ಇಸ್ಲಾಮಾಬಾದ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ನಮ್ಮದಲ್ಲ. ಅದೊಂದು ವಿದೇಶಿ ನೆಲವಾಗಿದೆ. ಅದರ ಮೇಲೆ ನಮ್ಮ ಅಧಿಕಾರ ಇಲ್ಲ ಎಂದು ಪಾಕಿಸ್ತಾನ ಸರ್ಕಾರ ಇಸ್ಲಾಮಾಬಾದ್ ಹೈಕೋರ್ಟ್ ನಲ್ಲಿ ಒಪ್ಪಿಕೊಂಡಿದೆ.
ಭಾರತದ ವಾದಕ್ಕೆ ಸದ್ಯ ಇದು ಪುಷ್ಠಿ ಸಿಕ್ಕಂತಾಗಿದೆ. 75 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಪಾಕ್ ಈ ರೀತಿ ಹೇಳಿಕೆ ನೀಡಿದೆ. ಜಾಗತಿಕ ವೇದಿಕೆಗಳಲ್ಲಿ ಪಾಕ್ ಸರಕಾರದ ಈ ಹೇಳಿಕೆಯನ್ನು ಭಾರತ ದಾಖಲೆಯಾಗಿ ಸಲ್ಲಿಸಬಹುದಾಗಿದೆ ಎನ್ನಲಾಗುತ್ತಿದೆ. ಕಾಶ್ಮೀರಿ ಪತ್ರಕರ್ತ ಅಹ್ಮದ್ ಫರ್ಹಾದ್ ಶಾ ಅಪಹರಣ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಪಾಕ್ ಸರ್ಕಾರದ ಹೆಚ್ಚುವರಿ ಅಟಾರ್ನಿ ಜನರಲ್ ‘ಪಾಕ್ ಆಕ್ರಮಿತ ಕಾಶ್ಮೀರ’ ಪ್ರದೇಶ ಪಾಕಿಸ್ತಾನದ ಭಾಗವೇ ಅಲ್ಲ ಎಂದು ಹೇಳಿದ್ದಾರೆ.
ಫರ್ಹಾದ್ ಶಾರನ್ನು ಪಾಕ್ ಅಪಹರಿಸಿದೆ. ಕೂಡಲೇ ಬಿಡುಗಡೆ ಮಾಡುವಂತೆ ಅವರ ಪತ್ನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾ.ಮೊಹ್ಸಿನ್ ಅಖ್ತರ್ ಕಯಾನಿ, ಆ ವ್ಯಕ್ತಿಯನ್ನು ಕೋರ್ಟ್ ಮುಂದೆ ಹಾಜರುಪಡಿಸುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಅಟಾರ್ನಿ ಜನರಲ್, ‘‘ಫರ್ಹಾದ್ ಶಾ ಪಾಕ್ ಆಕ್ರಮಿತ ಕಾಶ್ಮೀರದ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಹೀಗಾಗಿ ಅವರನ್ನು ಕೋರ್ಟ್ ಎದುರು ಹಾಜರುಪಡಿಸುವುದು ಕಷ್ಟಸಾಧ್ಯ ಎಂದು ಹೇಳಿದ್ದಾರೆ.
ಪಿಒಕೆ ವಿದೇಶಿ ಭೂಭಾಗ. ಅದಕ್ಕೆ ಪ್ರತ್ಯೇಕ ಸಂವಿಧಾನವಿದೆ, ನ್ಯಾಯಾಲಯವಿದೆ. ಪಾಕ್ ಕೋರ್ಟ್ ತೀರ್ಪುಗಳು ಅಲ್ಲಿಗೆ ಅನ್ವಯವಾಗುವುದಿಲ್ಲ. ಹೀಗಿರುವಾಗ ಅವರನ್ನು ಕೋರ್ಟ್‌ಗೆ ಕರೆತರಲು ಸಾಧ್ಯವಿಲ್ಲ ಎಂದು ಹೇಳಿದರು. ಪಿಒಕೆ ವಿದೇಶಿ ನೆಲವಾಗಿದ್ದರೆ ಪಾಕಿಸ್ತಾನದ ಸೇನೆ ಹಾಗೂ ರೇಂಜರ್‌ಗಳು ಅಲ್ಲಿಗೆ ಹೇಗೆ ಪ್ರವೇಶ ಪಡೆದರು ಎಂದು ನ್ಯಾಯಾಲಯ ಪ್ರಶ್ನಿಸಿತು. ಪಿಒಕೆನಲ್ಲಿ ಇತ್ತೀಚೆಗೆ ಅಪಹರಣ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅಲ್ಲಿನ ಜನರು ಪಾಕ್ ವಿರುದ್ಧ ಬೀದಿಗೆ ಇಳಿದಿದ್ದಾರೆ. ಇನ್ನೊಂದೆಡೆ ಅಮಿತ್ ಶಾ ಪಿಒಕೆಯನ್ನು ನಾವು ಪಡೆದೇ ಪಡೆಯುತ್ತೇವೆ ಎಂದು ಹೇಳಿದ್ದಾರೆ. ಹೀಗಾಗಿ ಪಿಒಕೆ ಭಾರತಕ್ಕೆ ಸೇರಲಿದೆಯೇ? ಭಾರತ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ನೋಡಬೇಕಿದೆ.