ಕೋವಿಡ್ ಸಾಂಕ್ರಾಮಿಕ ಮತ್ತು ಅದರ ನಿಯಂತ್ರಣಕ್ಕಾಗಿ ಹೇರಲಾದ ಲಾಕ್ ಡೌನ್ ನಿಂದಾಗಿ ದೇಶದ ಜನ ದುಡಿಮೆ, ಬದುಕು ಮತ್ತು ಜೀವ ಕಳೆದುಕೊಳ್ಳುತ್ತಿರುವಾಗ, ಸಂಕಷ್ಟದಲ್ಲಿರುವ ದೇಶವಾಸಿಗಳಿಗೆ ನೆರವಾಗುವುದಾಗಿ ಹೇಳಿ ಪ್ರಧಾನಿ ಮೋದಿಯವರು ಪಿಎಂ ಕೇರ್ಸ್ ಎಂಬ ನಿಧಿ ಸ್ಥಾಪಿಸಿ ದೇಶದ ಮುಂಚೂಣಿ ಸಾರ್ವಜನಿಕ ಸಂಸ್ಥೆಗಳು, ಕಾರ್ಪೊರೇಟ್ ಕಂಪನಿಗಳಿಂದ ಚಂದಾ ಎತ್ತಿದ್ದರು.
ಅದಾಗಲೇ ಇದ್ದ ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ(ಪಿಎಂಎನ್ ಆರ್ ಎಫ್) ಗೆ ಪರ್ಯಾಯವಾಗಿ ಪಿಎಂ ಕೇರ್ಸ್ ಎಂಬ ಹೆಸರಿನಲ್ಲಿ ಸ್ಥಾಪಿಸಿದ ಈ ನಿಧಿಯನ್ನು ಸಾರ್ವಜನಿಕ ಲೆಕ್ಕಪತ್ರ ಮತ್ತು ಮಾಹಿತಿ ಹಕ್ಕು ಕಾಯ್ದೆಯಿಂದ ಹೊರಗಿಡಲಾಗಿತ್ತು. ಅಲ್ಲದೆ, ಆ ನಿಧಿಗೆ ಹರಿದುಬಂದ ದೇಣಿಗೆಯ ವಿವರವಾಗಲೀ, ಆ ನಿಧಿಯ ಹಂಚಿಕೆ ಅಥವಾ ವೆಚ್ಚದ ವಿವರಗಳನ್ನಾಗಲೀ ತಿಳಿಯುವ ಹಕ್ಕು ದೇಶದ ನಾಗರಿಕರಿಗೆ ಇಲ್ಲ ಎಂದೂ ಪ್ರಧಾನಮಂತ್ರಿಗಳ ಕಚೇರಿಯೇ ಸ್ವತಃ ಸುಪ್ರೀಂಕೋರ್ಟಿಗೆ ತಿಳಿಸಿತ್ತು!
2019ರಲ್ಲಿ ನಿಧಿ ಸ್ಥಾಪನೆಯಾಗಿ ಒಂದೇ ವರ್ಷದಲ್ಲಿ ಹತ್ತಾರು ಸಾವಿರ ಕೋಟಿ ದೇಣಿಗೆ ಸಂಗ್ರಹಿಸಿದ ಪಿಎಂ ಕೇರ್ಸ್ ನಿಧಿಯಲ್ಲಿ ದೊಡ್ಡ ಪಾಲು ಇದ್ದದ್ದು ದೇಶದ ವಿವಿಧ ಸಾರ್ವಜನಿಕ ವಲಯದ, ಸರ್ಕಾರಿ ಸ್ವಾಮ್ಯದ ಕಂಪನಿಗಳು ದೇಣಿಗೆಯದ್ದೇ. ಸಾರ್ವಜನಿಕ ತೆರಿಗೆ ಹಣದಲ್ಲಿ ನಿರ್ಮಾಣವಾದ, ದಶಕಗಳಿಂದ ಉದ್ಯಮ ಮತ್ತು ಸೇವಾ ಚಟುವಟಿಕೆ ನಡೆಸಿಕೊಂಡುಬಂದಿರುವ ಈ ಸಂಸ್ಥೆಗಳ ನಿಧಿ ಎಂದರೆ ಅದು ಅಂತಿಮವಾಗಿ ದೇಶದ ಎಲ್ಲ ಸಾರ್ವಜನಿಕರ ಹಣವೇ ಅಲ್ಲವೆ? ಹಾಗಿದ್ದರೂ ಪಿಎಂ ಕೇರ್ಸ್ ನಿಧಿಯ ವಿವರಗಳನ್ನು ದೇಶದ ಜನರಿಗೆ ನೀಡಲು ಪ್ರಧಾನಿ ಮೋದಿಯವರು ನಿರಾಕರಿಸಿದ್ದರು. ಆದರೆ, ದೇಶವ್ಯಾಪ್ತಿ ಪ್ರಧಾನಿಗಳ ಆ ನಿಲುವು ವ್ಯಾಪಕ ಟೀಕೆ ಮತ್ತು ಹಲವು ಶಂಕೆಗಳಿಗೆ ಈಡಾಗಿತ್ತು.
ಆ ಹಿನ್ನೆಲೆಯಲ್ಲಿ ಕಳೆದ ವರ್ಷ ಕೋವಿಡ್ ಎರಡನೇ ಅಲೆಯ ಹೊತ್ತಿಗೆ ಸಾರ್ವಜನಿಕರ ಕಣ್ಣೊರೆಸುವ ಯತ್ನವಾಗಿ ಮೋದಿಯವರು ಪಿಎಂ ಕೇರ್ಸ್ ನಿಂದ ವೆಂಟಿಲೇಟರ್, ಆಕ್ಸಿಜನ್ ಪ್ಲಾಂಟ್, ಲಸಿಕೆ ತಯಾರಿಕೆ ಮುಂತಾದ ಜನರ ಜೀವ ರಕ್ಷಣೆಯ ಕೆಲಸಕಾರ್ಯ ಸಂಶೋಧನೆಗಳಿಗೆ ಅನುದಾನ ನೀಡುವುದಾಗಿ ಘೋಷಿಸಿದ್ದರು. 50 ಸಾವಿರ ವೆಂಟಿಲೇಟರ್ ಖರೀದಿ ಮತ್ತು ಲಾಕ್ ಡೌನ್ ನಿಂದಾಗಿ ಬೀದಿಪಾಲಾದ ವಲಸೆ ಕಾರ್ಮಿಕರ ಪರಿಹಾರಕ್ಕಾಗಿ ಪಿಎಂ ಕೇರ್ಸ್ ನಿಧಿಯಿಂದ 3,100 ಕೋಟಿ ರೂ. ಅನುದಾನ ನೀಡುವುದಾಗಿ 2020ರ ಮೇನಲ್ಲಿ ಮೋದಿಯವರ ಸರ್ಕಾರ ಘೋಷಿಸಿತ್ತು. ಆ 3100 ಕೋಟಿ ರೂ. ಪ್ಯಾಕೇಜಿನ ಭಾಗವಾಗಿಯೇ ದೇಶೀಯವಾಗಿ ಕೋವಿಡ್ ಲಸಿಕೆ ಸಂಶೋಧನೆ ಮತ್ತು ಉತ್ಪಾದನೆಗಾಗಿ 100 ಕೋಟಿ ರೂ. ಮೀಸಲಿಟ್ಟಿರುವುದಾಗಿಯೂ ಘೋಷಿಸಲಾಗಿತ್ತು.
ಅಂತಹ ಘೋಷಣೆಯ ಮೂಲಕ ಪಿಎಂ ಕೇರ್ಸ್ ನಿಧಿಯ ವಿಷಯದಲ್ಲಿ ಪ್ರಧಾನಿ ಮೋದಿ ಮತ್ತು ಅವರ ಬಿಜೆಪಿ ಸರ್ಕಾರ ದೇಶದ ಸಾರ್ವಜನಿಕರಿಂದ ಮುಚ್ಚಿಡುತ್ತಿರುವ ಮಾಹಿತಿಯ ಕುರಿತು ಎದ್ದ ಆಕ್ರೋಶವನ್ನು ತಣಿಸುವ ಯತ್ನ ಮಾಡಲಾಗಿತ್ತು. ಆದರೆ, 3100 ಕೋಟಿ ರೂಪಾಯಿ ಪ್ಯಾಕೇಜಿನ ಭಾಗವಾಗಿ ಅಷ್ಟು ಹಣದಲ್ಲಿ ಘೋಷಿಸಿದಂತೆ 50 ಸಾವಿರ ವೆಂಟಿಲೇಟರ್ ಖರೀದಿಸಲಾಯಿತೆ? ಎಷ್ಟು ಆಮ್ಲಜನಕ ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸಲಾಯಿತು? ಎಷ್ಟು ಕಾರ್ಮಿಕರಿಗೆ ಮತ್ತು ಎಷ್ಟು ಮೊತ್ತದ ನೆರವನ್ನು ಈವರೆಗೆ ಒದಗಿಸಲಾಗಿದೆ ಎಂಬ ವಿವರಗಳು ಸದ್ಯಕ್ಕೆ ಸಾರ್ವಜನಿಕವಾಗಿ ಲಭ್ಯವಿಲ್ಲ.
ಆದರೆ, ಲಸಿಕೆ ಸಂಶೋಧನೆ ಮತ್ತು ಉತ್ಪಾದನೆಗಾಗಿ ಪಿಎಂ ಕೇರ್ಸ್ ನಿಂದ ಎಷ್ಟು ನಿಧಿ ನೀಡಲಾಗಿದೆ ಮತ್ತು ಅದನ್ನು ಯಾವೆಲ್ಲಾ ಲಸಿಕೆ ತಯಾರಿಕಾ ಸಂಸ್ಥೆಗಳಿಗೆ ಹಂಚಲಾಗಿದೆ ಎಂಬ ವಿವರ ನೀಡುವಂತೆ ಕೋರಿ ಲೋಕೇಶ್ ಕೆ ಭಾತ್ರಾ ಎಂಬುವರು ಕೇಂದ್ರ ಬಯೋಟೆಕ್ನೋಲಜಿ ಇಲಾಖೆಗೆ ಸಲ್ಲಿಸಿದ್ದ ಆರ್ ಟಿಐಗೆ ಇಲಾಖೆ ನೀಡಿದ ಮಾಹಿತಿ ಲಸಿಕೆಯ ವಿಷಯದಲ್ಲಿ ಪಿಎಂ ಕೇರ್ಸ್ ನಿಧಿ ಹಂಚಿಕೆಯ ಘೋಷಣೆಯ ಅಸಲೀತನವನ್ನು ಬಯಲುಮಾಡಿದೆ.
ಮಾಹಿತಿ ಹಕ್ಕು ಕಾಯ್ದೆಯಡಿ ಅವರಿಗೆ ನೀಡಿರುವ ಮಾಹಿತಿಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್ (ಐಸಿಎಂಆರ್) ಮತ್ತು ಬಯೋಟೆಕ್ನಾಲಜಿ ಇಲಾಖೆಗಳು, ಪಿಎಂ ಕೇರ್ಸ್ ನಿಧಿಯಿಂದ ತಮಗೆ ಯಾವುದೇ ಬಿಡಿಗಾಸೂ ಬಂದಿಲ್ಲ ಎಂದು ಸ್ಪಷ್ಟಪಡಿಸಿವೆ. 2020ರ ಮೇನಲ್ಲಿ 100 ಕೋಟಿ ರೂಪಾಯಿ ಲಸಿಕೆ ಸಂಶೋಧನೆ ಮತ್ತು ಉತ್ಪಾದನೆಗಾಗಿ ಪಿಎಂ ಕೇರ್ಸ್ ನಿಧಿಯಿಂದ ನೀಡಲಾಗುವುದು ಎಂದು ಘೋಷಿಸಿ ಬರೋಬ್ಬರಿ ಒಂದೂ ಮುಕ್ಕಾಲು ವರ್ಷ ಕಳೆದರೂ ಈವರೆಗೂ ಬಿಡಿಗಾಸು ಕೂಡ ಸಂಬಂಧಪಟ್ಟ ಇಲಾಖೆ ಮತ್ತು ಸಂಸ್ಥೆಗಳಿಗೇ ಸೇರಿಲ್ಲ ಎಂಬುದು ಪಿಎಂ ಕೇರ್ಸ್ ವಿಷಯದಲ್ಲಿ ಪ್ರಧಾನಿ ಮೋದಿ ಮತ್ತು ಅವರ ಸರ್ಕಾರ ಹೇಳಿದ ಮಾತುಗಳು, ಮಾಡಿದ ಘೋಷಣೆಗಳು ಎಷ್ಟು ವಾಸ್ತವ ಎಂಬುದಕ್ಕೆ ಕನ್ನಡಿ ಹಿಡಿದಿದೆ.
ವಾಸ್ತವವಾಗಿ 2020ರ ಮೇನಲ್ಲಿ 100 ಕೋಟಿ ರೂಪಾಯಿ ಪಿಎಂ ಕೇರ್ಸ್ ನಿಂದ ಲಸಿಕೆ ಸಂಶೋಧನೆ ಮತ್ತು ಅಭಿವೃದ್ಧಿಗೆ ನೀಡುವುದಾಗಿ ಘೋಷಿಸಿದ್ದ ಮೋದಿಯವರ ಸರ್ಕಾರ, ಅದಾದ ಕೆಲವೇ ತಿಂಗಳಲ್ಲಿ ಅದೇ ಉದ್ದೇಶಕ್ಕೆ ಮಿಷನ್ ಕೋವಿಡ್ ಸುರಕ್ಷಾ ಪ್ಯಾಕೇಜ್ ಘೋಷಣೆ ಮಾಡಿ, ಅದರಡಿಯೂ ಬರೋಬ್ಬರಿ 900 ಕೋಟಿ ರೂಪಾಯಿ ನೀಡುವುದಾಗಿ ಹೇಳಿತ್ತು. ಅಂದರೆ, ಅಲ್ಲಿಗೆ ಬರೋಬ್ಬರಿ ಸಾವಿರ ಕೋಟಿ ರೂಪಾಯಿ ಬೃಹತ್ ಮೊತ್ತವನ್ನು ಲಸಿಕೆ ಸಂಶೋಧನೆ ಮತ್ತು ಉತ್ಪಾದನೆಯ ದೇಶೀಯ ಪ್ರಯತ್ನಗಳಿಗೇ ನೀಡುವುದಾಗಿ ಹೇಳಲಾಗಿತ್ತು. ಆದರೆ, 2020ರ ನವೆಂಬರ್ ನಲ್ಲಿ ಘೋಷಣೆಯಾದ ಆ ಮಿಷನ್ ಕೋವಿಡ್ ಸುರಕ್ಷಾ ಪ್ಯಾಕೇಜ್ ನ ಮೊದಲ ಹಂತದ ಅವಧಿ 12 ತಿಂಗಳುಗಳಾಗಿದ್ದರೂ ನಿಗದಿತ ಅವಧಿಯಲ್ಲಿ ಆ 900 ಕೋಟಿಯಲ್ಲೂ ಬಿಡಿಗಾಸು ಉತ್ಪಾದನಾ ಸಂಸ್ಥೆಗಳಿಗೆ ತಲುಪಿಲ್ಲ ಎಂಬುದೂ ಬಯಲಾಗಿದೆ(ದ ಪ್ರಿಂಟ್ ವರದಿ).
ಬರೋಬ್ಬರಿ 14 ತಿಂಗಳ ಬಳಿಕ ಆ ಪ್ಯಾಕೇಜ್ ನ 900 ಕೋಟಿ ರೂಪಾಯಿಗೆ ಬದಲಾಗಿ ಕೇವಲ 116 ಕೋಟಿ ರೂಪಾಯಿಗಳನ್ನು ಲಸಿಕೆ ಅಭಿವೃದ್ಧಿಗಾಗಿ ಐದು ಕಂಪನಿಗಳಿಗೆ ನೀಡಲಾಗಿದೆ. ಜೊತೆಗೆ ಫರೀದಾಬಾದ್ ಮೂಲದ ಟ್ರಾನ್ಸ್ ಲೇಷನಲ್ ಹೆಲ್ತ್ ಸೈನ್ಸ್ ಅಂಡ್ ಟೆಕ್ನಾಲಜಿ ಇನ್ ಸ್ಟಿಟ್ಯೂಟ್ ಗೆ ಲಸಿಕೆ ಸಂಶೋಧನೆಗಾಗಿ 78.96 ಕೋಟಿ ರೂಪಾಯಿ ನೀಡಲಾಗಿದೆ ಎಂದು ಬಯೋಟೆಕ್ನಾಲಜಿ ಇಲಾಖೆ ನೀಡಿರುವ ಮಾಹಿತಿಯಲ್ಲಿ ತಿಳಿಸಲಾಗಿದೆ. ಅಂದರೆ, ಕೇಂದ್ರ ಸರ್ಕಾರದ ಅನುದಾನದಲ್ಲಿ ಘೋಷಿಸಲಾಗಿದ್ದ ಕೋವಿಡ್ ಸುರಕ್ಷಾ ಪ್ಯಾಕೇಜಿನಡಿ 900 ಕೋಟಿ ರೂಪಾಯಿಗಳ ಪೈಕಿ ಕೇವಲ ಶೇ.15ರಷ್ಟು ಅನುದಾನ ಬರೋಬ್ಬರಿ ಒಂದೂವರೆ ವರ್ಷದ ಬಳಿಕ ಉದ್ದೇಶಿತ ಕಾರ್ಯದಲ್ಲಿ ನಿರತ ಸಂಸ್ಥೆಗಳಿಗೆ ತಲುಪಿದೆ. ಆದರೆ, ಪಿಎಂ ಕೇರ್ಸ್ ನಿಧಿಯಿಂದ ನೀಡುವುದಾಗಿ ಹೇಳಿದ್ದ 100 ಕೋಟಿ ಅನುದಾನದಲ್ಲಿ ನಯಾಪೈಸೆ ಕೂಡ ಈವರೆಗೆ ಯಾರಿಗೂ ತಲುಪಿಲ್ಲ!
ದೇಶದ ಜನರು ಮತ್ತು ಜನರ ತೆರಿಗೆ ಹಣದಲ್ಲಿ ಕಟ್ಟಿದ ಸಂಸ್ಥೆಗಳ ದೇಣಿಗೆಯಲ್ಲಿ ಹುಟ್ಟಿದ ಪಿಎಂ ಕೇರ್ಸ್ ನಿಧಿಯ ಹಣ ಕನಿಷ್ಠ ಲಸಿಕೆ ಸಂಶೋಧನೆ ಮತ್ತು ಅಭಿವೃದ್ಧಿಯಂತಹ ಜನರ ಜೀವ ಉಳಿಸುವ ಕಾರ್ಯಕ್ಕೂ ಬಳಕೆಯಾಗದು ಎಂದಾದರೆ, ಆ ನಿಧಿ ಯಾರ ನಿಧಿ ಮತ್ತು ಯಾರಿಗಾಗಿ ಇರುವ ನಿಧಿ ಎಂಬ ಪ್ರಶ್ನೆ ಏಳುವುದು ಸಹಜ. ಕಳೆದ ಎರಡು ವರ್ಷಗಳಿಂದ ಇಂತಹದ್ದೇ ಪ್ರಶ್ನೆಗಳನ್ನು ದೇಶದ ಜನತೆ ಕೇಳುತ್ತಿದ್ದರೂ ಉತ್ತರ ಕೊಡಬೇಕಾದವರು ಅದನ್ನು ಕೋವಿಡ್ ವಿರುದ್ಧ ಹೋರಾಟಕ್ಕೆ ಲಸಿಕೆ, ವೈದ್ಯಕೀಯ ಸೌಕರ್ಯಕ್ಕಾಗಿ ಬಳಸಲಾಗುವುದು ಎಂದು ಹೇಳಿ ತಿಪ್ಪೆ ಸಾರಿಸುತ್ತಿದ್ದರು. ಇದೀಗ ಲೋಕೇಶ್ ಭಾತ್ರಾ ಅವರ ಆರ್ ಟಿಐ ಅರ್ಜಿಗೆ ಸಂಬಂಧ ಪಟ್ಟ ಇಲಾಖೆಗಳು ನೀಡಿರುವ ಪ್ರತಿಕ್ರಿಯೆಯಲ್ಲಿ ಆ ತಿಪ್ಪೆಸಾರಿಸುವ ಕಾರ್ಯ ಅಧಿಕೃತವಾಗಿಯೇ ಬಯಲಾಗಿದೆ!
—
ಕೋವಿಡ್, ಕೋವಿಡ್ ಲಸಿಕೆ, ಪ್ರಧಾನಿ ಮೋದಿ, ಪಿಎಂ ಕೇರ್ಸ್ ನಿಧಿ, ಪಿಎಂಎನ್ ಆರ್ ಎಫ್, ಬಿಜೆಪಿ, ಐಸಿಎಂಆರ್,