ಆರಂಭಿಕರಾದ ಶುಭಮನ್ ಗಿಲ್ ಮತ್ತು ಶಿಖರ್ ಧವನ್ ಅವರ ಅಜೇಯ ಜೊತೆಯಾಟದ ನೆರವಿನಿಂದ ಭಾರತ ತಂಡ 10 ವಿಕೆಟ್ ಗಳಿಂದ ಜಿಂಬಾಬ್ವೆ ತಂಡವನ್ನು ಬಗ್ಗುಬಡಿದು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.
ಹರಾರೆಯಲ್ಲಿ ಗುರುವಾರ ನಡೆದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ ತಂಡವನ್ನು 40.3 ಓವರ್ ಗಳಲ್ಲಿ 189 ರನ್ ಗೆ ಆಲೌಟ್ ಮಾಡಿದ ಭಾರತ ತಂಡ ಸುಲಭ ಗುರಿಯನ್ನು 30.5 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ ಜಯಭೇರಿ ಬಾರಿಸಿತು.
ಶಿಖರ್ ಧವನ್ 113 ಎಸೆತಗಳಲ್ಲಿ 9 ಬೌಂಡರಿ ಸೇರಿದ 81 ರನ್ ಸಿಡಿಸಿದರೆ ಶುಭಮನ್ ಗಿಲ್ 72 ಎಸೆತಗಳಲ್ಲಿ 10 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 82 ರನ್ ಚಚ್ಚಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಜಿಂಬಾಬ್ವೆ ತಂಡ ಬ್ಯಾಟಿಂಗ್ ವೈಫಲ್ಯದಿಂದ ಅಲ್ಪ ಮೊತ್ತಕ್ಕೆ ಕುಸಿಯಿತು. ಒಂದು ಹಂತದಲ್ಲಿ ಜಿಂಬಾಬ್ವೆ 110 ರನ್ ಗೆ 8 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿತ್ತು. 9ನೇ ವಿಕೆಟ್ ಗೆ ಬ್ರಾಡ್ ಇವಾನ್ಸ್ ಮತ್ತು ರಿಚರ್ಡ್ ನಾಗರವ 70 ರನ್ ಜೊತೆಯಾಟ ನಡೆಸಿದರು. ಬ್ರಾಡ್ ಇವಾನ್ಸ್ ಅಜೇಯ 33 ರನ್ ಸಿಡಿಸಿದರೆ, ರಿಚರ್ಡ್ 34 ರನ್ ಗಳಿಸಿದರು.
ಭಾರತದ ಪರ ದೀಪಕ್ ಚಾಹರ್, ಪ್ರಸಿದ್ಧ ಕೃಷ್ಣ ಮತ್ತು ಅಕ್ಸರ್ ಪಟೇಲ್ ತಲಾ ೩ ವಿಕೆಟ್ ಕಬಳಿಸಿದರು. ಮೊಹಮದ್ ಸಿರಾಜ್ 1 ವಿಕೆಟ್ ಪಡೆದರು.