ಕೆಲವು ಜಾತಿಯ ಏಷ್ಯನ್ ಆನೆಗಳಿಗೆ ನಾಚಿಕೆ ಸ್ವಭಾವವಿದ್ದು ತಾವು ತಿನ್ನುವಾಗ ಯಾರೂ ನೋಡಬಾರದೆಂದು ಬಯಸುತ್ತದೆ. ಹಾಗಾಗಿ ಅರಣ್ಯದ ಅಂಚಿನಲ್ಲಿರುವ ಮಾನವ ವಾಸಸ್ಥಳದ ಪಕ್ಕದ ಕಸದ ತೊಟ್ಟಿಗೆ ಆಹಾರ ಹುಡುಕಲೆಂದು ಹೋಗಿ ಯಾರೂ ನೋಡದಂತೆ ತಿನ್ನುವ ಯತ್ನದಲ್ಲಿ ಆಹಾರದೊಟ್ಟಿಗೆ ಕಸವನ್ನೂ ಹೊಟ್ಟೆಗಿಳಿಸುತ್ತದೆ. ಆ ಕಸದೊಂದಿಗೆ ಪ್ಲಾಸ್ಟಿಕ್ ವಸ್ತುಗಳು, ಪ್ಯಾಕೇಜಿಂಗ್ ವಸ್ತುಗಳೂ ಸಹ ಅವುಗಳ ಹೊಟ್ಟೆ ಸೇರುತ್ತದೆ. ಇದು ಆನೆಗಳ ಆರೋಗ್ಯಕ್ಕೆ ಮಾರಕ ಮಾತ್ರವಲ್ಲದೆ ಇಡೀ ಕಾಡಿನ ಆರೋಗ್ಯಕ್ಕೇ ಹಾನಿಕಾರಕ. “ಅವು ಮಲವಿಸರ್ಜನೆ ಮಾಡಿದಾಗ, ಪ್ಲಾಸ್ಟಿಕ್ ಸಗಣಿಯಲ್ಲಿ ಹೊರಬರುತ್ತದೆ ಮತ್ತು ಕಾಡಿನಲ್ಲಿ ಶೇಖರವಾಗುತ್ತದೆ” ಎನ್ನುತ್ತಾರೆ ಪರಿಸರ ಸಂಶೋಧಕಿ ಗೀತಾಂಜಲಿ ಕಟ್ಲಮ್.
ಸಾಗರಗಳು ಮತ್ತು ಸಮುದ್ರಗಳ ಮೂಲಕ ಪ್ಲಾಸ್ಟಿಕ್ ಮಾಲಿನ್ಯಕಾರಕಗಳು ಹರಡುವ ಬಗ್ಗೆ ಈಗಾಗಲೇ ವಿಶ್ವಾದ್ಯಂತ ಹಲವಾರು ಸಂಶೋಧನೆಗಳು ನಡೆದಿವೆ. ಆದರೆ ಪ್ರಾಣಿಗಳ ಮೂಲಕ ಭೂಮಿಯ ಮೇಲೆ ಈ ಮಾಲಿನ್ಯಕಾರಕಗಳು ಎಷ್ಟು ಚಲಿಸುತ್ತವೆ ಎಂಬುವುದರ ಬಗ್ಗೆ ಗಣನೀಯ ಪ್ರಮಾಣದ ಸಂಶೋಧನೆಗಳು ನಡೆದೇ ಇಲ್ಲ.
ಪ್ರಕೃತಿ ವಿಜ್ಞಾನವು ಆನೆಗಳನ್ನು ಪ್ರಮುಖ ಬೀಜ ಪ್ರಸಾರಕವಾಗಿ ಪರಿಗಣಿಸುತ್ತದೆ. ಬೀಜಗಳನ್ನು, ಹಣ್ಣುಗಳನ್ನು ತಿನ್ನುವ ಆನೆಗಳು ತಮ್ಮ ಸೆಗಣಿಯ ಮೂಲಕ ಬೀಜಗಳನ್ನು ಬಹುದೂರದವರೆಗೆ ಸಾಗಿಸುವ ಸಾಮರ್ಥ್ಯ ಹೊಂದಿದೆ. ಆದರೆ ಅದರ ಜೊತೆಗೇ ಮಾನವ ನಿರ್ಮಿತ ಇತರ ಮಾಲಿನ್ಯಕಾರಕಗಳನ್ನೂ ಅವು ರಾಷ್ಟ್ರೀಯ ಉದ್ಯಾನಗಳು, ಅರಣ್ಯಗಳಿಗೆ ಸಾಗಿಸುವುದು ಅತ್ಯಂತ ಅಪಾಯಕಾರಿ ಎಂದು Journal for Nature Conservationನಲ್ಲಿ ಈ ತಿಂಗಳು ಪ್ರಕಟವಾಗಿರುವ ಸಂಶೋಧನಾ ಲೇಖನವೊಂದು ಆತಂಕ ವ್ಯಕ್ತಪಡಿಸಿದೆ.
ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಮಾಡುತ್ತಿರುವ ಗೀತಾಂಜಲಿ ಈ ವರದಿಯನ್ನು ಬರೆದಿದ್ದು ಕಸದ ರಾಶಿಯಿಂದ ಆನೆಗಳು ಪ್ಲಾಸ್ಟಿಕ್ ತಿನ್ನುತ್ತಿರುವುದನ್ನು ಅವರು ಮೊದಲು ಟ್ರೈಲ್ ಕ್ಯಾಮೆರಾಗಳ ಮೂಲಕ ಗಮನಿಸಿದ್ದರು. ಉತ್ತರ ಭಾರತದಲ್ಲಿ ಹಳ್ಳಿಗಳ ಕಸದ ತೊಟ್ಟಿಗಳಿಗೆ ಆಹಾರಕ್ಕಾಗಿ ಭೇಟಿ ಮಾಡುವ ಪ್ರಾಣಿಗಳ ಬಗ್ಗೆ ಅಧ್ಯಯನ ಮಾಡುವಾಗ ಆನೆಗಳೂ ಕಂಡುಬಂದಿದ್ದವು. ಜೊತೆಗೆ ಅವುಗಳ ಸೆಗಣಿಯಲಿ ಪ್ಲಾಸ್ಟಿಕ್ ಇರುವುದೂ ಪತ್ತೆಯಾಗಿದ್ದವು.

ಗ್ರಾಮದ ಸುತ್ತಮುತ್ತಲಿನ ಕಸದ ತೊಟ್ಟಿ ಮತ್ತು ಕಾಡಿನಲ್ಲೂ ಆನೆ ಸೆಗಣಿಯಲ್ಲಿ ಪ್ಲಾಸ್ಟಿಕ್ ಪತ್ತೆಯಾಗಿದ್ದವು. ಅದರಲ್ಲೂ ಕಾಡಿನಲ್ಲಿ ಒಂದೆರಡು ಮೈಲಿ ನಡೆಯುವಾಗಲೇ ಪ್ಲಾಸ್ಟಿಕ್ ಪತ್ತೆಯಾಗಿತ್ತು ಎನ್ನುತ್ತಾರೆ ಗೀತಾಂಜಲಿ. ಸಾಮಾನ್ಯವಾಗಿ ಏಷ್ಯನ್ ಆನೆಗಳು ಆಹಾರಗಳನ್ನು ಸಾಗಿಸಲು 50 ಗಂಟೆಗಳನ್ನು ತೆಗೆದುಕೊಳ್ಳುತ್ತವೆ ಮತ್ತು ಅದು ದಿನಕ್ಕೆ 6-12 ಮೈಲುಗಳಷ್ಟು ದೂರ ನಡೆಯುತ್ತವೆ. ಹಾಗಿರುವಾಗ ಕಾಡಿನ ಅಂಚಿನಲ್ಲೇ ಇಷ್ಟು ಪ್ರಮಾಣದ ಪ್ಲಾಸ್ಟಿಕ್ ಪತ್ತೆಯಾಗಿರುವಾಗ ಕಾಡಿನೊಳಗೆ ಎಷ್ಟು ಪ್ಲಾಸ್ಟಿಕ್ ಇರಬಹುದು ಎಂಬುವುದನ್ನು ಸುಲಭವಾಗಿ ಊಹಿಸಬಹುದು.
“ಪ್ಲ್ಯಾಸ್ಟಿಕ್ ಮಾಲಿನ್ಯವು ಸರ್ವತ್ರವಾಗಿರುವುದನ್ನು ಇದು ಸೂಚಿಸುತ್ತದೆ” ಎನ್ನುತ್ತಾರೆ ಅರ್ಜೆಂಟೀನಾದ ರಾಷ್ಟ್ರೀಯ ವೈಜ್ಞಾನಿಕ ಮತ್ತು ತಾಂತ್ರಿಕ ಸಂಶೋಧನಾ ಮಂಡಳಿಯ ಸ್ವತಂತ್ರ ಸಂಶೋಧಕರಾಗಿರುವ ಅಗಸ್ಟಿನಾ ಮಲೀಝಿಯಾ. ಭೂಮಿಯ ಮೇಲಾಗುವ ಪ್ಲಾಸ್ಟಿಕ್ನ ಅಡ್ಡ ಪರಿಣಾಮಗಳನ್ನು ಅಧ್ಯಯನ ಮಾಡಿರುವ ಅವರು ಪ್ಲಾಸ್ಟಿಕ್ ಅನ್ನು ಸೇವಿಸುವ ಭೂಮಿಯ ದೊಡ್ಡ ಪ್ರಾಣಿಗಳ ಬಗ್ಗೆ ಬಂದಿರುವ ಮೊದಲ ವರದಿಗಳಲ್ಲಿ ಇದೂ ಒಂದಾಗಿದ್ದು ಈ ಅಧ್ಯಯನ ‘ಅತ್ಯಂತ ಅವಶ್ಯಕ’ ಎನ್ನುತ್ತಾರೆ.
ಗೀತಾಂಜಲಿ ಅವರು ಉತ್ತರಾಖಂಡದ ಕೋಟ್ವಾರ್ನಲ್ಲಿ ಆನೆ ಸೆಗಣಿಯನ್ನು ಸಂಗ್ರಹಿಸಿದ್ದು 85% ರಷ್ಟು ತ್ಯಾಜ್ಯಗಳು ಪ್ಲಾಸ್ಟಿಕ್ ಅನ್ನು ಒಳಗೊಂಡಿದೆ. ಇವುಗಳಲ್ಲಿ ಹೆಚ್ಚಿನವು ಆಹಾರ ಸಂಗ್ರಹಿಸುವ ಪ್ಲಾಸ್ಟಿಕ್ಗಳು, ಪ್ಲಾಸ್ಟಿಕ್ ಚೀಲಗಳು ಮತ್ತು ಪ್ಯಾಕೇಜಿಂಗ್ಗಳೇ ಆಗಿವೆ. ಸಂಶೋಧಕರಿಗೆ ಗಾಜು, ರಬ್ಬರ್, ಫ್ಯಾಬ್ರಿಕ್ ಮತ್ತು ಇತರ ತ್ಯಾಜ್ಯಗಳೂ ದೊರಕಿವೆ. ಕಂಟೈನರ್ಗಳು ಮತ್ತು ಪ್ಲಾಸ್ಟಿಕ್ ಬ್ಯಾಗ್ಗಳಲಿ ಆಹಾರಗಳು ಉಳಿದಿರುವುದರಿಂದ ಆನೆಗಳು ಅವನ್ನೇ ಹುಡುಕಿ ತಿಂದಿರುವ ಸಾಧ್ಯತೆಗಳೂ ಇವೆ ಎನ್ನುತ್ತಾರೆ ಗೀತಾಂಜಲಿ. ಈ ಪ್ರಕ್ರಿಯೆಯಲ್ಲಿ ಬಹುಶಃ ಕಂಟೈನರ್ಗಳೂ ಆನೆಗಳ ಹೊಟ್ಟೆ ಸೇರಿವೆ.
ಕಸವು ಆನೆಗಳ ಜೀರ್ಣಾಂಗ ವ್ಯವಸ್ಥೆಗಳ ಮೂಲಕ ಹಾದುಹೋಗುತ್ತದೆಯಾದರೂ ಅವುಗಳು ಪಾಲಿಸ್ಟೈರೀನ್, ಪಾಲಿಥೈಲೀನ್, ಬಿಸ್ಫೆನಾಲ್ ಎ ಮತ್ತು ಥಾಲೇಟ್ಗಳಂತಹ ರಾಸಾಯನಿಕಗಳನ್ನು ಸೇವಿಸುವ ಸಾಧ್ಯತೆಗಳಿವೆ. ಈ ವಸ್ತುಗಳು ಯಾವ ರೀತಿಯ ಅನಾರೋಗ್ಯಕ್ಕೆ ಕಾರಣವಾಗಬಹುದು ಎಂಬುದು ಅನಿಶ್ಚಿತವಾಗಿದೆಯಾದರೂ ಗೀತಾಂಜಲಿ ಅವರು ಆನೆ ಸಂಖ್ಯೆಯಲ್ಲಿ ಮತ್ತು ಬದುಕುಳಿಯುವ ದರಗಳಲ್ಲಿ ಕುಸಿತಕ್ಕೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸುತ್ತಾರೆ.

“ಪ್ಲಾಸ್ಟಿಕ್ ಸೇವಿಸಿದ ಇತರ ಪ್ರಾಣಿಗಳ ಹೊಟ್ಟೆ ಪ್ಲ್ಯಾಸ್ಟಿಕ್ಸ್ನಿಂದ ತುಂಬುತ್ತದೆ, ಇದು ಅವುಗಳ ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತದೆ” ಎಂದು ಅರ್ಜೆಂಟೀನಾದಲ್ಲಿ ಮಲೀಝಿಯಾರೊಂದಿಗೆ ಕೆಲಸ ಮಾಡುವ ಕೆರೊಲಿನಾ ಮಾನ್ನಿ ಗಾರ್ಜಿಯಾ ಹೇಳುತ್ತಾರೆ. ಆನೆಗಳ ಸೆಗಣಿ ಮೂಲಕ ಅರಣ್ಯಕ್ಕೆ ಸಾಗಿಸಲ್ಪಟ್ಟ ನಂತರ ಇತರ ಪ್ರಾಣಿಗಳೂ ಪ್ಲಾಸ್ಟಿಕ್ ಅನ್ನು ಸೇವಿಸುವ ಸಾಧ್ಯತೆ ಇದೆ. ” ಆದ್ದರಿಂದ ಇದು ಕ್ಯಾಸ್ಕೇಡಿಂಗ್ ಪರಿಣಾಮವನ್ನು ಹೊಂದಿದೆ” ಎಂದು ಹೇಳುತ್ತಾರೆ ಗೀತಾಂಜಲಿ.
ಈ ರೀತಿಯ ಸಮಸ್ಯೆಗಳನ್ನು ತಪ್ಪಿಸಲು ಭಾರತದ ಸರ್ಕಾರಗಳು ತಮ್ಮ ಘನ ತ್ಯಾಜ್ಯವನ್ನು ನಿರ್ವಹಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕಟ್ಲಾಮ್ ಹೇಳಿದರು. ಜೊತೆಗೆ ಪ್ರತಿಯೋರ್ವರೂ ತಮ್ಮ ಆಹಾರ ತ್ಯಾಜ್ಯವನ್ನು ಕಂಟೇನರ್ಗಳಿಂದ ಬೇರ್ಪಡಿಸುವ ಮೂಲಕ ಸಹಾಯ ಮಾಡಬಹುದು, ಇದರಿಂದಾಗಿ ಪ್ಲಾಸ್ಟಿಕ್ ಆಕಸ್ಮಿಕವಾಗಿ ಪ್ರಾಣಿಗಳ ಹೊಟ್ಟೆ ಸೇರುವುದನ್ನು ತಪ್ಪಿಸಬಹುದು. “ಇದು ತುಂಬಾ ಸರಳವಾದ ಹೆಜ್ಜೆ, ಆದರೆ ಬಹಳ ಮುಖ್ಯವಾದ ಹಂತವಾಗಿದೆ” ಎಂದು ಹೇಳುತ್ತಾರೆ ಗೀತಾಂಜಲಿ. “ಪ್ಲಾಸ್ಟಿಕ್ಗಳ ಅತಿಯಾದ ಬಳಕೆಯು ಪರಿಸರ ಮತ್ತು ಜೀವಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು ಮತ್ತು ಅರಿತುಕೊಳ್ಳಬೇಕು” ಎನ್ನುತ್ತಾರೆ ಮಲೀಝಿಯ.