ಕೆಲ ದಿನಗಳ ಹಿಂದೆಯಷ್ಟೇ ಪಿಓಪಿ ಗಣೇಶನನ್ನು ಕೂರಿಸಬಾರದು, ಒಂದ್ವೆಳೆ ಕೂರಿಸಿದ್ರೆ ಕ್ರಮ ತಗೊಳ್ತಿವಿ ಅಂತ ಹೇಳಿದ್ದ ಪೊಲ್ಯುಷನ್ ಕಂಟ್ರೋಲ್ ಬೋರ್ಡ್ ಇದೀಗ ಮತ್ತೊಂದು ರೂಲ್ಸ್ ತರುವ ಮೂಲಕ ಮತ್ತೆ ಗಣೇಶನ ಭಕ್ತರ ಕೆಂಗಣ್ಣಿಗೆ ಗುರಿಯಾಗಿದೆ.
ಈ ಬಾರಿಯೂ ವಿಘ್ನ ವಿನಾಶಕನಿಗೆ ತಪ್ಪಿದ್ದಲ್ಲ ವಿಘ್ನಗಳು
ಎಲ್ಲಾ ಹಬ್ಬಗಳೂ ವಿಘ್ನವಿಲ್ಲದೆ ರೂಲ್ಸ್ ಇಲ್ಲದೆ ಆಚರಣೆ ನಡೆಯುತ್ತೆ. ಆದರೆ ಗಣೇಶನ ಹಬ್ಬಕ್ಕೆ ಮಾತ್ರ ನೂರಾರು ರೂಲ್ಸ್‌ಗಳು ಬರುತ್ತೆ. ಹೀಗಾಗಿ ಆ ವಿಘ್ನ ವಿನಾಶಕನ ಹಬ್ಬವನ್ನು ಹೋರಾಟ ಮಾಡಿಯೇ ಆಚರಣೆ ಮಾಡೋ ರೀತಿ ಆಗಿದೆ. ಕಳೆದ ಬಾರಿ ಗಣೇಶ ಮೂರ್ತಿಗಳು 2 ರಿಂದ 4 ಅಡಿ ಇರಬೇಕೆಂದು ನಿರ್ಬಂಧ ಹೇರಿದ್ದ ಸರ್ಕಾರ, ರೂಲ್ಸ್‌ಗೆ ವಿರೋಧ ಕೇಳಿ ಬಂದ ಹಿನ್ನೆಲೆ ಆದೇಶ ವಾಪಸ್ ಪಡೆದಿತ್ತು.

ಗಣಪನಮೂರ್ತಿ ಎತ್ತರ ಮತ್ತು ಅಗಲಕ್ಕೆ ರೂಲ್ಸ್ ಜಾರಿ
ಅದೇ ರೀತಿ ಈ ಬಾರಿಯೂ ಗಣೇಶ ಮೂರ್ತಿಯ ಅಡಿ ವಿಚಾರದಲ್ಲಿ ಗೊಂದಲ ಶುರುವಾಗಿದೆ. ರಾಜ್ಯ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ 5 ಅಡಿ ಮೂರ್ತಿ ಎಂಬ ನಡವಳಿ ಪ್ರಕಟವಾಗಿದೆ. ಇದರಿಂದ ಗಣೇಶ ಹಬ್ಬದ ಮಾರ್ಗಸೂಚಿಗಳಲ್ಲಿ ಗಣೇಶ ಮೂರ್ತಿ 5 ಅಡಿ ಎಂದು ನಿಯಮ ಇರೋದ್ರಿಂದ ಈ ಬಾರಿನೂ ಗಣೇಶ ಮೂರ್ತಿಗಳ ಅಡಿ ನಿರ್ಬಂಧ ಇರುತ್ತಾ ಅನ್ನೋ ಗೊಂದಲಗಳು ಶುರುವಾಗಿದೆ. ಒಂದ್ವೇಳೆ ನಿರ್ಬಂಧ ಮಾಡಿ ಒತ್ತಡಕ್ಕೆ ಮಣಿದು ಮತ್ತೆ ಆದೇಶ ವಾಪಸ್ ಪಡೆಯುತ್ತಾ ಅನ್ನೋ ಪ್ರಶ್ನೆ ಕಾಡ್ತಿದೆ. ಆದೇಶ ಮಾಡಿ ಅದನ್ನ ವಾಪಸ್ ಪಡೆಯೋದಾದ್ರೆ ಯಾತಕ್ಕಾಗಿ ಮಾರ್ಗಸೂಚಿ ಅಂತ ಪ್ರಕಟ ಮಾಡಬೇಕು ಎಂಬ ಪ್ರಶ್ನೆಗೆ ಪೊಲ್ಯುಷನ್ ಕಂಟ್ರೋಲ್ ಬೋರ್ಡೇ ಉತ್ತರ ಕೊಡ್ಬೇಕಿದೆ.
ಈಗಾಗಲೇ ಪಿಓಪಿ ಗಣಪತಿಗೆ ಅನುಮತಿ ಇಲ್ಲ ಅಂತ ಹೇಳಿರೋ ಬೆನ್ನಲ್ಲೇ ಇದೀಗ ಮೂರ್ತಿಯ ಅಡಿ ಮತ್ತು ಎತ್ತರಕ್ಕೂ ರೂಲ್ಸ್ ತಂದಿರೋದ್ರಿಂದ, ವಾಯು ಮಾಲಿನ್ಯ ಮಂಡಳಿಯ ವಿರುದ್ಧ ಗಣೇಶ ಉತ್ಸವ ಸಮಿತಿ ಆಕ್ರೋಶ ಹೊರ ಹಾಕ್ತಿದೆ. ಈ ಬಗ್ಗೆ ಬೆಂಗಳೂರು ಗಣೇಶ ಉತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ರಾಜು ಪ್ರತಿಕ್ರಿಯೆ ನೀಡಿದ್ದು, ಎಷ್ಟು ಅಡಿ ಗಣೇಶನ ಮೂರ್ತಿ ಇಡಬೇಕು ಎಂದು ಇವರು ನಿರ್ಧಾರ ಮಾಡೋದು ಯಾಕೆ. ನಮಗೆ ಇಷ್ಟ ಬಂದಷ್ಟು ಅಡಿ ಎತ್ತರದ ಗಣೇಶನನ್ನು ಕೂರಿಸುತ್ತೇವೆ. ಯಾಕೆ ಪದೇ ಪದೇ ಈ ರೀತಿ ರೂಲ್ಸ್‌ಗಳನ್ನು ಮಾಡುತ್ತೆ. ಮೂರ್ತಿಯ ಅಡಿಯಾಗಲಿ ಅಥ್ವಾ ಪಿಓಪಿ ಗಣಪತಿಯನ್ನಾಗಲಿ ಕೂರಿಸಲು ನಿರ್ಬಂದ ಬೇಡ. ಒಂದು ವೇಳೆ ರೂಲ್ಸ್ ಹಿಂಪಡೆಯದೇ ಹೋದ್ರೆ ಈ ಬಾರಿ ವಿಧಾನಸೌಧದ ಎದುರು ಗಣೇಶ ಮೂರ್ತಿ ಇಟ್ಟು ಪ್ರತಿಭಟನೆ ಮಾಡೋ ಎಚ್ಚರಿಕೆ ನೀಡಿದ್ದಾರೆ. ಒಟ್ಟಾರೆ ಗಣೇಶನ ಹಬ್ಬಕ್ಕೆ ಇನ್ನು ಒಂದು ವಾರ ಇರುವಾಗ್ಲೇ ಸರ್ಕಾರ ಹಾಗೂ ಗಣೇಶನ ಭಕ್ತರ ನಡುವೆ ಜಟಾಪಟಿ ಶುರುವಾಗಿದ್ದು, ಇದು ಎಲ್ಲಿಗೆ ಹೋಗಿ ಮುಟ್ಟುತ್ತೆ ಅನ್ನೋದನ್ನ ಕಾದು ನೋಡ್ಬೇಕಿದೆ.