PM-CARES ನಿಧಿಯ ಬಗ್ಗೆ ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿರುವ ಕುರಿತು ಕರ್ನಾಟಕದ ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಕಾಂಗ್ರೆಸ್ ಅಧ್ಯಕ್ಷರಲ್ಲದೆ, ಇತರ ಕೆಲವು ಕಾಂಗ್ರೆಸ್ ನಾಯಕರ ವಿರುದ್ಧವೂ ಎಫ್ಐಆರ್ ದಾಖಲಿಸಲಾಗಿದೆ.
ವಕೀಲರಾದ ಕೆ.ವಿ.ಪ್ರವೀಣ್ ಕುಮಾರ್ ಅವರು ಮೇ 11 ರಂದು ಕಾಂಗ್ರೆಸ್ ತನ್ನ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ PM-CARES ಫಂಡ್ ಗೆ ಸಂಬಂಧಿಸಿದ ಸುಳ್ಳು ಮತ್ತು ಆಧಾರ ರಹಿತ ಮಾಹಿತಿಯನ್ನು ಪೋಸ್ಟ್ ಮಾಡಿದೆ ಎಂದು ಸೋನಿಯಾ ಗಾಂಧಿ ಮತ್ತು ಇತರ ಕಾಂಗ್ರೆಸ್ ಮುಖಂಡರ ವಿರುದ್ಧ ಆರೋಪಿಸಿ ದೂರು ದಾಖಲಿಸಿದ್ದು, ಅದರ ನಂತರ ಎಫ್ಐಆರ್ ದಾಖಲಾಗಿದೆ.
ಟ್ವಿಟರ್ ಹ್ಯಾಂಡಲ್ ಅನ್ನು ರಾಷ್ಟ್ರ ರಾಜಧಾನಿಯಿಂದ ನಿರ್ವಹಿಸಲಾಗುತ್ತಿದ್ದು, ಸೋನಿಯಾ ಗಾಂಧಿ ಅವರು ಪ್ರಧಾನಿ ವಿರುದ್ಧ ಟ್ವೀಟ್ ಗಳನ್ನು ಹಾಕಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಆದ್ಯಕ್ಷೆ ಹಾಗೂ ಇತರೆ ನೇತಾರರ ಮೇಲೆ ಸೆಕ್ಷನ್ 153 ಹಾಗೂ ಸೆಕ್ಷನ್ 505 ಅಡಿಯಲ್ಲಿ ಶಿವಮೊಗ್ಗ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.
ನೈಸರ್ಗಿಕ ವಿಕೋಪಗಳಿಗೆ ಪರಿಹಾರ ನೀಡಲು PMNRF ಎಂಬ ನಿಧಿಯೊಂದನ್ನು ಜವಹರಲಾಲ್ ನೆಹರೂ ಪ್ರಧಾನಿಯಾಗಿದ್ದ ಕಾಲದಲ್ಲೇ ಪ್ರಾರಂಭಿಸಲಾಗಿತ್ತು. ಆ ನಿಧಿಯಲ್ಲಿ ಸುಮಾರು 2 ಸಾವಿರ ಕೋಟಿಗೂ ಅಧಿಕ ದೇಣಿಗೆ ಹಣ ಇದ್ದಾಗಿಯೂ ಪ್ರಧಾನಿ ಮೋದಿ ಹೊಸದಾಗಿ PM-CARES ನಿಧಿ ಸ್ಥಾಪಿಸಿದ್ದರು. ಹೊಸದಾಗಿ ನಿಧಿ ಶುರು ಮಾಡಿದ ಕುರಿತು ಹಾಗೂ ನಿಧಿಯ ಪಾರದರ್ಶಕತೆಯ ಬಗ್ಗೆ ವಿವಾದವೆದ್ದಿದ್ದು, ಸಾಮಾಜಿಕ ಕಾರ್ಯಕರ್ತರು, ವಿಪಕ್ಷ ನಾಯಕರು ತಮ್ಮ ಅಸಮಧಾನ ವ್ಯಕ್ತಪಡಿಸಿದ್ದರು.