ಕೇಂದ್ರೀಯ ಸಂಸ್ಥೆಯ ಸಮಾರಂಭವೊಂದರಲ್ಲಿ ಮಾತನಾಡಿದ ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರು, ಕೇಂದ್ರೀಯ ತನಿಖಾ ದಳವು ತನ್ನ ‘ಕ್ರಿಯೆಗಳು ಮತ್ತು ನಿಷ್ಕ್ರಿಯತೆಗಳ’ ಮೂಲಕ ಅದರ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತುವಂತೆ ಮಾಡುತ್ತಿದೆ ಎಂದು ಹೇಳಿದ್ದು ‘ಸಾಮಾಜಿಕ ನ್ಯಾಯಸಮ್ಮತತೆ ಮತ್ತು ಸಾರ್ವಜನಿಕ ನಂಬಿಕೆಯನ್ನು ಮರುಪಡೆಯುವುದು’ ಈ ಸಮಯದ ಅಗತ್ಯವಾಗಿದೆ ಮತ್ತು ಅದಕ್ಕೆ ಮೊದಲ ಹೆಜ್ಜೆ ‘ರಾಜಕಾರಣಿಗಳು ಮತ್ತು ಎಕ್ಸಿಕ್ಯುಟಿವ್‌ಗಳ ಜೊತೆಗೆ ಸಂಬಂಧವನ್ನು ಮುರಿಯುವುದು’ ಎಂದು ಸಲಹೆ ನೀಡಿದ್ದಾರೆ.
“CBI, SFIO, ED ಮುಂತಾದ ವಿವಿಧ ಏಜೆನ್ಸಿಗಳನ್ನು ಒಂದೇ ಸೂರಿನಡಿ ತರಲು ಸ್ವತಂತ್ರ ಸಂಸ್ಥೆಯ ರಚನೆ ತಕ್ಷಣದ ಅವಶ್ಯಕತೆ. ಮತ್ತು ಆ ಸಂಸ್ಥೆಯ ಅಧಿಕಾರಗಳು, ಕಾರ್ಯಗಳು ಮತ್ತು ನ್ಯಾಯವ್ಯಾಪ್ತಿಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಬೇಕು. ಶಾಸಕಾಂಗದ ಮೇಲುಸ್ತುವಾರಿಗೆ ಇಂತಹ ಸಂಸ್ಥೆಯ ಅಗತ್ಯವಿದೆ” ಎಂದೂ ಅವರು ಹೇಳಿದ್ದಾರೆ.
ಈ ಸ್ವತಂತ್ರ ಮತ್ತು ನಿಷ್ಪಕ್ಷಪಾತ ಅಧಿಕಾರವನ್ನು, ಸಿಬಿಐನ ನಿರ್ದೇಶಕರನ್ನು ನೇಮಿಸುವ ಸಮಿತಿಗೆ ಹೋಲುವ ಸಮಿತಿಯಿಂದ ನೇಮಿಸಬೇಕು. ಸಂಸ್ಥೆಯ ಮುಖ್ಯಸ್ಥರು ವಿವಿಧ ಕ್ಷೇತ್ರಗಳಲ್ಲಿ ಪರಿಣಿತರಾಗಿರುವ ಡೆಪ್ಯೂಟಿಗಳಿಂದ ಸಹಾಯ ಪಡೆಯಬಹುದು ಎಂದು ಅವರು ಸಲಹೆ ನೀಡಿದ್ದಾರೆ.
“ಪ್ರಜಾಪ್ರಭುತ್ವ: ತನಿಖಾ ಸಂಸ್ಥೆಗಳ ಪಾತ್ರ ಮತ್ತು ಜವಾಬ್ದಾರಿಗಳು” ಎಂಬ ವಿಷಯದ ಬಗ್ಗೆ ಮಾತನಾಡುತ್ತಿದ್ದ, ನ್ಯಾಯಮೂರ್ತಿ ರಮಣ ಬ್ರಿಟಿಷರ ಕಾಲದಿಂದ ಭಾರತದಲ್ಲಿ ಪೊಲೀಸ್ ವ್ಯವಸ್ಥೆಯು ಹೇಗೆ ವಿಕಸನಗೊಂಡಿತು ಎಂಬುದನ್ನು ವಿವರಿಸುತ್ತಾ, ಕಾಲಾನಂತರದಲ್ಲಿ, ಸಿಬಿಐ “ಆಳವಾದ ಸಾರ್ವಜನಿಕ ಪರಿಶೀಲನೆಗೆ ಒಳಪಟ್ಟಿದೆ” ಎಂದು ಹೇಳಿದ್ದಾರೆ.
“ಭ್ರಷ್ಟಾಚಾರ ಇತ್ಯಾದಿ ಆರೋಪಗಳಿಂದ ಪೋಲೀಸರ ಇಮೇಜ್ ಹಾಳಾಗುತ್ತಿದೆ. ಅಧಿಕಾರ ಬದಲಾವಣೆಯಿಂದ ತಮಗೆ ಕಿರುಕುಳ ನೀಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ನಮ್ಮನ್ನು ಸಂಪರ್ಕಿಸುತ್ತಾರೆ. ಕಾಲಕ್ಕೆ ತಕ್ಕಂತೆ ದೇಶದಲ್ಲಿ ಪ್ರಭುತ್ವ ಬದಲಾಗುತ್ತದೆ, ಆದರೆ ತನಿಖಾ ಸಂಸ್ಥೆಗಳು ಶಾಶ್ವತ” ಎಂದು ಮುಖ್ಯ ನ್ಯಾಯಮೂರ್ತಿ ರಮಣ ಪೊಲೀಸರನ್ನು ಉದ್ದೇಶಿಸಿ ಹೇಳಿದರು.
ಇದೇ ಸಂದರ್ಭದಲ್ಲಿ, ಪೊಲೀಸರಂತೆ ತನಿಖಾ ಸಂಸ್ಥೆಗಳು ಸಾಂವಿಧಾನಿಕ ಬೆಂಬಲವನ್ನು ಹೊಂದಿಲ್ಲ ಎಂಬುವುದನ್ನು ಒಪ್ಪಿಕೊಂಡ ಮುಖ್ಯ ನ್ಯಾಯಮೂರ್ತಿ “ಪೊಲೀಸ್ ವ್ಯವಸ್ಥೆಯು ತನ್ನ ಕಾನೂನುಬದ್ಧತೆಯನ್ನು ಸಂವಿಧಾನದಿಂದ ಪಡೆದುಕೊಂಡಿದೆ. ದುರದೃಷ್ಟವಶಾತ್ ತನಿಖಾ ಸಂಸ್ಥೆಗಳು ಕಾನೂನಿನ ಮಾರ್ಗದರ್ಶನದ ಪ್ರಯೋಜನವನ್ನು ಇನ್ನೂ ಹೊಂದಿಲ್ಲ ”ಎಂದು ಹೇಳಿದರು. ತನಿಖಾ ಸಂಸ್ಥೆಗಳು ಎದುರಿಸುತ್ತಿರುವ ಇತರ ಸವಾಲುಗಳನ್ನೂ ವಿವರಿಸಿದ ಅವರು, ಮೂಲಸೌಕರ್ಯ, ಮಾನವಶಕ್ತಿ, ಆಧುನಿಕ ಉಪಕರಣಗಳ ಕೊರತೆ, ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವ ವಿಧಾನಗಳು, ರಾಜಕೀಯ ಬದಲಾವಣೆಗಳೊಂದಿಗೆ ಆದ್ಯತೆಗಳಲ್ಲಿ ಬದಲಾವಣೆ ಮತ್ತು ಅಧಿಕಾರಿಗಳ ಪುನರಾವರ್ತಿತ ವರ್ಗಾವಣೆ ಮುಂತಾದವುಗಳವೂ ತನಿಖಾ ಸಂಸ್ಥೆಗಳ ಕಾರ್ಯನಿರ್ವಹಣೆಗಳ ಮೇಲೆ ಪರುಣಾಮ ಬೀರುತ್ತವೆ ಎಂದಿದ್ದಾರೆ. “ಈ ಸಮಸ್ಯೆಗಳು ಸಾಮಾನ್ಯವಾಗಿ ತಪ್ಪಿತಸ್ಥರನ್ನು ಖುಲಾಸೆಗೊಳಿಸಲು ಮತ್ತು ಅಮಾಯಕರ ಸೆರೆವಾಸಕ್ಕೆ ಕಾರಣವಾಗುತ್ತವೆ. ನ್ಯಾಯಾಲಯಗಳು ಪ್ರತಿ ಹಂತವನ್ನು ಮೇಲ್ವಿಚಾರಣೆ ಮಾಡಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು.
ಆದರೆ ಯಾವುದೇ ಸಂಸ್ಥೆಯ ಕಾರ್ಯಕ್ಷಮತೆಯು ಅದರ ನಾಯಕತ್ವ ವಹಿಸಿಕೊಂಡಿರುವವರ ಮೇಲೆ ಅವಲಂಬಿತವಾಗಿದ್ದು ಒಳ್ಳೆಯದು ಅಥವಾ ಕೆಟ್ಟದ್ದಾಗಿರುತ್ತದೆ ಎಂದ ಅವರು ಕೆಲವೇ ಅಧಿಕಾರಿಗಳಿಂದ ಬದಲಾವಣೆ ತರಲು ಸಾಧ್ಯವಿದೆ ಎಂದು ಹೇಳಿದ್ದಾರೆ.