ಯಾದಗಿರಿ : ವಸತಿ ಸಚಿವ ವಿ.ಸೋಮಣ್ಣ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ವಿಚಾರ ಕಳೆದ ಹಲವು ದಿನಗಳಿಂದ ಸದ್ದು ಮಾಡ್ತಿದೆ. ಈ ವಿಚಾರವಾಗಿ ಇಂದು ಯಾದಗಿರಿಯಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ. ಸೋಮಣ್ಣ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಅನ್ನೋ ವಿಚಾರದಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ಹೇಳಿದ್ದಾರೆ.
ಎಲ್ಲರೂ ನಮ್ಮ ಜೊತೆಯಲ್ಲಿ ಇದ್ದಾರೆ, ಮುಂದೆಯೂ ಇರುತ್ತಾರೆ. ಬೆಂಗಳೂರಿಗೆ ಹೋದಮೇಲೆ ಎಲ್ಲರನ್ನೂ ಭೇಟಿ ಮಾಡಿ ಮಾತನಾಡುತ್ತೇನೆ. ಸೋಮಣ್ಣ ಸೇರಿ ಯಾರೊಬ್ಬರೂ ಬಿಜೆಪಿ ಬಿಟ್ಟು ಎಲ್ಲಿಗೂ ಹೋಗುತ್ತಿಲ್ಲ. ನಾವು ಎಲ್ಲರೂ ಒಂದಾಗಿ ಈ ಚುನಾವಣೆಯನ್ನು ಎದುರಿಸಲಿದ್ದೇವೆ ಎಂದು ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಇನ್ನು ಇದೇ ವೇಳೆ ಭ್ರಷ್ಟಾಚಾರ ಪ್ರಕರಣದಲ್ಲಿ ಎ 1 ಆರೋಪಿ ಎನಿಸಿರುವ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗುತ್ತೆ ಎಂಬ ವಿಚಾರದ ಬಗ್ಗೆಯೂ ಮಾತನಾಡಿದ ಯಡಿಯೂರಪ್ಪ, ಮಾಡಾಳು ವಿರೂಪಾಕ್ಷಪ್ಪರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗುತ್ತೆ ಎನ್ನುವುದು ಕೇವಲ ಊಹಾಪೋಹ. ಈ ವಿಚಾರದಲ್ಲಿ ಯಾವುದೆ ಸತ್ಯಾಂಶ ಇಲ್ಲ. ವಾಸ್ತವಿಕ ಸ್ಥಿತಿ ಏನು ಅನ್ನೋದು ನಿಮಗೆ ತಿಳಿದಿದೆ. ನಿನ್ನೆ ಮಾಡಾಳು ವಿರೂಪಾಕ್ಷಪ್ಪರಿಗೆ ಸಿಕ್ಕ ಅದ್ಧೂರಿ ಮೆರವಣಿಗೆ ಬಗ್ಗೆ ನಾನು ಮಾತನಾಡೋದಿಲ್ಲ. ಅವರ ಬಗ್ಗೆ ಪಕ್ಷ ಯಾವ ಕ್ರಮ ಕೈಗೊಳ್ಳುತ್ತೆ ಎಂಬುದರ ಬಗ್ಗೆಯೂ ನನಗೆ ಮಾಹಿತಿಯಿಲ್ಲ ಎಂದಿದ್ದಾರೆ.








