ಪೇಗಾಸಸ್ ಸ್ಪೈವೇರ್ ಗೂಢಚಾರಿಕೆಗೆ ಸಂಬಂಧಿಸಿದ ಪೇಗಾಸಸ್ ಲೀಕ್ಸ್ ಮತ್ತಷ್ಟು ವಿವರಗಳು ಬಹಿರಂಗವಾಗಿದ್ದು, ರಾಜ್ಯದ ಬಿಜೆಪಿಯೇತರ ಪಕ್ಷಗಳ ಪ್ರಮುಖ ನಾಯಕರು ಮತ್ತು ಅವರ ಆಪ್ತ ಸಹಾಯಕರ ಮೊಬೈಲ್ ಗಳು ಕೂಡ ‘ಲುಕ್ ಔಟ್’ ಪಟ್ಟಿಯಲ್ಲಿದ್ದವು ಎಂಬ ಸಂಗತಿ ಇದೀಗ ಕರ್ನಾಟಕದಲ್ಲಿ ಸಂಚಲನ ಮೂಡಿಸಿದೆ.
ಜಾಗತಿಕ ಮಟ್ಟದಲ್ಲಿ ಅತ್ಯಂತ ಶಕ್ತಿಶಾಲಿ ಮೊಬೈಲ್ ಮತ್ತು ಡಿಜಿಟಲ್ ಗೂಢಚಾರಿಕೆಯ ಅಸ್ತ್ರವಾಗಿ ಬಳಕೆಯಾಗುತ್ತಿರುವ ಇಸ್ರೇಲಿ ಮೂಲದ ಎನ್ ಎಸ್ ಒ ಸಂಸ್ಥೆಯ ಪೇಗಾಸಸ್ ಸ್ಪೈವೇರ್ ಬಳಸಿ ಜಗತ್ತಿನಾದ್ಯಂತ 50 ಸಾವಿರಕ್ಕೂ ಹೆಚ್ಚು ಜನರ ಮೊಬೈಲ್ ಗಳ ಮೇಲೆ ಗೂಢಚಾರಿಕೆ ನಡೆಸಲಾಗಿದೆ ಎಂಬ ಸಂಗತಿಯನ್ನು ಬಹಿರಂಗಪಡಿಸಿರುವ ಫ್ರೆಂಚ್ ಮಾಧ್ಯಮ ಸಂಸ್ಥೆ ಫಾರ್ಬಿಡನ್ ಸ್ಟೋರೀಸ್ನ ಕಾರ್ಯಾಚರಣೆಯ ಭಾರತ ಮತ್ತು ಕರ್ನಾಟಕಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳು ಹೊರಬಂದಿವೆ. ‘ಫಾರ್ಬಿಡನ್ ಸ್ಟೋರಿಸ್’ ಸಂಸ್ಥೆಯ ಫೇಗಾಸಸ್ ಕುರಿತ ತನಿಖೆಯ ಪಾಲುದಾರರಾಗಿದ್ದ ಜಾಗತಿಕ ಮಾಧ್ಯಮ ಒಕ್ಕೂಟ ಭಾಗವಾಗಿದ್ದ ‘ದ ವೈರ್’ ಈ ಕುರಿತ ತನಿಖೆಯನ್ನು ಮುಂದುವರಿಸಿದ್ದು, ಮುಖ್ಯವಾಗಿ ಕರ್ನಾಟಕದಲ್ಲಿ 2019ರಲ್ಲಿ ಅಂದಿನ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಆಪರೇಷನ್ ಕಮಲದ ಮೂಲಕ ಕೆಡವಿ, ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ನಡೆದ ಭಾರೀ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ, ಕರ್ನಾಟಕದ ಪ್ರಮುಖ ರಾಜಕಾರಣಿಗಳ ಮೇಲೆ ಈ ಪೇಗಾಸಸ್ ಗೂಢಚಾರಿಕೆ ನಡೆಸಲಾಗಿತ್ತು ಎಂಬ ಸಂಗತಿ ಬಯಲಾಗಿದೆ.
2019ರ ಜುಲೈನಲ್ಲಿ ಸಮ್ಮಿಶ್ರ ಸರ್ಕಾರ ಉರುಳಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಆ ಬದಲಾವಣೆಗೆ ಮುನ್ನ ನಡೆದ ರಾಜಕೀಯ ವಿದ್ಯಮಾನಗಳಲ್ಲಿ ಆಡಳಿತರೂಢ ಕಾಂಗ್ರೆಸ್ ಮತ್ತು ಜೆಡಿಎಸ್ ನ 17 ಮಂದಿ ಶಾಸಕರು ಮತ್ತು ಸಚಿವರು ಏಕಾಏಕಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ಹೋಗಿ ತಿಂಗಳುಗಟ್ಟಲೆ ಅಲ್ಲಿ ತಲೆಮರೆಸಿಕೊಂಡಿದ್ದು ಮುಖ್ಯವಾದುದು. ಹಾಗೆ ಅವರು ಹೋಗುವ ಮುಂಚೆ ಕೂಡ ಹಲವು ತಿಂಗಳುಗಳಿಂದ ಅತೃಪ್ತರು ಎಂದು ಗುರುತಿಸಿಕೊಂಡಿದ್ದ ಆ ಗುಂಪು ರಾಜಕೀಯ ಮೇಲಾಟ ನಡೆಸುತ್ತಲೆ ಇತ್ತು. ಹಾಗಾಗಿ ಸಮ್ಮಿಶ್ರ ಸರ್ಕಾರ ಹೆಚ್ಚು ದಿನ ಉಳಿಯಲಾರದು ಎಂಬ ಅಭಿಪ್ರಾಯವಿತ್ತು.
ಸರಿಯಾಗಿ ಅಂತಹ ರಾಜಕೀಯ ಮೇಲಾಟದ ಹೊತ್ತಲ್ಲೇ ಆಗಿನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ್, ಜೆಡಿಎಸ್ ಅಧಿನಾಯಕ ಮತ್ತು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಕಾಂಗ್ರೆಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಬಿಜೆಪಿಯೇತರ ರಾಜಕೀಯ ಪ್ರಮುಖರ ಮೊಬೈಲ್ ಗಳನ್ನು ಪೇಗಾಸಸ್ ಬಳಸಿ ಕಣ್ಣಿಡಲು ‘ಲುಕ್ ಔಟ್’ ಪಟ್ಟಿಗೆ ಸೇರಿಸಲಾಗಿತ್ತು ಎಂಬ ಆಘಾತಕಾರಿ ಅಂಶವನ್ನು ‘ದ ವೈರ್’ ವರದಿ ಮಾಡಿದೆ. ಕುತೂಹಲಕಾರಿ ಸಂಗತಿ ಎಂದರೆ, ಹೀಗೆ ಕರ್ನಾಟಕದ ಆಡಳಿತರೂಢ ಮೈತ್ರಿ ಸರ್ಕಾರವನ್ನು ಕೆಡವಿ ಬಿಜೆಪಿ ಸರ್ಕಾರ ಸ್ಥಾಪಿಸಲು ಯಡಿಯೂರಪ್ಪ ಮತ್ತು ಅವರ ಬಿಜೆಪಿ ಪಡೆ ಒಂದು ಕಡೆ ಪ್ರಯತ್ನಿಸುತ್ತಿರುವಾಗಲೇ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುವ ಸ್ಥಾನದಲ್ಲಿರುವವರ ಮೊಬೈಲ್ ಗಳ ಮೇಲೆ ಪೇಗಾಸಸ್ ಕಣ್ಣಿಡಲು ಯೋಜಿಸಲಾಗುತ್ತದೆ ಮತ್ತು ಅದೇ ಹೊತ್ತಿಗೆ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿಯವರ ಮೊಬೈಲ್ ಮೇಲೂ ಪೇಗಾಸಸ್ ಗೂಢಚಾರಿಕೆಗೆ ಅವರ ಮೊಬೈಲ್ ಸಂಖ್ಯೆಯನ್ನು ಲುಕ್ ಔಟ್ ಪಟ್ಟಿಗೆ ಸೇರಿಸಲಾಗುತ್ತದೆ!
ಈ ನಾಯಕರ ಮೊಬೈಲ್ ನಂಬರುಗಳು ಇದೀಗ ಬಹಿರಂಗವಾಗಿರುವ ಪೇಗಾಸಸ್ ಲೀಕ್ಸ್ ನಲ್ಲಿ ಪತ್ತೆಯಾಗಿದ್ದು, ಸ್ಪೈವೇರ್ ಮೂಲಕ ಆ ನಾಯಕರ ಮೊಬೈಲ್ ಒಳನುಗ್ಗಿ ಅವರ ಮಾತುಕತೆ, ಚಾಟ್, ಅವರ ಓಡಾಟ, ಕ್ಯಾಮರಾ ಬಳಕೆ, ಜಿಪಿಎಸ್ ಬಳಕೆ, ಅವರೊಂದಿಗೆ ಮಾತುಕತೆ ನಡೆಸುವವರ ವಿವರ, ಸದಾ ಅವರೊಂದಿಗೆ ಇರುವ ವ್ಯಕ್ತಿಗಳ ಮಾಹಿತಿಯನ್ನು ಪಡೆಯಲು ಪೇಗಾಸಸ್ ಸ್ಪೈವೇರ್ ದಾಳಿ ನಡೆಸಲು ಆ ಮೊಬೈಲ್ ಗಳನ್ನು ಲುಕ್ ಔಟ್ ಪಟ್ಟಿಗೆ ಸೇರಿಸಲಾಗಿದೆ. ಆದರೆ, ವಾಸ್ತವವಾಗಿ ಈ ವ್ಯಕ್ತಿಗಳ ಮೊಬೈಲ್ ಗಳಲ್ಲಿ ಆ ಅವಧಿಯಲ್ಲಿ ಪೇಗಾಸಸ್ ದಾಳಿ ನಡೆದಿತ್ತೆ, ಆ ಮೂಲಕ ಅವರ ಮೇಲೆ ಅಕ್ಷರಶಃ ಪೇಗಾಸಸ್ ಗೂಢಚಾರಿಕೆ ನಡೆದಿತ್ತೆ? ಎಂಬುದನ್ನು ಖಚಿತಪಡಿಸಿಕೊಳ್ಳಲು ಆ ಮೊಬೈಲ್ ಬಳಕೆದಾರರ ಅನುಮತಿಯೊಂದಿಗೆ ಮೊಬೈಲ್ ಗಳ ಫೋರೆನ್ಸಿಕ್ ತಪಾಸಣೆ ಮಾಡಬೇಕಾಗುತ್ತದೆ. ಸದ್ಯಕ್ಕೆ ‘ದ ವೈರ್’ ಆ ಕೋರಿಕೆಯನ್ನು ಪ್ರಮುಖ ನಾಯಕರ ಮುಂದಿಟ್ಟಿದ್ದು, ಬಹುತೇಕ ಮಂದಿ ಖಾಸಗೀತನಕ್ಕೆ ಧಕ್ಕೆ ಬರುವ ಕಾರಣವೊಡ್ಡಿ ತಮ್ಮ ಮೊಬೈಲ್ ಗಳನ್ನು ಫೋರೆನ್ಸಿಕ್ ತಪಾಸಣೆಗೆ ನೀಡಲು ನಿರಾಕರಿಸಿದ್ದಾರೆ ಎಂದು ವರದಿ ಹೇಳಿದೆ.
ಆದರೆ, ಆಡಳಿತ ಪಕ್ಷದ ಶಾಸಕರಿಗೆ ಬಲೆಬೀಸಿ, ಆಮಿಷವೊಡ್ಡಿ, ಅಂತಹ ಖರೀದಿ ರಾಜಕಾರಣಕ್ಕೆ ಆಪರೇಷನ್ ಕಮಲ ಎಂಬ ಹೆಸರಿಟ್ಟು ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವ ಯತ್ನಗಳು, ಕೇಂದ್ರದ ಬಿಜೆಪಿ ಸರ್ಕಾರದ ಕುಮ್ಮಕ್ಕಿನಿಂದಲೇ ಜಾರಿಯಲ್ಲಿರುವ ಹೊತ್ತಿಗೇ ಅದೇ ಜೆಡಿಎಸ್-ಕಾಂಗ್ರೆಸ್ ನಾಯಕರ ಮೇಲೆ ಪೇಗಾಸಸ್ ಗೂಢಚಾರಿಕೆಯ ತಯಾರಿಗಳು ಕೂಡ ನಡೆದಿದ್ದವು ಎಂಬುದಂತೂ ಸದ್ಯಕ್ಕೆ ಪೇಗಾಸಸ್ ಲೀಕ್ಸ್ ಮೂಲಕ ಖಚಿತವಾಗಿದೆ.
also read: ಸಂಚಲನ ಸೃಷ್ಟಿಸಿದ ಪೇಗಾಸಸ್ ಲೀಕ್ಸ್: ಮೋದಿ ಆಡಳಿತದ ಟೀಕಾಕಾರರ ಮೊಬೈಲ್ ಗೆ ಕನ್ನ!
ಅಂದಿನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಆಪ್ತ ಸಹಾಯಕರಾಗಿದ್ದ ಸತೀಶ್ ಅವರು ಬಳಸುತ್ತಿದ್ದ ಎರಡು ಮೊಬೈಲ್ ಸಂಖ್ಯೆಗಳು ಪೇಗಾಸಸ್ ಲುಕ್ ಔಟ್ ಪಟ್ಟಿಯಲ್ಲಿದ್ದು, ಸತೀಶ್ ಅವರು ಆ ಸಂದರ್ಭದಲ್ಲಿ ಆ ಎರಡು ಸಂಖ್ಯೆಗಳನ್ನು ತಾವು ಬಳಸುತ್ತಿದುದಾಗಿ ಒಪ್ಪಿಕೊಂಡಿದ್ದಾರೆ. ಆದರೆ, ತಮ್ಮ ಮೊಬೈಲ್ ನಂಬರುಗಳು ಪೇಗಾಸಸ್ ಲೀಕ್ಸ್ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ ಎಂದು ದ ವೈರ್ ಹೇಳಿದೆ.
ಹಾಗೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಸಹಾಯಕ ವೆಂಕಟೇಶ್ ಅವರ ಮೊಬೈಲ್ ನಂಬರ್ ಕೂಡ ಪೇಗಾಸಸ್ ಲುಕ್ ಔಟ್ ಪಟ್ಟಿಯಲ್ಲಿದ್ದು, ಆ ನಂಬರನ್ನು ತಾವು ಬಳಸುತ್ತಿದುದಾಗಿ ವೆಂಕಟೇಶ್ ಕೂಡ ಖಚಿತಪಡಿಸಿದ್ದಾರೆ. ಆ ಬಗ್ಗೆ ಪ್ರತಿಕ್ರಿಯಿಸಿರುವ ವೆಂಕಟೇಶ್, “ನನ್ನ ಮೊಬೈಲ್ ಮೇಲೆ ಗೂಢಚಾರಿಕೆ ನಡೆದಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ನಾನು ಯಾವುದೇ ಅಕ್ರಮ ನಡೆಸಿಲ್ಲ ಎಂಬುದನ್ನು ಮಾತ್ರ ಹೇಳಬಲ್ಲೆ. ನೀವು ಹೇಳುವುದು ನಿಜವೇ ಆಗಿದ್ದರೆ, ಅಂತಹ ಕೃತ್ಯವನ್ನು ನಾನು ಬಲವಾಗಿ ಖಂಡಿಸುತ್ತೇನೆ” ಎಂದು ಪ್ರತಿಕ್ರಿಯಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸಾಮಾನ್ಯವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವೈಯಕ್ತಿಕ ಮೊಬೈಲ್ ಬಳಸುವುದಿಲ್ಲ. ಅವರು ತಮ್ಮೆಲ್ಲಾ ಮಾತುಕತೆಗಳಿಗೆ ತಮ್ಮ ಆಪ್ತರ ಮೊಬೈಲ್ ಗಳನ್ನೇ ಬಳಸುತ್ತಾರೆ ಎಂಬ ಹಿನ್ನೆಲೆಯಲ್ಲಿ ಅವರ ಆಪ್ತ ವೆಂಕಟೇಶ್ ಅವರ ಮೊಬೈಲನ್ನು ಪೇಗಾಸಸ್ ಗೂಢಚಾರಿಕೆಗೆ ಆಯ್ಕೆ ಮಾಡಿರುವುದರ ಹಿಂದೆ ಎಂತಹ ತಂತ್ರಗಾರಿಕೆ ಅಡಗಿರಬಹುದು ಮತ್ತು ಆ ಹೊತ್ತಿನ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮಾತುಕತೆ ಮತ್ತು ಅವರ ಚಲನವಲನದ ಮೇಲೆ ಕಣ್ಣಿಡುವುದು ಸಮ್ಮಿಶ್ರ ಸರ್ಕಾರ ಕೆಡವುವ ಷಢ್ಯಂತ್ರಕ್ಕೆ ಎಷ್ಟು ಅವಶ್ಯವಾಗಿತ್ತು ಎಂಬ ಹಿನ್ನೆಲೆಯಲ್ಲಿ ನೋಡಿದರೆ, ಪೇಗಾಸಸ್ ಸ್ಪೈವೇರ್ ಗೂಢಚಾರಿಕೆಯ ಮಹತ್ವ ಅರಿವಾಗದೇ ಇರದು!
ಅಷ್ಟೇ ಅಲ್ಲ; ಆ ಅವಧಿಯಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್ ಹಿರಿಯ ನಾಯಕ ಜಿ ಪರಮೇಶ್ವರ್ ಅವರ ಮೊಬೈಲ್ ಕೂಡ ಪೇಗಾಸಸ್ ಲುಕ್ ಔಟ್ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಆ ಹಿನ್ನೆಲೆಯಲ್ಲಿ ಆ ಮೊಬೈಲ್ ಸಂಖ್ಯೆ ತಮ್ಮದೇ ಎಂದು ಖಚಿತಪಡಿಸಿರುವ ಜಿ ಪರಮೇಶ್ವರ್, ಆ ಸಂದರ್ಭದಲ್ಲಿ ತಾವು ಆ ನಂಬರ್ ಬಳಸುತ್ತಿದ್ದುದಾಗಿಯೂ ಮತ್ತು ತಾವು ಆ ಹೊತ್ತಿನ ರಾಜಕೀಯ ವಿದ್ಯಮಾನಗಳಲ್ಲಿ ಯಾವುದೇ ಪಾತ್ರ ವಹಿಸಿರಲಿಲ್ಲ. ಆದರೂ ನನ್ನ ಮೊಬೈಲನ್ನು ಯಾಕೆ ಗೂಢಚಾರಿಕೆಗೆ ಪಟ್ಟಿಮಾಡಲಾಯಿತು ಎಂಬುದು ಗೊತ್ತಾಗುತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಹಾಗೇ ಸಮ್ಮಿಶ್ರ ಸರ್ಕಾರ ಉರುಳಿಸುವ ಪ್ರಯತ್ನಗಳು ಚುರುಕಾಗಿದ್ದ ಹೊತ್ತಲ್ಲಿ, ಆ ಸರ್ಕಾರದ ಸೂತ್ರಧಾರರಲ್ಲಿ ಒಬ್ಬರಾಗಿದ್ದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಅಧಿನಾಯಕ ಎಚ್ ಡಿ ದೇವೇಗೌಡರ ಭದ್ರತಾ ಸಿಬ್ಬಂದಿ ಮಂಜುನಾಥ ಮುದ್ದೇಗೌಡ(ಮಂಜೇಗೌಡ) ಅವರ ಮೊಬೈಲ್ ನಂಬರನ್ನು ಕೂಡ ಪೇಗಾಸಸ್ ಲುಕ್ ಔಟ್ ಪಟ್ಟಿಗೆ ಸೇರಿಸಲಾಗಿತ್ತು ಎಂಬ ಸಂಗತಿಯನ್ನೂ ದ ವೈರ್ ಬಹಿರಂಗಪಡಿಸಿದೆ. 2019ರಲ್ಲಿ ಲುಕ್ ಔಟ್ ಪಟ್ಟಿಗೆ ಸೇರಿದ ಆ ನಂಬರ್ ತಮ್ಮದೇ ಎಂದು ಮಂಜೇಗೌಡರು ಖಚಿತಪಡಿಸಿದ್ದಾರೆ. ಆದರೆ, ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ಧಾರೆ ಎಂದು ಹೇಳಲಾಗಿದೆ.
also read: ಪೆಗಾಸಸ್ ದುರುಪಯೋಗದ ಪ್ರತಿ ಆರೋಪಗಳ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ: ಎನ್ಎಸ್ಒ ಸಮೂಹದ ಅಧ್ಯಕ್ಷ
ಒಟ್ಟಾರೆ ದ ವೈರ್ ಬಹಿರಂಗಪಡಿಸಿರುವ ಈ ಆಘಾತಕಾರಿ ಮಾಹಿತಿ, 2019ರ ಸರ್ಕಾರಗಳ ಬದಲಾವಣೆಯ ಹೊತ್ತಿನಲ್ಲಿ ಮೇಲ್ನೋಟಕ್ಕೆ ಎಲ್ಲರ ಕಣ್ಣಿಗೆ ರಾಚುತ್ತಿದ್ದ ಸಂಗತಿಗಳ ಆಚೆಗೆ ಗೂಢಚಾರಿಕೆಯಂತಹ ಆಘಾತಕಾರಿ ಷಢ್ಯಂತ್ರಗಳು ನಡೆದಿದ್ದವು ಎಂಬುದನ್ನು ಬಹಿರಂಗಪಡಿಸಿದೆ. ಶಾಸಕರ ಮುಂಬೈ ಯಾತ್ರೆ, ಅಲ್ಲಿ ತಿಂಗಳುಗಟ್ಟಲೆ ತಲೆಮರೆಸಿಕೊಂಡಿದ್ದು, ಅವರುಗಳನ್ನು ಬಿಜೆಪಿ ನಾಯಕರು ಮತ್ತು ಸ್ವತಃ ಯಡಿಯೂರಪ್ಪ ಆಪ್ತ ಸಹಾಯಕರು ವಿಮಾನದಲ್ಲಿ ಅಲ್ಲಿಗೆ ಕರೆದೊಯ್ದು, ಅವರಿಗೆ ರಕ್ಷಣೆ ನೀಡಿದ್ದು, ಸ್ಪೀಕರ್ ಅವರನ್ನು ಅಮಾನತುಗೊಳಿಸಿದ್ದು, ಬಳಿಕ ಬಹುಮತಕಳೆದುಕೊಂಡು ಸಮ್ಮಿಶ್ರ ಸರ್ಕಾರ ಕುಸಿದಿದ್ದು, ಬಳಿಕ ಯಡಿಯೂರಪ್ಪ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದು, ಅದಾದ ಆರು ತಿಂಗಳಲ್ಲೇ ತಮಗೂ ಬಿಜೆಪಿಗೂ ಸಂಬಂಧವೇ ಇಲ್ಲವೆಂದು ಹೇಳುತ್ತಿದ್ದ ಅದೇ ಅತೃಪ್ತ 17 ಮಂದಿ ಬಿಜೆಪಿಗೆ ಸೇರ್ಪಡೆಯಾಗಿ ಉಪ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದು, ಹೀಗೆ ಸರಣಿ ಬೆಳವಣಿಗೆಗಳು ಜನರ ಕಣ್ಣಿಗೆ ರಾಚುತ್ತಿದ್ದರೆ, ತೆರೆಮರೆಯಲ್ಲಿ ಪೇಗಾಸಸ್ ಗೂಢಚಾರಿಕೆ ಸರ್ಕಾರ ಬದಲಾವಣೆಯಲ್ಲಿ ನಿರ್ಣಾಯಕವಾಗಿತ್ತು ಎಂಬುದು ಈಗ ಚರ್ಚೆಯಾಗುತ್ತಿರುವ ಸಂಗತಿ.
ಆ ನಿಟ್ಟಿನಲ್ಲಿ, ಕರ್ನಾಟಕಕ್ಕೆ ಸಂಬಂಧಿಸಿದಂತೆ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವ ಆ ವೇಳೆಯಲ್ಲಿ ಆ ಸರ್ಕಾರದ ಪ್ರಮುಖರ ಮೊಬೈಲ್ ಸಂಖ್ಯೆಗಳನ್ನು ಹೊರತುಪಡಿಸಿ, ಅಂದಿನ ಪ್ರತಿಪಕ್ಷ ಮತ್ತು ಆ ಸರ್ಕಾರ ಉರುಳಿಸಿದ ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿಯ ಯಾವ ನಾಯಕರ ಮೊಬೈಲ್ ಗಳೂ ಪೇಗಾಸಸ್ ಲುಕ್ ಔಟ್ ಪಟ್ಟಿಯಲ್ಲಿ ಇಲ್ಲ ಎಂಬುದು ಬಹಳ ಗಮನಾರ್ಹ ಸಂಗತಿ. ಇದೊಂದೇ ವಿಷಯ ಪೇಗಾಸಸ್ ಗೂಢಚಾರಿಕೆಯ ಬಗ್ಗೆ, ಅದರ ಹಿಂದಿನ ಕಾಣದ ಕೈಗಳ ಬಗ್ಗೆ ಮತ್ತು ಸಮ್ಮಿಶ್ರ ಸರ್ಕಾರವಷ್ಟೇ ಅಲ್ಲದೆ ರಾಜ್ಯ ಮತ್ತು ದೇಶದ ರಾಜಕಾರಣವನ್ನು ನಿಯಂತ್ರಿಸುತ್ತಿರುವ ಶಕ್ತಿಗಳ ಬಗ್ಗೆ ಸಾಕಷ್ಟು ಹೇಳುತ್ತದೆ. ಅಲ್ಲವೆ?