ದೇಶದ ಆಡಳಿತದ ಚುಕ್ಕಾಣಿ ಹಿಡಿದ ಭಾರತೀಯ ಜನತಾ ಪಕ್ಷದ ನಾಯಕತ್ವಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲ; ಪ್ರಜಾಪ್ರಭುತ್ವದ ಆಧಾರ ಸ್ತಂಭಗಳಾದ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗಗಳನ್ನು ದುರ್ಬಲಗೊಳಿಸುವ ಎಲ್ಲಾ ಅವಕಾಶಗಳನ್ನು ಅದು ಸಮರ್ಥವಾಗಿ ಬಳಸಿಕೊಳ್ಳುತ್ತಿದೆ ಎಂಬ ಮಾತುಗಳು ಕಳೆದ ಏಳು ವರ್ಷಗಳಿಂದ ಮತ್ತೆ ಮತ್ತೆ ಮಾರ್ದನಿಸುತ್ತಲೇ ಇವೆ.
ಈಗ ಈ ಸಾಲಿಗೆ ಮತ್ತೊಂದು ಆಘಾತಕಾರಿ ಸೇರ್ಪಡೆ ಇಸ್ರೇಲಿ ಎನ್ ಎಸ್ ಒ ಕಂಪನಿಯ ಪೇಗಾ¬¬ಸಸ್ ಸ್ಪೈವೇರ್ ಬಳಸಿ ದೇಶದ 300 ಕ್ಕೂ ಹೆಚ್ಚು ಮಂದಿ ಪತ್ರಕರ್ತರು, ಹೋರಾಟಗಾರರು, ರಾಜಕಾರಣಿಗಳ ಮೊಬೈಲ್ ಹ್ಯಾಕ್ ಮಾಡಿ ಅವರ ಮೇಲೆ ಕಳ್ಳಗಣ್ಣು ಇಡಲಾಗಿತ್ತು ಎಂಬುದು. ಸ್ವತಃ ನರೇಂದ್ರ ಮೋದಿಯವರ ಸಂಪುಟದ ಇಬ್ಬರು ಸಚಿವರು, ಮೂವರು ಪ್ರತಿಪಕ್ಷ ನಾಯಕರು, ನ್ಯಾಯಾಧೀಶರೊಬ್ಬರು ಹಾಗೂ ಹಲವು ಮಂದಿ ರಾಷ್ಟ್ರೀಯ ಮತ್ತು ಸ್ಥಳೀಯ ಮಾಧ್ಯಮಗಳ ಪತ್ರಕರ್ತರು ಹಾಗೂ ಉದ್ಯಮಿಗಳ ಮೊಬೈಲ್ ಗಳ ಮೇಲೆ ಹದ್ದಿನಕಣ್ಣಿಡಲಾಗಿತ್ತು ಎಂಬ ಸಂಗತಿ ಫ್ರೆಂಚ್ ಮೂಲದ ಫಾರ್ಬಿಡನ್ ಸ್ಟೋರೀಸ್ ಮತ್ತು ಆಮ್ನೆಸ್ಟಿ ಇಂಟರ್ ನ್ಯಾಷನಲ್ ಸ್ವಯಂಸೇವಾ ಸಂಸ್ಥೆಗಳು ಹಲವು ಜಾಗತಿಕ ಮಾಧ್ಯಮಗಳ ಸಹಯೋಗದಲ್ಲಿ ನಡೆಸಿದ ತನಿಖೆಯಲ್ಲಿ ಬಹಿರಂಗಗೊಂಡಿದೆ.
ಪೇಗಾಸಸ್ ಎಂಬ ಅತ್ಯಂತ ಶಕ್ತಿಶಾಲಿ ಮತ್ತು ಬಹಳ ರಹಸ್ಯಮಯವಾಗಿ ಮೊಬೈಲ್ ಒಳಗೆ ತೂರಿಕೊಂಡು ಕೆಲಸ ಮಾಡುವ ಸ್ಪೈವೇರನ್ನು ಯಾವುದೇ ಖಾಸಗೀ ಸಂಸ್ಥೆ ಅಥವಾ ವ್ಯಕ್ತಿಗಳ ಬಳಕೆಗೆ ಲಭ್ಯವಿಲ್ಲ. ಜಗತ್ತಿನಾದ್ಯಂತ ಹಲವು ದೇಶಗಳ ಚುನಾಯಿತ ಸರ್ಕಾರಗಳು ಮತ್ತು ಅಂತಹ ಸರ್ಕಾರಗಳ ಅಧಿಕೃ ತನಿಖಾ ಸಂಸ್ಥೆಗಳು ಮಾತ್ರ ಆ ಅಪಾಯಕಾರಿ ಸ್ಪೈವೇರ್ ಬಳಸಿ ವ್ಯಕ್ತಿಗಳ ಮೇಲೆ ಗೂಢಚಾರಿಕೆ ನಡೆಸುತ್ತಾರೆ ಎಂದು ಈ ಸ್ಪೈವೇರ್ ತಯಾರಿಕಾ ಸಂಸ್ಥೆಯಾದ ಇಸ್ರೇಲಿನ ಎನ್ ಎಸ್ ಒ ಸ್ಪಷ್ಟಪಡಿಸಿದೆ. ಹಾಗಾಗಿ, ಇದೀಗ ಈ ಕೃತ್ಯವನ್ನು ನಡೆಸಿರುವುದು ಭಾರತೀಯ ಜನತಾ ಪಕ್ಷದ ಸರ್ಕಾರ, ಇಲ್ಲವೆ ಅದರ ಚುಕ್ಕಾಣಿ ಹಿಡಿದವರ ಆಣತಿಯೆ ಮೇರೆಗೆ ದೇಶದ ತನಿಖಾ ಸಂಸ್ಥೆಗಳು ಈ ಕೃತ್ಯ ನಡೆಸಿವೆ ಎಂಬುದು ಜಗಜ್ಜಾಹೀರಾಗಿದೆ.

ಈ ತನಿಖೆಯ ಭಾಗವಾಗಿದ್ದ ಭಾರತದ ಮುಂಚೂಣಿ ಡಿಜಿಟಲ್ ಮಾಧ್ಯಮ ‘ದ ವೈರ್’ ಈ ಕುರಿತು ವಿಸ್ತ್ಋತ ವರದಿ ಪ್ರಕಟಿಸಿದ್ದು, ಈ ವರದಿ ಇದೀಗ ದೇಶದ ರಾಜಕೀಯ ಮತ್ತು ಮಾಧ್ಯಮ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಅದರಲ್ಲೂ ಸಂಸತ್ತಿನ ಮಳೆಗಾಲದ ಅಧಿವೇಶದ ಆರಂಭದಲ್ಲೇ ಇಂತಹದ್ದೊಂದು ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದ್ದು, ಪ್ರತಿಪಕ್ಷಗಳ ಕೈಗೆ ಪ್ರಧಾನಿ ಮೋದಿಯವರ ಆಡಳಿತದ ಪ್ರಜಾಪ್ರಭುತ್ವ ವಿರೋಧಿ ಆಡಳಿತದ ವಿರುದ್ಧ ಪ್ರಬಲ ಅಸ್ತ್ರ ಸಿಕ್ಕಂತಾಗಿದೆ.
ಜಾಗತಿಕವಾಗಿ ಫೇಗಾಸಸ್ ಬಳಸಿ ವಿವಿಧ ಸರ್ಕಾರಗಳು ಸುಮಾರು 50 ಸಾವಿರ ಮೊಬೈಲ್ ಗಳನ್ನು ಹ್ಯಾಕ್ ಮಾಡಿ, ಅವುಗಳ ಬಳಕೆದಾರರ ವಿರುದ್ಧ ಗೂಢಚಾರಿಕೆ ನಡೆಸಿವೆ. ಆ ಪೈಕಿ ಭಾರತದ 300 ಮೊಬೈಲ್ ಬಳಕೆದಾರರೂ ಸೇರಿದ್ದಾರೆ. ಆ 300 ಮಂದಿಯಲ್ಲಿ ರಾಜಕಾರಣಿಗಳು, ಪತ್ರಕರ್ತರು, ಸಾಮಾಜಿಕ ಹೋರಾಟಗಾರರು, ಸರ್ಕಾರಿ ಅಧಿಕಾರಿಗಳು, ನ್ಯಾಯಾಧೀಶರು, ಉದ್ಯಮಿಗಳು, ವಿಜ್ಞಾನಿಗಳು, ಮಾನವಹಕ್ಕು ಹೋರಾಟಗಾರರು ಮತ್ತಿತತರು ಸೇರಿದ್ದಾರೆ. ಈ 300 ಮಂದಿಯಲ್ಲಿ ಎಲ್ಲರ ಮೊಬೈಲ್ ಗಳನ್ನು ಯಶಸ್ವಿಯಾಗಿ ಹ್ಯಾಕ್ ಮಾಡಲಾಗಿದೆ ಎಂದಲ್ಲ. ಆದರೆ, ಪೇಗಾಸಸ್ ಸ್ಪೈವೇರ್ ಬಳಕೆಗಾಗಿ ಈ 300 ವ್ಯಕ್ತಿಗಳ ಮೊಬೈಲ್ ಸಂಖ್ಯೆಗಳನ್ನು ಪಟ್ಟಿಮಾಡಲಾಗಿತ್ತು. ಆ ಪೈಕಿ ಕೆಲವರ ಮೊಬೈಲ್ ಹ್ಯಾಕ್ ಮಾಡಿರಬಹುದು, ಮತ್ತೆ ಕೆಲವರ ಮೊಬೈಲ್ ಹ್ಯಾಕ್ ಪ್ರಯತ್ನ ನಡೆಸಿ ವಿಫಲವಾಗಿರಬಹುದು. ಆದರೆ, ಇಷ್ಟೂ ಜನರ ಮೇಲೆ ಕಣ್ಣಿಡುವ ಯತ್ನವಂತೂ ನಡೆದಿದೆ ಎಂದು ವರದಿ ಹೇಳಿದೆ.
Also also: ಇಸ್ರೇಲ್ ಮಾಲ್ವೇರ್ ಬಳಸಿ ರಾಜಕಾರಣಿಗಳು, ಪತ್ರಕರ್ತರ ಚಲನವಲನದ ಮೇಲೆ ಕಣ್ಣಿಟ್ಟಿತ್ತೆ ಸರ್ಕಾರ?
ಆಮ್ನೆಸ್ಟಿ ಇಂಟರ್ ನ್ಯಾಷನಲ್ ನ ಸೆಕ್ಯುರಿಟಿ ಲ್ಯಾಬ್ ನಲ್ಲಿ ಹೀಗೆ ಪೇಗಾಸಸ್ ಸ್ಪೈವೇರ್ ಬಳಕೆಯಾಗಿದೆ ಎಂಬ ಶಂಕೆ ಇದ್ದ ವ್ಯಕ್ತಿಗಳ ಮೊಬೈಲ್ ಗಳನ್ನು ಪರೀಕ್ಷೆಗೊಳಪಡಿಸಿದಾಗ ಬಹುತೇಕ ಮೊಬೈಲ್ ಗಳಲ್ಲಿ ಫೇಗಾಸಸ್ ಬಳಕೆಯಾಗಿರುವುದು ದೃಢಪಟ್ಟಿದೆ. ಜಗತ್ತಿನಾದ್ಯಂತ ಪೇಗಾಸಸ್ ಬಳಸಿ ಗೂಢಚಾರಿಕೆ ಮಾಡಲಾಗಿರುವ ಹತ್ತು ರಾಷ್ಟ್ರಗಳ ಒಟ್ಟು 50 ಸಾವಿರ ಮಂದಿಯ ಪೈಕಿ, 1571 ಮಂದಿಯ ಮೊಬೈಲ್ ಗಳನ್ನು ನಿರ್ದಿಷ್ಟವಾಗಿ ಗುರುತಿಸುವುದು ಈವರೆಗೆ ಸಾಧ್ಯವಾಗಿದೆ ಎಂದು ತನಿಖಾ ತಂಡ ತಿಳಿಸಿದ್ದು, ಆ ಪೈಕಿ ಪರಿಶೀಲಿಸಿದ ಕೆಲವು ಮೊಬೈಲ್ ಗಳಲ್ಲಿ ಪೇಗಾಸಸ್ ಬಳಕೆಯಾದ ಬಗ್ಗೆ ಸಾಕ್ಷ್ಯಗಳು ಸಿಕ್ಕಿವೆ ಎಂದಿದೆ.
ಜಗತ್ತಿನಾದ್ಯಂತ ಹಲವು ದೇಶದ ಸರ್ಕಾರಗಳು ತನ್ನ ಖಾಯಂ ಗ್ರಾಹಕರು. ವಿವಿಧ ಉದ್ದೇಶಕ್ಕಾಗಿ ಬಳಸಲು ತನ್ನ ಪೇಗಾಸಸ್ ಸ್ಪೈವೇರ್ ಸೇವೆಯನ್ನು ಪಡೆಯುತ್ತಾರೆ ಎಂದು ಹೇಳಿರುವ ಇಸ್ರೇಲಿ ಎನ್ ಎಸ್ ಒ ಸಂಸ್ಥೆ, ನಿರ್ದಿಷ್ಟವಾಗಿ ಭಾರತ ಸರ್ಕಾರ ತನ್ನ ಗ್ರಾಹಕ ಹೌದೇ? ಅಥವಾ ಅಲ್ಲವೇ ಎಂಬುದನ್ನು ಹೇಳಲಾಗದು. ಹಾಗೇ ಗ್ರಾಹಕರ ಮಾಹಿತಿ ಬಹಿರಂಗಪಡಿಸುವುದು ವ್ಯಾವಹಾರಿಕ ಒಪ್ಪಂದದ ಉಲ್ಲಂಘನೆಯಾಗುತ್ತದೆ ಎಂದು ಹೇಳಿದೆ. ಆದರೆ, ಭಾರತದಲ್ಲಿ ಪೇಗಾಸಸ್ ಬಳಕೆಯಾಗಿದೆ ಎನ್ನಲಾಗಿರುವ 300 ಮೊಬೈಲ್ ಪೈಕಿ ಈಗಾಗಲೇ ಹಲವು ವ್ಯಕ್ತಿಗಳ ಮೊಬೈಲ್ ಗಳಲ್ಲಿ ಪೇಗಾಸಸ್ ಬಳಸಿರುವುದು ಆಮ್ನೆಸ್ಟಿ ಇಂಟರ್ ನ್ಯಾಷನಲ್ ಸೆಕ್ಯೂರಿಟಿ ಲ್ಯಾಬ್ ಪರೀಕ್ಷೆಯಲ್ಲಿ ಸಾಬೀತಾಗಿದೆ ಮತ್ತು ಹಾಗೆ ಸ್ಪೈವೇರ್ ದಾಳಿಗೆ ಒಳಗಾದವರಲ್ಲಿ ಬಹುತೇಕ ಎಲ್ಲರೂ ಆಡಳಿತರೂಢ ಬಿಜೆಪಿ ಸರ್ಕಾರದ ಜನವಿರೋಧಿ, ಸಂವಿಧಾನವಿರೋಧಿ ಮತ್ತು ಪ್ರಜಾಪ್ರಭುತ್ವ ವಿರೋಧಿ ನಡೆ-ನೀತಿಗಳ ವಿರುದ್ಧ ದನಿ ಎತ್ತಿದವರೇ ಎಂಬುದು; ಇಸ್ರೇಲ್ ಕಂಪನಿ ಹೇಳದೆ ಮುಚ್ಚಿಟ್ಟು ಸತ್ಯಕ್ಕೆ ಕನ್ನಡಿ ಹಿಡಿದಿದೆ.

ಆದರೆ, ನರೇಂದ್ರ ಮೋದಿಯವರ ಸರ್ಕಾರ, ದೇಶದ ಯಾವುದೇ ಪತ್ರಕರ್ತರು, ಹೋರಾಟಗಾರರು, ವಕೀಲರು ಮುಂತಾದವರ ವಿರುದ್ಧ ಗೂಢಚಾರಿಕೆ ನಡೆಸಿಲ್ಲ ಎಂದು ಕಳೆದ ಎರಡು ವರ್ಷಗಳಿಂದ ಅಂತಹ ಆರೋಪಗಳನ್ನು ತಳ್ಳಿಹಾಕುತ್ತಲೇ ಬಂದಿದೆ. ಆದರೆ, ಅದು ತಾನು ಪೇಗಾಸಸ್ ಸ್ಪೈವೇರ್ ಬಳಸಿಯೇ ಇಲ್ಲ ಎಂದು ಈವರೆಗೆ ಖಡಾಖಂಡಿತವಾಗಿ ಅಲ್ಲಗಳೆದಿಲ್ಲ ಎಂಬುದು ಕೂಡ ಗಮನಾರ್ಹ ಸಂಗತಿ.
ಪೇಗಾಸಸ್ ಬಳಕೆಯಾಗಿರುವ ಪಟ್ಟಿಯಲ್ಲಿರುವ ಭಾರತದ ಮೊಬೈಲ್ ಗಳ ಪೈಕಿ 12 ಐಫೋನ್ ಗಳನ್ನು ಲ್ಯಾಬ್ ಪರೀಕ್ಷೆಗೆ ಒಳಪಡಿಸಿದ್ದು, ಆ ಪೈಕಿ 9ರಲ್ಲಿ ಪೇಗಾಸಸ್ ಪತ್ತೆಯಾಗಿದೆ. ಆ ಪೈಕಿ ತಮ್ಮ ಮೊಬೈಲ್ ಪರೀಕ್ಷೆಗೊಡ್ಡಲು ಒಪ್ಪಿಕೊಂಡು ಆರು ಮಂದಿ ಪತ್ರಕರ್ತರ ಮೊಬೈಲ್ ಗಳಲ್ಲಿ ಪೇಗಾಸಸ್ ದೃಢಪಟ್ಟಿದೆ. ಆದರೆ, ಒಂದು ನಿರ್ದಿಷ್ಟ ಅವಧಿಯಲ್ಲಿ ಮತ್ತು ನಿರ್ದಿಷ್ಟವಾಗಿ ಫೇಗಾಸಸ್ ಸ್ಪೈವೇರ್ ಒಂದನ್ನೇ ದೃಷ್ಟಿಯಲ್ಲಿಟ್ಟುಕೊಂಡು ಈ ತನಿಖೆ ನಡೆದಿರುವುದರಿಂದ, ಭಾರತದಲ್ಲಿ ಸರ್ಕಾರ ಅಥವಾ ಅದರ ತನಿಖಾ ಸಂಸ್ಥೆಗಳು ಗೂಢಚಾರಿಕೆ ನಡೆಸುತ್ತಿರುವ ಪತ್ರಕರ್ತರ ಸಂಖ್ಯೆ ಇಷ್ಟೇ ಎಂದು ತೀರ್ಮಾನಕ್ಕೆ ಬರಲಾಗದು.
ಇದೀಗ ತನಿಖೆಯಿಂದ ಬಹಿರಂಗವಾಗಿರುವ ‘ಪೇಗಾಸಸ್ ಲೀಕ್’ ಪಟ್ಟಿಯಲ್ಲಿರುವ 300 ಮೊಬೈಲ್ ಗಳ ಪೈಕಿ ದೊಡ್ಡ ಸಂಖ್ಯೆಯಲ್ಲಿ ದೇಶದ ವಿವಿಧ ಮಾಧ್ಯಮಗಳ ಪತ್ರಕರ್ತರ ಮೊಬೈಲ್ ಗಳಿವೆ ಎಂಬುದು ಗಮನಾರ್ಹ. ಅದರಲ್ಲೂ ಹಲವರು ರಾಜಧಾನಿ ದೆಹಲಿಯ ಹೊರಗಿದ್ದು ಕೆಲಸ ಮಾಡುತ್ತಿರುವರು ಎಂಬುದು ಕೂಡ ಗಮನಿಸಬೇಕಾದ ಸಂಗತಿ. ಉದಾಹರಣೆಗೆ ಹಿಂದೂಸ್ತಾನ್ ಟೈಮ್ಸ್ ನ ನಾಲ್ವರು ಹಾಲಿ ಪತ್ರಕರ್ತರು ಮತ್ತು ಒಬ್ಬರು ಮಾಜಿ ಪತ್ರಕರ್ತರ ಮೊಬೈಲ್ ಗಳು ಪೇಗಾಸಸ್ ಪಟ್ಟಿಯಲ್ಲಿವೆ. ಹಾಗೇ ಇಂಡಿಯನ್ ಎಕ್ಸ್ ಪ್ರೆಸ್ ನ ಇಬ್ಬರು, ಇಂಡಿಯಾ ಟುಡೆಯ ಒಬ್ಬರು, ಟಿವಿ18ನ ಒಬ್ಬರು, ದ ಹಿಂದೂನ ಒಬ್ಬರು, ದ ಪಯೋನಿಯರ್ ನ ಒಬ್ಬರು, ದಿ ವೈರ್ ನ ಐವರು ಪತ್ರಕರ್ತರು ಈ ಪಟ್ಟಿಯಲ್ಲಿದ್ದಾರೆ. ಹಾಗೇ ಹಲವು ಕಾರಣಗಳಿಗಾಗಿ ಪತ್ರಿಕೋದ್ಯಮ ಅಥವಾ ಈ ಹಿಂದಿನ ಸಂಸ್ಥೆಗಳನ್ನು ತೊರೆದಿರುವ ಪತ್ರಕರ್ತರ ಹೆಸರುಗಳೂ ಆ ಪಟ್ಟಿಯಲ್ಲಿದ್ದು, ಅಂತಹವರ ಪೈಕಿ ಇಪಿಡಬ್ಲ್ಯೂ, ದ ಟ್ರಿಬ್ಯೂನ್, ದ ಔಟ್ ಲುಕ್, ಡಿಎನ್ ಎ ಮಾಜಿ ಪತ್ರಕರ್ತರು ಸೇರಿದ್ದಾರೆ. ಇದಲ್ಲದೆ, ದೊಡ್ಡ ಸಂಖ್ಯೆಯ ಸ್ಥಳೀಯ ಮತ್ತು ಪ್ರಾದೇಶಿಕ ಪತ್ರಿಕೆಗಳ ಪತ್ರಕರ್ತರ ಮೊಬೈಲ್ ಗಳು ಕೂಡ ಪಟ್ಟಿಯಲ್ಲಿವೆ ಎಂದು ಹೇಳಲಾಗಿದೆ. ಬಿಜೆಪಿ ಆಡಳಿತದ ಪ್ರಮುಖ ಟೀಕಾಕಾರರಲ್ಲಿ ಒಬ್ಬರಾಗಿರುವ ದ ವೈರ್ ನ ಸಂಪಾದಕ ಸಿದ್ಧಾರ್ಥ್ ವರದರಾಜನ್ ಸೇರಿದಂತೆ ಹೀಗೆ ಸಾಲು ಸಾಲು ಪತ್ರಕರ್ತರ ವಿರುದ್ಧ ಪೇಗಾಸಸ್ ಗೂಢಚರ್ಯೆ ನಡೆದಿರುವುದು ಬಹುತೇಕ 2018-19ರ ವೇಳೆಗೆ ಮತ್ತು ಅದರಲ್ಲೂ ಮುಖ್ಯವಾಗಿ ಲೋಕಸಭಾ ಚುನಾವಣೆಯ ಆಸುಪಾಸಿನಲ್ಲಿ ಎಂಬುದು ಕೂಡ ಆಡಳಿತರೂಢ ಪಕ್ಷದ ಹಿತಾಸಕ್ತಿ ಕಡೆ ಬೊಟ್ಟು ಮಾಡುತ್ತದೆ!
ಹಾಗೆ ನೋಡಿದರೆ, ಪೇಗಾಸಸ್ ಸ್ಪೈವೇರ್ ಮೂಲಕ ದೇಶದ ಆಡಳಿತರೂಢ ಸರ್ಕಾರದ ಟೀಕಾಕಾರರು, ಆಡಳಿತ ಪಕ್ಷದ ತಾಳಕ್ಕೆ ಕುಣಿಯದ ಪತ್ರಕರ್ತರ ವಿರುದ್ಧ ಗೂಢಚರ್ಯೆ ನಡೆಸಲಾಗುತ್ತಿದೆ ಎಂಬ ಸಂಗತಿ ಹೊಸದೇನಲ್ಲ. 2019ರಲ್ಲಿಯೇ ವಾಟ್ಸಪ್ ಮೂಲಕ ಭಾರತದಲ್ಲಿ ಇಂತಹ ಯತ್ನ ನಡೆದಿದೆ ಎಂದು ಸ್ವತಃ ವಾಟ್ಸಪ್ ಮತ್ತು ಕೆನಡಾ ಮೂಲದ ಸಿಟಿಜನ್ ಲ್ಯಾಬ್ ಸಂಸ್ಥೆ ಹೇಳಿದ್ದವು. ಹಾಗೇ ಎರಡು ವರ್ಷಗಳ ಹಿಂದೆ ವಾಟ್ಸಪ್ ಎಚ್ಚರಿಕೆ ನೀಡಿದ್ದ ದೇಶದ ಕೆಲವು ಪ್ರಮುಖರ ಪಟ್ಟಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪತ್ರಕರ್ತರಿದ್ದರು ಮತ್ತು ಆ ಪೈಕಿ ಇಬ್ಬರು ಪತ್ರಕರ್ತರು ಇದೀಗ ಹೊರಬಿದ್ದಿರುವ ಈ ಪೇಗಾಸಸ್ ಲೀಕ್ ಪಟ್ಟಿಯಲ್ಲಿ ಕೂಡ ಇದ್ದಾರೆ ಎಂಬುದು ಈ ಗೂಢಚರ್ಯೆಯ ಕುರಿತು ಸಾಕಷ್ಟು ಹೇಳುತ್ತದೆ.

ಅಷ್ಟೇ ಅಲ್ಲ; ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾಗಿರುವ ಸಾಮಾಜಿಕ ಹೋರಾಟಗಾರರು, ಚಿಂತಕರು ಮತ್ತು ವಕೀಲರು ಮತ್ತು ಅವರ ಸಂಬಂಧಿಕರು, ಆಪ್ತರ ಮೊಬೈಲ್ ಗಳ ವಿರುದ್ಧವೂ ಪೇಗಾಸಸ್ ಬಳಕೆಯಾಗಿದೆ. ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಬಂಧಿತರಾಗಿರುವ ಪ್ರೊ.ಆನಂದ್ ತೇಲ್ತುಂಬ್ದೆ, ಭೀಮಾ ಕೋರೆಗಾಂವ್ ಪ್ರಕರಣದ ವಕೀಲ ನಿಹಾಲ್ ಸಿಂಗ್ ರಾಥೋಡ್, ಬಂಧಿತ ಸುಧಾ ಭಾರದ್ವಾಜ್ ವಕೀಲೆ ಶಾಲಿನಿ ಗೆರಾ ಸೇರಿದಂತೆ ಹಲವರ ಹೆಸರುಗಳು ಈ ಪೇಗಾಸಸ್ ಲೀಕ್
ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. ಅಲ್ಲದೆ, ಈ ಹಿಂದೆ ಕೂಡ ಆನಂದ್ ತೇಲ್ತುಂಬ್ಡೆ ಸೇರಿದಂತೆ ಎಲ್ಗಾರ್ ಪರಿಷತ್ ಮತ್ತು ಭೀಮಾ ಕೋರೆಗಾಂವ್ ಪ್ರಕರಣಗಳ ಆರೋಪಿತರ ಲ್ಯಾಪ್ ಮತ್ತು ಡೆಸ್ಕ್ ಟಾಪ್ ಗಳ ಮೇಲೆ ಕೂಡ ಮಾಲ್ ವೇರ್ ಮತ್ತು ಸ್ಪೇವೇರ್ ಮೂಲಕ ದಾಳಿ ಮಾಡಿ, ತನಿಖಾ ಸಂಸ್ಥೆಗಳು ಅವರ ಬಂಧನಕ್ಕೆ ಬೇಕಾದ ಸಾಕ್ಷ್ಯಗಳನ್ನು ಸೃಷ್ಟಿ ಮಾಡಿದ್ದವು ಎಂಬ ಗಂಭೀರ ಸಂಗತಿಗಳು ಕೂಡ ಬಯಲಾಗಿದ್ದವು.
ಇದೀಗ, ಆಡಳಿತರೂಢ ಸರ್ಕಾರ ಮತ್ತು ಅದರ ತನಿಖಾ ಸಂಸ್ಥೆಗಳು ಕೇವಲ ಹೋರಾಟಗಾರರು, ಚಿಂತಕರು ಮಾತ್ರವಲ್ಲ; ತನ್ನ ತಾಳಕ್ಕೆ ಕುಣಿಯದ ಪತ್ರಕರ್ತರು, ವಕೀಲರು, ವಿಜ್ಞಾನಿಗಳ ವಿರುದ್ಧವೂ ಗೂಢಚಾರಿಕೆ ಆರಂಭಿಸಿವೆ. ಅದಕ್ಕಾಗಿ ಜಗತ್ತಿನಲ್ಲೇ ಅತ್ಯಂತ ಪ್ರಭಾವಿ ಗೂಢಚರ್ಯೆ ಸಾಫ್ಟ್ವೇರ್ ಸೇವೆ ಒದಗಿಸುವ ಇಸ್ರೇಲಿನ ಎನ್ ಎಸ್ ಒ ಜೊತೆ ಒಪ್ಪಂದ ಮಾಡಿಕೊಂಡಿವೆ. ತನ್ನ ನೀತಿ-ನಿಲುವುಗಳನ್ನು ಪ್ರಶ್ನಿಸುವ, ಪ್ರತಿಭಟಿಸುವ ದೇಶದ ಪ್ರಜೆಗಳನ್ನು ಬಗ್ಗುಬಡಿಯಲು, ಅವರ ವಿರುದ್ಧ ಪಿತೂರಿ ನಡೆಸಲು ಆಳುವ ಸರ್ಕಾರವೇ ಹೀಗೆ ಗೂಢಚಾರಿಕೆ ಮಾಡಿ, ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ದಾಖಲೆಗಳನ್ನು ತಿರುಚಿ, ಗಂಭೀರ ಪ್ರಕರಣಗಳಲ್ಲಿ ಸಿಲುಕಿಸುವ ಷಢ್ಯಂತ್ರ ಮಾಡಿರುವುದು ಈ ಪೇಗಾಸಸ್ ಪ್ರಾಜೆಕ್ಟ್ ಲೀಕ್ಸ್ ಬಹಿರಂಗಪಡಿಸಿದೆ.