ಇಂದು ಬೆಳಗ್ಗೆ 11.45ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದ್ದು, ಪೊಲೀಸರು ಬಂದೋಬಸ್ತ್ ಮಾಡಿಕೊಂಡಿದ್ದಾರೆ. ರಾಜಭವನದಲ್ಲಿ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ನೂತನ ಸಚಿವರ ಕುಟುಂಬಸ್ಥರರು, ಸಂಬಂಧಿಕರು, ಕಾರ್ಯಕರ್ತರ ದಂಡು ಆಗಮಿಸುವ ಹಿನ್ನೆಲೆಯಲ್ಲಿ ರಾಜಭವನದ ಸುತ್ತಮುತ್ತ ಮಾರ್ಗ ಬದಲಾವಣೆಗೆ ಪೊಲೀಸ್ರು ತಯಾರಿ ಮಾಡಿಕೊಂಡಿದ್ದಾರೆ.

ವಾಹನಗಳ ಸಂಚಾರದಲ್ಲಿದಲ್ಲಿ ಭಾರೀ ಬದಲಾವಣೆ ಮಾಡಿದ್ದು, ಕೆ.ಅರ್ ಸರ್ಕಲ್‌ನಿಂದ ಗೋಪಾಲ ಗೌಡ ವೃತ್ತದವರೆಗೆ ವಾಹನಗಳ ಸಂಚಾರ ನಿರ್ಬಂಧ ಮಾಡಲಾಗಿದೆ. ವಾಹನ ಸವಾರರು ನೃಪತುಂಗ ರಸ್ತೆ ಹಾಗೂ ಕಬ್ಬನ್ ಪಾರ್ಕ್ ಒಳಭಾಗದ ರಸ್ತೆಯಲ್ಲಿ ಸಂಚರಿಸಲು ಅವಕಾಶ ನೀಡಲಾಗಿದೆ. ಕ್ವೀನ್ಸ್ ರಸ್ತೆಯಿಂದ ಬರುವ ವಾಹನಗಳು ಪೊಲೀಸ್ ತಿಮ್ಮಯ್ಯ ವೃತ್ತದ ಕಡೆಗೆ ತೆರಳುವುದನ್ನು ನಿರ್ಬಂಧಿಸಲಾಗಿದೆ. ಪೊಲೀಸ್ ತಿಮ್ಮಯ್ಯ ಸರ್ಕಲ್‌ನಿಂದ ರಾಜಭವನದ ರಸ್ತೆ ಹಾಗೂ ಬಸವೇಶ್ವರ ವೃತ್ತದವರೆಗೆ ವಾಹನ ಸಂಚಾರ ಮಾಡುವುದನ್ನು ನಿರ್ಬಂಧಿಸಲಾಗಿದೆ.
ಶಿವಾಜಿನಗರದಿಂದ ಪೊಲೀಸ್ ತಿಮ್ಮಯ್ಯ ಕಡೆಗೆ ಸಂಚಾರ ಬಸ್‌ಗಳನ್ನು ಕ್ವೀನ್ಸ್ ಸರ್ಕಲ್ ಮತ್ತು ಸಿದ್ದಲಿಂಗಯ್ಯ ವೃತ್ತದ ಕಡೆಗೆ ಡೈವರ್ಟ್ ಮಾಡಲಾಗಿದೆ. ಬಸ್‌ಗಳು ಮತ್ತು ಗೂಡ್ಸ್ ವಾಹನಗಳು ಓಲ್ಡ್ ಹೈಗೌಂಡ್ ಜಂಕ್ಷನ್‌ನಿಂದ ಕಾಫಿ ಬೋರ್ಡ್ ಕಡೆಗೆ ಹೋಗುವುದನ್ನು ನಿರ್ಬಂಧ ಮಾಡಲಾಗಿದೆ. ಪಾಸ್ ಹೊಂದಿದ ವಾಹನಗಳು ರಾಜಭವನದ ಗೇಟ್ ಬಳಿ ಬಂದು ಗಣ್ಯರನ್ನು ಇಳಿಸಿದ ಬಳಿಕ ಎಲ್‌ಹೆಚ್ ಗೇಟ್ ಮೂಲಕ ತೆರಳಿ ಪಾರ್ಕಿಂಗ್ ಲಾಟ್‌ನಲ್ಲಿ ವಾಹನವನ್ನು ನಿಲ್ಲಿಸಿಕೊಳ್ಳಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮಾಣ ವಚನ ಕಾರ್ಯಕ್ರಮಕ್ಕೆ ಬರುವ ಆಹ್ವಾನಿತ ಗಣ್ಯರಿಗೆ ವಿಧಾನಸೌಧದ ಸಿಮೆಂಟ್ ಪಾರ್ಕಿಂಗ್, ನೆಹರು ತಾರಾಲಯ, ಎಂ.ಎಸ್. ಬಿಲ್ಡಿಂಗ್ ಒಳ ಭಾಗದಲ್ಲಿ ವಾಹನ ನಿಲುಗಡೆಗೆ ಅವಕಾಶ ಕೊಡಲಾಗಿದೆ. ಗಣ್ಯ ವ್ಯಕ್ತಿಗಳ ವಾಹನಗಳನ್ನು ವಿಧಾನಸೌಧದ ಪಶ್ಚಿಮ ದ್ವಾರ, ಉತ್ತರ ದ್ವಾರದ ಮುಂದಿನ ರಸ್ತೆಯಲ್ಲಿ, ವಿಕಾಸ ಸೌಧದ ಸೆಲ್ಲಾರ್ ಪಾರ್ಕಿಂಗ್ ಮತ್ತು ಶಾಸಕರ ಭವನದ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡಲಾಗಿದೆ.

ಪ್ರಮುಖ ರಸ್ತೆಗಳಾದ ರಾಜಭವನ ರಸ್ತೆ, ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ, ಕ್ವೀನ್ಸ್ ರಸ್ತೆ, ಇನ್‌ಫೆಂಟ್ರಿ ರಸ್ತೆ, ಸ್ಯಾಂಕಿ ರಸ್ತೆ, ಪ್ಯಾಲೇಸ್ ರಸ್ತೆ, ಕಬ್ಬನ್ ರಸ್ತೆಯಲ್ಲಿ ಶನಿವಾರ ಒಂದು ದಿನ ಪಾರ್ಕಿಂಗ್ ಸೌಲಭ್ಯವನ್ನು ರದ್ದು ಮಾಡಲಾಗಿದೆ. ಬೆಳಗ್ಗೆಯಿಂದಲೇ ಮಾರ್ಗ ಬದಲಾವಣೆ ಮಾಡಲಿದ್ದು, ವಾಹನ ಸವಾರರು ಈ ರಸ್ತೆಗಳನ್ನು ಬಳಸದೆ ಇದ್ದರೆ ಉತ್ತಮ. ಇಲ್ಲದಿದ್ದರೆ ಟ್ರಾಫಿಕ್‌ನಲ್ಲಿ ಸಿಲುಕಿ ಜಂಜಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಲಿದೆ. ರಾಜಭವನ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಭದ್ರತೆಗಾಗಿ ಒಂದು ಸಾವಿರ ಪೊಲೀಸರ ನಿಯೋಜನೆ ಮಾಡಲಾಗ್ತಿದೆ. ಇಬ್ಬರು ಡಿಸಿಪಿ, ನಾಲ್ವರು ಎಸಿಪಿ, 10 ಇನ್ಸ್‌ಪೆಕ್ಟರ್ ಸೇರಿದಂತೆ ಸಾವಿರ ಪೊಲೀಸರ ನಿಯೋಜನೆ ಆಗಿದ್ದಾರೆ. ಮಫ್ತಿಯಲ್ಲಿ ಸುಮಾರು 50ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, KSRP, CAR ತುಕಡಿಗಳನ್ನೂ ಬಳಸಿಕೊಳ್ಳಲಾಗ್ತಿದೆ. ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ ಗೌಡ ಭದ್ರತೆ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಕೃಷ್ಣಮಣಿ