
BJP ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (NDA) ನಾಯಕರು ನಿನ್ನೆ ಬುಧವಾರ ದೆಹಲಿಯಲ್ಲಿ ನರೇಂದ್ರ ಮೋದಿ ಅವರನ್ನು ತಮ್ಮ ನಾಯಕನನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ ನಂತರ, ಷೇರುಪೇಟೆ ಮಾರುಕಟ್ಟೆ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಇಂದು ಗುರುವಾರ ಪುಟಿದೆದ್ದಿದೆ. ಮೊನ್ನೆ ಮಂಗಳವಾರ ಲೋಕಸಭೆ ಚುನಾವಣೆ ಫಲಿತಾಂಶ ದಿನ ಸೆನ್ಸೆಕ್ಸ್ ಪಾತಾಳಕ್ಕೆ ಕುಸಿದಿತ್ತು. 30-ಷೇರುಗಳ ಬಿಎಸ್ಇ ಸೆನ್ಸೆಕ್ಸ್ ಇಂದು ಬೆಳಗಿನ ಆರಂಭಿಕ ವಹಿವಾಟಿನಲ್ಲಿ 696.46 ಪಾಯಿಂಟ್ಗಳ ಜಿಗಿದು 75,078.70 ಕ್ಕೆ ತಲುಪಿದೆ. ಎನ್ಎಸ್ಇ ನಿಫ್ಟಿ 179.15 ಪಾಯಿಂಟ್ ಏರಿಕೆ ಕಂಡು 22,799.50ಕ್ಕೆ ತಲುಪಿದೆ. ಮಂಗಳವಾರದಂದು ಚುನಾವಣಾ ಫಲಿತಾಂಶ ಪ್ರಕಟವಾಗಿ ಎನ್ ಡಿಎಗೆ ಸರಳ ಬಹುಮತ ದೊರೆತಿತ್ತು ಆದರೆ ಬಿಜೆಪಿಗೆ ಏಕಾಂಗಿಯಾಗಿ ಅಧಿಕಾರ ಹಿಡಿಯುವುದಕ್ಕೆ ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆ ಶೇ.6 ರಷ್ಟು ಕುಸಿದಿತ್ತು.