ವಿವಿಧ ರಾಜ್ಯಗಳಲ್ಲಿ ನಡೆದ ಲೋಕಸಭಾ ಮತ್ತು ವಿಧಾನಸಭಾ ಉಪ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಮುಖಭಂಗ ಅನುಭವಿದ್ದಕ್ಕೂ, ಏಕಮೇವಾದ್ವಿತೀಯ ನಾಯಕನಾಗಿ ಮೆರೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸು ಕುಗ್ಗುತ್ತಿರುವುದಕ್ಕೂ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಕೇಂದ್ರ ಸರ್ಕಾರದ ಹೇರುತ್ತಿರುವ ತೆರಿಗೆಯನ್ನು ಕೊಂಚ ಕಡಿತ ಮಾಡಿರುವುದಕ್ಕೂ ಸಂಬಂಧ ಇದೆಯೇ?
ಮೋದಿ ಬೆಂಬಲಿಗರು ಸಂಬಂಧ ಇದೆ ಎಂಬುವುದನ್ನು ಒಪ್ಪುವುದಿಲ್ಲ. ಮೋದಿ ಬೆಂಬಲಿಸುವ ಮಾಧ್ಯಮಗಳೂ ಇದನ್ನು ಒಪ್ಪುವುದಿಲ್ಲ. ಆದರೆ ಉಪಚುನಾವಣೆಗಳಲ್ಲಿ ಬಿಜೆಪಿಗಾದ ಹಿನ್ನೆಡೆಯೇ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ತೆರಿಗೆ ಕಡಿತಕ್ಕೆ ಕಾರಣ ಎಂಬುದನ್ನು ಕನಿಷ್ಠ ಪ್ರಜ್ಞೆ ಇರುವ ಯಾವ ನಾಗರಿಕರೂ ಒಪ್ಪುತ್ತಾರೆ. ಏಕೆಂದರೆ ಪುಟ್ಟ ರಾಜ್ಯ ಹಿಮಾಚಲ ಪ್ರದೇಶದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಒಂದು ಲೋಕಸಭಾ ಕ್ಷೇತ್ರ ಮತ್ತು ಮೂರು ವಿಧಾನಸಭಾ ಕ್ಷೇತ್ರಗಳನ್ನು ಕಳೆದುಕೊಂಡಿದೆ. ಕರ್ನಾಟಕದಲ್ಲಿ ಎರಡು ಕ್ಷೇತ್ರಗಳ ಪೈಕಿ ಒಂದನ್ನು ಮಾತ್ರ ಗೆದ್ದಿರುವ ಬಿಜೆಪಿಗೆ ಭಾರಿ ಹಿನ್ನಡೆಯಾಗಿದೆ. ಹಿಮಾಚಲ ಪ್ರದೇಶ, ಕರ್ನಾಟಕ ಸೇರಿದಂತೆ ಉಪಚುನಾವಣಾ ಫಲಿತಾಂಶ ಇಡೀ ದೇಶದ ಜನತೆಯ ಮನಸ್ಥಿತಿಯನ್ನು ಸಂಕೇತಿಸುವಂತಿದೆ. ಉಪಚುನಾವಣೆಯಲ್ಲಿ ಬಿಜೆಪಿ ಕಳೆದುಕೊಂಡಿದ್ದು ಬರೀ ಕ್ಷೇತ್ರಗಳನ್ನಲ್ಲ, ಇಡೀ ದೇಶದಜನತೆಯ ವಿಶ್ವಾಸವನ್ನು.
ಈ ಹಿನ್ನೆಲೆಯಲ್ಲೇ ದಿಪಾವಳಿ ಕೊಡುಗೆಯ ನೆಪ ಒಡ್ಡಿ ಮೋದಿ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ತೆರಿಗೆ ಕಡಿತ ಘೋಷಣೆ ಮಾಡಿದೆ. ಕೇಂದ್ರ ಸರ್ಕಾರದ ಘೋಷಣೆ ಬೆನ್ನಲ್ಲೇ ರಾಜ್ಯ ಸರ್ಕಾರವೂ ತಲಾ ಏಳು ರುಪಾಯಿ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಕಡಿತ ಮಾಡುವುದಾಗಿ ಹೇಳಿದೆ.
ತೆರಿಗೆ ಕಡಿತ ನಂತರ ಬೆಂಗಳೂರಿನಲ್ಲಿ ಪೆಟ್ರೋಲ್ 113.95 ರಿಂದ 102 ರುಪಾಯಿಗೂ, ಡಿಸೇಲ್ 104.50ರಿಂದ 87.50ರ ಆಜುಬಾಜಿಗೆ ಇಳಿಯಲಿದೆ.
ಆದರೆ, ಮೋದಿ ಸರ್ಕಾರ ಘೋಷಿಸಿರುವ ಪೆಟ್ರೋಲ್ ಮೇಲಿನ ತೆರಿಗೆ ಕಡಿತ 5 ರುಪಾಯಿ ಮತ್ತು ಡಿಸೇಲ್ ಮೇಲಿನ ತೆರಿಗೆ ಕಡಿತ 10 ರುಪಾಯಿಗಳ ಸತ್ಯಾಸತ್ಯತೆ ಏನು? ತೆರಿಗೆ ಕಡಿತ ಮಾಡಿದ ನಂತರದ ಮಾರ್ಪಾಡಾಗುವ ಕಡಮೆ ದರದಲ್ಲೇ ಗ್ರಾಹಕರಿಗೆ ಪೆಟ್ರೋಲ್ ಮತ್ತು ಡಿಸೇಲ್ ಲಭ್ಯವಾಗಲಿದೆಯೇ? ಮುಂಬರುವ ದಿನಗಳಲ್ಲಿ ಮತ್ತೆ ಪೆಟ್ರೋಲ್ ಡಿಸೇಲ್ ಬೆಲೆ ಏರುವುದಿಲ್ಲವೇ?
ಇದು ಟ್ರಿಲಿಯನ್ ಡಾಲರ್ ಪ್ರಶ್ನೆಯಾದರೂ ಉತ್ತರ ಅತ್ಯಂತ ಸರಳ. ಮೋದಿ ಸರ್ಕಾರ ತಾನು ಹೇರಿರುವ ತೆರಿಗೆ ಕಡಿತ ಮಾಡಿದೆಯೇ ಹೊರತು, ಬೆಲೆ ಏರಿಕೆಯ ನಿಯಂತ್ರಿಸುವ ಗ್ಯಾರಂಟಿ ನೀಡುತ್ತಿಲ್ಲ. ಸರ್ಕಾರದ ತೆರಿಗೆ ಕಡಿತದ ನಂತರ ಇಳಿಯುವ ಪೆಟ್ರೋಲ್ ಮತ್ತು ಡಿಸೇಲ್ ದರಗಳು ಸ್ಥಿರವಾಗಿ ಇರುವುದಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲ ದರದ ಏರಿಕೆಗೆ ಅನುಗುಣವಾಗಿ ಮತ್ತೆ ಏರುತ್ತವೆ. ಅಂದರೆ, ಇದು ತಾತ್ಕಾಲಿಕ ಪರಿಹಾರ. ಮೋದಿ ವರ್ಚಸ್ಸಿಗಾಗಿರುವ ಡ್ಯಾಮೇಜು ಸರಿಪಡಿಸಿಕೊಳ್ಳುವ ನೇರ ಹುನ್ನಾರ.
ವಾಸ್ತವಿಕವಾಗಿ ಮೋದಿ ಸರ್ಕಾರವು ತೆರಿಗೆಯನ್ನು ಕಡಿತ ಮಾಡುತ್ತಿಲ್ಲ. ಆದರೆ, ಕೊರೋನಾ ಆತಂಕದಲ್ಲಿ ನಲುಗಿ ಇಡೀ ದೇಶವೇ ಲಾಕ್ಡೌನ್ ಆಗಿದ್ದ ಹೊತ್ತಿನಲ್ಲಿ 2020 ಮೇ 5ರಂದು ಮೋದಿ ಸರ್ಕಾರವು ಪೆಟ್ರೋಲ್ ಮೇಲೆ 10 ರುಪಾಯಿ ಮತ್ತು ಡಿಸೇಲ್ ಮೇಲೆ 13 ರುಪಾಯಿ ಸುಂಕವನ್ನು ಹೇರಿತ್ತು. ಆ ಹೊತ್ತಿನಲ್ಲಿ ದೇಶವ್ಯಾಪಿ ಕಠಿಣ ಲಾಕ್ ಡೌನ್ ಇದ್ದ ಪರಿಣಾಮ ದರ ಏರಿಕೆಯ ಬಿಸಿ ಯಾರಿಗೂ ತಾಗಿರಲಿಲ್ಲ. ಏಕೆಂದರೆ ಆಗ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರವು ಪ್ರತಿ ಬ್ಯಾರೆಲ್ ಗೆ 20 ಡಾಲರ್ ಗಿಂತಲೂ ಕಡಮೆ ದರದಲ್ಲಿ ವಹಿವಾಟಾಗುತ್ತಿತ್ತು. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಗೆ ಅನುಗುಣವಾಗಿ ತೆರಿಗೆ ಹೇರಲು ಕೇಂದ್ರ ಸರ್ಕಾರ ತಂತ್ರ ರೂಪಿಸಿತ್ತು.
2020 ಮೇ 5 ರಂದು ಮೋದಿ ಸರ್ಕಾರ ಕೈಗೊಂಡ ತೈಲ ದರ ಇತಿಹಾಸದಲ್ಲಿಯೇ ಅತಿ ಗರಿಷ್ಠ ಮಟ್ಟದ್ದಾಗಿತ್ತು. ಅಂದು ಕೈಗೊಂಡ ತೆರಿಗೆ ಹೇರಿಕೆಯ ನಿರ್ಧಾರದಿಂದಾಗಿಯೇ ದೇಶದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರ ಶತಕದ ಗಡಿದಾಟಿದೆ. ಮೋದಿ ಸರ್ಕಾರ ಎಷ್ಟು ಜಾಣತನದಿಂದ ತೆರಿಗೆ ಹೇರಿಕೆಯ ಆದೇಶವನ್ನು ಹೊರಡಿಸಿತ್ತೆಂದರೆ, ಕಚ್ಚಾ ತೈಲದರವು ಪ್ರತಿ ಬ್ಯಾರೆಲ್ ಗೆ 60 ಡಾಲರ್ ದಾಟುವ ಹೊತ್ತಿಗೆ ಪೆಟ್ರೋಲ್ ದರ 16 ರುಪಾಯಿ ಮತ್ತು ಡಿಸೇಲ್ ದರ 19 ರುಪಾಯಿ ಹೆಚ್ಚಳ ಮಾಡುವ ಅವಕಾಶವನ್ನು ರೂಪಿಸಿಕೊಂಡಿತ್ತು.
ಈಗ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರವು ಪ್ರತಿ ಬ್ಯಾರೆಲ್ ಗೆ ಬ್ರೆಂಟ್ ಕ್ರೂಡ್ 81 ಡಾಲರ್ ಮತ್ತು ಡಬ್ಲ್ಯೂಟಿಐ (ವೆಸ್ಟ್ ಟೆಕ್ಸಾಸ್ ಇಂಟರ್ಮಿಡಿಯೆಟ್) 80 ಡಾಲರ್ ಆಜುಬಾಜು ವಹಿವಾಟಾಗುತ್ತಿದೆ. ಒಂದು ಅಂದಾಜಿನ ಪ್ರಕಾರ ಮುಂಬರುವ ದಿನಗಳಲ್ಲಿ ಕಚ್ಚಾ ತೈಲ ದರವು ಶತಕ ಮುಟ್ಟುವ ಮುನ್ನಂದಾಜು ಇದೆ. ನಿತ್ಯವೂ ಕಚ್ಚಾ ತೈಲ ದರ ಏರಿದಂತೆ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರಗಳನ್ನು ಏರಿಸುವ ವ್ಯವಸ್ಥೆ ಇದೆ. ಈ ಕಾರಣಕ್ಕಾಗಿಯೇ ನಿತ್ಯವೂ ದರ ಏರುತ್ತಿರುತ್ತದೆ.
ಉದಾಹರಣೆಗೆ ನವೆಂಬರ್ 13 ರಂದು ಬೆಂಗಳೂರಿನಲ್ಲಿ ಪೆಟ್ರೋಲ್ ದರವು 113.93 ರುಪಾಯಿ. ಕೇಂದ್ರ ಸರ್ಕಾರ 5 ರುಪಾಯಿ ಕಡಿತ ಮಾಡುವುದರಿಂದ ಇದು 108.93ಕ್ಕೆ ಇಳಿಯಲಿದೆ. ಅಂದರೆ, ಈ ದರವೇ ಸ್ಥಿರವಾಗಿರುತ್ತದೆ ಎಂದು ಭಾವಿಸಬೇಕಿಲ್ಲ. ನಿತ್ಯವೂ 25 ಪೈಸೆಯಂತೆ ಪೆಟ್ರೋಲ್ ದರವು ಏರಿಕೆಯಾಗುತ್ತಿದೆ. ಈ ಅಂದಾಜಿನಲ್ಲಿ ಕೇಂದ್ರ ಸರ್ಕಾರ ತೆರಿಗೆ ಕಡಿತ ಮೂಲಕ ಇಳಿಸಿರುವ ದರ ಏರಿಕೆಗೆ 20 ದಿನಗಳಷ್ಟೇ ಸಾಕು. ಮತ್ತೆ ಪೆಟ್ರೋಲ್ 113.93ಕ್ಕ ಜಿಗಿಯುತ್ತದೆ.
ಮೋದಿ ಸರ್ಕಾರದ ನಯವಂಚನೆಯನ್ನು ಗಮನಿಸಬೇಕು. 2020 ಮಾರ್ಚ್ 22 ರಂದು ಬೆಂಗಳೂರಿನಲ್ಲಿ ಪೆಟ್ರೋಲ್ ದರವು 71.97 ರುಪಾಯಿಗಳಿತ್ತು. ಆದರೆ, ಮೋದಿ ಸರ್ಕಾರ 41.96 ರುಪಾಯಿಗಳನ್ನು ಈ ಅವಧಿಯಲ್ಲಿ ಹೆಚ್ಚಳ ಮಾಡಿದೆ. ಅಂದರೆ, ಪೆಟ್ರೋಲ್ ಲೆಕ್ಕದಲ್ಲಿ ಹೇಳುವುದಾದರೆ, ಕಳೆದ ಒಂದೂವರೆ ವರ್ಷದಲ್ಲಿ ಸರಿಸುಮಾರು 42 ರುಪಾಯಿ ದರ ಏರಿಕೆ ಮಾಡಿರುವ ಮೋದಿ ಸರ್ಕಾರ ಈಗ 5 ರುಪಾಯಿ ತೆರಿಗೆ ಕಡಿತ ಮಾಡುವ ಮೂಲಕ ದೇಶದ ಜನರಿಗೆ ದಿಪಾವಳಿ ಹಬ್ಬದ ಕೊಡುಗೆ ನೀಡುತ್ತಿರುವುದಾಗಿ ಹೇಳಿಕೊಳ್ಳುತ್ತಿದೆ. ಮೋದಿ ಬೆಂಬಲಿಸುವ ಮಾಧ್ಯಮಗಳು ವಸ್ತುಸ್ಥಿತಿಯನ್ನು ಮರೆಮಾಚಿ ಮೋದಿ ಸರ್ಕಾರದ ನಯವಂಚನೆಗೆ ಬೆಂಬಲ ನೀಡುತ್ತಿವೆ.
2020 ಮಾರ್ಚ್ 14 ರಂದು ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ತಲಾ 3 ರುಪಾಯಿ ಸುಂಕ ಹೇರಿದ್ದ ಕೇಂದ್ರ ಸರ್ಕಾರವು 2020 ಏಪ್ರಿಲ್ 1ರಂದು ಮತ್ತೆ ತಲಾ 3 ರುಪಾಯಿ ಸುಂಕ ಹೇರಿ ಇಡೀ ದೇಶದ ಜನತೆಯನ್ನು ಮೂರ್ಖರನ್ನಾಗಿ ಮಾಡಿತ್ತು. ಇಡೀ ದೇಶವೇ ಲಾಕ್ಡೌನ್ ಆಗಿದ್ದ ವೇಳೆ ಹೇರಲಾಗಿದ್ದ ಸುಂಕ ಅದು.
ಮೋದಿ ಸರ್ಕಾರವು ಕೊರೊನಾ ಸೋಂಕು ತಡೆಯಲು ಲಾಕ್ ಡೌನ್ ಹೇರುವ ಮುನ್ನಾ ದಿನ ಅಂದರೆ, 2020 ಮಾರ್ಚ್ 23 ರಂದು ಸಂಸತ್ತಿನಲ್ಲಿ ತಾನು ಬಯಸಿದ ಯಾವುದೇ ಸಮಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಜ್ ಸುಂಕವನ್ನು ಲೀಟರ್‌ಗೆ 8 ರುಪಾಯಿ ಹೆಚ್ಚಿಸಲು ಅನುವು ಮಾಡಿಕೊಡುವ ನಿಬಂಧನೆಗೆ ಅನುಮೋದನೆ ಪಡೆದಿತ್ತು. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವಿಶೇಷ ಎಕ್ಸೈಜ್ ಸುಂಕದ ಮಿತಿಯನ್ನು ಕ್ರಮವಾಗಿ ಲೀಟರ್‌ಗೆ 18 ಮತ್ತು 12 ರುಪಾಯಿಗೆ ಏರಿಸಲು ಹಣಕಾಸು ಕಾಯ್ದೆ ಎಂಟನೇ ಪರಿಚ್ಛೇದಕ್ಕೆ ತಿದ್ದುಪಡಿ ಮಾಡಿತ್ತು. ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮಂಡಿಸಿದ್ದ 2020 ರ ಹಣಕಾಸು ತಿದ್ದುಪಡಿ ಮಸೂದೆಯು ಯಾವುದೇ ಚರ್ಚೆಯಿಲ್ಲದೇ ಅಂಗೀಕಾರವಾಗಿತ್ತು. ವಿಪಕ್ಷಗಳು ಸಭಾತ್ಯಾಗ ಮಾಡಿದ ಹೊತ್ತಿನಲ್ಲಿ ಈ ಮಸೂದೆಗೆ ಅಂಗೀಕಾರ ಪಡೆಯಲಾಗುತ್ತು. ಹಿಂದಿನ ಮಿತಿ ಪೆಟ್ರೋಲ್‌ಗೆ ಲೀಟರ್‌ಗೆ 10 ಮತ್ತು ಡೀಸೆಲ್‌ಗೆ 4 ರುಪಾಯಿ ಇತ್ತು. ‘ಕೋವಿಡ್-19’ ನಿಂದ ಉದ್ಭವಿಸಿರುವ ಸಂಕಷ್ಟದಿಂದ ಏಕಾಏಕಿ ಬಂದ ಅನಿರೀಕ್ಷಿತ ವೆಚ್ಚಗಳನ್ನು ಭರಿಸಲು ಸುಂಕ ಹೇರುತ್ತಿರುವುದಾಗಿ ಮೋದಿ ಸರ್ಕಾರ ತನ್ನನ್ನು ತಾನು ಸಮರ್ಥಿಸಿಕೊಂಡಿತ್ತು.
ತಿದ್ದುಪಡಿಯು ಕೇಂದ್ರ ಸರ್ಕಾರಕ್ಕೆ ಯಾವಾಗ ಬೇಕಾದರೂ 8 ರುಪಾಯಿ ಏರಿಕೆ ಮಾಡುವ ಅಧಿಕಾರವನ್ನು ನೀಡಿತ್ತು. ಆ ಅಧಿಕಾರವನ್ನು ಬಳಸಿಕೊಂಡು ನರೇಂದ್ರ ಮೋದಿ ಸರ್ಕಾರವು ದೇಶವ್ಯಾಪಿ ಬೇಡಿಕೆಯೇ ಇಲ್ಲದ ಹೊತ್ತಿನಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರವನ್ನು ಕ್ರಮವಾಗಿ 1.65 ಮತ್ತು 1.62 ರುಪಾಯಿ ಏರಿಕೆ ಮಾಡಿತ್ತು. ಮತ್ತೆ ತಲಾ 8 ರುಪಾಯಿ ಏರಿಕೆ ಮಾಡುವ ಮೂಲಕ ಪೂರ್ಣಪ್ರಮಾಣದಲ್ಲಿ ತೆರಿಗೆ ಹೇರಿತ್ತು. ಅಲ್ಲದೇ ನೇರವಾಗಿ ಕರೋನಾ ಸೆಸ್ ಹೆಸರಿನಲ್ಲೇ ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ತೆರಿಗೆ ಹೇರುವುದಕ್ಕೆ ಅನುಮೋದನೆಯನ್ನು ಪಡೆದುಕೊಂಡಿತ್ತು.
ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದ ಅವಧಿಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ ಗೆ 106 ರುಪಾಯಿಗಳಿದ್ದರೂ ಪೆಟ್ರೆಲ್ ದರ 70 ಮತ್ತು ಡಿಸೇಲ್ ದರ 60ರ ಆಜುಬಾಜಿನಲ್ಲಿತ್ತು. ಕಚ್ಚಾ ತೈಲ ದರ ಏರಿಕೆ ಹೊರೆಯನ್ನು ಗ್ರಾಹಕರ ಮೇಲೆ ಹೇರದೇ, ತೈಲ ಮಾರಾಟ ಕಂಪನಿಗಳಿಗೆ ಸಹಾಯಧನ ನೀಡುತ್ತಿತ್ತು. ಅದಕ್ಕಾಗಿ ಆಯಿಲ್ ಬಾಂಡ್ ಯೋಜನೆ ರೂಪಿಸಿತ್ತು. ಈಗ ಮೋದಿ ಸರ್ಕಾರ ಅದೇ ಆಯಿಲ್ ಬಾಂಡ್ ಪಾವತಿಗಳನ್ನು ಮಾಡುವ ಸಲುವಾಗಿ ಪೆಟ್ರೋಲ್ ದರ ಏರಿಕೆ ಮಾಡಿರುವುದಾಗಿ ಹೇಳುತ್ತಿದೆ. ವಾರ್ಷಿಕ ಸರಿಸುಮಾರು 13,000 ಕೋಟಿ ರುಪಾಯಿ ಆಯಿಲ್ ಬಾಂಡ್ ಗಾಗಿ ಪಾವತಿ ಮಾಡಬೇಕಿದೆ. ಆದರೆ, ಮೋದಿ ಸರ್ಕಾರವು ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಸುಂಕ ಏರಿಕೆಯಿಂದ ಸುಮಾರು ವಾರ್ಷಿಕ 4.5 ಲಕ್ಷ ಕೋಟಿ ರುಪಾಯಿ ಸಂಗ್ರಹಿಸುತ್ತಿದೆ.