ಮಂಡ್ಯ: ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೆ ಪ್ರಧಾನಿ ನರೇಂದ್ರ ಮೋದಿ ಮಾ. 12ರಂದು ನಗರಕ್ಕೆ ಆಗಮಿಸುತ್ತಿದ್ದು ಈ ಹಿನ್ನಲೆಯಲ್ಲಿ ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯ 34 ಮರಗಳ ಕೊಂಬೆಗಳನ್ನು ಬೇಕಾಬಿಟ್ಟಿಯಾಗಿ ಕತ್ತರಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಅಂದು ಮಧ್ಯಾಹ್ನ 12ಕ್ಕೆ ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ ಬಳಿ ಮೋದಿ ದಶಪಥ ಹೆದ್ದಾರಿ ಉದ್ಘಾಟಿಸಲಿದ್ದಾರೆ. ನಂತರ ನಗರದ ಪ್ರವಾಸಿ ಮಂದಿರದಿಂದ ಕೆಂಪೇಗೌಡ ಉದ್ಯಾನದವರೆಗಿನ 1.5 ಕಿ.ಮೀ ರೋಡ್ ಶೋ ನಡೆಸಲಿದ್ದಾರೆ. ಅವರ ಭದ್ರತೆಯ ಕಾರಣ ನೀಡಿ ಸೋಮವಾರ ತಡರಾತ್ರಿ ರಸ್ತೆಯ ಎರಡೂ ಬದಿಯ ಮರಗಳ ಕೊಂಬೆಗಳನ್ನು ಕತ್ತರಿಸಿದ್ದಾರೆ.
“ರಸ್ತೆಗೆ ಬಾಗಿರುವ ಕೊಂಬೆಗಳನ್ನು ಕತ್ತರಿಸಿದ್ದರೆ ಬೇಸರವಾಗುತ್ತಿರಲಿಲ್ಲ. ಆದರೆ, ಮರಗಳ ಅರ್ಧ ಭಾಗವನ್ನೇ ಕಡಿದಿರುವುದು ನೋವುಂಟು ಮಾಡಿದೆ. ಜೀವವಾಯು ನೀಡುತ್ತಿದ್ದ ಈ ಮರಗಳು ಪ್ರಧಾನಿಗೆ ತೊಂದರೆ ನೀಡುತ್ತಿದ್ದವೇ” ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಮರಗಳ ಕೊಂಬೆ ಕತ್ತರಿಸುವ ವಿಚಾರದಲ್ಲಿ ಜಿಲ್ಲಾಧಿಕಾರಿ ಹಾಗೂ ಅರಣ್ಯಾಧಿಕಾರಿಗಳ ನಡುವೆ ಸಮನ್ವಯದ ಕೊರತೆಯಿದೆ ಎನ್ನಲಾಗಿದೆ.

ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಪ್ರತಿಕ್ರಿಯಿಸಿ, ಪ್ರಧಾನಿ ರ್ಯಾಲಿಯಲ್ಲಿ 40 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಒಣಗಿದ್ದ ಕೊಂಬೆ ತೆರವು ಮಾಡುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದಿದ್ದೆ. ಅವರು ಹೇಗೆ ಕಡಿಸಿದ್ದಾರೆ ಎಂಬುದನ್ನು ಪರಿಶೀಲಿಸುವೆ ಎಂದಿದ್ದಾರೆ.
ಆದರೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ರುದ್ರನ್ ಅವರಿಗೆ ಮರ ಕಡಿದ ಮಾಹಿತಿಯೇ ಇಲ್ಲ. ಜಿಲ್ಲಾಧಿಕಾರಿ ಸೂಚನೆಯಂತೆ ಆರ್‌ಎಫ್‌ಒ ಕ್ರಮ ಕೈಗೊಂಡಿದ್ದಾರೆ. ಆ ಬಗ್ಗೆ ನನಗೆ ಗೊತ್ತಿಲ್ಲ ಎಂದು ತಿಳಿಸಿದರು.
ಅರಣ್ಯ ಇಲಾಖೆಯ ಅಧಿಕಾರಿಗಳ ಸೂಚನೆಯ ಮೇರೆಗೆ ಕೆಳಹಂತದ ಸಿಬ್ಬಂದಿ ಹಾಗೂ ಇತರ ಕಾರ್ಮಿಕರು ಮರಗಳನ್ನು ಕತ್ತರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮರಗಳಲ್ಲಿ ಒಣಗಿದ, ಬಾಗಿದ ಕೊಂಬೆಗಳಿದ್ದವು. ಅವುಗಳನ್ನು ತೆರವು ಮಾಡಲು ಕೆಳಮಟ್ಟದ ಕೊಂಬೆಗಳನ್ನೂ ತೆರವು ಮಾಡಬೇಕಾಯಿತು. ನಮಗೆ ಸ್ಪಷ್ಟ ಸೂಚನೆ ಇರಲಿಲ್ಲ ಎಂದು ಕಾರ್ಮಿಕರೊಬ್ಬರು ತಿಳಿಸಿದರು.
ನಾವು ಆದೇಶ ನೀಡಿಲ್ಲ: ಸದಾನಂದ ಗೌಡ
ಮರದ ಕೊಂಬೆಗಳ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಸದಾನಂದ ಗೌಡ, ಅಧಿಕಾರಿಗಳು ನಿನ್ನೆ ಮರಗಳನ್ನು ಟ್ರಿಮ್ ಮಾಡಿದ್ದಾರೆ. ಮರದ ಕಂಟಿಂಗ್ ಮಾಡದ ಹಾಗೇ ವರಿಷ್ಠರು ಆದೇಶ ಕೊಟ್ಟಿದ್ದಾರೆ. ಪಕ್ಷ, ಸರ್ಕಾರದ ಕಡೆಯಿಂದ ಯಾವುದೇ ಆದೇಶ ಮಾಡಿಲ್ಲ. ಈ ಕುರಿತು ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.











