ಕೊನೆಗೂ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಾಡಲು ಕ್ಷಣಗಣನೆ ಶುರುವಾಗಿದೆ. ವಿವಾದದ ಉತ್ತುಂಗದಲ್ಲಿದ್ದ ಚಾಮರಾಜಪೇಟೆ ಈದ್ಗಾ ಮೈದಾನ ಈಗ ಕಂದಾಯ ಇಲಾಖೆಯ ತೆಕ್ಕೆಯಲ್ಲಿದೆ. ಹೀಗಾಗಿ ಇದೇ ಮೊದಲ ಬಾರಿಗೆ ಇಲ್ಲಿ ಸರ್ಕಾರದಿಂದಲೇ ಧ್ವಜಾರೋಹಣ ನಡೆಯುತ್ತಿದ್ದು, ಇಂದು ಈ ಬಗ್ಗೆ ಕಂದಾಯ ಸಚಿವ ಆರ್ ಅಶೋಕ್ ಭದ್ರತೆ ಪರಿಶೀಲನೆ ನಡೆಸಿದರು.
ಯಾವ ಸಂಘ ಸಂಸ್ಥೆಗಳಿಗೂ ಇಲ್ಲ ಅವಕಾಶ.. ಸರ್ಕಾರದಿಂದಲೇ ಅದ್ದೂರಿ ಕಾರ್ಯಕ್ರಮ
ಹಿಂದೂ ಪರ ಸಂಘಟನೆಗಳು ಅದ್ಯಾವಾಗ ಇದು ಬಿಬಿಎಂಪಿ ಮೈದಾನ, ವಕ್ಫ್ ಬೋರ್ಡ್ ಜಾಗ ಅಲ್ಲ ಅಂತ ವಾದ ಆರಂಭಿಸಿತೋ ಆಗಿಂದಲೇ ಚಾಮರಾಜಪೇಟೆ ಈದ್ಗಾ ಮೈದಾನ ರಾಜ್ಯದ ಜನತೆಯ ಗಮನ ಸೆಳೆಯೆತು. ಚಾಮರಾಜಪೇಟೆ ನಾಗರೀಕರು ಕೂಡ ಇದಕ್ಕೆ ಕೈ ಜೋಡಿಸದ ಬೆನ್ನಲ್ಲೇ ವಿವಾದ ಮತ್ತಷ್ಟು ಜಟಿಲಾವಯ್ತು. ಅದಾಗಿ ಹಲವು ದಿನಗಳ ವಿಚಾರಣೆಯ ಬಳಿಕ ವಿವಾದಿತ ಮೈದಾನವನ್ನು ಬಿಬಿಎಂಪಿ ಕಂದಾಯ ಇಲಾಖೆಗೆ ವರ್ಗಾಯಿಸಿ, ಕಂದಾಯ ಇಲಾಖೆ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಆದೇಶ ಮಾಡಿತು. ಅಲ್ಲಿಗೆ ಈ ವಿವಾದ ಸರ್ಕಾರದ ಹತೋಟಿಗೆ ಬಂತು. ಹೀಗಾಗಿ ಬಹಳ ಗೊಂದಲಗೊಂಡಿದ್ದ ಈ ಪ್ರಕರಣ ಬಹಳ ಸ್ಪಷ್ಟವಾಗಿ ಇದೀಗ ಈ ವಿವಾದಿತ ಮೈದಾನದಲ್ಲಿ ಸ್ವತಃ ಸರ್ಕಾರವೇ ಮುಂದೆ ನಿಂತು ಆಗಸ್ಟ್ 15ಕ್ಕೆ ಧ್ವಜಾರೋಹಣ ಮಾಡಲು ಮುಂದಾಗಿದೆ. ಅಲ್ಲಿಗೆ ಎಲ್ಲಾ ಸಂಘ ಸಂಸ್ಥೆಗಳ ರೋಷಾವೇಷ ತಣ್ಣಗಾಗಿದೆ.
ವಿವಾದದ ಕೇಂದ್ರ ಬಿಂದು ಚಾಮರಾಜಪೇಟೆ ಈದ್ಗಾ ಮೈದಾನಲ್ಲಿ ರಾರಾಜಿಸಲಿದೆ ತ್ರಿವರ್ಣ ಧ್ವಜ
ಆಗಸ್ಟ್ 15ರಂದು ಚಾಮರಾಜಪೇಟೆಯ ಮೈದಾನದಲ್ಲಿ ಬೆಳಗ್ಗೆ 10 ಗಂಟೆಗೆ ಕಂದಾಯ ಇಲಾಖೆಯ ಕಾರ್ಯದರ್ಶಿ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದೆ. ಜೊತೆಗೆ ರಾಷ್ಟ್ರ ಗೀತೆ ಹಾಗೂ ನಾಡ ಗೀತೆಯೂ ಮೊಳಗಲಿದೆ. ಈ ಕಾರ್ಯಕ್ರಮಕ್ಕೆ 500 ಶಾಲಾ ಮಕ್ಕಳು, 200 ಸಾರ್ವಜನಿಕರಿಗೆ ಅವಕಾಶ ನೀಡಲಾಗುತ್ತಿದೆ. ಸಂಘಟನೆ, ಸಂಸ್ಥೆ ಎಂಬ ಬೇಧಭಾವವಿಲ್ಲದೆ ಎಲ್ಲರೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕರೆ ನೀಡಲಾಗಿದೆ. ಧ್ವಜಾರೋಹಣದ ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವೂ ನಡೆಯಲಿದೆ.

ವಿವಾದಿತ ಮೈದಾನಕ್ಕೆ ಖಾಕಿ ಸರ್ಪಗಾವಲು.. ಸಿಸಿಟಿವಿ ಕಟ್ಟೆಚ್ಚರ
ಇನ್ನು ಮೈದಾನದಕ್ಕೆ ನಗರ ಪೊಲೀಸ್ ಇಲಾಖೆ ಬಿಗಿ ಬಂದೋ ಬಸ್ತ್ ಒದಗಿಸಿದೆ. ಮೈದಾನದ ಸುತ್ತ ಬ್ಯಾರಿಕೇಡ್ ಹಾಕಲಾಗಿದೆ. ಮೈದಾನದ ನಾಲ್ಕೂ ಮೂಲೆಯಲ್ಲೂ ksrp ತುಕಡಿ ನಿಯೋಜನೆ ಮಾಡಲಾಗಿದೆ. ಜೊತೆಗೆ ಮೈದಾನದ ಸುತ್ತ ಅಲ್ಲಲ್ಲಿ ಸಿಸಿಟಿವಿ ಅಳವಡಿಕೆ ಮಾಡಿ, ಹೆಚ್ಚಿನ ನಿಗಾ ಇಡಲಾಗಿದೆ. ಜೊತೆಗೆ ಮೈದಾನದ ಸುತ್ತಲಿರುವ ಎತ್ತರದ ಕಟ್ಟಡಗಳ ಮೇಲೆ ಸಿಬ್ಬಂದಿಗಳ ನೇಮಕಮಾಡಿ ಭದ್ರತೆ ಮತ್ತಷ್ಟು ಬಿಗಿಗೊಳಿಸಲು ಪೊಲೀಸ್ ಇಲಾಖೆ ತೀರ್ಮಾನಿಸಿದೆ. ಅಲ್ಲಗೆ ರಾಷ್ಟ್ರ ಧ್ವಜಕ್ಕೆ ಅಗೌರವ ತರುವ ರೀತಿಯಲ್ಲಿ ಸಾರ್ವಜನಿಕರು ನಡೆದುಕೊಂಡರೆ ಅಂಥವರನ್ನು ನೇರವಾಗಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸುವ ಎಚ್ಚರಿಕೆ ಕೊಡಲಾಗಿದೆ. ಒಟ್ಟಾರೆ ಚಾಮರಾಜಪೇಟೆ ಈದ್ಗಾ ಮೈದಾನ ಹಲವು ತಿರುವು ಮುರುವುಗಳನ್ನು ಕಂಡು ಇದೀಗ ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಬಂದು ನಿಂತಿದೆ. ಆಗಸ್ಟ್ 15ರ ಸಂಭ್ರಮಾಚರಣೆ ಯಾವುದೇ ಅಡೆತಡೆಗಳು ಇಲ್ಲದೆ ನಡೆಯಲಿ ಅಂತ ಖಾಕಿ ಹಗಲು ರಾತ್ರಿ ಎಚ್ಚೆತ್ತುಕೊಂಡು ಕೂತಿದೆ.
![]() | ReplyForward |