ನವದೆಹಲಿ: ಪತಂಜಲಿ ಸಂಸ್ಥೆ ವಿರುದ್ಧ ಕೋರ್ಟ್ ಕಿಡಿಕಾರಿದ್ದು, ಜಾಹೀರಾತು ಪ್ರಕಟಿಸಿದ ಗಾತ್ರದಲ್ಲಿಯೇ ಪತ್ರಿಕೆಯಲ್ಲಿ ಕ್ಷಮೆ ಕೇಳಬೇಕೆಂದು ಕೋರ್ಟ್ ಸೂಚಿಸಿದೆ.
ಪತಂಜಲಿ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವನ್ನು ಕೂಡ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಯೋಗ ಗುರು ಬಾಬಾ ರಾಮದೇವ್, ಆಚಾರ್ಯ ಬಾಲಕೃಷ್ಣ ವಿರುದ್ಧದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ಇಂದು ನ್ಯಾ.ಹಿಮಾ ಕೊಹ್ಲಿ ಮತ್ತು ನ್ಯಾ. ಅಮಾನುಲ್ಲಾ ಅವರಿದ್ದ ದ್ವಿಸದಸ್ಯ ಪೀಠದಲ್ಲಿ ನಡೆಯಿತು.

ಬಾಬಾ ಪರ ವಕೀಲಮುಕುಲ್ ರೋಹಟಗಿ, ಪತ್ರಿಕೆಗಳಲ್ಲಿ ಕ್ಷಮಾಪಣೆ ಪ್ರಕಟವಾಗಿದೆ ಎಂದು ಕೋರ್ಟ್ ಗಮನಕ್ಕೆ ತಂದರು. ಈ ಸಂದರ್ಭದಲ್ಲಿ ಜಾಹೀರಾತು ಯಾವ ಗಾತ್ರದಲ್ಲಿ ಪ್ರಕಟವಾಗಿದೆಯೇ ಅದೇ ರೀತಿಯಾಗಿ ಕ್ಷಮೆ ಕೇಳಬೇಕೆಂದು ಆದೇಶಿಸಿತು. ಇಂಡಿಯನ್ ಮೆಡಿಕಲ್ ಅಸೋಷಿಯನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದುವರಿಸಿದ ಪೀಠ ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ನೀಡುವ ಇತರ FMCG ಕಂಪನಿಗಳ ವಿರುದ್ಧ ಕ್ರಮ ಕೈಗೊಂಡಿರುವ ಕುರಿತು ಕೇಂದ್ರಕ್ಕೆ ಪ್ರಶ್ನೆ ಮಾಡಿತು.

ಪತಂಜಲಿ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಸರ್ಕಾರ ಹೇಗೆ ಪತ್ರ ಬರೆಯಿತು ಎಂಬುದನ್ನು ವಿವರಿಸಬೇಕು ಎಂದು ಸೂಚಿಸಿದ ಪೀಠ, ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಆಕ್ಟ್ ಮತ್ತು ಡ್ರಗ್ಸ್ ಮತ್ತು ಮ್ಯಾಜಿಕ್ ರೆಮಿಡೀಸ್ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯಿದೆಯಂತಹ ಕಾನೂನುಗಳ ಅನುಷ್ಠಾನ ಸೂಕ್ಷ್ಮವಾಗಿ ಗಮನಿಸಬೇಕು ಎಂದು ಸೂಚಿಸಿತು.
ತಪ್ಪುದಾರಿಗೆ ದೂಡುವ ಜಾಹೀರಾತುಗಳಿಂದ ಪ್ರಭಾವಿತರಾಗಿ ಔಷಧಗಳನ್ನು ಸೇವಿಸುವ ಶಿಶುಗಳು ಹಾಗೂ ಮಕ್ಕಳು ಮತ್ತು ವೃದ್ಧರ ಆರೋಗ್ಯದ ಮೇಲೆ ಇದು ಹೇಗೆ ಪರಿಣಾಮ ಬೀರುತ್ತದೆ. ನಾವು ನಿರ್ದಿಷ್ಟವಾಗಿ ಒಬ್ಬರ ಮೇಲೆ ಅರೋಪಿಸುತ್ತಿಲ್ಲ, ಗ್ರಾಹಕರು/ಸಾರ್ವಜನಿಕರನ್ನು ಹೇಗೆ ದಾರಿ ತಪ್ಪಿಸಲಾಗುತ್ತಿದೆ ಎಂಬುವುದು ಹಿತಾಸಕ್ತಿಯ ವಿಷಯ ಎಂದು ಕೋರ್ಟ್ ಹೇಳಿತು. ಅರ್ಜಿ ವಿಚಾರಣೆಯನ್ನು ಏ.30ಕ್ಕೆ ಮುಂದೂಡಿದ ಪೀಠ ಅಂದು ನ್ಯಾಯಾಲಯಕ್ಕೆ ಪತಂಜಲಿ ಸಂಸ್ಥಾಪಕರಾದ ರಾಮ್‌ದೇವ್ ಮತ್ತು ಬಾಲಕೃಷ್ಣ ಹಾಜರಾಗಬೇಕೆಂದು ಸೂಚಿಸಿದೆ.