ವಾರಾಣಸಿ (Varanasi) ಲೋಕಸಭೆ ಕ್ಷೇತ್ರದಿಂದ ಸತತ 3ನೇ ಬಾರಿ ಸ್ಪರ್ಧಿಸುತ್ತಿರುವ (Lok Sabha Election) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಂಗಳವಾರ (ಮೇ 14) ನಾಮಪತ್ರ ಸಲ್ಲಿಸಲಿದ್ದಾರೆ. ಸೋಮವಾರ (ಮೇ 13) ಬೃಹತ್ ರೋಡ್ ಶೋ ನಡೆಸಿ ಶಕ್ತಿ ಪ್ರದರ್ಶನ ಮಾಡಿರುವ ನರೇಂದ್ರ ಮೋದಿ ಅವರು ಮಂಗಳವಾರ ನಾಮಪತ್ರ ಸಲ್ಲಿಕೆ ಜತೆಗೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.ಬೆಳಗ್ಗೆ 10.45ಕ್ಕೆ ಕಾಲಭೈರವ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಇದಾದ ಬಳಿಕ ಮೋದಿ ಅವರು ಲೋಕಸಭೆ ಚುನಾವಣೆ ದೃಷ್ಟಿಯಿಂದ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರ ಜತೆ ಮಹತ್ವದ ಸಭೆ ನಡೆಸಲಿದ್ದಾರೆ. ಲೋಕಸಭೆ ಚುನಾವಣೆ ಗೆಲುವು, ಪಕ್ಷ ಸಂಘಟನೆ ಸೇರಿ ಹಲವು ವಿಷಯಗಳ ಕುರಿತು ನಾಯಕರು ಹಾಗೂ ಕಾರ್ಯಕರ್ತರ ಜತೆ ಮೋದಿ ಚರ್ಚಿಸಲಿದ್ದಾರೆ.ಬೆಳಗ್ಗೆ 11:40ಕ್ಕೆ ಪ್ರಧಾನಿ ನಾಮಪತ್ರ ಸಲ್ಲಿಸಲಿದ್ದಾರೆ.
ನಾಮಪತ್ರ ಸಲ್ಲಿಕೆಯ ಮುಹೂರ್ತವು ಹಿಂದೂ ಪಂಚಾಂಗದ ಪ್ರಕಾರ ʼಅಭಿಜಿತ್ ಮಹೂರ್ತ’ವಾಗಿದೆ. ಇದು ʼಆನಂದ ಯೋಗ’ದ ಅಡಿಯಲ್ಲಿ ಬರುತ್ತಿದ್ದು ಅತ್ಯಂತ ಮಂಗಳಕರ ಅವಧಿ ಎನ್ನಲಾಗಿದೆ. ನಾಮಪತ್ರ ಸಲ್ಲಿಕೆಗೂ ಮುನ್ನವೇ ಅವರು ಸೋಮವಾರ ರೋಡ್ ಶೋ ನಡೆಸಿ ಜನರ ಗಮನ ಸೆಳೆದಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿಯ ಕೆಲ ನಾಯಕರು ಮೋದಿ ಅವರಿಗೆ ಸಾಥ್ ನೀಡಲಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಇಂಡಿಯಾ ಒಕ್ಕೂಟದ ಅಭ್ಯರ್ಥಿಯಾಗಿ ಅಜಯ್ ರೈ ಕಣದಲ್ಲಿದ್ದಾರೆ. ಅಜಯ್ ರೈ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದು, ಕಳೆದ ಎರಡು ಬಾರಿಯೂ ಮೋದಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು.