ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(MUDA)ಕ್ಕೆ ಅರ್ಜಿಯನ್ನು ಸಲ್ಲಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah Wife Parvathi) ಅವರ ಪತ್ನಿ ಪಾರ್ವತಿ ಅವರು ತಮಗೆ 50-50 ಅನುಪಾತದಲ್ಲಿ 13 ಸೈಟುಗಳನ್ನು ಹಂಚಿಕೆ ಮಾಡುವಂತೆ ಕೋರಿದ್ದರು. ಆದರೆ, ಮುಡಾದಿಂದ ಹಂಚಿಕೆ ಆಗಿದ್ದು ಮಾತ್ರ 14 ನಿವೇಶನಗಳು. ಇದೀಗ ಈ ಅಕ್ರಮ ಸೈಟ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಖಾಸಗಿ ಆಪ್ತ ಸಹಾಯಕ ಸಿ.ಟಿ.ಕುಮಾರ್‌ನನ್ನು ( Private PA C T Kumar) ಹಾಗೂ ಮೈಸೂರು ಮಾಜಿ ಜಿಲ್ಲಾಧಿಕಾರಿ ಆಯುಕ್ತ ಹಾಲಿ ಸಂಸದ ಜಿ. ಕುಮಾರ್ ನಾಯಕ್ (G Kumar Naik) ಅವರನ್ನು ಇಡಿ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಸಿಎಂ ಖಾಸಗಿ ಆಪ್ತ ಸಹಾಯಕ ಸಿ.ಟಿ.ಕುಮಾರ್ ಮೈಸೂರು ಹಾಗೂ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಹಾಗೂ ಅವರ ಪುತ್ರ ಡಾ ಯತೀಂದ್ರಗೆ ಆಪ್ತ ಸಹಾಯಕರಾಗಿ ಕಾರ್ಯ ನಿರ್ವಹಿಸುತಿದ್ದು ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರ ಅರ್ಜಿಗೆ ಇವರೇ ಸಹಿ ಮಾಡಿ ಯಡವಟ್ಟು ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ದಿನಾಂಕ 13-01-2022 ರಂದು ಮುಢಾದಿಂದ ಕ್ರಯಪತ್ರವನ್ನು ನೋಂದಣಿ ಮಾಡಿಸಲಾಗಿದೆ. ಇದನ್ನು ಖಾತೆ ಮಾಡಿಕೊಡಿ ಎಂದು ಪಾರ್ವತಿ ಅವರು ಅರ್ಜಿ ಹಾಕಿದ್ದರು. ಆದರೆ ಪಾರ್ವತಿ ಅವರ ಹೆಸರಿನಲ್ಲಿ ಅರ್ಜಿ ಹಾಕಿದ್ದುದು ಖಾಸಗಿ ಆಪ್ತ ಸಹಾಯಕ ಎಸ್.ಜಿ ದಿನೇಶ್ ಕುಮಾರ್ ಅಲಿಯಾಸ್ ಸಿ.ಟಿ.ಕುಮಾರ್. ಆ ಅರ್ಜಿಯಲ್ಲಿಯೂ ಹಲವು ತಪ್ಪುಗಳನ್ನು ಮಾಡಿ ಸಿಕ್ಕಿ ಹಾಕಿಕೊಂಡಿದ್ದಾರೆ.
ಆಪ್ತ ಸಹಾಯಕ ಕುಮಾರ್, ಮೊದಲಿಗೆ ಖಾತೆ ಮಾಡಿಕೊಡುವಂತೆ ಸಿಎಂ ಪತ್ನಿ ಪಾರ್ವತಿ ಹೆಸರಿನಲ್ಲಿ ಅರ್ಜಿ ನೀಡಿ ಸಹಿ ಮಾಡಿದ್ದಾರೆ. ಈ ಅರ್ಜಿಯಲ್ಲಿ 13 ನಿವೇಶನ ಸಂಖ್ಯೆ ನಮೂದಿಸಿ ಮನವಿ ಪತ್ರ ಸಲ್ಲಿಕೆಯಾಗಿದೆ. ವಿಜಯನಗರ 3 ನೇ ಹಂತ ಸಿ,ಡಿ,ಇ & ಜಿ ಬ್ಲಾಕ್ ನಲ್ಲಿ ನಿವೇಶನ ಸಂ. 25, 331, 332, 213, 214, 215, 05 ಮತ್ತು ವಿಜಯನಗರ 4 ನೇ ಹಂತ 2 ನೇ ಫೇಸ್ ನಿವೇಶನ ಸಂಖ್ಯೆ 5108, 5085, 11189, 10855, 12065, & 12068 ಸಂಖ್ಯೆಯ ನಿವೇಶನ ಖಾತೆಗಾಗಿ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಈ ಬೆನ್ನಲ್ಲಿಯೇ ಅಧಿಕಾರಿಗಳ ನಡೆ ಸಾಕಷ್ಟು ಅನುಮಾನ ಮೂಡಿಸಿತ್ತು. ಸಿಎಂ ಕುಟುಂಬ ಹಾಗೂ ಮುಡಾ ಅಧಿಕಾರಿಗಳು ಬದಲಿ ನಿವೇಶನ ನೀಡುವಾಗ ಹೆಜ್ಜೆ ಹೆಜ್ಜೆಗೂ ತಪ್ಪು ಮಾಡುತ್ತಲೇ ಹೋಗಿದ್ದಾರೆ. ಇದೀಗ ಅಧಿಕಾರಿಗಳು, ಸಿಎಂ ಆಪ್ತ, ಸಿಎಂ ಪತ್ನಿ ಹಾಗೂ ಸಂಬಂಧಿಕರು, ನಿವೇಶನ ಮಾರಾಟ ಮಾಡಿದ ವ್ಯಕ್ತಿ ಎಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದಾರೆ.