ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ಬದಲಾಗಿ ಕಳೆದ ವಾರಾಂತ್ಯಕ್ಕೆ PM-CARES ಅನ್ನೋ ಹೊಸ ಖಾತೆ ಆರಂಭಿಸಿರುವ ಕಾರಣಕ್ಕೆ ನರೇಂದ್ರ ಮೋದಿ ಸರಕಾರವನ್ನ ಸಾಮಾಜಿಕ ಕಾರ್ಯಕರ್ತರು, ವಿಪಕ್ಷ ನಾಯಕರು ಜಾಲತಾಣಗಳಲ್ಲಿ ತೀವ್ರ ತರಾಟೆಗೆ ತೆದುಕೊಳ್ಳುತ್ತಿದ್ದಾರೆ. ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ (PMNRF) ಇರಬೇಕಾದರೆ ಅದರ ಬದಲು PM-CARES ಅನ್ನೋ ಹೊಸ ಖಾತೆ ಬಗ್ಗೆ ಬಹುತೇಕ ರಾಜ್ಯಗಳಲ್ಲಿ ಅಪಸ್ವರ ಎದ್ದಿವೆ. ಹಾಗಂತ PM-CARES ಗೆ ದೇಣಿಗೆ ನೀಡುವವರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಈಗಾಗಲೇ ಅದೇ ಖಾತೆಗೆ ನಟ ಅಕ್ಷಯ್ ಕುಮಾರ್, ರತನ್ ಟಾಟಾ, ಟಾಟಾ ಗ್ರೂಪ್, ಬಿಸಿಸಿಐ ಇನ್ನೂ ಹಲವು ಸಂಸ್ಥೆಗಳು ಹಾಗೂ ಸೆಲೆಬ್ರಿಟಿಗಳು, ಸಾರ್ವಜನಿಕರು ಖಜಾನೆ ತುಂಬುವ ಕೆಲಸ ಮಾಡಿದ್ದಾರೆ. ಆದರೆ ಇದೆಲ್ಲಕ್ಕೂ ಭಿನ್ನವಾಗಿ ಕರ್ನಾಟಕದಲ್ಲಿ ಈ PM-CARES ಪರಿಹಾರ ನಿಧಿ ಬಗ್ಗೆ ಅಪಸ್ವರ ತೀವ್ರವಾಗಿ ಕೇಳಿಬಂದಿದೆ. ಕಾರಣ, ಕಳೆದ ಒಂದು ವರುಷದಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಕರ್ನಾಟಕದ ಬಗ್ಗೆ ಹೊಂದಿರುವ ಮಲತಾಯಿ ಧೋರಣೆಯ ವಿರುದ್ಧವಾಗಿ.
ನೀವು ಯಾರಾದ್ರೂ ಕೋವಿಡ್-19 ವಿರುದ್ಧದ ಹೋರಾಟಕ್ಕೆ ಕೈ ಜೋಡಿಸುವಿರಾದರೆ ನೀವು ಸಿಎಂ ಪರಿಹಾರ ನಿಧಿಗೆ ಪರಿಹಾರ ಧನ ನೀಡಿ, ಬದಲಾಗಿ PM-CARES ಗೆ ನೀಡಬೇಡಿ ಅಂತಾ ಟ್ವಿಟ್ಟರ್ ನಲ್ಲಿ ಒಂದಿಷ್ಟು ಜನ ಅಪಸ್ವರ ಎತ್ತಿದ್ದಾರೆ. ಅದಕ್ಕೊಂದು ಕಾರಣನೂ ಇದೆ, ಕಳೆದ ಬಾರಿ ರಾಜ್ಯದಲ್ಲಿ ಕಾಣಿಸಿಕೊಂಡಿದ್ದ ಭಾರೀ ಪ್ರವಾಹ ಸಂದರ್ಭ ಕೇಂದ್ರ ಸಚಿವರಾದ ನಿರ್ಮಲಾ ಸೀತರಾಮನ್ ಹಾಗೂ ಅಮಿತ್ ಶಾ ವೈಮಾನಿಕ ಸಮೀಕ್ಷೆ ನಡೆಸಿ ತೆರಳಿದ್ದರು. ವಿಪಕ್ಷಗಳು ಸರಿಸುಮಾರು 45 ಸಾವಿರ ಕೋಟಿ ನಷ್ಟವಾಗಿದೆ ಅಂತಾ ಹೇಳಿದ್ದರೂ, ಬಿಜೆಪಿ ಸರಕಾರ ಕೇಂದ್ರಕ್ಕೆ ಸಲ್ಲಿಸಿದ ವರದಿಯಲ್ಲಿ ರಾಜ್ಯದಲ್ಲಿ ಭೀಕರ ನೆರೆಯಿಂದಾಗಿ 38 ಸಾವಿರ ಕೋಟಿ ರೂಪಾಯಿ ನಷ್ಟವಾಗಿರುವುದಾಗಿ ತಿಳಿಸಿತ್ತು. ಆದರೆ ಕೇಂದ್ರ ಸರಕಾರ ಈ ವರದಿಯನ್ನ ಅಕ್ಟೋಬರ್ ತಿಂಗಳವರಗೆ ಬದಿಗಿರಿಸಿ ಪ್ರವಾಹ ಬಂದು ಹೋದ ತಿಂಗಳ ಬಳಿಕ ಮೊದಲ ಕಂತಿನ 1200 ಕೋಟಿ ರೂಪಾಯಿ ಪರಿಹಾರ ಮೊತ್ತ ಬಿಡುಗಡೆ ಗೊಳಿಸಿತ್ತು.
ಇದಾಗಿ ಮತ್ತೆ ಮೂರು ತಿಂಗಳು ಬಿಟ್ಟು ಮತ್ತೆ ಎರಡನೇ ಕಂತಿನ ಹಣ 669 ಕೋಟಿ ಬಿಡುಗಡೆ ಮಾಡಿತ್ತು. ಇಂಟೆರೆಸ್ಟಿಂಗ್ ಅಂದ್ರೆ ಜನವರಿ 2 ರಂದು ತುಮಕೂರು ಪ್ರವಾಸ ಕೈಗೊಂಡಿದ್ದ ಪ್ರಧಾನಿ ಮೋದಿ, ಆ ಸಂದರ್ಭದಲ್ಲಿ ಭಾಗವಹಿಸಿದ್ದ ಕೃಷಿ ಸಮ್ಮಾನ್ ಕಾರ್ಯಕ್ರಮದಲ್ಲಿ ಸಿಎಂ ಬಿಎಸ್‌ವೈ ಮೋದಿ ಮುಂದೆಯೇ ನೆರೆ ಪರಿಹಾರ ವಿಳಂಬ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಇದಾದ ನಾಲ್ಕೇ ದಿನಕ್ಕೆ ಎರಡನೇ ಹಂತದ ಪರಿಹಾರ ಹಣ ಬಿಡುಗಡೆಯಾಗಿತ್ತು. ಹಾಗೆ ಬಂದ 669 ಕೋಟಿ ಸೇರಿ ಒಟ್ಟು ರಾಜ್ಯಕ್ಕೆ ನೆರೆ ಪರಿಹಾರ ರೂಪದಲ್ಲಿ 1869 ಕೋಟಿಗಳು ಬಂದಿದ್ದವು. ಆದರೆ ಕರ್ನಾಟಕದಲ್ಲಾದ ಅನಾಹುತಕ್ಕೆ ಕೇಂದ್ರ ಸರಕಾರ ಬಿಡುಗಡೆಗೊಳಿಸಿದ ಪರಿಹಾರ ಮೊತ್ತ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಅನ್ನೋ ಹಾಗಾಗಿದೆ..
ಇನ್ನು ಕಳೆದ ವಾರವಷ್ಟೇ 8 ರಾಜ್ಯಗಳಿಗೆ 5751 ಕೋಟಿ ರೂಪಾಯಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಡುಗಡೆ ಮಾಡುವ ಹೊತ್ತಿಗೆ ರಾಜ್ಯಕ್ಕೆ 2018-19 ರ ಆರ್ಥಿಕ ವರ್ಷದ ಬರ ಪರಿಹಾರವಾಗಿ 11.48 ಕೋಟಿ ರೂಪಾಯಿ ಪರಿಹಾರ ಮೊತ್ತ ಬಿಡುಗಡೆ ಮಾಡಲಾಗಿದೆ. ಆದರೆ ಕೇಂದ್ರ ಸರಕಾರದಿಂದ ಬರಬೇಕಾದ ಸಾವಿರಾರು ಕೋಟಿ ರೂಪಾಯಿ ಜಿಎಸ್‌ಟಿ ಹಣ ಮಾತ್ರ ಇನ್ನೂ ರಾಜ್ಯದ ಕೈ ಸೇರಿಲ್ಲ. ಕೇಂದ್ರ ಸರಕಾರಕ್ಕೆ ಜಿಎಸ್‌ಟಿ ಹಣ ಪೂರೈಸುವಲ್ಲಿ ಕರ್ನಾಟಕದ್ದು ಎರಡನೇ ಸ್ಥಾನ. ಮಹಾರಾಷ್ಟ್ರದ ಬಳಿಕ ಅತೀ ಹೆಚ್ಚು ಜಿಎಸ್ಟಿ ಕರ್ನಾಟಕದಿಂದ ಕೇಂದ್ರಕ್ಕೆ ಸಲ್ಲಿಕೆಯಾಗುತ್ತಿದೆ. ಆದರೆ ಕೇಂದ್ರದಿಂದ ಸಿಗಬೇಕಾದರ ಜಿಎಸ್‌ಟಿ ಪಾಲು ಮಾತ್ರ ಸರಿಯಾದ ಸಮಯಕ್ಕೆ ರಾಜ್ಯ ಸರಕಾರದ ಕೈ ಸೇರುತ್ತಿಲ್ಲ. ಅತ್ತ ನೆರೆ ಪರಿಹಾರದಲ್ಲೂ ರಾಜ್ಯಕ್ಕೆ ಅನ್ಯಾಯ, ಇತ್ತ ಜಿಎಸ್ಟಿ ಲಾಭಾಂಶ ಪಾವತಿಯಲ್ಲೂ ಅಷ್ಟೇ ಅನ್ಯಾಯವಾಗುತ್ತಿದೆ. ಇಂತಹ ಸಂಕಷ್ಟ ಸ್ಥಿತಿಯಲ್ಲಿ ಸರಕಾರ ನಡೆಸುತ್ತಿರುವ ಯಡಿಯೂರಪ್ಪನವರು ಬಹಿರಂಗವಾಗಿಯೇ ಅವಕಾಶ ಸಿಕ್ಕಾಗಲೆಲ್ಲ ಕೇಂದ್ರದ ವಿರುದ್ಧ ತಿರುಗಿ ಬಿದ್ದಿದಾರೆ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಬಹಳ ದೊಡ್ಡ ಪ್ರಮಾಣದ ಹಣ ಬಂದಿಲ್ಲ ಅಂತಾ ಯಡಿಯೂರಪ್ಪನವರೇ ವಿಧಾನಸಭೆಯಲ್ಲೂ ಇತ್ತೀಚೆಗೆ ಒಪ್ಪಿಕೊಂಡಿದ್ದರು.
ಇದೀಗ ಬಿಎಸ್ ವೈ ನೇತೃತ್ವದ ಸರಕಾರವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದ್ದು ಕರೋನಾ ವೈರಸ್. ಮೊದಲೇ ಹಣಕಾಸು ಮುಗ್ಗಟ್ಟು, ಕೇಂದ್ರದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಬಿಎಸ್‌ವೈ ನೇತೃತ್ವದ ಸರಕಾರಕ್ಕೆ ಸಂದಿಗ್ಧ ಪರಿಸ್ಥಿತಿ. ಆದರೂ ತಮ್ಮಿಂದಾದಷ್ಟರ ಮಟ್ಟಿಗೆ ಕರೋನಾ ವಿರುದ್ಧದ ಹೋರಾಟಕ್ಕೆ ರಾಜ್ಯ ಸರಕಾರ ಪ್ರಯತ್ನ ಪಡುತ್ತಿದೆ. ಅಂತೆಯೇ ಇನ್ಫೋಸಿಸ್ ಫೌಂಡೇಶನ್ ಸಂಸ್ಥಾಪಕಿ ಸುಧಾ ಮೂರ್ತಿ ಸೇರಿದಂತೆ ನೂರಾರು ಮಂದಿ ರಾಜ್ಯ ಸರಕಾರದ ಜೊತೆ ಕೈ ಜೋಡಿಸಿದ್ದಾರೆ. ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡುತ್ತಿದ್ದಾರೆ. ಆದರೆ ಇದು ಕೇವಲ ರಾಜ್ಯದ ಸಮಸ್ಯೆಯಾಗದೆ ರಾಷ್ಟ್ರವ್ಯಾಪಿ ಹರಡಿರುವ ಸಮಸ್ಯೆಯಾಗಿರುವುದರಿಂದ ಪ್ರಧಾನ ಮಂತ್ರಿ ಅವರು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ಬದಲಾಗಿ PM-CARES ಅನ್ನೋ ಪರಿಹಾರ ನಿಧಿ ಖಾತೆಯನ್ನು ಆರಂಭಿಸಿದ್ದಾರೆ. ಒಂದು ಕಡೆ ಇದರ ಪಾರದರ್ಶಕತೆ ಬಗ್ಗೆ ವಿಪಕ್ಷ ನಾಯಕರು ಪ್ರಶ್ನೆ ಎತ್ತಿದ್ದರೆ, ಇನ್ನೊಂದೆಡೆ ರಾಜ್ಯದ ಮಂದಿ PM-CARES ಗೆ ಹಣ ನೀಡಿದ್ದಲ್ಲಿ ರಾಜ್ಯಕ್ಕೆ ಮೋಸವಾಗುತ್ತೆ ಅಂತಾ ಟ್ವೀಟಿಗರು ಹಾಗೂ ಫೇಸ್‌ಬುಕ್ ಬಳಕೆದಾರರು ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ ಕರ್ನಾಟಕ ರಾಜ್ಯ ಸರಕಾರದ ಸಿಎಂ ರಿಲೀಫ್ ಫಂಡ್‌ಗೆ ಹಣ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಮೂಲಕನಾದರೂ ರಾಜ್ಯಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳಿ ಎಂದಿದ್ದಾರೆ.
“ ಸ್ಮಶಾನಕ್ಕೆ ಹೋದ ಹೆಣ..,ದಿಲ್ಲಿಗೆ ಹೋದ ಹಣ..” ಯಾವತ್ತೂ ರಾಜ್ಯಕ್ಕೆ ಹಿಂದಿರುಗಿ ಬರಲ್ಲ ಅಂತ ಫೇಸ್‌ಬುಕ್ ಬಳಕೆದಾರರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ನಾವೆಲ್ಲರೂ ಕೈ ಜೋಡಿಸುವುದಿದ್ದರೆ ರಾಜ್ಯ ಸರಕಾರದ ಜೊತೆಗೆ ಕೈ ಜೋಡಿಸೋಣ, ನಮ್ಮ ಜನರಿಗೆ ಆಗಿರುವ ಸಮಸ್ಯೆಗೆ ಯಾರೂ ಸ್ಪಂದಿಸಲ್ಲ, ಅದಕ್ಕಾಗಿ ನಾವೇ ಸರಕಾರದ ಜೊತೆ ಕೈ ಜೋಡಿಸೋಣ ಅಂತಾನೂ ಫೇಸ್‌ಬುಕ್‌ನಲ್ಲಿ ಒಕ್ಕಣೆ ಬರೆಯಲಾಗಿದೆ. ಜಿಎಸ್‌ಟಿ, ನೆರೆ ಪರಿಹಾರ ಹಾಗೂ ಇನ್ನಿತರ ಕೇಂದ್ರ ಯೋಜನೆಗಳಿಂದ ರಾಜ್ಯಕ್ಕೆ ಹಣ ಬಂದಿಲ್ಲ ಅನ್ನೋ ಅಸಮಾಧಾನ ರಾಜ್ಯದ ಪ್ರಜ್ಞಾವಂತರಲ್ಲೂ ಇದೆ. ಆ ಕಾರಣಕ್ಕಾಗಿಯೇ ಮೋದಿ ಮೇಲಿನ ಭರವಸೆಗಿಂತಲೂ ರಾಜ್ಯದ ಜನತೆ ಇತ್ತೀಚಿನ ದಿನಗಳಲ್ಲಿ ಬಿಎಸ್‌ವೈ ಮೇಲೆ ಹೆಚ್ಚಿನ ಭರವಸೆ ಇರಿಸಿದ್ದಾರೆ. ಆ ಕಾರಣಕ್ಕಾಗಿಯೇ PM-CARES ಬದಲಾಗಿ ಸಿಎಂ ಪರಿಹಾರ ನಿಧಿಗೆ ಸಹಾಯ ಮಾಡುವಂತೆ ಜಾಲತಾಣಗಳಲ್ಲೂ ಒಂದು ರೀತಿಯ ಅಭಿಯಾನವೇ ಶುರುವಿಟ್ಟಿದ್ದಾರೆ.
ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅದ್ಯಾವ ಉದ್ದೇಶದಿಂದ PM-CARES ಆರಂಭಿಸಿದರೋ ಗೊತ್ತಿಲ್ಲ. ಆದರೆ ರಾಜ್ಯದ ಜನತೆ ಮಾತ್ರ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣ ನೀಡಲು ಮುಂದಾಗಿದ್ದಾರೆ. ಅಲ್ಲದೇ ಅದಕ್ಕೆ ಬೇಕಾಗಿ ಪ್ರೋತ್ಸಾಹ ನೀಡುವಲ್ಲಿ ನಿರತರಾಗಿದ್ದಾರೆ. ಹೀಗಾದ್ದಲ್ಲಿ ಆರ್ಥಿಕ ಸಂಕಷ್ಟದ ಈ ಪರಿಸ್ಥಿತಿಯಲ್ಲಿ ರಾಜ್ಯ ಸರಕಾರಕ್ಕೆ ರಾಜ್ಯದ ಜನತೆಯ ಸಹಕಾರ ಒಂದಿಷ್ಟು ಬಲ ತಂದೀತು ಅನ್ನೋದರಲ್ಲಿ ಸಂಶಯವಿಲ್ಲ.