ಬೆಂಗಳೂರು ನಗರದ ಸಂಚಾರ ದಟ್ಟಣೆ ನಿಯಂತ್ರಿಸಲು ಎರಡು ಬೃಹತ್ ಯೋಜನೆಗಳಿಗೆ ಸರ್ಕಾರ ಯೋಜನೆ ರೂಪಿಸಿದೆ. ಸುರಂಗ ಮಾರ್ಗದ ಜೊತೆಗೆ ಫೆರಿಫೆರಲ್ ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ BDA ನಿರ್ಧಾರ ಮಾಡಿದೆ. 27 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ 73 ಕಿಲೋ ಮೀಟರ್ ಸೆಮಿಸರ್ಕಲ್ ಫೆರಿಫೆರಲ್ ರಿಂಗ್ ರೋಡ್ಗೆ ವೆಚ್ಚ ಮಾಡಲು ನಿರ್ಧಾರ ಮಾಡಲಾಗಿದೆ. ಜೊತೆಗೆ 6 ಲೇಔಟ್ಗಳ ನಿರ್ಮಾಣ ಮಾಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಧಾರ ಮಾಡಿದೆ.
ಫೆರಿಫೆರಲ್ ರಿಂಗ್ ರೋಡ್ನಲ್ಲಿ 6 ಲೇಔಟ್ಗಳ ನಿರ್ಮಾಣ ಮಾಡಲು ನಿರ್ಧಾರ ಮಾಡಿದ್ದು, ಬರೋಬ್ಬರಿ 50 ಸಾವಿರ ಸೈಟ್ಗಳನ್ನು ನಿರ್ಮಾಣ ಮಾಡಲು 3500 ಎಕರೆ ಪ್ರದೇಶದಲ್ಲಿ ಲೇಔಟ್ ನಿರ್ಮಿಸಲಾಗುತ್ತದೆ ಎಂದು ಬಿಡಿಎ ಮಾಹಿತಿ ನೀಡಿದೆ. ಬಿಡಿಎ ಸೈಟ್ಗಳಿಗೆ ಭಾರೀ ಬೇಡಿಕೆ ಇರುವ ಕಾರಣಕ್ಕೆ 50 ಸಾವಿರ ವಿವಿಧ ಅಳತೆಯ ಸೈಟ್ಗಳನ್ನು ನಿರ್ಮಾಣ ಮಾಡಲಾಗುತ್ತದೆ. 2 ತಿಂಗಳ ಹಿಂದೆ ಈ ಬಗ್ಗೆ ನಿರ್ಧಾರ ಮಾಡಿದ್ದೇವೆ ಎಂದು ಬಿಡಿಎ ಕಮಿಷನರ್ ಎನ್. ಜಯರಾಜ್ ತಿಳಿಸಿದ್ದಾರೆ.
ಬೆಂಗಳೂರಿನ ಹೊರ ಹೊಲಯದಲ್ಲಿ 8 ಲೇನ್ ರಸ್ತೆ ನಿರ್ಮಾಣ ಮಾಡಲು ನಿರ್ಧಾರ ಮಾಡಲಾಗಿದೆ. ಈ ರಸ್ತೆಗಳು ಬೆಂಗಳೂರು ನಾರ್ತ್, ಬೆಂಗಳೂರು ಈಸ್ಟ್ ಹಾಗು ಆನೇಕಲ್ ವ್ಯಾಪ್ತಿಯಲ್ಲಿ ಸಾಗಲಿದೆ. ರಸ್ತೆ ನಿರ್ಮಾಣ ಹಾಗು ಲೇಔಟ್ ನಿರ್ಮಾಣಕ್ಕೆ ವಶಪಡಿಸಿಕೊಳ್ಳಲಿರುವ ಭೂಮಿಗೆ 40:60 ಅನುಪಾತದಲ್ಲಿ ಪರಿಹಾರ ನೀಡಲಾಗುವುದು ಎಂದು ಬಿಡಿಎ ಕಮಿಷನರ್ ತಿಳಿಸಿದ್ದಾರೆ. ಬಿಡಿಎ ನಿರ್ಮಿಸುವ ಸೈಟ್ಗಳು ಎಲ್ಲಾ ಸಮುದಾಯಗಳು ಕೊಳ್ಳಬಹುದಾದ ದರದಲ್ಲಿ ಸಿಗಲಿವೆ ಎಂದಿದ್ದಾರೆ. ಬಡವರಿಗೂ ಸೈಟ್ ನೀಡುವ ಉದ್ದೇಶದಿಂದಲೇ ಈ ನಿರ್ಧಾರ ಮಾಡಿದ್ದೇವೆ ಎಂದಿದ್ದಾರೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಈಗಾಗಲೇ ಡಾ ಶಿವರಾಮ್ ಕಾರಂತ ಲೇಔಟ್ನಲ್ಲಿ 34 ಸಾವಿರ ಸೈಟ್ ಮಾಡಿದ್ದು, ಇದರಲ್ಲಿ 10 ಸಾವಿರ ಸೈಟ್ಗಳನ್ನು ಸಾರ್ವಜನಿಕರಿಗೆ ನೀಡಲಾಗಿದೆ. 27 ಸಾವಿರ ಕೋಟಿ ವೆಚ್ಚದ ಫೆರಿಫೆರಲ್ ರಿಂಗ್ ರಸ್ತೆಗೆ ಹೊಸದಾಗಿ ಟೆಂಡರ್ ಕರೆಯಲಾಗುವುದು ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ. ಹುಲ್ಲಹಳ್ಳಿ, ಹುಲಿಮಂಗಲ, ಬಿಂಗೀಪುರ, ಮರಗೊಂಡನಹಳ್ಳಿ, ಬೇಗೂರು ಹೊಮ್ಮಾದೇವನಹಳ್ಳಿ, ಕಮ್ಮನಹಳ್ಳಿ, ಮೈಲಸಂದ್ರ, ಯರೇನಹಳ್ಳಿ ಭಾಗದಲ್ಲಿ ರಸ್ತೆ ಬರಲಿದೆ ಎನ್ನಲಾಗಿದೆ.