣುತ್ತಿರುವ ಸ್ಪರ್ಧಾತ್ಮಕ ಭ್ರಷ್ಟತೆಯನ್ನು ಈ ದೃಷ್ಟಿಯಿಂದ ನೋಡಬೇಕಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಪಾದೇಶಿಕ ಪಕ್ಷಗಳನ್ನೂ ಒಳಗೊಂಡಂತೆ ಎಲ್ಲ ಬೂರ್ಷ್ವಾ ಪಕ್ಷಗಳೂ, ಕೆಲವೊಮ್ಮೆ ಎಡಪಕ್ಷಗಳೂ ಸಹ ಈ ಭ್ರಷ್ಟ ಕೂಟಗಳನ್ನು ರಕ್ಷಿಸಲು ಸದಾ ಶ್ರಮಿಸುತ್ತಿರುತ್ತವೆ. ಹೈಕಮಾಂಡ್‌ಗಳಿಗೆ ರಾಜ್ಯಗಳಿಂದ ಸಲ್ಲಿಸಬೇಕಾದ ನಿಧಿಯನ್ನು ಕಾರ್ಪೋರೇಟ್ ಮಾರುಕಟ್ಟೆಯೇ ಸಲ್ಲಿಸುವ ಒಂದು ಆಂತರಿಕ ವ್ಯವಸ್ಥೆಯನ್ನೂ ಭಾರತದ ಪ್ರಜಾತಂತ್ರ ವ್ಯವಸ್ಥೆ ರೂಢಿಸಿಕೊಂಡಿದೆ. ಚುನಾವಣಾ ಬಾಂಡ್ ಇಂತಹ ಒಂದು ಯೋಜನೆ. ಹಾಗಾಗಿ ಇಲ್ಲಿ ಭ್ರಷ್ಟಾಚಾರ ನಿಯಂತ್ರಣ ಎನ್ನುವುದು ಮೇಲ್ನೋಟಕ್ಕೆ ಕಾಣುವಂತೆ ಇರುವುದಿಲ್ಲ. ಅಧಿಕಾರಶಾಹಿಯ ಮೇಲೆ ಸಿಬಿಐ, ಲೋಕಾಯುಕ್ತ, ಜಾರಿ ನಿರ್ದೇಶನಾಲಯಗಳು ನಡೆಸುವ ದಾಳಿ, ತಾತ್ಕಾಲಿಕವಾಗಿ ಸದಾಭಿಪ್ರಾಯವನ್ನು ಮೂಡಿಸಿದರೂ, ಯಾವುದೇ ಪ್ರಕರಣಗಳು ತಾರ್ಕಿಕ ಅಂತ್ಯ ತಲುಪಿ, ಅಂತಿಮ ಶಿಕ್ಷೆಯಾಗಿರುವ ನಿದರ್ಶನಗಳು ಬಹಳವೇ ಅಪರೂಪ.

ಜನಪ್ರಾತಿನಿಧ್ಯ ಮತ್ತು ಆಡಳಿತ ಭ್ರಷ್ಟತೆ
ಈ ಹಣಕಾಸು ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗದ ಫಲಾನುಭವಿಗಳು ಜನಪ್ರತಿನಿಧಿಗಳು ಮತ್ತು ಅವರು ಪ್ರತಿನಿಧಿಸುವ ಪಕ್ಷಗಳೇ ಆಗಿದ್ದರೂ, ಇದರ ಹೊರೆಯನ್ನು ಸಾಮಾನ್ಯ ಜನತೆ ಹೊರುವುದು ವರ್ತಮಾನದ ದುರಂತಗಳಲ್ಲೊಂದು. ಇದನ್ನು ಸಾರ್ವಜನಿಕರ ಗಮನದಿಂದ ಮರೆಮಾಚುವ ಹಲವು ವಿಧಾನಗಳನ್ನೂ ಭಾರತದ ಪ್ರಜಾತಂತ್ರ ವ್ಯವಸ್ಥೆ ರೂಢಿಸಿಕೊಂಡುಬಂದಿದೆ. ಗರೀಬಿ ಹಠಾವೋ ಘೋಷಣೆಯಿಂದ ಅಚ್ಚೇ ದಿನ್‌ವರೆಗೂ ವಿಸ್ತರಿಸುವ ಈ ವಿಧಾನಗಳು ಹಲವು ಆಯಾಮಗಳಲ್ಲಿ ಕಾರ್ಯಗತವಾಗುತ್ತವೆ. ಇದರ ಒಂದು ಮಜಲನ್ನು ಗ್ಯಾರಂಟಿ ಯೋಜನೆಗಳಲ್ಲಿ ಗುರುತಿಸಬಹುದು. ಕರ್ನಾಟಕದಲ್ಲಿ ಈ ಯೋಜನೆಗಳನ್ನು ಜಾರಿಗೊಳಿಸಿದಾಗ ಲೇವಡಿ ಮಾಡಿದ ಬಿಜೆಪಿ ಮತ್ತಿತರ ಪಕ್ಷಗಳು, ಈಗ ತಮ್ಮ ಆಳ್ವಿಕೆಯ ರಾಜ್ಯಗಳಲ್ಲೂ, ಕೇಂದ್ರದಲ್ಲೂ ಸಹ ಅದನ್ನೇ ಅನುಸರಿಸುತ್ತಿರುವುದು ಇದರ ಒಂದು ಪ್ರತ್ಯಕ್ಷ ಸಾಕ್ಷಿ. ಜಾತಿ ಗಣತಿಯ ವಿಚಾರದಲ್ಲೂ ಸಹ ಕರ್ನಾಟಕ ಸರ್ಕಾರದ ನಡೆಯನ್ನು ಟೀಕಿಸುತ್ತಿದ್ದ ಬಿಜೆಪಿ ಈಗ ಕೇಂದ್ರದಲ್ಲೂ ಇದೇ ಮಾರ್ಗ ಅನುಸರಿಸುತ್ತಿದೆ.

ಒಳಮೀಸಲಾತಿ, ಮುಸ್ಲಿಂ ಮೀಸಲಾತಿ ಮತ್ತು ಜಾತಿ ಗಣತಿಯಂತಹ ಸಾಮಾಜಿಕ ನ್ಯಾಯದ ಉಪಕ್ರಮಗಳನ್ನು, ಭ್ರಷ್ಟಾಚಾರವನ್ನು ಮರೆಮಾಚುವ ತಂತ್ರ ಎಂದು ಭಾವಿಸುವುದು ತಪ್ಪಾಗುತ್ತದೆ. ಈ ಸಾಂವಿಧಾನಿಕ ಕ್ರಮಗಳು ಬಂಡವಾಳಶಾಹಿ ಆರ್ಥಿಕತೆಯ ಅನಿವಾರ್ಯತೆಗಳು. ಸಂವಿಧಾನದ ಆಶಯದಂತೆ ಸಮಾನತೆ ಮತ್ತು ಸಮತೆಯನ್ನು ತಳಮಟ್ಟದವರೆಗೂ ವಿಸ್ತರಿಸಲು ವಿಫಲವಾಗುತ್ತಿರುವ ಭಾರತದ ಪ್ರಜಾಪ್ರಭುತ್ವದಲ್ಲಿ, ಈ ಸಾಮಾಜಿಕ ನ್ಯಾಯದ ಸಾಂವಿಧಾನಿಕ ಕ್ರಮಗಳೇ ಸರ್ಕಾರಗಳಿಗೆ ಚುನಾವಣೆಗಳಲ್ಲಿ ರಕ್ಷಾ ಕವಚಗಳಾಗಬಹುದು. ಆದರೆ ಈ ಕಾರಣಕ್ಕಾಗಿ ಇದನ್ನು ನಿರಾಕರಿಸಲಾಗುವುದಿಲ್ಲ. ಏಕೆಂದರೆ 77 ವರ್ಷಗಳ ಸ್ವತಂತ್ರ ಆಳ್ವಿಕೆಯ ನಂತರವೂ ಭಾರತೀಯ ಸಮಾಜದಲ್ಲಿ ಸಾಮಾಜಿಕ-ಆರ್ಥಿಕ ಅಸಮಾನತೆಗಳು, ಅವಕಾಶವಂಚಿತ ಜನರ ಪ್ರಮಾಣ, ಬಡವ-ಶ್ರಿಮಂತರ ನಡುವಿನ ಅಂತರಗಳನ್ನು ಹೋಗಲಾಡಿಸಲಾಗಿಲ್ಲ. ಬದಲಾಗಿ ಇನ್ನೂ ಹೆಚ್ಚಾಗುತ್ತಲೇ ಇದೆ. ಈ ದೃಷ್ಟಿಯಿಂದ ನೋಡಿದಾಗ, ಜನಕಲ್ಯಾಣ ಯೋಜನೆಗಳು ಬಂಡವಾಳಶಾಹಿ ಆರ್ಥಿಕತೆಯಲ್ಲಿ, ತಳಸಮಾಜವನ್ನು ಸಂತೈಸುವ ಒಂದು ಸಾಧನವಾಗಿ ಕಾಣುತ್ತದೆ. ಇದನ್ನು “ಜನತೆಯ ಧ್ಯಾನ ಬದಲಿಸುವ” ಕ್ರಮ ಎನ್ನುವುದಕ್ಕಿಂತಲೂ, ಎಲ್ಲ ಸರ್ಕಾರಗಳಿಗೂ ಇದು ಅನಿವಾರ್ಯವಾಗಿದೆ ಎನ್ನಬಹುದು.
ಸೈದ್ಧಾಂತಿಕ ಪಲ್ಲಟ ಮತ್ತು ವ್ಯತ್ಯಯಗಳು
ಲೋಹಿಯಾ ಸಮಾಜವಾದವನ್ನು ಒಪ್ಪಿ ನಡೆಯುವ ಭಾರತದ ರಾಜಕೀಯ ಪಕ್ಷಗಳಲ್ಲಿ ಕಾಣಬಹುದಾದ ಒಂದು ಕೊರತೆ ಎಂದರೆ ಅಲ್ಲಿ ಸೈದ್ಧಾಂತಿಕ ಸ್ಪಷ್ಟತೆ ಇಲ್ಲದಿರುವುದು. ಅಥವಾ ಅಧಿಕಾರ ರಾಜಕಾರಣದ ನೆಲೆಯಲ್ಲಿ ಆಳ್ವಿಕೆಯ ಭಾಗಿದಾರರಾಗುವ ಹಂಬಲದಲ್ಲಿ, ತಮ್ಮ ಸೈದ್ಧಾಂತಿಕ ಹಾಗೂ ತಾತ್ವಿಕ ನಿಲುವುಗಳನ್ನು ಸಮಯಕ್ಕೆ ತಕ್ಕಂತೆ ಸಡಿಲಿಸುತ್ತಾ, ಅಧಿಕಾರದ ಫಲಾನುಭವಿಗಳಾಗುವುದು. ಹಾಗಾಗಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತಿತರ ಅಪಸವ್ಯಗಳೆಲ್ಲವನ್ನೂ ಸಹಿಸಿಕೊಳ್ಳುವ ಒಂದು ದಾರ್ಷ್ಟ್ಯವನ್ನು ಬಿಹಾರ-ಉತ್ತರ ಪ್ರದೇಶ-ಒಡಿಷಾದಿಂದ ಕರ್ನಾಟಕದವರೆಗೂ ಕಾಣಬಹುದು. ಲಲ್ಲೂ ಯಾದವ್ ಮತ್ತು ಸಿದ್ಧರಾಮಯ್ಯ, ಕೋಮುವಾದದ ನೆಲೆಯಲ್ಲಿ, ಈ ಅವಕಾಶವಾದಿ ಶೀರ್ಷಾಸನದಿಂದ ಹೊರತಾಗಿದ್ದರೂ, ಬಂಡವಾಳಶಾಹಿಯ ವಿರುದ್ಧವಾಗಲೀ ಅಥವಾ ಹಿಂದುತ್ವವಾದದ ಮತೀಯ ರಾಜಕಾರಣದ ವಿರುದ್ಧ ದಿಟ್ಟ ನಿಲುವು ತಳೆಯುವುದನ್ನು ಕಾಣಲಾಗುವುದಿಲ್ಲ.

ಇದಕ್ಕೆ ಕಾರಣ ಭಾರತದ ಸಮಾಜವಾದಿ ರಾಜಕಾರಣಕ್ಕೆ ವೈಚಾರಿಕತೆ ತಳಹದಿಯಾಗಿದೆಯೇ ಹೊರತು, ನಾಸ್ತಿಕತೆ ಅಲ್ಲ. ಪೆರಿಯಾರ್ ಹೊರತಾಗಿ ಯಾವುದೇ ನಾಯಕರೂ ಸಮಾಜವಾದ ಮತ್ತು ರಾಜಕೀಯ ನಾಸ್ತಿಕತೆಯನ್ನು (Political Athiesm) ಒಟ್ಟಾಗಿ ನೋಡಿಲ್ಲ ಎನ್ನುವುದು ಚಾರಿತ್ರಿಕ ವಾಸ್ತವ. ಹಾಗಾಗಿ ಅಧಿಕಾರದ ಗದ್ದುಗೆಯಲ್ಲಿರುವಾಗ ಧಾರ್ಮಿಕ ಆಚರಣೆಗಳಲ್ಲಿ, ಆಧ್ಯಾತ್ಮಿಕ ನೆಲೆಗಳಲ್ಲಿ ಮತ್ತು ವಿಧಿ ವಿಧಾನಗಳಲ್ಲಿ ರಾಜಿಯಾಗುತ್ತಾ ಪಾಲ್ಗೊಲ್ಳುವ ಒಂದು ಸಂಪ್ರದಾಯವನ್ನು ಗುರುತಿಸಬಹುದು. ಸಿದ್ಧರಾಮಯ್ಯ ಸಹ ಇದಕ್ಕೆ ಹೊರತಾಗಿಲ್ಲ ಎನ್ನುವುದು ಅವರ ಇತ್ತೀಚಿನ ಕೆಲವು ನಡವಳಿಕೆಗಳು ನಿರೂಪಿಸಿವೆ. ರಾಜಕೀಯವಾಗಿ, ಚುನಾವಣಾ ವಲಯದಲ್ಲಿ, ಹಿಂದುತ್ವ ರಾಜಕಾರಣವನ್ನು ವಿರೋಧಿಸಿದರೂ, ಈ ರಾಜಕೀಯ ನೆಲೆಗಳಲ್ಲೇ ಪೋಷಿಸಲ್ಪಡುವ ಅಧ್ಯಾತ್ಮ-ಧರ್ಮ ಮತ್ತು ಸಾಂಸ್ಕೃತಿಕ ನೆಲೆಗಳನ್ನು ಸೈದ್ಧಾಂತಿಕ ನೆಲೆಯಲ್ಲಿ ನಿಂತು ವಿರೋಧಿಸಲು ವಿಫಲರಾಗುವುದನ್ನೂ ಗಮನಿಸಬಹುದು. ಇದು ಲೋಹಿಯಾ ಸಮಾಜವಾದದ ರಾಜಕೀಯ ಕೊರತೆ ಎನ್ನಬಹುದು.

ಸಮಾಜವಾದಿ ರಾಜಕಾರಣದಲ್ಲಿ ಢಾಳಾಗಿ ಎದ್ದುಕಾಣುವ ಮತ್ತೊಂದು ವಿದ್ಯಮಾನ ಎಂದರೆ ಜಾತಿ ಕೇಂದ್ರಿತ ರಾಜಕೀಯ. ಸಿದ್ಧರಾಮಯ್ಯ ಸರ್ಕಾರವೂ ಇದರಿಂದ ಹೊರತಾಗಿಲ್ಲ. ಸಚಿವ ಸಂಪುಟದಲ್ಲಿ ಸಾಧ್ಯವಾಗದಿದ್ದರೂ, ಆಡಳಿತ ನಿರ್ವಹಣೆಯ ಮೂಲ ಸ್ತಂಭಗಳಲ್ಲಿ, ಎಲ್ಲ ಸ್ತರಗಳಲ್ಲಿ, ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಸ್ವಜಾತಿ ಪ್ರಾತಿನಿಧ್ಯಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಟ್ಟಿರುವುದನ್ನು ಎರಡು ವರ್ಷಗಳ ಕಾಂಗ್ರೆಸ್ ಆಳ್ವಿಕೆಯಲ್ಲೇ ಗುರುತಿಸಬಹುದು. ತಮ್ಮ ಅಧಿಕಾರ ನಿರ್ವಹಣೆ ಮತ್ತು ಆಡಳಿತ ಯಂತ್ರದ ನಿರೂಪಣೆಗೆ ಅತ್ಯವಶ್ಯವಾದ ತಕ್ಷಣದ ಸಾಂಸ್ಥಿಕ ಹುದ್ದೆಗಳಲ್ಲಿ, ವಿಶೇಷವಾಗಿ ಆಯಕಟ್ಟಿನ ಜಾಗಗಳಲ್ಲಿ, ಸ್ವಜಾತಿಯವರನ್ನೋ ಅಥವಾ ಜಾತಿಯ ನೆಲೆಯಲ್ಲೇ ಬೆಂಬಲಿಸುವವರನ್ನೋ ಸ್ಥಾಪಿಸುವ ಒಂದು ಪರಂಪರೆಯನ್ನು ಈ ಸರ್ಕಾರವೂ ಅನುಸರಿಸಿದೆ. ಕರ್ನಾಟಕದ ಸಾಂಸ್ಕೃತಿಕ ಜಗತ್ತಿನಲ್ಲಿ ಒಂದು ಸುತ್ತುಹಾಕಿದರೆ ಇದು ಸ್ಪಷ್ಟವಾಗುತ್ತದೆ. ಮತ್ತೊಂದು ಆಯಾಮದಲ್ಲಿ ನೋಡಿದಾಗ, ತಮ್ಮ ಚುನಾವಣಾ ಗೆಲುವಿಗೆ ಕಾರಣವಾದ ತಳಸಮುದಾಯಗಳ ಹೋರಾಟಗಳನ್ನು ಪುರಸ್ಕರಿಸುವ ನೆಲೆಯಲ್ಲಿ ಈ ಹುದ್ದೆಗಳನ್ನೇ ಅಸ್ತ್ರವನ್ನಾಗಿ ಬಳಸಿಕೊಂಡು, ಪ್ರತಿರೋಧದ ದನಿಯನ್ನು ಆದಷ್ಟೂ ಮಟ್ಟಿಗೆ ತಣ್ಣಗಾಗಿಸುವ ಚಾಣಾಕ್ಷತನವನ್ನೂ ಈ ಎರಡು ವರ್ಷಗಳಲ್ಲಿ ಗುರುತಿಸಬಹುದು.

ಅಂತಿಮವಾಗಿ
ಕಾರ್ಪೋರೇಟ್ ಮಾರುಕಟ್ಟೆ ಆರ್ಥಿಕತೆ ಮತ್ತು ನವ ಉದಾರವಾದದ, ಅಪ್ತ ಬಂಡವಾಳಶಾಹಿ (Crony Capitalism) ವ್ಯವಸ್ಥೆಯಲ್ಲಿ ಭ್ರಷ್ಟಾಚಾರದ ಬೇರುಗಳು ರೂಪಾಂತರಗೊಂಡು ಗಟ್ಟಿಯಾಗುತ್ತವೆಯೇ ಹೊರತು, ದುರ್ಬಲವಾಗುವುದಿಲ್ಲ. ಸಮಾಜವಾದಿ ತತ್ವಗಳನ್ನು ಪ್ರತಿಪಾದಿಸುವ ಸಿದ್ಧರಾಮಯ್ಯ ಸರ್ಕಾರವೂ ಇದೆ ದ್ವಂದ್ವವನ್ನು ಎದುರಿಸುತ್ತಿರುವುದು ಸ್ಪಷ್ಟ. ಹಾಗಾಗಿಯೇ ಕಡು ಭ್ರಷ್ಟರ ನಡುವೆಯೇ, ವ್ಯಕ್ತಿಗತವಾಗಿ ಪ್ರಾಮಾಣಿಕ ಹಾಗೂ ತಾತ್ವಿಕವಾಗಿ ಬದ್ಧತೆ ಇರುವ ವ್ಯಕ್ತಿಯಾಗಿ ಸಿದ್ಧರಾಮಯ್ಯ ತಮ್ಮ ಎರಡು ವರ್ಷಗಳ ಆಳ್ವಿಕೆಯನ್ನು ಪೂರೈಸಿದ್ದಾರೆ. ತಮ್ಮ ನಾಲ್ಕು ದಶಕಗಳ ಕಳಂಕರಹಿತ ರಾಜಕೀಯ ಪಯಣವನ್ನೂ ಅದೇ ನಿಷ್ಕಳಂಕತೆಯೊಂದಿಗೆ ಮುಂದುವರೆಸಿಕೊಂಡು ಹೋಗುವ ನಿರೀಕ್ಷೆ ಅವರ ಅಭಿಮಾನಿಗಳಲ್ಲಿ, ಕರ್ನಾಟಕದ ಜನತೆಯಲ್ಲಿದ್ದರೆ, ಆ ಜವಾಬ್ದಾರಿ ಅವರ ಹೆಗಲ ಮೇಲೂ ಇದೆ. ಇದು ಅಧಿಕಾರ ರಾಜಕಾರಣ ಸೃಷ್ಟಿಸುವ ಸಂದಿಗ್ಧತೆ. ಅಧಿಕಾರದಿಂದ ಕೆಳಗಿಳಿದು ತಮ್ಮ ವರ್ಚಸ್ಸನ್ನು ಕಾಪಾಡಿಕೊಳ್ಳುವುದು ವ್ಯಕ್ತಿಗತ ವಿವೇಚನೆಗೆ ಬಿಟ್ಟ ವಿಚಾರ.
( ಕೃಪೆ ಸಮಾಜಮುಖಿ ಮಾಸಪತ್ರಿಕೆ ಜೂನ್ 2025)
-೦-೦-೦-