ಬೆಂಗಳೂರು: ಏ.೦೨: ನಗರದ ಹೃದಯ ಭಾಗದಲ್ಲಿರುವ ಸ್ಯಾಂಕಿ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ಶಾಂತಿಯುತ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ 70 ನಾಗರಿಕರ ವಿರುದ್ಧ ಸದಾಶಿವನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮರಗಳನ್ನು ಉಳಿಸಬೇಕೆಂದು ಒತ್ತಾಯಿಸಿ ನಾಗರಿಕರು ಪಾದಚಾರಿ ಮಾರ್ಗದಲ್ಲಿ ಕಪ್ಪುಬಟ್ಟೆ ಧರಿಸಿ ಯಾರಿಗೂ ತೊಂದರೆಯಾಗದಂತೆ ಶಾಂತಿಯುತ ಪ್ರತಿಭಟನೆ ನಡೆಸಿದ್ದರು. ಆದ್ರೆ ಶಾಂತಿಯುತ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 70 ನಾಗರಿಕರ ವಿರುದ್ಧ ಕೇಸ್ ದಾಖಲಿಸಲಾಗಿದೆ. ಪೊಲೀಸರ ಈ ಕ್ರಮಕ್ಕೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಇದೇ ವಿಚಾರವಾಗಿ ಇವತ್ತು ಮಲ್ಲೇಶ್ವರಂನಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೊಮ್ಮಾಯಿ ಅವರು ಪದೇ ಪದೆ ಹೇಳುತ್ತಿರುವಂತೆ ಕರ್ನಾಟಕದಲ್ಲಿ ಉತ್ತರ ಪ್ರದೇಶ ಮಾದರಿ ಜಾರಿ ಮಾಡಲಾಗುತ್ತಿದೆ. ಉತ್ತರ ಪ್ರದೇಶದ ಮಾದರಿಯಲ್ಲೇ ಯಾರೂ ಸರ್ಕಾರದ ವಿರುದ್ಧ ಮಾತನಾಡಬಾರದು, ಪ್ರಶ್ನೆ ಕೇಳಬಾರದು, ಪ್ರತಿಭಟನೆ ಮಾಡಬಾರದು ಎಂಬ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದಿದ್ದಾರೆ.
ಸರ್ಕಾರದ ವಿರುದ್ಧ ಮಾತಾಡಿದ್ರೆ ಪೊಲೀಸರ ಮೂಲಕ ಕೇಸ್ ದಾಖಲಿಸ್ತಾರೆ
ವಿರೋಧ ಪಕ್ಷವಾಗಲಿ, ಸಾರ್ವಜನಿಕರಾಗಲಿ, ಸರ್ಕಾರದ ವಿರುದ್ದ ಮಾತನಾಡಿದರೆ ಪೊಲೀಸರ ಮೂಲಕ ದೌರ್ಜನ್ಯ, ಪ್ರಕರಣ ದಾಖಲಿಸಲಾಗುವುದು ಎಂಬ ಸಂದೇಶವನ್ನು ಈ ಸರ್ಕಾರ ಅಶ್ವತ್ಥ್ ನಾರಾಯಣ ಅವರ ಮೂಲಕ ಕಳುಹಿಸುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಮಲ್ಲೇಶ್ವರಂನ 60-70 ಜನರ ವಿರುದ್ದ ಈಗ ಪ್ರಕರಣ ದಾಖಲಾಗಿ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅವರು ಮಾಡಿರುವ ತಪ್ಪು ಏನೆಂದರೆ, ಸ್ಯಾಂಕಿ ಮೇಲ್ಸೇತುವೆ ಯೋಜನೆ ವಿರೋಧಿಸಿ ಪರಿಸರ ಉಳಿಸಲು ಹೋರಾಟ ಮಾಡಿರುವುದು.
ಈ ಸಾರ್ವಜನಿಕರು 22 ಸಾವಿರ ಜನ ಸಹಿ ಹಾಕಿರುವ ಅರ್ಜಿಯಲ್ಲಿ ಸ್ಯಾಂಕಿ ಮೇಲ್ಸೇತುವೆ ರಸ್ತೆ ಅಗಲೀಕರಣ ಬೇಡ ಎಂದು ಹೇಳಿದ್ದಾರೆ. 2 ಸಾವಿರ ಶಾಲಾ ಮಕ್ಕಳು ಬೊಮ್ಮಾಯಿ ಅಂಕಲ್ ಗೆ ಪತ್ರ ಬರೆದು ಈ ಯೋಜನೆಯಿಂದ ಪರಿಸರ ನಾಶವಾಗಲಿದೆ, ನಮ್ಮ ಶಾಲೆಗೆ ತೊಂದರೆಯಾಗಲಿದೆ ಅಂತ ತಮ್ಮ ಮನವಿ ಸಲ್ಲಿಸಿದ್ದಾರೆ. ಆದರೂ ಮುಖ್ಯಮಂತ್ರಿಗಳು ಇವರ ಮನವಿಗೂ ಕಿವಿಗೊಟ್ಟಿಲ್ಲ.

ಸಾರ್ವಜನಿಕರು ಸರ್ಕಾರಕ್ಕೆ 5 ಪ್ರಶ್ನೆ ಕೇಳಿದ್ದಾರೆ – ಕಾಂಗ್ರೆಸ್
• ಈ ಯೋಜನೆ ಉತ್ತಮ ಹಾಗೂ ಜನಪರವಾಗಿದ್ದರೆ ಈ ಯೋಜನೆ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿಲ್ಲ ಯಾಕೆ?
• 2020ರಲ್ಲಿ ಸರ್ಕಾರ ಮಾಡಿರುವ ಕಾಂಪ್ರಹೆನ್ಸ್ ಮೊಬಿಲಿಟಿ ಪ್ಲಾನ್ ನೀತಿಗೆ ತದ್ವಿರುದ್ಧವಾಗಿದೆಯಾ? ಬಿಎಂಎಲ್ ಟಿಎ ಗೆ (ಭೂಮಿ ಹಸ್ತಾಂತರ ಪ್ರಾಧಿಕಾರ)ಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿ ಅದರ ಅನುಮತಿ ಸಿಕ್ಕಿದೆಯಾ? ಇದರ ಮುಖ್ಯಸ್ಥರು ಯಾರೆಂದರೆ ಮುಖ್ಯಮಂತ್ರಿಗಳು. ಇದಕ್ಕೆ ಸರಿಯಾದ ಸಮಿತಿಯೇ ಇಲ್ಲ.
• ಕೆರೆ ಮೇಲೆ ಮೇಲ್ಸೇತುವೆ ನಿರ್ಮಾಣದಿಂದ ಪರಿಸರದ ಮೇಲೆ ಆಗುವ ಪರಿಣಾಮದ ಕುರಿತು ಅಧ್ಯಯನ ಮಾಡಬೇಕು. ಅದರ ವರದಿ ಎಲ್ಲಿದೆ?
• ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಆದೇಶ ಪಾಲನೆಯಾಗಿದೆಯಾ? ನ್ಯಾಯಾಧಿಕರಣದ ಆದಶದ ಪ್ರಕಾರ ಕೆರೆ ಸುತ್ತ 30 ಮೀಟರ್ ಬಫರ್ ಜೋನ್ ನಿರ್ವಹಣೆ ಮಾಡಬೇಕು. ಇದರ ಬಗ್ಗೆ ಸರ್ಕಾರ ಸಾರ್ವಜನಿಕ ದಾಖಲೆಯನ್ನು ಬಿಡುಗಡೆ ಮಾಡಿಲ್ಲ. ಈ ಬಗ್ಗೆ ಯಾರಿಗೂ ಮಾಹಿತಿ ನೀಡುತ್ತಿಲ್ಲ.
• ಇಷ್ಟು ದೊಡ್ಡ ಯೋಜನೆಗೆ ಡಿಪಿಆರ್ ಎಲ್ಲಿದೆ? ಈ ಬಗ್ಗೆ ತಜ್ಞರ ಅಭಿಪ್ರಾಯ ಕೇಳಿಲ್ಲ ಯಾಕೆ? ಎಂಬ ಪ್ರಶ್ನೆಗಳನ್ನು ಸಾರ್ವಜನಿಕರು ಕೇಳಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
ಅಶ್ವತ್ಥ್ ನಾರಾಯಣ ಅವರ ಯೋಜನೆ ಹೇಗಿದೆ ಎಂದರೆ ಅಸ್ಥಿತ್ವಕ್ಕೆ ತರಲು ಸಾಧ್ಯವಾಗದ ಯೋಜನೆ ಸಾಧ್ಯ ಮಾಡುವ ಪ್ರಯತ್ನ ಮಾಡುತ್ತಾರೆ. ಅದಕ್ಕೆ ಉದಾಹರಣೆ ಉರಿಗೌಡ ನಂಜೇಗೌಡ ಅವರ ಕಥೆ. ಅದೇ ರೀತಿ ಅಸ್ತಿತ್ವಕ್ಕೆ ತರಲು ಸಾಧ್ಯವಾಗದ ಮೇಲ್ಸೇತುವೆ ಯೋಜನೆ ಜಾರಿಗೆ ತರಲು ಮುಂದಾಗುತ್ತಾರೆ. ಕೇವಲ 40 ಪರ್ಸೆಂಟ್ ಕಮಿಷನ್ ಹೊಡೆಯಲು ಈ ಯೋಜನೆಗೆ ಮುಂದಾಗಿದ್ದಾರೆ.






