ಚನ್ನಪಟ್ಟಣ : ಸಂಪದ್ಭರಿತವಾದ ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಬಿಹಾರವನ್ನು ಹಿಂದಿಕ್ಕುವ ಕೆಟ್ಟ ವಾತಾವರಣ ನಿರ್ಮಾಣವಾಗುತ್ತಿದೆ. ಆ ರೀತಿ ಆಗಲೇಬೇಕು ಎಂದಿದ್ದರೆ ನಾವೇನೂ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ( HD Kumaraswamy ) ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕಿನ ಅಕ್ಕೂರಿನಲ್ಲಿ ಗುರುವಾರ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನೆ ಸಮಾರಂಭದಲ್ಲಿ ಭಾಗಿಯಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ರಾಜ್ಯವನ್ನು ಉಳಿಸುವವರು ಯಾರು ಎಂಬುದನ್ನು ಜನ ಮೊದಲು ಅರ್ಥ ಮಾಡಿಕೊಳ್ಳಬೇಕು. ಬುದ್ದಿವಂತರಾಗಿ ತೀರ್ಮಾನ ಕೈಗೊಳ್ಳಬೇಕು ಎಂದರು.

ರಾಜ್ಯ ಸರ್ಕಾರ ಹಾಗೂ ಬಜೆಟ್ ನಿರೀಕ್ಷೆ ಕುರಿತು ಚರ್ಚಿಸುವುದರಲ್ಲಿ ಅರ್ಥವೇ ಇಲ್ಲ. ಆ ರೀತಿ ಮಾಡುವುದು ಕೆಸರಿನ ಮೇಲೆ ಕಲ್ಲು ಎಸೆದಂತೆ. ಎಸ್ಸಿ ( SC ) ಮತ್ತು ಎಸ್ಟಿ ( ST )ಸಮುದಾಯದ ಪರಿಸ್ಥಿತಿ ಏನಾಗಿದೆ? ಜನಸಾಮಾನ್ಯರ ಕೆಲಸಗಳು ಯಾವ ರೀತಿ ನಡೆಯುತ್ತಿವೆ ಎಂಬುದನ್ನು ನೀವೇ ಗಮನಿಸಬೇಕು. ಕಳೆದ ಎರಡು ವರ್ಷಗಳಿಂದ ಇವರು ಏನು ಮಾಡಿದ್ದಾರೆ?’ ಎಂದು ಪ್ರಶ್ನಿಸಿದರು.

ಇನ್ನು ಸರ್ಕಾರ ವೈಫಲ್ಯಗಳ ಕುರಿತ ಚರ್ಚೆ ಜನರಿಗೇ ಬೇಕಿಲ್ಲ. ಬಸ್ ಟಿಕೆಟ್, ಮೆಟ್ರೊ ಪ್ರಯಾಣ ದರ ಏರಿಕೆ ಮಾಡಿದರೂ ಜನ ತಲೆ ಕೆಡಿಸಿಕೊಂಡಿಲ್ಲ. ಇದೀಗ ವಿದ್ಯುತ್ ಮೀಟರ್ ದರ ಏರಿಕೆಗೆ ಮುಂದಾಗಿದ್ದಾರೆ. ಸರ್ಕಾರದ ಅಕ್ರಮಗಳ ಕುರಿತ ಚರ್ಚೆ ಜನರಿಗೂ ಬೇಡವಾಗಿದೆ. ಹೀಗಿದ್ದಾಗ ವಿರೋಧ ಪಕ್ಷಗಳು ಏನು ಮಾಡುತ್ತವೆ. ಗ್ಯಾರಂಟಿ ಯೋಜನೆಗಳಿಂದ ಜನ ನೆಮ್ಮದಿಯಾಗಿರಬೇಕಲ್ಲವೆ?’ ಎಂದು ಪ್ರಶ್ನೆಯೊಂದಕ್ಕೆ ವ್ಯಂಗ್ಯವಾಡಿದರು.

ಚನ್ನಪಟ್ಟಣ ಕ್ಷೇತ್ರಕ್ಕೆ ನಾನು ಏನು ಮಾಡಿದ್ದೇನೆ ಎಂದು ಕೇಳುವವರು ಎರಡು ವರ್ಷದಿಂದ ಏನು ಮಾಡಿದ್ದಾರೆ? ಅವರ ಯಾವ ಸಾಕ್ಷಿಗುಡ್ಡೆ ಹಾಕಿದ್ದಾರೆ ಎಂಬುದನ್ನು ಮೂರ್ನಾಲ್ಕು ತಿಂಗಳಿಂದ ನೋಡುತ್ತಿದ್ದೇನೆ. ಅಕ್ಕೂರು ಕೆರೆಗೆ ನೀರು ಬಂದಿದೆಯೇ? ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಅವರಾರೊ ಕೇಳುತ್ತಾರೆ ಎಂದು ನಾನು ಕೆಲಸ ಮಾಡುವುದಿಲ್ಲ’ ಎಂದು ಪರೋಕ್ಷವಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಶಾಸಕ ಸಿ.ಪಿ. ಯೋಗೇಶ್ವರ್ ವಿರುದ್ಧ ಕಿಡಿಕಾರಿದರು.