ಈ ಬಾರಿ ಕಾಂಗ್ರೆಸ್ 130 ಸೀಟು ಗೆಲ್ಲೋದು ಪಕ್ಕಾ ಎಂದು ಹೇಳಿದ್ದೆ, ನನ್ನ ಮಾತು ನಿಜವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ವರುಣ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಬಳಿಕ ಮಾತನಾಡಿದ ಅವರು ಕಾಂಗ್ರೆಸ್ ಇಂದು ದೊಡ್ಡ ಪ್ರಮಾಣದಲ್ಲಿ ಜಯ ಸಾಧಿಸಿದೆ ಎಂದರು .
ರಾಜ್ಯದ ಜನತೆ ಈ ಬಾರಿ ಕಾಂಗ್ರೆಸ್ಗೆ ಬೆಂಬಲ ನೀಡಿದ್ದಾರೆ. ರಾಜ್ಯದ ಜನತೆಗೆ ಬಿಜೆಪಿ ಸರ್ಕಾರದ ದುರಾಡಳಿತದಿಂದ ಹತಾಶರಾಗಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದಿರೋದು ಜನರ ಆದೇಶದಿಂದಲ್ಲ. ಪ್ರತಿಬಾರಿಯೂ ಬಿಜೆಪಿ ರಾಜ್ಯದಲ್ಲಿ ವಾಮಮಾರ್ಗದಲ್ಲಿ ಅಧಿಕಾರಕ್ಕೆ ಬಂದಿದೆ. 2018ರಲ್ಲಿಯೂ ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದಿದ್ದರು. ಪ್ರತಿ ಬಾರಿಯೂ ಸಾಕಷ್ಟು ಹಣ ಖರ್ಚು ಮಾಡಿ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬಿಜೆಪಿಯು ಯಾರ್ಯಾರಿಗೆ ಹಣ ನೀಡಿ ಖರೀದಿಸಿ ಇಂದು ಬಿಜೆಪಿಯಿಂದ ಸ್ಪರ್ಧಿಸಿದ್ದಾರೋ ಅವರಲ್ಲಿ ಬಹುತೇಕರಿಗೆ ರಾಜ್ಯದ ಜನತೆ ಇಂದು ಪಾಠ ಕಲಿಸಿದ್ದಾರೆ. ಆಪರೇಷನ್ ಕಮಲದಲ್ಲಿ ಮಾರಾಟವಾಗಿದ್ದ ಕಾಂಗ್ರೆಸ್, ಜೆಡಿಎಸ್ನ ಮಾಜಿ ನಾಯಕರು ಇಂದು ಸೋಲು ಕಂಡಿದ್ದಾರೆ, ರಾಜ್ಯದ ಮತದಾರರು ಪ್ರಬುದ್ಧರು ಅವರು ಎಲ್ಲವನ್ನು ಗಮನಿಸಿದ್ದಾರೆ. ಬಿಜೆಪಿಯು ಕೋಮು ರಾಜಕಾರಣ ನಡೆಸಿದ್ದಾರೆ. ದ್ವೇಷದ ರಾಜಕಾರಣ ಮಾಡಿದ್ದಾರೆ. ಇವೆಲ್ಲವನ್ನೂ ರಾಜ್ಯದ ಜನತೆ ನೋಡಿದ್ದಾರೆ ಎಂದಿದ್ದಾರೆ.