ದಿನಾಂಕ 22 ಜೂನ್ 2025 – ಪ್ರೊ. ರಾಮದಾಸ್ ನೆನಪಿನ ಕಾರ್ಯಕ್ರಮದಲ್ಲಿ ಮಾಡಿದ
ಕೃತಿ ಪರಿಚಯ ಭಾಷಣದ ಲೇಖನ ರೂಪ

ನಾ ದಿವಾಕರ
ಪ್ರೊ. ರಾಮದಾಸ್ ಅವರ ನೆನಪಿನಲ್ಲಿ ಕೃಷ್ಣ ಜನಮನ ಕಳೆದ 17 ವರ್ಷಗಳಿಂದಲೂ ನಡೆಸಿಕೊಂಡು ಬಂದಿರುವ ಲೇಖನ ಸ್ಪರ್ಧೆ ಮತ್ತು ಈ ರೀತಿಯ ವಿಚಾರ ಸಂಕಿರಣ, ರಾಮದಾಸ್ ಅವರಿಗೆ ಸಲ್ಲುವ ನೈಜ ಶ್ರದ್ಧಾಂಜಲಿ ಎಂದೇ ಭಾವಿಸುತ್ತೇನೆ. ನಮ್ಮ ನಡುವೆಯೇ ಇದ್ದು, ನಮ್ಮೊಡನೆಯೇ ಇದ್ದು, ಸಮಾಜದ ಎಲ್ಲ ರೀತಿಯ ಒಳಿತು ಕೆಡಕುಗಳ ನಡುವೆ ಭಾರತೀಯ ಸಮಾಜವನ್ನು ಕಾಡುವ ಜಾತಿ ವ್ಯವಸ್ಥೆ ಮತ್ತು ಲಿಂಗತ್ವ ಅಸಮಾನತೆಗಳ ವಿರುದ್ಧ ನಿರಂತರ ಹೋರಾಡಿದ ಒಬ್ಬ ಚಿಂತಕರಾಗಿ ರಾಮದಾಸ್ ಅವರ ಹೆಜ್ಜೆಗುರುತುಗಳನ್ನು ಬಿಟ್ಟುಹೋಗಿದ್ದಾರೆ. ಇವತ್ತಿಗೂ ಸಹ ಆ ಪ್ರತಿರೋಧದ ದನಿ ಇಲ್ಲವಾಗಿದೆ ಎಂಬ ವಿಷಾದ ಕಾಡುತ್ತಲೇ ಇರುತ್ತದೆ. ಏಕೆಂದರೆ ರಾಮದಾಸ್ ಘಟನೆಗಳು ನಡೆದ ಕೂಡಲೇ ಸ್ಪಂದಿಸುತ್ತಿದ್ದರು, ಗಟ್ಟಿ ದನಿಯಲ್ಲಿ ಪ್ರತಿರೋಧ ವ್ಯಕ್ತಪಡಿಸುತ್ತಿದ್ದರು ಹಾಗೂ ತಮ್ಮ ಸುತ್ತಲಿನ ಸಮಾಜಕ್ಕೆ ಬೇಕಾದ ಅಂತರ್ಜಾತಿ, ಅಂತರ್ ಧರ್ಮೀಯ ವಿವಾಹಗಳಂತಹ ಕ್ರಾಂತಿಕಾರಿ ಹೆಜ್ಜೆಗಳೊಡನೆ ಹೆಜ್ಜೆ ಹಾಕುತ್ತಿದ್ದರು, ಹೆಗಲು ನೀಡಿ ನಿಲ್ಲುತ್ತಿದ್ದರು.
ಕಳೆದ ವರ್ಷ ಕೃಷ್ಣ ಜನಮನ ತಮ್ಮ ದೇಸಿರಂಗ ಸಂಸ್ಥೆಯ ಮೂಲಕ ಏರ್ಪಡಿಸಿದ್ದ “ ರಾಜಕಾರಣದಲ್ಲಿ ನೈತಿಕತೆ ಮತ್ತು ಪ್ರಸ್ತುತ ರಾಜಕಾರಣ ” ಲೇಖನ ಸ್ಪರ್ಧೆಗೆ ಬಂದಂತಹ ಎಲ್ಲ ಲೇಖನಗಳ ಸಂಗ್ರಹವನ್ನು ಇಂದು ಸಂಕಲನ ರೂಪದಲ್ಲಿ ಬಿಡುಗಡೆ ಮಾಡುತ್ತಿರುವುದು ಶ್ಲಾಘನೀಯ ನಡೆ. ವಾಸ್ತವವಾಗಿ ನನಗೆ ಈ ಕೃತಿಯ ಕುರಿತು ಮಾತನಾಡಲು ಕೊಂಚ ಮುಜುಗರವಾಗುತ್ತಿದೆ, ಕಾರಣ ಇದರಲ್ಲಿ ನನ್ನದೂ ಎರಡು ಲೇಖನಗಳಿವೆ. ಎಲ್ಲ ಲೇಖನಗಳೂ ಅದ್ಭುತ ಎಂದರೆ ಅದು ಆತ್ಮಪ್ರಶಂಸೆಯಾಗುತ್ತದೆ ಅಥವಾ ಸಹ ಬರಹಗಾರನಾಗಿ ಉಳಿದ ಲೇಖನಗಳ ಬಗ್ಗೆ ವಿಮರ್ಶಾತ್ಮಕವಾಗಿ ಮಾತನಾಡುವುದು ಮೇಲರಿಮೆಯಾಗಬಹುದೇನೋ ಎಂಬ ಜಿಜ್ಞಾಸೆ. ಇದರ ನಡುವೆಯೇ ಕೃಷ್ಣ ಮತ್ತು ದಿನಮಣಿ ಅವರ ಆತ್ಮೀಯತೆ, ಆಪ್ತತೆ ಮತ್ತು ಸ್ನೇಹದ ಪರಿಣಾಮ ಒಪ್ಪಿಕೊಳ್ಳಬೇಕಾಯಿತು.
ಸಂಕಲನದ ರೂಪ ಮತ್ತು ವಾಸ್ತವ ಸನ್ನಿವೇಶ
ಕಳೆದ ವರ್ಷದ ವಿಚಾರ ಸಂಕಿರಣಗಳಲ್ಲಿ ಮಾತನಾಡಿದ ಪತ್ರಕರ್ತರಾದ ಕೃಷ್ಣ ಪ್ರಸಾದ್, ಸವಿತಾ ನಾಗಭೂಷಣ್, ರವೀಂದ್ರ ಭಟ್, ಶಿವಸುಂದರ್, ಈಗ ನಮ್ಮೊಡನೆ ಇಲ್ಲದ ಮುಝಫರ್ ಅಸ್ಸಾದಿ ಮತ್ತು ಅಂಶಿ ಪ್ರಸನ್ನಕುಮಾರ್ ಅವರ ಲೇಖನಗಳೂ ಈ ಕೃತಿಯಲ್ಲಿದೆ. ಇದರೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಲೇಖಕರ ಬರಹಗಳ ಗುಚ್ಛವನ್ನು ಕೃಷ್ಣ ಹೊರತಂದಿದ್ದಾರೆ. ಕೃಷ್ಣ ತಮ್ಮ ಮುನ್ನುಡಿಯಲ್ಲೇ ಹೇಳಿರುವಂತೆ ರಾಜಕೀಯ ಅಥವಾ ರಾಜಕಾರಣ ಎನ್ನುವುದು ಒಂದು ಕಲೆ. ಇವತ್ತಿನ ರಾಜಕಾರಣ ನೋಡಿದಾಗ ಅದು ಕುಶಲ ಕಲೆ ಎನಿಸುವುದಿಲ್ಲ, ಬದಲಾಗಿ ಕುಟಿಲ ಕಲೆ ಎನಿಸುತ್ತದೆ. “ ರಾಜಕಾರಣಿಗಳಾಗ ಬಯಸುವವರಿಗೆ ನವರಸಗಳಲ್ಲಿ ನಾಟಕವಾಡುವುದು ತಿಳಿದಿರಬೇಕು” ಎಂಬ ಕೃಷ್ಣ ಅವರ ಮಾತುಗಳು ವರ್ತಮಾನದ ವಾಸ್ತವ.

ಆದರೆ ಇದನ್ನೇ ವಿಸ್ತರಿಸಿ ಹೇಳುವುದಾದರೆ, ವರ್ತಮಾನದ ಸಂದರ್ಭದಲ್ಲಿ ಈ ನವರಸಗಳನ್ನೂ ದಾಟಿ, ಅವಕಾಶವಾದ, ಸಮಯಸಾಧಕತನ, ಲಾಭಗಳಿಸುವ ತಂತ್ರಗಾರಿಕೆ, ಅಸ್ತಿತ್ವವನ್ನು ಕಾಪಾಡಿಕೊಳ್ಳುವ ಚಾಣಾಕ್ಷತನ, ವಿರೋಧಿಗಳನ್ನು ಮಣಿಸುವ ವಿಭಿನ್ನ ತಂತ್ರಗಳು ತಿಳಿದಿರಬೇಕು. ಜೊತೆಗೆ ತಲೆಯ ಮೇಲೆ ಹೊಡೆದಂತೆ ಸುಳ್ಳು ಹೇಳುವುದು, ಭ್ರಮಾಧೀನ ಜಗತ್ತನ್ನು ಸೃಷ್ಟಿಸುವುದು, ಜನಸಾಮಾನ್ಯರನ್ನು ( ವಿದ್ಯಾವಂತರನ್ನೂ ಸಹ) ಸಮ್ಮೋಹನಗೊಳಿಸುವ ವಿಧಾನಗಳು, ಸತ್ಯ ಮತ್ತು ಮಿಥ್ಯೆಯನ್ನು ತನಗೆ ಅನುಕೂಲವಾಗುವಂತೆ ಅದಲು ಬದಲು ಮಾಡಿ ಬಳಸಿಕೊಳ್ಳುವುದು, ವಿಶ್ವಾಸ ದ್ರೋಹವನ್ನು ಬದುಕಿನ ಒಂದು ಅಂಶಿಕ ಭಾಗ ಎಂದು ಪರಿಗಣಿಸಿ ತನ್ನ ಏಳಿಗೆಗಾಗಿ ಶತ್ರುಗಳನ್ನು/ಮಿತ್ರರನ್ನೂ ಸೃಷ್ಟಿಸಿಕೊಳ್ಳುವುದು ಹಾಗೂ ಎಲ್ಲಕ್ಕಿಂತಲೂ ಮಿಗಿಲಾಗಿ ಹಣ ಮತ್ತು ಇತರ ಆಮಿಷಗಳನ್ನು ಪರಿಣಾಮಕಾರಿಯಾಗಿ ಹಂಚುವ/ಬಳಸುವ ವಿಧಾನಗಳು ಇವೆಲ್ಲವೂ ಕರಗತವಾಗಿದ್ದರೆ ಮಾತ್ರ ಇವತ್ತಿನ ರಾಜಕಾರಣದಲ್ಲಿ ಒಂದು ಹೆಜ್ಜೆ ಮುಂದಿಡಲು ಸಾಧ್ಯ. ಇದು ಸಾರ್ವತ್ರಿಕವಾಗಿ ಎಲ್ಲರಿಗೂ ಅನ್ವಯಿಸಬೇಕಿಲ್ಲ ಆದರೆ ರಾಜಕೀಯ ಯಶಸ್ಸಿನ ಮೆಟ್ಟಿಲುಗಳಿಗೆ ಇವೆಲ್ಲವೂ ಕಣ್ಣಿಗೆ ಕಾಣದ ಇಟ್ಟಿಗೆಗಳು.
ಈ ಪ್ರಕ್ಷುಬ್ಧ ಆಲೋಚನೆಗಳ ನಡುವೆ ನಾವು ರಾಜಕಾರಣದ ನೈತಿಕತೆಯ ಬಗ್ಗೆ ಮಾತನಾಡಲು ಹೊರಟಿದ್ದೇವೆ. ಇದನ್ನು ಎರಡು ಕವಲುಗಳಾಗಿ ನೋಡಿದಾಗ ರಾಜಕೀಯ ನೈತಿಕತೆ ಮತ್ತು ನೈತಿಕ ರಾಜಕಾರಣ ಇವೆರಡೂ ಆಯಾಮಗಳನ್ನು ಪ್ರತ್ಯೇಕವಾಗಿಯೇ ನೋಡಬೇಕಾಗುತ್ತದೆ. ಮೊದಲನೆಯದು, ರಾಜಕೀಯ ನೈತಿಕತೆ ಅಧಿಕಾರ ರಾಜಕಾರಣದ ಹೊರಗೆ ವಿಶಾಲ ಸಮಾಜದಲ್ಲಿ ಗುರುತಿಸಬಹುದಾದ ಮನೋಭಾವ, ಎರಡನೆಯದು ನೈತಿಕ ರಾಜಕಾರಣ, ಅಧಿಕಾರ ರಾಜಕಾರಣದ ಫಲಾನುಭವಿಗಳಲ್ಲಿ ಗುರುತಿಸಬಹುದಾದ ಧೋರಣೆ ಅಥವಾ ಮನಸ್ಥಿತಿ. ಅಂಬೇಡ್ಕರ್ ಇದನ್ನು ಸಾಂವಿಧಾನಿಕ ನೈತಿಕತೆಯ ನೆಲೆಯಲ್ಲಿ ಚರ್ಚಿಸುತ್ತಾರೆ. ರಾಜಕೀಯ ನೈತಿಕತೆ ಎನ್ನುವುದನ್ನು ಮತ್ತಷ್ಟು ಹಿಗ್ಗಿಸಿ ವಿಶಾಲ ಕ್ಯಾನ್ವಾಸ್‌ನಲ್ಲಿಟ್ಟು ನೋಡಿದರೆ ನಮಗೆ ನಮ್ಮದೇ ಚಹರೆಗಳು ಕಾಣಬಹುದು. ಏಕೆಂದರೆ ಸಾಮಾಜಿಕ ನ್ಯಾಯಕ್ಕಾಗಿ, ಅನ್ಯಾಯಗಳ ವಿರುದ್ಧ, ಸಾಂಸ್ಕೃತಿಕ ಉನ್ನತಿಗಾಗಿ, ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ , ವ್ಯಕ್ತಿ-ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವ-ಸಂವಿಧಾನದ ಉಳಿವಿಗಾಗಿ ಹೋರಾಡುವ ಪ್ರತಿಯೊಬ್ಬರಲ್ಲೂ ಈ ರಾಜಕೀಯ ನೈತಿಕತೆ ಇರಬೇಕು. ಹಾಗಿದ್ದಲ್ಲಿ ನಾವು ನೈತಿಕ ರಾಜಕಾರಣದ ಬಗ್ಗೆ ಸೊಲ್ಲೆತ್ತುವ ನೈತಿಕ ಹಕ್ಕನ್ನು ಪ್ರತಿಪಾದಿಸಬಹುದು.
ಇನ್ನು ನೈತಿಕ ರಾಜಕಾರಣದ ಬಗ್ಗೆ ಹೆಚ್ಚು ಮಾತನಾಡದಿರುವುದೇ ಲೇಸು. ಆದಾಗ್ಯೂ ಈ ಪುಸ್ತಕದ ಕೆಲವು ಲೇಖನಗಳಲ್ಲಿ ಬಿಂಬಿಸಲಾಗಿರುವ ನೈತಿಕ ರಾಜಕಾರಣದ ವಿಭಿನ್ನ ಆಯಾಮಗಳನ್ನು ಗಂಭೀರವಾಗಿ ಗಮನಿಸುವುದು ಸಮಾಜದ ಆದ್ಯತೆಯಾಗಬೇಕು. ನಿನ್ನೆಯ ಶತ್ರು ಇಂದು ಮಿತ್ರನಾಗುವ, ನಿನ್ನೆಯ ವಿರೋಧಪಕ್ಷ ಇಂದು ಸ್ವಪಕ್ಷವಾಗುವ, ನಿನ್ನೆಯ ಎದುರಾಳಿ ಇಂದು ಸಹವರ್ತಿಯಾಗುವ ಒಂದು ವಾತಾವರಣದಲ್ಲಿ ನಾವಿದ್ದೇವೆ. ಇಲ್ಲಿ ತತ್ವ, ಸಿದ್ದಾಂತ, ಬದ್ದತೆ, ಜನಪರ ನಿಲುವು ಎಲ್ಲವೂ ಸುಲಭವಾಗಿ ವಿನಿಯಮವಾಗುವ, ಮಾರುಕಟ್ಟೆ ಸರಕುಗಳಾಗಿರುವುದನ್ನು ನೋಡುತ್ತಲೇ ಬಂದಿದ್ದೇವೆ. 1980-90ರ ದಶಕದ ಆಯಾ ರಾಮ್-ಗಯಾರಾಮ್ ಸಂಸ್ಕೃತಿಯಿಂದ ರೆಸಾರ್ಟ್‌ಗಳ ನಡುವೆ ಓಡಾಡುತ್ತಾ ಬಿಕರಿಯಾಗುವ ಜನಪ್ರತಿನಿಧಿಗಳ ಸಂಸ್ಕೃತಿಗೆ ನಾವು ಲಾಂಗ್ ಜಂಪ್ (ದೀರ್ಘಸೀಮೋಲ್ಲಂಘನ) ಮಾಡಿರುವುದನ್ನು ನೋಡುತ್ತಲೇ ನಮ್ಮ ಬೆಂಬಲ ಅಥವಾ ವಿರೋಧವನ್ನೂ ವ್ಯಕ್ತಪಡಿಸುತ್ತಾ ಬಂದಿದ್ದೇವೆ್

ಲೇಖನಗಳ ಒಳನೋಟ
ಶ್ರೀಯುತ ಪ್ರಸಾದ್ ಅವರ ಲೇಖನ ಎಂದಿನಂತೆ ಸಮಗ್ರ ದೃಷ್ಟಿಕೋನದಲ್ಲಿ ಮೂಡಿಬಂದಿದೆ. ಮೋದಿಯವರ ಆಳ್ವಿಕೆಯಲ್ಲಿ ಅವರೇ ನಿರ್ವಚಿಸಿಕೊಳ್ಳುವ ಮೌಲ್ಯಗಳಿಗೂ, ವಾಸ್ತವದ ಸನ್ನಿವೇಶದಲ್ಲಿ ನಾವು ನೋಡುತ್ತಿರುವ ರಾಜಕೀಯ ತೀರ್ಮಾನಗಳಿಗೂ ನಡುವೆ ಇರುವ ಅಂತರವನ್ನು ಕೃಷ್ಣಪ್ರಸಾದ್ ಅವರು ತಮ್ಮ ಲೇಖನದಲ್ಲಿ ನಿದರ್ಶನಗಳ ಸಮೇತ ಓದುಗರ ಮುಂದಿಡುತ್ತಾರೆ. ಸಂಸತ್ತಿನ ನಿರ್ವಹಣೆಯಿಂದ ಹಿಡಿದು ಚುನಾವಣಾ ಪ್ರಚಾರಗವರೆಗೆ ವಿಸ್ತರಿಸುವ “ಸುಳ್ಳು ಹೇಳುವ” ಪರಂಪರೆಯನ್ನು ವ್ಯಾಖ್ಯಾನಿಸುತ್ತಾರೆ. ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹೇಗೆ ಮೊಟಕಾಗುತ್ತಿದೆ ಎನ್ನುವುದನ್ನು ಉಮರ್ ಖಾಲಿದ್ ಬವಣೆಯ ಮೂಲಕ ವಿವರಿಸುತ್ತಾರೆ. ನೈತಿಕ ರಾಜಕಾರಣ ಮತ್ತು ಸಾಂವಿಧಾನಿಕ ಮೌಲ್ಯ-ನೈತಿಕತೆಯ ಒಳಸುಳಿಗಳನ್ನು ಈ ಲೇಖನದಲ್ಲಿ ಗುರುತಿಸಬಹುದು.
ಸವಿತಾ ನಾಗಭೂಷಣ ಅವರ ಲೇಖನದ ಮೂಲಸ್ಥಾಯಿ ಗಾಂಧಿವಾದವಾಗಿ ಕಂಡರೂ, ಅಲ್ಲಿ ಅಂಬೇಡ್ಕರ್ ಬಯಸಿದ ಸಮ ಸಮಾಜ ಮತ್ತು ಅಂತರ್ಜಾತಿ ವಿವಾಹಗಳ ಸಂಕೀರ್ಣತೆಗಳ ಪರಿಚಯವಿದೆ. ರವೀಂದ್ರ ಭಟ್ ಅವರ ಲೇಖನದಲ್ಲಿ ಆಧುನಿಕ ಸಂವಹನ ಮಾಧ್ಯಮಗಳು ಯುವ ತಲೆಮಾರನ್ನು ದಿಕ್ಕುತಪ್ಪಿಸುತ್ತಿರುವ ಸೂಕ್ಷ್ಮ ಸನ್ನಿವೇಶವನ್ನು ನೆನಪಿಸುತ್ತಾರೆ. ದಿವಂಗತ ಮುಝಫರ್ ಅಸ್ಸಾದಿ ಪ್ರಸ್ತುತ ರಾಜಕಾರಣದಲ್ಲಿ ಸಮಾಜವಾದಿಗಳ ಪಾತ್ರ ಮತ್ತು ಪ್ರಸ್ತುತತೆಯನ್ನು ಚರ್ಚೆಗೊಳಪಡಿಸುತ್ತಾರೆ. ಭಾರತ ಸಾಗುತ್ತಿರುವ ವರ್ತಮಾನವನ್ನು ಸತ್ಯೋತ್ತರ, ಆಪ್ತ ಬಂಡವಾಳಶಾಹಿ (Croney Capitaalism) ಮತ್ತು ಜಾತಿ ಅಸ್ಮಿತೆಗಳ ಚೌಕಟ್ಟಿನಲ್ಲಿ ವಿಶ್ಲೇಷಿಸುವ ಅಸ್ಸಾದಿ, ಸಮಾಜವಾದದ ಮೂಲ ಕಲ್ಪನೆಯೇ ಬಡಕಲಾಗುತ್ತಿದೆ ಎನ್ನುವ ಮೂಲಕ ಪ್ರಸ್ತುತ ಸನ್ನಿವೇಶದ ವಾಸ್ತವತೆಯನ್ನು ಓದುಗರ ಮುಂದಿಡುತ್ತಾರೆ.

ಶಿವಸುಂದರ್ ಅವರ ಸುದೀರ್ಘ ಭಾಷಣ/ಲೇಖನ ವರ್ತಮಾನ ಭಾರತದ ಎಲ್ಲ ವಲಯಗಳನ್ನೂ ಆವರಿಸುತ್ತದೆ. ಅದು ಅವರ ಶೈಲಿ. ಚಳುವಳಿಗಳನ್ನು ಮತ್ತು ಅವುಗಳ ಪ್ರತಿರೋಧವನ್ನು ಭ್ರಷ್ಟಗೊಳಿಸುತ್ತಿರುವ ವ್ಯವಸ್ಥೆಯ ಸುತ್ತ ಅವರ ವಿಷಯ ಮಂಡನೆ ಕಾಣುತ್ತದೆ. ಇದು ಗಂಭೀರವಾಗಿ ಯೋಚಿಸಬೇಕಾದ ವಿಚಾರವೂ ಹೌದು. ಇಂದು ಪ್ರಗತಿಪರ ಎನ್ನಲಾಗುವ ಚಳುವಳಿಗಳೂ ಸಹ ಅಧಿಕಾರ ಕೇಂದ್ರಗಳೊಡನೆ ಗುರುತಿಸಿಕೊಳ್ಳುವುದರ ಮೂಲಕ, ತಳಸಮಾಜದ ಆಶಯಗಳಿಗೆ ಧಕ್ಕೆ ಉಂಟುಮಾಡುತ್ತಿವೆಯೇ ಎಂಬ ಪ್ರಶ್ನೆಯನ್ನು ಶಿವಸುಂದರ್ ಸವಿಸ್ತಾರವಾಗಿ ಚರ್ಚಿಸುತ್ತಾರೆ. ಇದು ಈ ಸಂದರ್ಭದಲ್ಲಿ ಅತ್ಯಂತ ತುರ್ತು ಚರ್ಚೆಯಾಗಬೇಕಾದ ವಿಚಾರ. ಇಲ್ಲಿ ಶಿವಸುಂದರ್ ಪಕ್ಷಭೇದಗಳನ್ನು ಬದಿಗಿಟ್ಟು ಸಮಗ್ರ ನೆಲೆಯಲ್ಲಿ ಆಳುವ ವರ್ಗಗಳ ಪ್ರಭಾವ, ಪರಿಣಾಮ ಮತ್ತು ನಿಲುವುಗಳನ್ನು ಪರಾಮರ್ಶೆಗೊಳಪಡಿಸುತ್ತಾರೆ.
ಅಂಶಿ ಪ್ರಸನ್ನಕುಮಾರ್ ತಾವು ಪ್ರತಿನಿಧಿಸುವ ಕ್ಷೇತ್ರ, ಮಾಧ್ಯಮಗಳ ದುಸ್ಥಿತಿ ಮತ್ತು ರಾಜಕೀಯ ನೈತಿಕತೆಯ ಪ್ರಶ್ನೆಯನ್ನು ಒಟ್ಟೊಟ್ಟಿಗೆ ಇಟ್ಟು ವ್ಯಾಖ್ಯಾನಿಸುವ ಮೂಲಕ ಇವತ್ತಿನ ದೃಶ್ಯ ಮಾಧ್ಯಮಗಳು ಹೇಗೆ ಜನಸಾಮಾನ್ಯರ ದಿಕ್ಕುತಪ್ಪಿಸುತ್ತಿವೆ ಎಂಬ ಎಚ್ಚರಿಕೆಯ ಸಂದೇಶವನ್ನೂ ನೀಡುತ್ತಾರೆ. ರಾಜಕಾರಣಿಗಳು ಹಾಳಾಗಲಿಕ್ಕೆ ಮಾಧ್ಯಮಗಳೇ ಕಾರಣ ಎಂದು ಹೇಳುತ್ತಾ, ಮಹಿಳೆಯರು ಹಾಳಾಗಲಿಕ್ಕೂ ಇದೇ ಕಾರಣ ಎಂದು ಹೇಳುತ್ತಾರೆ. ಅಂದರೆ ಒಟ್ಟಾರೆ ಸಮಾಜವನ್ನು ಓದಿನಿಂದ ದೂರ ಮಾಡುತ್ತಲೇ ಓದಿನ ಸಂಸ್ಕೃತಿಯನ್ನು ಹಾಳುಮಾಡುತ್ತಿರುವ ಮಾಧ್ಯಮಗಳ ಬಗ್ಗೆ ಅವರ ಆಕ್ರೋಶ ಇಲ್ಲಿ ವ್ಯಕ್ತವಾಗುತ್ತದೆ. ಇಲ್ಲಿ ಮಹಿಳೆ ಎನ್ನುವುದನ್ನು ಸಾಮಾನ್ಯ ಜನ ಎಂದೂ ಹೇಳಬಹುದಿತ್ತು. ಪ್ರೊ. ಎಚ್ ಆರ್ ಸ್ವಾಮಿ ವೈಚಾರಿಕತೆಯ ಮತ್ತು ವೈಜ್ಞಾನಿಕ ಚಿಂತನೆಯ ನೆಲೆಯಲ್ಲಿ ಸಮಾಜ ಹೇಗೆ ಪ್ರಾಚೀನತೆಯತ್ತ ಸಾಗುತ್ತದೆ ಎಂಬ ಎಚ್ಚರಿಕೆಯ ಸಂದೇಶವನ್ನು ನೀಡುತ್ತಾ ಹಲವು ಉದಾಹರಣೆಗಳನ್ನೂ ಓದುಗರ ಮುಂದಿಡುತ್ತಾರೆ. ನನ್ನ ಎರಡು ಲೇಖನಗಳ ಬಗ್ಗೆ ಮೊದಲೇ ಹೇಳಿದಂತೆ ಓದುಗರ ವಿವೇಚನೆಗೆ ಬಿಡುತ್ತೇನೆ.
ಇನ್ನು ಸ್ಪರ್ಧೆಗೆ ಬಂದಂತಹ ಲೇಖನಗಳಲ್ಲಿ ಸಮಾನ ಎಳೆಯನ್ನು ಗುರುತಿಸಬಹುದಾದರೆ, ಅದು ಸಾಮಾಜಿಕ ಕಳಕಳಿ, ಕಾಳಜಿ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳು ಕುಸಿಯುತ್ತಿರುವುದರ ಬಗ್ಗೆ ಆತಂಕ ಎದ್ದು ಕಾಣುತ್ತದೆ. ಧರ್ಮ, ಜಾತಿ ಇತ್ಯಾದಿ ಅಸ್ಮಿತೆಗಳ ಚೌಕಟ್ಟಿನಲ್ಲಿ ಹೇಗೆ ಮಾನವೀಯ ಮೌಲ್ಯಗಳು ಹಿಂದಕ್ಕೆ ಸರಿಯುತ್ತಿದೆ ಎನ್ನುವ ಸಮಾನ ಧ್ವನಿ ಎಲ್ಲ ಲೇಖನಗಳಲ್ಲೂ ಕಾಣಬಹುದು. ರಾಜಕಾರಣದ ಬಗ್ಗೆ ಯಾವುದೇ ಸಮಾಜದಲ್ಲಿರಬಹುದಾದ ಸದಾಶಯ ಮತ್ತು ಭರವಸೆಯ ಮಾತುಗಳು ಇಲ್ಲಿ ವಿಷಾದದ ನೆಲೆಯಲ್ಲಿ ವ್ಯಕ್ತವಾಗುತ್ತವೆ. ಏಕೆಂದರೆ ವಸ್ತುಸ್ಥಿತಿ ಸಮಾಜ ಅಪೇಕ್ಷಿಸುವಂತೆ ಇಲ್ಲ. ರಾಜಕೀಯ ನೈತಿಕತೆಯನ್ನು ವಿಭಿನ್ನ ಆಯಾಮಗಳಲ್ಲಿ ಚರ್ಚಿಸುವ ಈ ಲೇಖನಗಳೆಲ್ಲವೂ ಪ್ರಶಂಸಾರ್ಹವಾದ ಪ್ರಯತ್ನಗಳು. ಈ ಬರಹಗಾರರು ವರ್ತಮಾನದ ರಾಜಕಾರಣವನ್ನು ಗಮನಿಸುತ್ತಲೇ ಸ್ವತಂತ್ರ ಭಾರತದ 75 ವರ್ಷಗಳ ಚರಿತ್ರೆಯನ್ನೂ ಆಳವಾಗಿ ಅಧ್ಯಯನ ಮಾಡುವ ಕ್ಷಮತೆ ತೋರಿದರೆ, ಅವರ ಲೇಖನಗಳಲ್ಲಿ ಇನ್ನೂ ಸೂಕ್ಷ್ಮತೆ, ತೀಕ್ಷ್ಣತೆಗಳನ್ನು ಕಾಣಲು ಸಾಧ್ಯ. ಯುವ ತಲೆಮಾರಿನ ಬರಹಗಾರರಿಗೆ ಇದು ಅತ್ಯವಶ್ಯ.
ಕೊನೆಯದಾಗಿ
ನಾನು ಆರಂಭದಲ್ಲಿ ರಾಜಕೀಯ ನೈತಿಕತೆಯ ಚೌಕಟ್ಟಿನಲ್ಲಿ ಹೇಳಿದ್ದನ್ನು ಕೊಂಚ ವಿವರಿಸಲು ಯತ್ನಿಸುತ್ತೇನೆ. ನಾವೆಲ್ಲರೂ ರಾಜಕೀಯದ ಒಂದು ಭಾಗವಾಗಿ ಸಮಾಜ ಸುಧಾರಣೆಗಾಗಿ, ಕ್ರಾಂತಿಯ ಕನಸಿನಲ್ಲಿ, ಮನುಷ್ಯ ಸಮಾಜದ ಸಾಂಸ್ಕೃತಿಕ ಔನ್ನತ್ಯಕ್ಕಾಗಿ ಯಾವುದೋ ಒಂದು ರೀತಿಯಲ್ಲಿ ನಮ್ಮ ಹೋರಾಟ, ಪ್ರತಿರೋಧ ಮತ್ತು ಚಳುವಳಿಗಳನ್ನು ಪ್ರತಿನಿಧಿಸುತ್ತೇವೆ. ಇಂದು ನಮ್ಮ ಮುಂದಿರುವ ಬಹುದೊಡ್ಡ ಸವಾಲುಗಳು ಮತೀಯವಾದ, ಕೋಮುವಾದ, ಜಾತೀಯತೆ, ಧರ್ಮಾಂಧತೆ, ಇವುಗಳ ಮೂಲ ಸ್ಥಾಯಿಯಾದ ಶ್ರೇಷ್ಠತೆ ಮತ್ತು ಪಿತೃಪ್ರಧಾನ ವ್ಯವಸ್ಥೆಯ ಗಟ್ಟಿ ಬೇರುಗಳು. ಈ ಕೊನೆಯ ಅಪಾಯವನ್ನು, ಪಿತೃಪ್ರಧಾನತೆ-ಪುರುಷಾಧಿಪತ್ಯವನ್ನು ಹೋಗಲಾಡಿಸದೆ, ಮೊದಲ ಮೂರೂ ಅವಲಕ್ಷಣಗಳನ್ನು ಎದುರಿಸಿ ನಿಲ್ಲಲಾಗುವುದಿಲ್ಲ ಏಕೆಂದರೆ ಅವುಗಳಿಗೆ ಮೂಲ ಇರುವುದೇ ಪುರುಷಾಧಿಪತ್ಯ/ಪಿತೃಪ್ರಧಾನತೆಯಲ್ಲಿ. ಇದು ವ್ಯಕ್ತಿಯೊಳಗಿನ ಯಜಮಾನಿಕೆ, ದಬ್ಬಾಳಿಕೆ, ದರ್ಪ ಮತ್ತು ಮೇಲರಿಮೆ-ಶ್ರೇಷ್ಠತೆಯ ಮನೋಭಾವವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.

ಹಾಗಾಗಿ ಪ್ರಗತಿಪರರು ಎಂದು ಹೇಳಿಕೊಳ್ಳುವ ನಾವು ವ್ಯಕ್ತಿಗತವಾಗಿ, ಸಾಂಘಿಕವಾಗಿ, ಸಾಂಸ್ಥಿಕವಾಗಿ ಹಾಗೂ ಹೋರಾಟದ ಭಾಗವಾಗಿ ಲಿಂಗ ಸಮಾನತೆಯನ್ನು ಸಾಧಿಸುವ ಅನಿವಾರ್ಯತೆಯನ್ನು ಎದುರಿಸುತ್ತಿರುವುದರಿಂದ, ಪಿತೃಪ್ರಧಾನ ಮೌಲ್ಯಗಳ ವಿರುದ್ಧ ಸೆಣಸಾಡಬೇಕು.. ಇಲ್ಲಿ ಮುಖ್ಯವಾಗಿ ನನಗೆ ಕಾಣುತ್ತಿರುವ ಕೊರತೆ ಲಿಂಗತ್ವ ಪ್ರಾತಿನಿಧ್ಯ. ನಮ್ಮ ವಿಚಾರ ಸಂಕಿರಣಗಳು, ಇಂತಹ ಕಾರ್ಯಕ್ರಮಗಳು ಯಾವುದೇ ಆದರೂ ಅಲ್ಲಿನ ವೇದಿಕೆ ಪುರುಷಮಯವಾಗಿರುವುದಕ್ಕಿಂತಲೂ ಮಹಿಳಾ ಪ್ರಾತಿನಿಧ್ಯದಿಂದ ಕೂಡಿದ್ದರೆ, ಪಿತೃಪ್ರಧಾನತೆಯನ್ನು ಎದುರಿಸುವಲ್ಲಿ ಮೊದಲ ಹೆಜ್ಜೆ ಇಟ್ಟಂತೆ. ಈ ಸಭೆಯಲ್ಲೂ ಈ ಕೊರತೆ ಇರುವುದನ್ನು ಕೃಷ್ಣ ಅವರಿಗೆ ಹೇಳಿದ್ದೇನೆ, ಅವರು ಬಿಡುವಿರುವ ಮಹಿಳೆಯರು ಸಿಕ್ಕಲಿಲ್ಲ ಎಂದು ಹೇಳಿದ್ದಾರೆ.
ಇದು ವಾಸ್ತವ ಇರಬಹುದು. ಆದರೆ ಇಲ್ಲಿ ನಮ್ಮ ಆಲೋಚನೆಗೆ ಬರುವ ಮಹಿಳೆಯರ ಒಂದು Template ದಾಟಿ ಯೋಚಿಸಿದರೆ ಖಂಡಿತವಾಗಿಯೂ ಇರುತ್ತಾರೆ. ನಮ್ಮ ಶೋಧದ ವ್ಯಾಪ್ತಿಯನ್ನು ಹಿಗ್ಗಿಸಬೇಕು. ಇದು ಮಹಿಳೆಯರಿಗೆ ಮೀಸಲಾತಿ ನೀಡುವ ಪ್ರಶ್ನೆಯಲ್ಲ, ಸಾರ್ವಜನಿಕ ವೇದಿಕೆಗಳಲ್ಲಿ ಅವರನ್ನು ಪ್ರತಿನಿಧಿಸುವ ಮನೋಭಾವದ ಪ್ರಶ್ನೆ. ಸಮಾನತೆ ಎನ್ನುವುದು ಸಮಾನ ಅವಕಾಶ ಮತ್ತು ಗೌರವ ಎನ್ನುವುದರ ಸಂಕ್ಷಿಪ್ತ ರೂಪ ಅಲ್ಲವೇ ? ವಿಷಾದ ಎಂದರೆ ಅಂಬೇಡ್ಕರ್ ಜಯಂತಿಯ ಪ್ರಯುಕ್ತ ನಡೆಯುವ ಅನೇಕ ವಿಚಾಸಂಕಿರಣ-ಸಾರ್ವಜನಿಕ ಸಭೆಗಳಲ್ಲೂ ವೇದಿಕೆಗಳು ಪುರುಷಮಯವಾಗಿರುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ತನ್ನ 110 ವರ್ಷಗಳ ಚರಿತ್ರೆಯಲ್ಲಿ ಒಬ್ಬ ಮಹಿಳಾ ಅಧ್ಯಕ್ಷರನ್ನೂ ಕಂಡಿಲ್ಲ. ಇದೇ ಸನ್ನಿವೇಶವನ್ನು ಶತಮಾನದ ಇತಿಹಾಸ ಇರುವ ಎಡಪಕ್ಷಗಳಲ್ಲೂ, ಕಾರ್ಮಿಕ ಸಂಘಟನೆಗಳಲ್ಲೂ ಕಾಣಬಹುದು. ಇದು ಕೊಡುವ ಅಥವಾ ಮೀಸಲಾತಿ ಕಲ್ಪಿಸುವ ಪ್ರಶ್ನೆಯಲ್ಲ, ಮಹಿಳಾ ಸಂಕುಲದ ಸಾಂವಿಧಾನಿಕ ಹಕ್ಕಿನ ಪ್ರಶ್ನೆ. ಆಗಲೇ ನಮಗೆ ಭಾರತದ ಮೊಟ್ಟಮೊದಲ ಸ್ತ್ರೀವಾದಿಯಾಗಿ ನಾವೇ ಗುರುತಿಸುವ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಅನುಸರಿಸುವ ನೈತಿಕ ಹಕ್ಕು ಇರುತ್ತದೆ.

ಮತ್ತೊಂದೆಡೆ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಸಮಾನತೆಗಾಗಿ ಹೋರಾಡುವ ಹಲವು ಪ್ರಗತಿಪರ ಸಂಘಟನೆಗಳ ಒಟ್ಟಾರೆ ಸ್ವರೂಪವನ್ನು ಗಮನಿಸಿದಾಗ, ಈ ಔದಾತ್ಯಗಳಿಗಾಗಿ ಹೋರಾಡುತ್ತಲೇ ಕೆಲವು ಸಮುದಾಯಗಳು ತಮ್ಮ ಸಮಾಜದಲ್ಲಿ ಇಂದಿಗೂ ಚಾಲ್ತಿಯಲ್ಲಿರುವ, ಕ್ರಿಯಾಶೀಲವಾಗಿರುವ ಸಾಮಾಜಿಕ ಬಹಿಷ್ಕಾರದಂತಹ ಪ್ರಾಚೀನ ಹೀನಾಚರಣೆಗಳ ವಿರುದ್ಧ ಸೊಲ್ಲೆತ್ತುವುದಿಲ್ಲ. ಕೊಳ್ಳೆಗಾಲ-ಚಾಮರಾಜನಗರ ದಿಂದ ಕೊಪ್ಪಳ ರಾಯಚೂರುವರೆಗೂ ಇದು ವಾಸ್ತವ. ಇಲ್ಲಿ ಬಹಿಷ್ಕೃತರಾಗುವುದು, ಅಂತರ್ಜಾತಿ-ಅಂತರ್ಧರ್ಮಿಯ ವಿವಾಹವಾಗುವ ವ್ಯಕ್ತಿಗಳನ್ನು ಪೋಷಕರೇ ಕೊಲ್ಲುವುದು ಸಾಮಾನ್ಯವಾಗಿದೆ. ಇಲ್ಲಿ ಬಲಿಯಾಗುವುದು ಮಹಿಳೆ, ಹೆಣ್ತನದ ಘನತೆ ಮತ್ತು ಹೆಣ್ಣು ಮಕ್ಕಳ ಸ್ವಾಯತ್ತತೆ-ಸಾಂವಿಧಾನಿಕ ಹಕ್ಕುಗಳು. ಪ್ರಗತಿಪರ ಚಳುವಳಿಗಳಲ್ಲಿ ಈ ಕುರಿತ ಜಾಗೃತ್ತಿ ಮೂಡಬೇಕಿರುವುದು ವರ್ತಮಾನದ ತುರ್ತು.
ಈ ರಾಜಕೀಯ ನೈತಿಕತೆಯನ್ನು ಪ್ರಗತಿಪರ ಚಳುವಳಿಗಳು, ಹೋರಾಟಗಳು ರೂಢಿಸಿಕೊಳ್ಳುವುದರ ಮೂಲಕ ವರ್ತಮಾನದ ಯುವ ತಲೆಮಾರಿಗೆ ಉತ್ತಮ, ಉಜ್ವಲ ಭವಿಷ್ಯವನ್ನು ರೂಪಿಸಲು ಮುಂದಾಗಬೇಕಿದೆ. ಈ ಆಶಯದೊಂದಿಗೆ ನನ್ನ ಮಾತುಗಳಿಗೆ ವಿರಾಮ ಹೇಳುತ್ತೇನೆ.

-೦-೦-೦-೦-