ಗದಗ: ಹಲವು ದಿನಗಳಿಂದ ಕಮಿಷನ್ ವಿಚಾರಕ್ಕೆ ಸಂಬಂಧಿಸಿದಂತೆ ದಿಂಗಾಲೇಶ್ವರ ಶ್ರೀ ಹಾಗೂ ಸರ್ಕಾರದ ಮದ್ಯೆ ಜಟಾಪಟಿ ನಡೆಯುತ್ತಲೇ ಇದೆ. ಅದರಲ್ಲೂ ಸಚಿವ ಸಿ.ಸಿ. ಪಾಟೀಲ್ ಹಾಗೂ ಶ್ರೀಗಳ ವಿರುದ್ಧದ ವಾಕ್ಸಮರ, ಶ್ರೀಗಳ ಭಕ್ತರು ಹಾಗೂ ಸಚಿವರ ಅಭಿಮಾನಿಗಳ ವರೆಗೂ ಬಂದು ನಿಂತಿದೆ. ದಿಂಗಾಲೇಶ್ವರ ಶ್ರೀಗಳ ಪೂರ್ವಾಶ್ರಮದ ಬಗೆಗಿನ ಹೇಳಿಕೆಯನ್ನು ಸಿ.ಸಿ. ಪಾಟೀಲ್ ಹಿಂಪಡೆದು ಕ್ಷಮಾಪಣೆ ಕೇಳಬೇಕು. ಇಲ್ಲದಿದ್ರೆ ಸಚಿವರ ಮನೆಯೆದುರು ಏ.27ರಂದು ಧರಣಿ ಹಮ್ಮಿಕೊಳ್ಳುವುದಾಗಿ ಹೇಳಿಕೆ ನೀಡಿದ್ರು.
ಈ ಹಿನ್ನೆಲೆಯಲ್ಲಿ ಇಂದು ಫಕೀರ ದಿಂಗಾಲೇಶ್ವರ ಶ್ರೀಗಳು ಸಚಿವ ಸಿ.ಸಿ. ಪಾಟೀಲ್ ಮನೆ ಎದುರು ಧರಣಿಗೆ ಆಗಮಿಸಬಹುದೆಂಬ ಮುನ್ನೆಚ್ಚರಿಕೆ ಕ್ರಮವಾಗಿ ಶ್ರೀಗಳನ್ನು ತೆಡೆಯಲು ಪೊಲೀಸ್ ನಾಕಾಬಂದಿ ನಿರ್ಮಿಸಿದೆ. ನರಗುಂದ ಹೊರವಲಯದ ಕಲಕೇರಿ ಸೇರಿದಂತೆ ಪಟ್ಟಣದ ಮೂರು ಭಾಗದಲ್ಲಿ ನಾಕಾಬಂದಿ ನಿರ್ಮಿಸಿದ್ದು, ರ್ಲಗೆರಿ, ಅಳಗವಾಡಿ ರಸ್ತೆಯಲ್ಲೂ ಪೊಲೀಸ್ ನಿಯೋಜನೆ ಮಾಡಲಾಗಿದೆ. ದಿಂಗಾಲೇಶ್ವರ ಶ್ರೀಗಳ ನರಗುಂದ ಎಂಟ್ರಿಗೆ ಬ್ರೇಕ್ ಹಾಕಲು ಪೊಲೀಸರು ಮುಂದಾಗಿದ್ದಾರೆ.

ಶ್ರೀಗಳನ್ನ ತಡೆಯಲು ಡಿವೈಎಸ್ ಪಿ ವೈ.ಎಸ್. ಎಗನಗೌಡರ್, ಸಿಪಿಐ ಎಮ್.ಜಿ. ಮಠಪತಿ ನೇತೃತ್ವದಲ್ಲಿ ನಾಕಾಬಂದಿ ನಿರ್ಮಿಸಿದ್ದು, ಕೆಎಸ್ ಆರ್ ಪಿ ತುಕಡಿ ಜೊತೆ ಮೂವತ್ತಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.