ದೇಶಕ್ಕೆ ಸಂಕಷ್ಟ ಬಂದಿದೆ. ಕರೋನಾ ವೈರಸ್ ಎಲ್ಲೆ ಮೀರಿ ಹೋಗುತ್ತಲೇ ಇದೆ. ಸಾವಿನ ಸಂಖ್ಯೆಯಲ್ಲೂ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಆರ್ಥಿಕ ಸಂಪನ್ಮೂಲ ಕ್ರೂಢೀಕರಣಕ್ಕೆ ಹರಸಾಹಸ ಪಡುತ್ತಿವೆ. ಉಳ್ಳವರು ಉದಾರವಾಗಿ ನೆರವು ನೀಡಿ ಎಂದು ಗೋಗೊರೆಯುತ್ತಿದ್ದಾರೆ. PM-CARES, ಸಿಎಂ ರಿಲೀಫ್ ಫಂಡ್ ಎನ್ನುವ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹ ಮಾಡಲಾಗುತ್ತಿದೆ. ಎಷ್ಟಾದರೂ ಸರಿ ಸಹಾಯ ಮಾಡಿ ಎಂದು ಜನರಲ್ಲಿ ಬೇಡಿಕೊಳ್ಳುತ್ತಿದ್ದಾರೆ. ಸಿನಿಮಾ ನಟರು, ದೊಡ್ಡ ದೊಡ್ಡ ಕಂಪನಿ ಮಾಲೀಕರು ಉದಾರವಾಗಿ ನೆರವು ನೀಡುತ್ತಿದ್ದಾರೆ. ಕೋಟಿ ಕೋಟಿ ಲೆಕ್ಕದಲ್ಲಿ ಅದರಲ್ಲೂ ಟಾಟಾ ಗ್ರೂಪ್ ಆಫ್ ಇಂಡಸ್ಟ್ರೀಸ್ 1500 ಕೋಟಿ, ಅಜೀಂ ಪ್ರೇಮ್ ಜೀ ಫೌಂಡೇಷನ್ 1000 ಕೋಟಿ ಹಾಗೂ ರಿಲಯನ್ಸ್ ಸಮೂಹ ಸೇರಿದಂತೆ ಹಲವಾರು ಬಹುರಾಷ್ಟ್ರೀಯ ಕಂಪನಿಗಳು ಕರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ಸರ್ಕಾರದ ನೆರವಿಗೆ ನಿಂತಿದ್ದಾರೆ.
ಕೋವಿಡ್ – 19ಗಾಗಿ ವಿರುದ್ಧದ ಹೋರಾಟಕ್ಕಾಗಿ ಪ್ರಧಾನಿ ನರೇಂದ್ರ ಮೋದಿ PM CARES ಎಂಬ ಟ್ರಸ್ಟ್ ಸ್ಥಾಪನೆ ಮಾಡಿದ್ದರು. ಮಾರ್ಚ್ ನಿಂದ ಆರಂಭವಾದ PM-CARES ಟ್ರಸ್ಟ್ ಗೆ ಹಣ ಹೊಳೆಯಂತೆ ಹರಿದು ಬಂದಿತ್ತು. ಒಂದೇ ವಾರದಲ್ಲಿ 6500 ಕೋಟಿ ರೂಪಾಯಿ ನೆರವು ಹರಿದು ಬಂತು. ಈಗಾಗಲೇ ಚಾಲ್ತಿಯಲ್ಲಿದ್ದ ಪ್ರಧಾನ ಮಂತ್ರಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಗೆ 2 ವರ್ಷದಲ್ಲಿ ಬರುತ್ತಿದ್ದ ನೆರವಿನ ಮೂರು ಪಟ್ಟು ಹಣ ಒಂದೇ ವಾರದಲ್ಲಿ ಸಂಗ್ರಹವಾಯ್ತು. 2014-15ನೇ ಸಾಲಿನಲ್ಲಿ ʼಪ್ರಧಾನ ಮಂತ್ರಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿʼಗೆ 2119 ಕೋಟಿ ರೂಪಾಯಿ ನೆರವು ಹರಿದು ಬಂದಿತ್ತು. ಅದರ ಮೂರು ಪಟ್ಟ ಪರಿಹಾರ ಬಂದಿತ್ತು. PMNRF ನಿಧಿಗೆ ಕನಿಷ್ಠ 100 ರೂಪಾಯಿ ನೆರವು ನಿಗದಿ ಪಡಿಸಲಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ PM-CARES ಟ್ರಸ್ಟ್ ಗೆ ಕನಿಷ್ಠ 10 ರೂಪಾಯಿ ನೆರವನ್ನೂ ಪಡೆಯಲು ನಿರ್ಧಾರ ಮಾಡಿದ್ದರು. ಭಾರತೀಯ ಸೇನಾಪಡೆಯ ಮೂರು ವಿಭಾಗಗಳಿಂದ 500 ಕೋಟಿ ರೂಪಾಯಿ ನೆರವು ಕೊಡಲಾಗಿದೆ. ಆದರೆ ಉಳ್ಳವರು ಮಾತ್ರ ನೆರವು ನೀಡಲು ಮುಂದೆ ಬರುತ್ತಿಲ್ಲ.

PM CARES ವಿದೇಶಿ ನೆರವನ್ನೂ ಪಡೆಯಲು ಮುಂದಾಗಿದೆ. ಜೊತೆಗೆ ಕರೋನಾ ವಿರುದ್ಧ ಹೋರಾಟ ನಡೆಸುತ್ತಿರುವ ವೈದ್ಯರಿಂದಲೂ ನೆರವು ನೀಡಲು ಒತ್ತಡ ಹಾಕಲಾಗುತ್ತಿದೆ. ಆದರೆ ಆಡಳಿತ ಮಂಡಳಿಯ ಒತ್ತಡವನ್ನು ತಿರಸ್ಕಾರ ಮಾಡಿರುವ ದೆಹಲಿಯ ಬರೋಬ್ಬರಿ 6 ಸಾವಿರ ವೈದ್ಯರು ಪ್ರಧಾನಿ ನರೇಂದ್ರ ಮೋದಿ ಸ್ಥಾಪಿಸಸಿರುವ PM-CARES ಫಂಡ್ ಗೆ ಒಂದು ದಿನದ ವೇತನ ನೀಡಲು ನಿರಾಕರಣೆ ಮಾಡಿದ್ದಾರೆ. ಈ ಮೊದಲು ಒಂದು ದಿನದ ವೇತನವನ್ನು ಬಿಟ್ಟು ಕೊಡುವಂತೆ ಆಸ್ಪತ್ರೆ ಆಡಳಿತ ಮಂಡಳಿಗಳು ಮನವಿ ಮಾಡಿದ್ದವು. ದೆಹಲಿಯ ಏಮ್ಸ್, ರಾಮ್ ಮೋಹನ್ ಲೋಹಿಯಾ ಆಸ್ಪತ್ರೆ, ಅಟಲ್ ಬಿಹಾರಿ ವಾಜಪೇಯಿ ಇನ್ಸ್ಟಿಟ್ಯೂಟ್, ಲೇಡಿ ಹಾರ್ಡಿಂಗ್ ಮೆಡಿಕಲ್ ಕಾಲೇಜ್ ವೈದ್ಯರು ವೇತನ ಬಿಟ್ಟುಕೊಡಲು ನಿರಾಕರಿಸಿದ್ದಾರೆ. ವೈದ್ಯರೇ PM-CARES ಟ್ರಸ್ಟ್ ಗೆ ವೇತನವನ್ನು ಪರಿಹಾರ ನಿಧಿಗೆ ಕೊಡಲು ನಿರಾಕರಿಸಿದ ಮೇಲೆ ಆರೋಗ್ಯ ಸಿಬ್ಬಂದಿಗಳು ವೇತನ ಬಿಟ್ಟುಕೊಡಲಾರರು.
ವೈದ್ಯರು, ಆರೋಗ್ಯ ಸಿಬ್ಬಂದಿ, ಪೊಲೀಸರು, ಪೌರ ಕಾರ್ಮಿಕರು ಕರೋನಾ ಫೈಟರ್ಸ್ ಎಂದು ಸರ್ಕಾರವೇ ಘೋಷಣೆ ಮಾಡಿದೆ. ಆದರೂ ವೇತನವನ್ನು ಪರಿಹಾರ ನಿಧಿಗೆ ಬಿಟ್ಟುಕೊಡಿ ಎನ್ನುವ ಒತ್ತಾಯ ಮಾಡುತ್ತಿದೆ. ಆದರೆ ನಮ್ಮ ಜನಪ್ರತಿನಿಧಿಗಳು ಮಾತ್ರ ಇನ್ನೂ ಕೂಡ ವೇತನ ಬಿಟ್ಟುಕೊಡಲು ಮೀನಾಮೇಷ ಎಣಿಸುತ್ತಿದ್ದಾರೆ. ನಮ್ಮ ರಾಜ್ಯದಲ್ಲೂ ಶಾಸಕರ ಶೇಕಡ 30 ರಷ್ಟು ಹಣವನ್ನು ಪರಿಹಾರ ನಿಧಿಗೆ ಬಳಸಲು ಸರ್ಕಾರವೇ ನಿರ್ಧಾರ ಮಾಡಿದೆ. ನಮ್ಮ ರಾಜ್ಯದ 224 ಶಾಸಕರು 28 ಸಂಸದರು ತಲಾ 1 ಕೋಟಿ ರೂಪಾಯಿ ನೆರವು ನೀಡಿದರೂ 250 ಕೋಟಿ ರೂಪಾಯಿ ಪರಿಹಾರ ಸಿಗುತ್ತದೆ. ಅದರಂತೆ ಎಲ್ಲಾ ಸಂಸದರು PM CARES ಗೆ ತಲಾ 1 ಕೋಟಿ ಪರಿಹಾರ ಕೊಟ್ಟರೂ 543 ಕೋಟಿ, ರಾಜ್ಯಸಭಾ ಸದಸ್ಯರಿಂದ 245 ಕೋಟಿ ರೂಪಾಯಿ ನೆರವು ನೀಡಬಹುದು. ಯಾಕೆ ಈ ಬಗ್ಗೆ ಯಾವುದೇ ಜನಪ್ರತಿನಿಧಿಗಳು ಮನಸ್ಸು ಮಾಡುತ್ತಿಲ್ಲ..? ಚುನಾವಣೆ ವೇಳೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡುವ ನಮ್ಮ ಜನ ಪ್ರತಿನಿಧಿಗಳು ಸಿಎಂ ಪರಿಹಾರ ನಿಧಿಗೆ ಒಂದು ಕೋಟಿ ಹಣವನ್ನು ಕೊಡಲಾರದಷ್ಟು ಬಡವರೇ..? ಎನ್ನುವ ಪ್ರಶ್ನೆ ಉದ್ಭವ ಆಗುತ್ತಿದೆ. ಇವರ ಮಾತು ಮಾತ್ರ ಜನಸೇವೆ. ಕಷ್ಟ ಎದುರಾದ ಸಂದರ್ಭದಲ್ಲಿ ನೆರವಿಗೆ ನಿಲ್ಲಲು ಒಳ್ಳೆ ಮನಸ್ಸಿರಬೇಕು. ಆದರೆ ಆ ಒಳ್ಳೆ ಮನಸ್ಸು ಇವರಿಗೆ ಇದ್ದಂತಿಲ್ಲ.