ರಾಜೀವ್ ಗಾಂಧಿ ಫೌಂಡೇಷನ್ಗೆ ಚೀನಾ ಮೂಲದ ಸಂಸ್ಥೆಗಳಿಂದ ದೇಣಿಗೆ ನೀಡಲಾಗಿದೆ ಎಂದು ಬಿಜೆಪಿ ಮಾಡಿರುವ ಆರೋಪಗಳಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ. ಭಾರತ-ಚೀನಾ ಗಡಿಯಲ್ಲಿ ಆತಂಕದ ವಾತಾವರಣವಿದ್ದರೂ PM-CARES Fund ಗೆ ಚೀನಾ ಮೂಲದ ಕಂಪೆನಿಗಳಿಂದ ಬಂದಿರುವ ದೇಣಿಗೆಯನ್ನು ಯಾಕೆ ಸ್ವೀಕರಿಸಿದಿರಿ ಎಂದು ಕಾಂಗ್ರೆಸ್ ಮರುಪ್ರಶ್ನೆ ಹಾಕಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರ 18 ಭೇಟಿಗಳ ಕುರಿತು ಪ್ರಸ್ತಾಪ ಎತ್ತಿರುವ ಕಾಂಗ್ರೆಸ್ನ ವಕ್ತಾರ ಅಭಿಷೇಕ್ ಸಿಂಘ್ವಿ ಚೀನಾ ಭಾರತದ ಮೇಲೆ ಮೊದಲು ದಾಳಿ ಮಾಡಿತು ಎಂಬ ವಿಚಾರವನ್ನು ಪ್ರಧಾನಿ ಮೋದಿ ಏಕೆ ಹೇಳಲಿಲ್ಲ ಎಂದು ಪ್ರಶ್ನೆ ಹಾಕಿದ್ದಾರೆ.
“ಪ್ರಧಾನಿಯವರು ತಮ್ಮ ಸ್ವಂತ ಖಾತೆಯಂತೆ ನಿಭಾಯಿಸುತ್ತಿರುವ PM-CARES Fundಗೆ ಚೀನಾ ಮೂಲದ ಕಂಪೆನಿಗಳಿಂದ ಬಂದಿರುವ ದೇಣಿಗೆ, ಭಾರತದ ಸುರಕ್ಷತೆಗೆ ಧಕ್ಕೆ ತರುವಂತಹ ವಿಚಾರ. ಚೀನಾ ಭಾರತದ ಮೇಲೆ ಮೊದಲು ದಾಳಿ ಮಾಡಿತು ಎಂದು ಪ್ರಧಾನಿ ಮೋದಿ ದೇಶದ ಜನರಿಗೆ ಹೇಳಬೇಕು,” ಎಂದು ಅವರು ಆಗ್ರಹಿಸಿದರು.
PM-CARES Fundನಂತಹ ವಿವಾದಿತ ಅಂಶಗಳಿಗೆ ಪ್ರಧಾನಿ ಮೋದಿಯವರು ನೂರಾರು ಕೋಟಿಗಳ ದೇಣಿಯನ್ನು ಸ್ವೀಕರಿಸಿದರೆ ಚೀನಾ ಕುರಿತ ಅವರ ನಿಲುವು ಮಹತ್ವವನ್ನು ಕಳೆದುಕೊಳ್ಳುತ್ತದೆ. ಪರಿಸ್ಥಿತಿ ಹೀಗಿರುವಾಗ ಅವರು ಚೀನಾದ ತಪ್ಪುಗಳನ್ನು ಹೇಗೆ ಎತ್ತಿ ಹಿಡಿಯುತ್ತಾರೆ? ಪ್ರಧಾನಿ ನರೇಂದ್ರ ಮೋದಿ ಈ ಪ್ರಶ್ನೆಗಳಿಗೆ ಉತ್ತರಿಸಲೇಬೇಕು, ಎಂದು ಅವರು ಹೇಳಿದ್ದಾರೆ.
ಇನ್ನು, ಅಧಿಕಾರಕ್ಕೆ ಬರುವ ಮುಂಚೆಯೇ ಚೀನಾದ ಕಮ್ಯುನಿಸ್ಟ್ ಪಾರ್ಟಿಯೊಂದಿಗೆ ಬಿಜೆಪಿ ಒಳ್ಳೆಯ ಸಂಬಂಧವನ್ನು ಹೊಂದಿತ್ತು ಎಂಬ ಗಂಭೀರ ಆರೋಪವನ್ನು ಮಾಡಿರುವ ಅಭಿಷೇಕ್, 2007ರಿಂದ ಬಿಜೆಪಿಯ ಅಧ್ಯಕ್ಷರುಗಳಾದ ರಾಝನಾಥ್ ಸಿಂಗ್, ನಿತಿನ್ ಗಡ್ಕರಿ ಮತ್ತು ಅಮಿತ್ ಶಾ ಚೀನಾದ ನಾಯಕರನ್ನು ಭೇಟಿಯಾಗಿದ್ದಾರೆ. “ಭಾರತದ ಇತಿಹಾಸದಲ್ಲೇ ಯಾವುದೇ ರಾಜಕೀಯ ಪಕ್ಷ, ಚೀನಾದ ಕಮ್ಯನಿಸ್ಟ್ ಪಕ್ಷದೊಂದಿಗೆ ಸಂಬಂಧವನ್ನು ಹೋಂದಿರಲಿಲ್ಲ,” ಎಂದು ಹೇಳಿದ್ದಾರೆ.
ರಾಜನಾಥ್ ಸಿಂಗ್ ಅವರು ಜನವರಿ 2007 ಮತ್ತು ಅಕ್ಟೋಬರ್ 2008ರಲ್ಲಿ, ಗಡ್ಕರಿ ಅವರು ಜನವರಿ 2011ರಲ್ಲಿ ಮತ್ತು 2014ರಲ್ಲಿ ಅಮಿತ್ ಶಾ ಅವರು ಚೀನಾ ಕಮ್ಯುನಿಸ್ಟ್ ಪಾರ್ಟಿಯ ನಾಯಕರನ್ನು ಭೇಟಿ ಮಾಡಿರುವ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
“ಚೀನಾದ ಸೈನಿಕರು ಭಾರತದ ಗಡಿಯೊಳಗೆ ಪ್ರವೇಶ ಮಾಡಿದ್ದಾರೆ. ಪ್ರಧಾನ ಮಂತ್ರಿಯವರು ಚೀನಾ ದೇಶದ ಕಂಪೆನಿಗಳಿಂದ ಹಣವನ್ನು ಪಡೆದಿದ್ದಾರೆ. 2013ರಲ್ಲಿ ಚೀನಾ ಗಡಿ ಅತಿಕ್ರಮಣ ಮಾಡಿದ ಹೊರತಾಗಿಯೂ ಚೀನಾದ ಕಂಪೆನಿಗಳಿಂದ ದೇಣಿಗೆಯನ್ನು ಏಕೆ ಪಡೆದರು ಎಂಬ ಕುರಿತು ಪ್ರಧಾನಿ ಮಾತನಾಡುವರೋ? ಹುವಾವೈ ಕಂಪೆನಿ 7 ಕೋಟಿ, ಟಿಕ್ಟಾಕ್ 30 ಕೋಟಿ, ಪೇಟಿಎಂ 100 ಕೋಟಿ, ಶಯೋಮಿ 15 ಕೋಟಿ ಮತ್ತು ಒಪ್ಪೊ 1 ಕೋಟಿ ರೂಪಾಯಿಗಳಷ್ಟು ದೇಣಿಗೆಯನ್ನು ನೀಡಿದೆ,” ಎಂಬ ಅಂಶವನ್ನು ಅವರು ಬಹಿರಂಗಪಡಿಸಿದರು.
ಆರ್ಟಿಐ ಅಡಿಯಲ್ಲೂ PM-CARES Fund ಅನ್ನು ತಂದಿಲ್ಲ. ಇದು ಒಂದು ಅಪಾರದರ್ಶಕವಾಗಿ ಮತ್ತು ಗುಪ್ತವಾಗಿ ನಡೆಸುತ್ತಿರುವ ನಿಧಿಯಾಗಿದೆ, ಎಂದು ಪ್ರಧಾನಿ ವಿರುದ್ದ ಗರ್ಜಿಸಿದರು.