
ತಮ್ಮ ರಾಜಕೀಯ ವಿರೋಧಿಗಳ ವಿರುದ್ಧ ನಾಲಿಗೆ ಹರಿಬಿಡುವ ಚಾಳಿ ಇತ್ತೀಚಿನ ದಿನಗಳಲ್ಲಿ ಅತಿ ಎನ್ನುವಂತಾಗಿದೆ.

ಏನೇ ವಿಷಯವಿರಲಿ, ಅಲ್ಲಿ ವೈಯಕ್ತಿಕ ನಿಂದನೆ ಎಂಬುದು ಇದ್ದೇ ಇರುತ್ತದೆ. ಕೆಲವೊಮ್ಮೆ ತಾವು ಯಾರ ವಿರುದ್ಧ ಮಾತನಾಡುತ್ತೇವೆ? ಅವರ ರಾಜಕೀಯ ಅನುಭವವೇನು? ಮುಂತಾದ ವಿಚಾರಗಳು ಗೌಣವಾಗಿ ವೈಯಕ್ತಿಕ ದ್ವೇಷವೇ ಪ್ರಧಾನವಾಗಿ ನಾಲಿಗೆ ಮೇಲಿನ ಹಿಡಿತ ಕಳೆದುಕೊಂಡು ತಮಗಿಂತ ಹಿರಿಯರಾದವರ ಮೇಲೆ ತೀರಾ ಆಕ್ಷೇಪಾರ್ಹ ಪದಗಳನ್ನು ಬಳಸುವ ಮಟ್ಟಕ್ಕೆ ಇಳಿಯುತ್ತಾರೆ.

ಇದಕ್ಕೆ ಉದಾಹರಣೆ ಬಿಜೆಪಿಯ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಇಂಧನ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಜನಪ್ರತಿನಿಧಿಗಳ ದೇವಾಲಯ ಎನ್ನಲಾದ ಸದನದಲ್ಲಿ ಬಳಸಿದ ಭಾಷೆ. ರಾಜಕೀಯ ಆರೋಪ-ಪ್ರತ್ಯಾರೋಪದ ನಡುವೆ ಬಿಜೆಪಿಯ ಡಾ. ಅಶ್ವತ್ಥನಾರಾಯಣ ಅವರು ಸಚಿವ ಕೆ.ಜೆ.ಜಾರ್ಜ್ ಅವರನ್ನು ಕುರಿತು ನಿಮಗೆ ಧಮ್ ಇಲ್ಲ, ನೀವು ಅಸಮರ್ಥ ಸಚಿವ ಎಂಬ ಅವಹೇಳನಕಾರಿ ಪದ ಬಳಕೆ ಮಾಡಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ಮಧ್ಯೆ ಏಕವಚನದ ವಾಗ್ದಾಳಿಗೆ ಕಾರಣವಾಯಿತು.

ವಿಧಾನಸಭೆಯಲ್ಲಿ ಬುಧವಾರ ಭೋಜನ ವಿರಾಮದ ಬಳಿಕ ರಸಗೊಬ್ಬರ ಕೊರತೆ ಕುರಿತು ಚರ್ಚೆ ವಿಷಯಾಂತರವಾಗಿ ಸ್ಮಾರ್ಟ್ ಮೀಟರ್, ರಾಮನಗರ ರಾಜಕೀಯ, ಜೈಲು, ಮತ ಕಳ್ಳತನ ಪ್ರಸ್ತಾಪಗೊಂಡು ಇದೆಲ್ಲಾ ರಾದ್ಧಾಂತಕ್ಕೆ ಕಾರಣವಾಯಿತು. ಸಚಿವ ಜಾರ್ಜ್ ಅವರ ಕುರಿತಾಗಿ ಅಶ್ವತ್ಥನಾರಾಯಣ ನೀಡಿದ ಹೇಳಿಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಅಶ್ವತ್ಥನರಾಯಣ ಮಧ್ಯೆ ಏಕವಚನದ ಬೈಯ್ದಾಟಕ್ಕೆ ನಾಂದಿಯಾಯಿತು.

ರಾಜಕೀಯದಲ್ಲಿ ಈ ರೀತಿಯ ಆರೋಪ-ಪ್ರತ್ಯಾರೋಪಗಳು ಸಾಮಾನ್ಯ ಎನ್ನಬಹುದಾದರೂ ಆರೋಪ ಮಾಡಿದ ವ್ಯಕ್ತಿ ಮತ್ತು ಆರೋಪಕ್ಕೊಳಗಾದ ವ್ಯಕ್ತಿಯ ಅನುಭವ, ಹಿರಿತನ ಮುಂತಾದ ವಿಚಾರಗಳು ಮುಖ್ಯವಾಗುತ್ತದೆ. ಈ ಕಾರಣಕ್ಕಾಗಿಯೇ ಸಚಿವ ಜಾರ್ಜ್ ವಿರುದ್ಧ ಅಶ್ವತ್ಥನಾರಾಯಣ ಮಾಡಿದ ಆರೋಪ ಮುನ್ನಲೆಗೆ ಬಂದಿದೆ. ಏಕೆಂದರೆ ಅಶ್ವತ್ಥನಾರಾಯಣ ಅವರು 1969ರಲ್ಲಿ ಹುಟ್ಟು ಮೊದಲೇ ಅಂದರೆ, 1968ರಲ್ಲಿ ಜಾರ್ಜ್ ಅವರು ರಾಜಕೀಯ ಪ್ರವೇಶ ಮಾಡಿದವರು.

1969ರಲ್ಲಿ ಕೊಡಗು ಜಿಲ್ಲೆ ಗೋಣಿಕೊಪ್ಪ ಪಟ್ಟಣದ ಯುವ ಕಾಂಗ್ರೆಸ್ ಅಧ್ಯಕ್ಷರಾದವರು. 1985ರಲ್ಲಿ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ ಅವರು 1989ರಲ್ಲಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ರಾಜ್ಯದರ್ಜೆ ಸಚಿವರಾಗಿ ನೇಮಕಗೊಂಡಿದ್ದರು. ನಂತರ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಸರ್ಕಾರದಲ್ಲಿ ಸಂಪುಟ ದರ್ಜೆಗೆ ಭಡ್ತಿ ಪಡೆದರು.

2004ರಲ್ಲಿ ಅಶ್ವತ್ಥನಾರಾಯಣ ಅವರು ಮೊದಲ ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವಾಗಲೇ ಜಾರ್ಜ್ ಅವರು ಸಚಿವ ಸ್ಥಾನ ಅಲಂಕರಿಸಿದ್ದರು. ಪ್ರಸ್ತುತ ರಾಜ್ಯ ಕಾಂಗ್ರೆಸ್ ನ ಹಿರಿಯ ರಾಜಕಾರಣಿಯಾಗಿ ಮಾತ್ರವಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಲ್ಲಿ ಅತೀ ಹಿರಿಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದಲ್ಲದೆ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಜೊತೆ ಕೆಲಸ ಮಾಡಿದ ಹೆಗ್ಗಳಿಕೆಯೂ ಅವರದ್ದಾಗಿದ್ದು, ಸೋನಿಯಾ ಗಾಂಧಿ ಅವರಿಗೆ ಆಪ್ತರೂ ಹೌದು. ಈ ಕಾರಣಕ್ಕಾಗಿಯೇ ಅಶ್ವತ್ಥನಾರಾಯಣ ಅವರು ಸಚಿವ ಜಾರ್ಜ್ ವಿರುದ್ಧ ಬಳಸಿದ ಪದಗಳು ಹೆಚ್ಚು ವಿವಾದಕ್ಕೆ ಕಾರಣವಾಗಿರುವುದು.

2013ರವರೆಗೆ ಕೆಲ ದಶಕಗಳ ಕಾಲ ಶಾಸಕರಾಗಿ, ಸಚಿವರಾಗಿ ಕೆ.ಜೆ.ಜಾರ್ಜ್ ಕಾರ್ಯನಿರ್ವಹಿಸಿದ್ದರೂ ರಾಜಕಾರಣದಲ್ಲಿ ವಿವಾದಾತೀತ ವ್ಯಕ್ತಿಯಾಗಿದ್ದರು. ಆದರೆ, 2013ರ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಲ್ಲಿ ಅವರಿಗೆ ಗೃಹಖಾತೆಯಂತಾ ಮಹತ್ವದ ಜವಾಬ್ದಾರಿ ನೀಡಲಾಯಿತು. ಆಗಿನಿಂದ ವಿವಾದವೂ ಅವರನ್ನು ಸುತ್ತುವರಿದುಕೊಂಡು ಬಂದಿದೆ. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಅವರ ಹೆಸರು ಕೇಳಿಬಂದಹಿನ್ನಲೆ ಸಚಿವ ಸ್ಥಾನಕ್ಕೆ ರಾಜೀನಮೆ ಕೊಡಬೇಕಾಗಿ ಬಂತು. ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆದು ಅವರಿಗೆ ಕ್ಲೀನ್ ಚಿಟ್ ಸಿಕ್ಕಿತ್ತು.

ಅದೇ ರೀತಿ ಕೋಲಾರ ಜಿಲ್ಲಾಧಿಕಾರಿಯಾಗಿದ್ದ ಡಿ.ಕೆ.ರವಿ ಆತ್ಮಹತ್ಯೆ ಪ್ರಕರಣದಲ್ಲೂ ಅವರ ಹೆಸರು ಥಳಕು ಹಾಕಲಾಯಿತು. ಆದರೆ, ಅಲ್ಲೂ ಆರೋಪಗಳಿಗೆ ಸೋಲಾಯಿತು. ಜಾರ್ಜ್ ಅವರು ಕಾಂಗ್ರೆಸ್ ನ ಹಿರಿಯ ನಾಯಕರಾಗಿದ್ದರೂ ಪಕ್ಷದ ರಾಜ್ಯ ನಾಯಕರು ಈ ಯಾವುದೇ ಸಂದರ್ಭದಲ್ಲಿ
ಅವರನ್ನ ವಹಿಸಿಕೊಳ‍್ಳುವ ಯತ್ನ ಮಾಡದೇ ಇತರೆ ಪಕ್ಷಗಳ ನಾಯಕರಂತೆ ವರ್ತಿಸಲಿಲ್ಲ. ತಮ್ಮ ಮೇಲೆ ಬಂದಎಲ್ಲಾ ಆರೋಪಗಳಿಗೆ ತಾವು ನಂಬಿದ ಕಾನೂನು ಮೂಲಕವೇ ಉತ್ತರ
ನೀಡಿದ್ದಾರೆ. 2023ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಲ್ಲಿ ಇಂಧನ ಸಚಿವರಾದ ಮೇಲೆ ಜಾರ್ಜ್ ಅವರ ವಿರುದ್ಧ ಸ್ಮಾರ್ಟ್ ಮೀಟರ್ ಹಗರಣದ ಆರೋಪ ಬಂದಿದೆ.

ಈ ಆರೋಪದ ಹಿಂದೆ ಗಟ್ಟಿಯಾಗಿ ನಿಂತು ಜಾರ್ಜ್ ಅವರನ್ನು ಮುಜುಗರಕ್ಕೆ ತಳ್ಳಲು ಪ್ರಮುಖ ಕಾರಣಕರ್ತ ಬಿಜೆಪಿಯ ಡಾ.ಸಿ.ಎನ್.ಅಶ್ವತ್ಥನಾರಾಯಣ. ಬಿಜೆಪಿಯ ಬಹುತೇಕ ನಾಯಕರು ಈ ಬಗ್ಗೆ ಮಾತನಾಡದೇ ಇದ್ದರೂ ಅಶ್ವತ್ಥನಾರಾಯಣ ಮಾತ್ರ ಕಳೆದ ಎರಡು ತಿಂಗಳಿನಿಂದ ನಿರಂತರವಾಗಿ ಸ್ಮಾರ್ಟ್ ಮೀಟರ್ ವಿಚಾರ ಪ್ರಸ್ತಾಪಿಸಿ ಜಾರ್ಜ್ ಅವರ ತೇಜೋವಧೆಗೆ ಪ್ರಯತ್ನಿಸುತ್ತಲೇ ಇದ್ದಾರೆ. ಸ್ಮಾರ್ಟ್ ಮೀಟರ್ ವಿಚಾರದಲ್ಲಿ ಅಶ್ವತ್ಥನಾರಾಯಣ ಅವರಿಗೆ ವೈಯಕ್ತಿಕ ಹಿತಾಸಕ್ತಿ ಇರುವುದು ಜಗಜ್ಜಾಹೀರಾಗಿದೆ. ಹೀಗಿದ್ದರೂ ಅವರು ತಮ್ಮ ಆರೋಪ ಮುಂದುವರಿಸುತ್ತಲೇ ಇದ್ದಾರೆ.

ತಾವು ಮಾಡಿದ ಆರೋಪ ಸತ್ಯವೋ, ಸುಳ್ಳೋ ಎಂಬುದಕ್ಕಿಂತ ತಮ್ಮ ಆರೋಪಕ್ಕೆ ಜಾರ್ಜ್ ಅವರು ಭಯ ಬೀಳುತ್ತಿಲ್ಲ ಎಂಬುದನ್ನು ವೈಯಕ್ತಿಕ ಪ್ರತಿಷ್ಠೆಯಾಗಿ ತೆಗೆದುಕೊಂಡ ಅಶ್ವತ್ಥನಾರಾಯಣ, ಪ್ರಕರಣ ನ್ಯಾಯಾಲಯದಲ್ಲಿದ್ದರೂ ಪದೇಪದೆ ವಿಚಾರ ಪ್ರಸ್ತಾಪಿಸುತ್ತಿದ್ದಾರೆ.

ಆದರೂ ಸಚಿವರು ಆದಕ್ಕೆ ಕ್ಯಾರೇ ಎನ್ನುತ್ತಿಲ್ಲ ಎಂಬ ಸಿಟ್ಟು ಸದನದಲ್ಲಿ ಅಶ್ವತ್ಥನಾರಾಯಣ ತಮ್ಮ ನಾಲಿಗೆ ಮೇಲಿನ ಹಿಡಿತ ಕಳೆದುಕೊಂಡು ಜಾರ್ಜ್ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸುವಂತೆ ಮಾಡಿದೆ. ಆ ಮೂಲಕ ತಮ್ಮ ಕಾಲಿಗೆ ತಾವೇ ಚಪ್ಪಡಿ ಎಳೆದುಕೊಂಡಿದ್ದಾರೆ. ಒಬ್ಬ ರಾಜಕಾರಣದಲ್ಲಿ ಹಿರಿಯ ನಾಯಕರೊಬ್ಬರ ವಿರುದ್ಧ ಅಶ್ವತ್ಥನಾರಾಯಣ ಬಳಸಿದ ಪದಗಳಿಗೆ ಅವರ

ಪಕ್ಷದವರಿಂದಲೇ ಆಕ್ಷೇಪ ವ್ಯಕ್ತವಾಗಿದೆ. ಅಷ್ಟೇ ಅಲ್ಲ, ಒಬ್ಬ ಅಲ್ಪಸಂಖ್ಯಾತ ಸಮುದಾಯದ ಸಚಿವರೊಬ್ಬರಿಗೆ ಬಿಜೆಪಿ ಶಾಸಕ ಅವಮಾನ ಮಾಡಿದ್ದಾರೆ ಎಂಬ ಹಂತಕ್ಕೆ ಚರ್ಚೆ ನಡೆಯುತ್ತಿದೆ. ಅದೇನೇ ಇರಲಿ, ಅನುಭವ ಮತ್ತು ವಯಸ್ಸಿಗಾದರೂ ಗೌರವ ಕೊಡುವ ಮನಸ್ಥಿತಿ ಇಲ್ಲಿ ಕಾಣಿಸದೇ ಇರುವುದು ರಾಜಕಾರಣದ ದುರಂತ.












