ಬೆಂಗಳೂರು : ರಾಜ್ಯದಲ್ಲಿ ಈ ಹಿಂದೆ ನಾಯಕತ್ವ ಬದಲಾವಣೆಯ ವಿಚಾರ ತಾರಕಕ್ಕೇರಿದ ಸಂದರ್ಭದಲ್ಲಿ ಕಾಂಗ್ರೆಸ್ ಹೈಕಮಾಂಡ್ ತನ್ನ ನಿಷ್ಠರನ್ನು ಸಂಪರ್ಕಿಸಿ ರಾಜ್ಯದ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾಹಿತಿ ಪಡೆದಿತ್ತು. ಸಂಕ್ರಾಂತಿಯ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಚರ್ಚೆಯು ಮತ್ತೆ ಮುನ್ನೆಲೆಗೆ ಬಂದಿದ್ದು, ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ್ದಾರೆ.
ನಿನ್ನೆಯಷ್ಟೇ ರಾಹುಲ್ ಗಾಂಧಿಯವರನ್ನು ಭೇಟಿಯಾಗುತ್ತೇನೆ ಎಂದು ಹೇಳಿದ್ದ ಡಿಸಿಎಂ ಸದ್ಯ ದೆಹಲಿಯಲ್ಲಿದ್ದರೂ ಸಹ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ಸಾಧ್ಯವಾಗಿಲ್ಲ. ಆದರೆ ಡಿಕೆ ಶಿವಕುಮಾರ್ ಭೇಟಿಗೂ ಮುನ್ನವೇ ರಾಜ್ಯದ ಇಂಧನ ಸಚಿವ ಹಾಗೂ ಹೈಕಮಾಂಡ್ ಆಪ್ತರಾದ ಕೆ.ಜೆ. ಜಾರ್ಜ್ ಅವರನ್ನು ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಭೇಟಿಯಾಗಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ಇದನ್ನೂ ಓದಿ : BBK 12: ಅಬ್ಬಬ್ಬಾ..! ಜೋರಾಯ್ತು ಗಿಲ್ಲಿ ಕ್ರೇಜ್..ಸಂಕ್ರಾಂತಿ ಎತ್ತಿನ ಮೇಲೆ ಮೂಡಿದ ಗಿಲ್ಲಿ ಚಿತ್ರ
ರಾಜ್ಯ ಕಾಂಗ್ರೆಸ್ ಪಕ್ಷದ ವಿಚಾರದಲ್ಲಿ ಜಾರ್ಜ್ ಹೈಕಮಾಂಡ್ ಮಟ್ಟದಲ್ಲಿ ತಮ್ಮದೇ ಆದ ವರ್ಚಸ್ಸನ್ನು ಹೊಂದಿರುವ ನಾಯಕರಾಗಿದ್ದಾರೆ. ಹಲವಾರು ಸಂದರ್ಭಗಳಲ್ಲಿ ಜಾರ್ಜ್ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ವಿಚಾರದಲ್ಲಿ ಸಲಹೆಗಳನ್ನೂ ನೀಡಿದ್ದರು. ಹೀಗಾಗಿಯೇ ರಾಜ್ಯದಲ್ಲಿನ ಪ್ರಸ್ತುತ ಬೆಳವಣಿಗೆಗಳು, ಶಾಸಕರು, ಸಚಿವರ ಹೇಳಿಕೆಗಳ ಬಗ್ಗೆ ಜಾರ್ಜ್ ಬಳಿಯಿಂದ ರಾಹುಲ್ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.
ಆದರೆ ಮೂಲಗಳ ಪ್ರಕಾರ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಸದ್ಯದ ಮಟ್ಟಿಗೆ ನಾಯಕತ್ವ ಬದಲಾವಣೆಯಾಗುವುದಿಲ್ಲ. ಸಿಎಂ ಸಿದ್ದರಾಮಯ್ಯ ಅವರನ್ನು ದೆಹಲಿಗೆ ಕರೆಯಿಸಿಕೊಂಡು ಹೈಕಮಾಂಡ್ ನಾಯಕರು ಸಂಪುಟ ವಿಸ್ತರಣೆಯ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಗಳು ದಟ್ಟವಾಗಿವೆ.












