ನರಕ ಎಲ್ಲಿದೆ ಅಂದ್ರೆ ಬೆಂಗಳೂರಿನ ರಸ್ತೆಗಳಲ್ಲಿದೆ ಎನ್ನಬಹುದು. ಅಷ್ಟರ ಮಟ್ಟಿಗೆ ಬೆಂಗಳೂರಿನ ರಸ್ತೆಗಳು ಅದ್ವಾನವಾಗಿ ಹೋಗಿದೆ. ನಗರದ ಪುಟ್ಟೇನಹಳ್ಳಿ ಜಂಕ್ಷನ್ ನಲ್ಲಿ ಗುಂಡಿಗಳದ್ದೇ ಕಾರುಬಾರು. ಜೊತೆಗೆ ಮಳೆಯೂ ಸುರಿಯುತ್ತಿರುವುದರಿಂದ ಗುಂಡಿಗಳೆಲ್ಲಾ ನೀರು ತುಂಬಿ ಹೊಂಡಗಳಾಗಿವೆ.
ಇದು ಜೆಪಿನಗರದ 6ನೇ ಹಂತದ ಪುಟ್ಟೇನಹಳ್ಳಿ ಜಂಕ್ಷನ್ ನ ಸದ್ಯದ ಸ್ಥಿತಿ. ಈ ಜಂಕ್ಷನ್ ನಲ್ಲಿ ಓಡಾಡುವ ವಾಹನಗಳಿಗಿಂತ ಇಲ್ಲಿ ಬಿದ್ದಿರುವ ಗುಂಡಿಗಳೇ ಹೆಚ್ಚಿದೆ. ಅಷ್ಟರ ಮಟ್ಟಿಗೆ ಈ ಜಂಕ್ಷನ್ ಸಂಪೂರ್ಣ ಗುಂಡಿ ಮಯವಾಗಿದೆ. ಹೆಜ್ಜೆ ಹೆಜ್ಜೆಗೂ ಪಾಟ್ ಹೋಲ್ ಗಳು ಬಿದ್ದಿವೆ. ವಾಹನ ಡ್ರೈವ್ ಮಾಡಲು ಸವಾರರು ಹರಸಾಹಸ ಪಡುತ್ತಿದ್ದಾರೆ. ಮಳೆಯೂ ಸಾಥ್ ಕೊಟ್ಟಿರುವುದರಿಂದ ಗುಂಡಿಯಲ್ಲಾ ಮಳೆ ನೀರು ತುಂಬಿ ಹೊಂಡ ಹಳ್ಳಗಳಂತಾಗಿದೆ. ಕಾರ್ ಸವಾರರೇ ಈ ರಸ್ತೆಯಲ್ಲಿ ಓಡಾಡಲು ಹಿಂಜರಿಯುವಂತ ದುಸ್ಥಿತಿ ಸೃಷ್ಟಿಯಾಗಿದೆ.
ಹೇಳಿಕೇಳಿ ಕನ್ನದ ಸ್ಟಾರ್ ನಟನ ಮನೆಗೆ ಇಲ್ಲಿಂದ ಕೇವಲ 50 ಮೀಟರ್ ದೂರ ಮಾತ್ರ. ಬೈಕ್ ಹಾಗೂ ಸ್ಕೂಟರ್ ಗಳ ಗಾಲಿ ಗುಂಡಿಗೆ ಬಿದ್ದು ಎದ್ದು ಬರುವಷ್ಟರಲ್ಲಿ ಸವಾರರ ಸೊಂಟ ಮುರಿದು ಬಿದ್ದೇ ಹೋಯ್ತೇನೋ ಎನ್ನುವಷ್ಟರಮಟ್ಟಿಗಿದೆ ಇಲ್ಲಿನ ರಣಗುಂಡಿಗಳು. ಈ ಪುಟ್ಟೇನಹಳ್ಳಿ ರಿಂಗ್ ರಸ್ತೆ, ಕನಕಪುರ ರಸ್ತೆ, ಬನ್ನೇರುಘಟ್ಟ ರಸ್ತೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ಜಂಕ್ಷನ್. ಒಮ್ಮೆ ಈ ಗುಂಡಿ ಕಾರು ಇಳಿದರೆ ಕಾರಿನ ಬೋನೆಟ್ ಕಿತ್ತುಬರುತ್ತಿದೆ. ದಿನಕ್ಕೆ ಐದಾರು ಬಾರಿಯಾದರೂ ಸಣ್ಣ ಪುಟ್ಟ ಅಪಾಯಗಳಿಲ್ಲದ ದಿನವಿಲ್ಲವಂತೆ ಇಲ್ಲಿ.

ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವ ಮಹಿಳೆಯರಿಗೆ ಈ ಜಂಕ್ಷನ್ ಸವಾಲಾಗಿ ನಿಂತಿದೆ. ಒಂದೇ ಕಡೆ ಹತ್ತಾರು ರಣ ಗುಂಡಿಗಳಿದ್ದರೂ ಅಧಿಕಾರಿಗಳು ತಮ್ಮ ನಿರ್ಲಕ್ಷ್ಯ ಮುಂದುವರೆಸಿದ್ದಾರೆ. ಮಳೆ ನೀರು ತುಂಬಿ ಹೊಂಡ, ಹಳ್ಳಗಳಂತಾಗಿರುವ ಪಾಟ್ ಹೋಲ್ಸ್ ಮುಚ್ಚದ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. ಆ ಭಗವಂತ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಒಳ್ಳೆ ಬುದ್ಧಿ ಕೊಡಲಿ ಎಂದು ಬೈಕ್ ಸವಾರ ನಾಗರಾಜ್ ಅಧಿಕಾರಿಗಳ ಬೇಜವಾಬ್ದಾರಿ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಒಟ್ಟಾರೆ ಶೂನ್ಯ ಸಹನೆ ಜಂಕ್ಷನ್ ಅನ್ನೋ ಬೋರ್ಡ್ ರೀತಿ ಶೂನ್ಯ ರಸ್ತೆಗುಂಡಿಗಳ ಜಂಕ್ಷನ್ ಎನ್ನುವ ಬೋರ್ಡ್ ಒಮ್ಮೆ ನೋಡುವ ಆಸೆ ಎನ್ನುತ್ತಿದ್ದಾರೆ. ಇದೀಗಲೇ ರಸ್ತೆ ಗುಂಡಿಗಳಿಗೆ ಸಾಲು ಸಾಲು ಜೀವಗಳು ಚೆಲ್ಲಿದರೂ ಬಿಬಿಎಂಪಿ ಅಧಿಕಾರಿಗಳು ಮಾತ್ರ ಇದಕ್ಕೂ ನಮಗೂ ಸಂಬಂಧವೇ ಇಲ್ಲ ಎನ್ನುವಂತೆ ನಡೆದುಕೊಳ್ಳುತ್ತಿದ್ದಾರೆ.