ಬೆಂಗಳೂರು: ಮಹಾತ್ಮ ಗಾಂಧೀಜಿ ಅವರ ಹೆಸರನ್ನು ಈ ದೇಶದ ಇತಿಹಾಸದಿಂದ ಅಳಿಸಿಹಾಕಲು ಯಾರಿಗೂ ಸಾಧ್ಯವಿಲ್ಲ. ಬಿಜೆಪಿ(BJP) ಹಾಗೂ ಅವರ ಅಧಿಕಾರ ಯಾವುದೂ ಶಾಶ್ವತವಲ್ಲ. ಆ ಪಕ್ಷ ಇನ್ನೆಷ್ಟು ದಿನ ಇರುತ್ತದೆ? ಎಲ್ಲದಕ್ಕೂ ಕೊನೇ ಎಂಬುದು ಇರಲೇ ಬೇಕಲ್ಲವೇ?” ಎಂದು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ ಶಿವಕುಮಾರ್(DCM D.K. Shivakumar) ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಕೆಪಿಸಿಸಿ ಕಚೇರಿಯ ಭಾರತ ಜೋಡೋ ಭವನದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಂತೆಂಥಹ ಚಕ್ರವರ್ತಿಗಳೇ ಮೂಲೆಗುಂಪಾಗಿ ಹೋಗಿದ್ದಾರೆ. ಅಲೆಗ್ಸಾಂಡರ್ ದಿ ಗ್ರೇಟ್ ಇಡೀ ಪ್ರಪಂಚದ ಮುಕ್ಕಾಲು ಪಾಲು ಗೆದ್ದವರೇ ಶಾಶ್ವತವಲ್ಲ. ಸದ್ದಾಂ ಹುಸೇನ್ ಕೊನೆಗಾಲದಲ್ಲಿ ಅವಿತುಕೊಳ್ಳಬೇಕಾಯಿತು. ಇನ್ನು ಬೇರೆಯವರದು ಯಾವ ಲೆಕ್ಕ? ಮನರೇಗಾ ಹೆಸರು ಬದಲಾವಣೆ ವಿರೋಧಿಸಿ 2026 ರ ಜನವರಿ 5 ನೇ ತಾರೀಕಿನಿಂದ ಹೊಸ ಹೋರಾಟ ರೂಪಿಸಲಾಗುವುದು. ಪಂಚಾಯತಿ ಮಟ್ಟದಿಂದ ಈ ಹೋರಾಟ ಆರಂಭಿಸಲಾಗುವುದು ಎಂದರು.

ಗ್ಯಾರಂಟಿ ಸಮಿತಿ ಸದಸ್ಯರು, ಬೆಸ್ಕಾಂ, ಆರೋಗ್ಯ ಸಮಿತಿ ಸೇರಿದಂತೆ ಇತರೇ ಇಲಾಖೆಗಳಿಂದ ನಾಮನಿರ್ದೇಶನ ಮಾಡಿರುವ ಸದಸ್ಯರ ಸಂಖ್ಯೆಯೇ 150- 200 ಇದ್ದು ಇವರೆಲ್ಲರೂ ಹೋರಾಟದ ಜವಾಬ್ದಾರಿ ತೆಗೆದುಕೊಳ್ಳಬೇಕು. ಇದರ ಉಸ್ತುವಾರಿಗೆ ಜಿ.ಸಿ.ಚಂದ್ರಶೇಖರ್ ಅವರ ನೇತೃತ್ವದಲ್ಲಿ ವೀಕ್ಷಕರನ್ನು ನೇಮಿಸಲಾಗುತ್ತದೆ. ಎರಡು ಮೂರು ತಿಂಗಳಿನಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನು ನಡೆಸಬೇಕಿದೆ. ಅದಕ್ಕೂ ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದ್ದೇನೆ. ಪ್ರಿಯಾಂಕ್ ಖರ್ಗೆ ಅವರಿಗೂ ಇದರ ಬಗ್ಗೆ ತಿಳಿಸಿದ್ದು, ಮೀಸಲಾತಿ ವಿಚಾರವಾಗಿ ನ್ಯಾಯಾಲಯಗಳಲ್ಲಿ ಇರುವ ಕಂಟಕಗಳನ್ನು ಬಗೆಹರಿಸಿ ಇನ್ನೆರಡು ತಿಂಗಳಲ್ಲಿ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ ಎಂದರು.

ಅಂದು ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ಎಐಸಿಸಿ ಅಧಿವೇಶನ ಹೇಗೆ ನಡೆಯಿತು ಎನ್ನುವ ಕುರಿತಾದ ಗಾಂಧಿ ಭಾರತ ಪುಸ್ತಕವನ್ನ ರೂಪಿಸಿದ್ದೇನೆ. ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಲಭ್ಯವಿದೆ. ಇದರ ಬಿಡುಗಡೆಗೆ ಮಲ್ಲಿಕಾರ್ಜುನ ಖರ್ಗೆ ಅವರಿಂದ ಬಿಡುಗಡೆ ಮಾಡಿಸಬೇಕು ಎಂದು ಅವರ ಸಮಯ ಕೇಳಿದ್ದೇನೆ. ಇದೇ ಭಾರತ್ ಜೋಡೋ ಸಭಾಂಗಣದಲ್ಲಿ ಬಿಡುಗಡೆ ಮಾಡಲಾಗುವುದು. ಇದರ ನೆನಪಿಗೆ 100 ಕಾಂಗ್ರೆಸ್ ಕಚೇರಿಗಳನ್ನು ನಿರ್ಮಾಣ ಮಾಡಬೇಕು ಎಂದು ಹೊರಟಿದ್ದೇವೆ. ಈಗಾಗಲೇ 70 ಕಾಂಗ್ರೆಸ್ ಕಚೇರಿಗಳು ನಿರ್ಮಾಣವಾಗಿವೆ. ಬೆಂಗಳೂರಿನಲ್ಲೂ ಎರಡು ಕಚೇರಿಗಳ ನಿರ್ಮಾಣ ಮಾಡಲಾಗುವುದು. ಒಂದಕ್ಕೆ ರಾಮಲಿಂಗಾರೆಡ್ಡಿ ಅವರು ಇನ್ನೊಂದು ಕಚೇರಿ ಜವಾಬ್ದಾರಿಯನ್ನು ನಾನು ತೆಗೆದುಕೊಂಡಿದ್ದೇನೆ. ಒಂದು ಜಿಲ್ಲಾ ಕಚೇರಿ ಇನ್ನೊಂದು ರಾಜ್ಯ ಕಚೇರಿ. ಮೈಸೂರಿನಲ್ಲಿಯೂ ಸಹ ದೊಡ್ಡ ಕಚೇರಿ ನಿರ್ಮಾಣ ಮಾಡಲಾಗುವುದು. ಇದರ ಜವಾಬ್ದಾರಿಯನ್ನು ಮುಖ್ಯಮಂತ್ರಿಯವರು ತೆಗೆದುಕೊಂಡಿದ್ದಾರೆ. ಮೈಸೂರು ಕಾಂಗ್ರೆಸ್ ಭವನಕ್ಕೆ ಎಲ್ಲಾ ಯೋಜನೆ ಅಂತಿಮ ಮಾಡಿ ಭೂಮಿಪೂಜೆ ಕೂಡ ನೆರವೇರಿಸಿದ್ದೇನೆ ಎಂದು ಹೇಳಿದರು.

ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಅಧ್ಯಕ್ಷರುಗಳು ಅಡಿಪಾಯ ಹಾಕಲು ಕಾಯಲು ಹೋಗಬೇಡಿ. ಏಕೆಂದರೆ ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ರಾಹುಲ್ ಗಾಂಧಿಯವರು ಬೆಂಗಳೂರಿನಲ್ಲಿ ವರ್ಚುಯಲ್ ಆಗಿ ಎಲ್ಲಾ ಕಾಂಗ್ರೆಸ್ ಭವನಗಳ ಅಡಿಪಾಯಗಳಿಗೆ ಚಾಲನೆ ನೀಡಲಿದ್ದಾರೆ. ಆದರೆ ಎಲ್ಲಾ ತಯಾರಿಗಳನ್ನು ಈಗಲೇ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದ್ದೇನೆ ಎಂದರು.
ಬಿಜೆಪಿ ಆಡಳಿತ ರಾಜ್ಯಗಳಲ್ಲಿ ವಿಬಿ ಜಿ ರಾಮ್ ಜಿ ಯೋಜನೆ ಜಾರಿ ಅಸಾಧ್ಯ
ಮಹಾತ್ಮ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿದು ಇಂದಿಗೆ 101 ವರ್ಷವಾಗಿದೆ. ಕಳೆದ ವರ್ಷ ಬೆಳಗಾವಿಯಲ್ಲಿ ಸಂಭ್ರಮಾಚರಣೆ ಮಾಡುತ್ತಿದ್ದೆವು. ಇಂತಹ ಸಂದರ್ಭದಲ್ಲಿ ಮಹಾತ್ಮ ಗಾಂಧಿ ಅವರ ಹೆಸರನ್ನು ತೆಗೆಯುವ ಕೆಲಸ ಮಾಡಲಾಗುತ್ತಿದೆ. ನಿನ್ನೆ ನಡೆದ ಸಿಡ್ಬ್ಲ್ಯೂಸಿ ಸಭೆಯಲ್ಲಿ ಐತಿಹಾಸಿಕ ತೀರ್ಮಾನ ಕೈಗೊಳ್ಳಲಾಗಿದೆ. ಕಾಂಗ್ರೆಸ್ ಸರ್ಕಾರ ಗ್ರಾಮೀಣ ಭಾಗದಲ್ಲಿ ಬಡವರಿಗೆ ಉದ್ಯೋಗ ನೀಡುವ ಮನರೇಗಾ ಯೋಜನೆ ತಂದಿತ್ತು. ಕೇಂದ್ರ ಬಿಜೆಪಿ ಸರ್ಕಾರ ಈ ಯೋಜನೆಯನ್ನು ಹತ್ಯೆ ಮಾಡಲು ಮುಂದಾಗಿದೆ. ಈ ಯೋಜನೆಯಲ್ಲಿ 60:40 ಅನುಪಾತದಲ್ಲಿ ಅನುದಾನ ಹಂಚಿಕೆ ಮಾಡಿಕೊಳ್ಳುವ ಬದಲಾವಣೆ ತಂದಿದ್ದಾರೆ. ಬರಗಾಲ ಪ್ರದೇಶದಲ್ಲಿ ವರ್ಷಕ್ಕೆ 150 ಮಾನವ ದಿನಗಳ ಉದ್ಯೋಗ ನೀಡಲು ಕಾನೂನಿನಲ್ಲಿ ಸೂಚಿಸಲಾಗಿತ್ತು. ಆದರೆ ಅವರು ನಮ್ಮ ರಾಜ್ಯಕ್ಕೆ ಬರಗಾಲ ಇದ್ದಾಗಲೂ ನೀಡಲಿಲ್ಲ, ಕೋವಿಡ್ ಸಮಯದಲ್ಲೂ ನೀಡಲಿಲ್ಲ ಎಂದರು.

ಕೇಂದ್ರ ಸರ್ಕಾರದ ತರಲಾಗಿರುವ 60:40 ಅನುಪಾತದ ನೂತನ ತಿದ್ದುಪಡಿ ಯೋಜನೆಯನ್ನು ಬಿಜೆಪಿ ಆಡಳಿತ ರಾಜ್ಯಗಳಲ್ಲೂ ಅನುಷ್ಠಾನಕ್ಕೆ ತರಲು ಸಾಧ್ಯವಿಲ್ಲ. ಈ ಹಿಂದೆ ಮನರೇಗಾ ಯೋಜನೆಯನ್ನು ನನ್ನ ತಾಲ್ಲೂಕಿನಲ್ಲಿ ಬಹಳ ಯಶಸ್ವಿಯಾಗಿ ಅಷ್ಠಾನಕ್ಕೆ ತರಲಾಗಿತ್ತು. ಇಡೀ ದೇಶದಲ್ಲಿ ಕನಕಪುರ ಕ್ಷೇತ್ರದಲ್ಲಿ ಅತಿ ಹೆಚ್ಚು ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಲಾಗಿದೆ. ನಾನು ಇದರಲ್ಲಿ ಹಣ ಲೂಟಿ ಮಾಡಿರಬಹುದು ಎಂದು ಪರಿಶೀಲನೆ ಮಾಡಲು ಕೇಂದ್ರ ಸರ್ಕಾರ ಸುಮಾರು ಹತ್ತು ತಂಡಗಳನ್ನು ಕಳುಹಿಸಿ ತನಿಖೆ ಮಾಡಿಸಿತ್ತು. ನಂತರ ಕೇಂದ್ರ ಸರ್ಕಾರ ನಮ್ಮ ಕ್ಷೇತ್ರಕ್ಕೆ ಪ್ರಶಸ್ತಿಯನ್ನು ನೀಡಿದೆ. ನನಗೆ ಪ್ರಶಸ್ತಿ ನೀಡಬೇಕಾಗುತ್ತದೆ ಎಂದು ಪಂಚಾಯ್ತಿ ಅಧ್ಯಕ್ಷರನ್ನು ಕರೆದು ಅವರಿಗೆ ಪ್ರಶಸ್ತಿ ಕೊಟ್ಟರು ಎಂದು ಹೇಳಿದರು.

ಈ ಯೋಜನೆ ಮೂಲಕ ನನ್ನ ಕ್ಷೇತ್ರದಲ್ಲಿ 57 ಸಾವಿರ ರೈತ ಕುಟುಂಬಗಳಿಗೆ ದನದ ಕೊಟ್ಟಿಗೆ ಕಟ್ಟಿಕೊಳ್ಳಲು ಅನುದಾನ ನೀಡಲಾಗಿದೆ. ಕೋಳಿ ಸಾಕಾಣಿಕೆ ಶೆಡ್ ಗಳು, ಇಂಗುಗುಂಡಿ ನಿರ್ಮಾಣಕ್ಕೆ ಸೇರಿದಂತೆ ಹೀಗೆ ಅನೇಕ ಯೋಜನೆಗಳಿಗೆ ನರೇಗಾವನ್ನು ಬಳಸಿಕೊಳ್ಳಲಾಗಿದೆ. ಸುಮಾರು 200 ಕೋಟಿಗೂ ಹೆಚ್ಚು ಹಣವನ್ನು ಒಂದೇ ತಾಲ್ಲೂಕಿಗೆ ಬಳಸಿಕೊಳ್ಳಲಾಗಿದೆ. ಇಂತಹ ಕಾರ್ಯಕ್ರಮವನ್ನು ಮುಗಿಸುತ್ತಿದ್ದಾರೆ ಎಂದು ತಿಳಿಸಿದರು.












