ನಾ ದಿವಾಕರ
( ಕೃಪೆ : ಸಂವಾದ ಮಾಸಪತ್ರಿಕೆಯ ಜೂನ್ ಸಂಚಿಕೆಯಿಂದ )
ಭಾಗ 2
ನವ ಉದಾರವಾದದ ಪ್ರಭಾವ
ಈ ಪ್ರವೃತ್ತಿಯ (Trend) ಉಗಮವನ್ನು ನಾವು 1990ರ ದಶಕದ ಜಾಗತೀಕರಣ , 2000ರ ದಶಕದ ಕಾರ್ಪೋರೇಟೀಕರಣ ಮತ್ತು 2010ರ ನಂತರದ ಡಿಜಿಟಲ್ ಯುಗದ ಆಪ್ತ ಬಂಡವಾಳಶಾಹಿ ( Croney Capitalism) ಬೆಳವಣಿಗೆಗಳ ನಡುವೆ ಗುರುತಿಸಬಹುದು. ಭಾರತದಲ್ಲಿ ಟಿವಿ ವಾಹಿನಿಗಳು ನೆಲೆಗೊಂಡ ಮೇಲೆ ವಿದ್ಯುನ್ಮಾನ ಮಾಧ್ಯಮ ಸೇತುವೆಗಳಾಗಿ ನೂರಾರು ವಾಹಿನಿಗಳು ಹುಟ್ಟಿಕೊಂಡವು. ಕ್ಷಣಮಾತ್ರದಲ್ಲಿ ಸುದ್ದಿಯನ್ನು ಮೂಲೆಮೂಲೆಗೂ ತಲುಪಿಸುವ ಅನುಕೂಲ ಒಂದೆಡೆಯಾದರೆ, ದೃಶ್ಯ ಮಾಧ್ಯಮವಾದ್ದರಿಂದ ಪರಿಣಾಮಕಾರಿಯಾಗಿ ಮನತಟ್ಟುವಂತೆ ಸುದ್ದಿ ಪ್ರಸರಣ ಮಾಡುವ ಅವಕಾಶವೂ ಈ ವಾಹಿನಿಗಳಿಗೆ ಲಭ್ಯವಾಗಿತ್ತು. ಇದರ ನಡುವೆ ಸೃಷ್ಟಿಯಾದ ಅಪಾಯಕಾರಿ ಪ್ರವೃತ್ತಿ ಎಂದರೆ ಈ ವಾಹಿನಿಗಳ ʼ ಅಭಿಪ್ರಾಯ-ನಿರೂಪಣೆಗಳ ಉತ್ಪಾದನೆ ʼ ( Manufacture of Opinions-Narratives) ಮತ್ತು ತಮ್ಮ ರಾಜಕೀಯ ಅನುಕೂಲತೆಗೆ ತಕ್ಕಂತೆ ವಾಸ್ತವವನ್ನು ತಿರುಚಿ ಮಿಥ್ಯೆಗಳನ್ನು ಹುಟ್ಟುಹಾಕುವ ದುಷ್ಟ ಪ್ರವೃತ್ತಿ.
ನವ ಉದಾರವಾದ ಮತ್ತು ಹಿಂದುತ್ವ ರಾಜಕಾರಣ ಒಂದೇ ಸಮಯಕ್ಕೆ ಭಾರತವನ್ನು ಆವರಿಸಿದ್ದರಿಂದ, ಕಾರ್ಪೋರೇಟ್ ಮಾರುಕಟ್ಟೆಯ ಔದ್ಯಮಿಕ ಅಗತ್ಯತೆಗಳನ್ನು ಪೂರೈಸುತ್ತಲೇ ಹಿಂದುತ್ವ ಬಲಪಂಥೀಯ ರಾಜಕಾರಣದ ಕೋಮುವಾದ ಮತ್ತು ಸಮುದಾಯಗಳ ́ ಅನ್ಯೀಕರಣ ʼ (Othering) ಪ್ರಕ್ರಿಯೆಗೆ ಪುಷ್ಟಿ ನೀಡುವ ಜವಾಬ್ದಾರಿಯನ್ನು ಬಂಡವಾಳಶಾಹಿ ವ್ಯವಸ್ಥೆಯು ವಿದ್ಯುನ್ಮಾನ-ಡಿಜಿಟಲ್ ಮಾಧ್ಯಮಗಳ ಮೇಲೆ ಹೊರಿಸಿತ್ತು. ಈ ಎರಡೂ ಉದ್ದೇಶಗಳನ್ನು ಈಡೇರಿಸಲು ಅಡ್ಡಿಯಾಗಿದ್ದ ʼ ಸ್ವತಂತ್ರ ಮಾಧ್ಯಮ ʼ (Independent Media) ಸೇತುವೆಗಳನ್ನು ಸದ್ದಿಲ್ಲದೆ ಅಂಚಿಗೆ ತಳ್ಳುವುದು ನವ ಭಾರತದ ಆಳುವ ವರ್ಗಗಳ ಆದ್ಯತೆಯಾಗಿತ್ತು. ಈ ಗುರಿ ಸಾಧನೆಗೆ ಅನುಸರಿಸಿದ್ದು ಎರಡು ಮಾರ್ಗಗಳನ್ನು. ಮೊದಲನೆಯದು ವಿದ್ಯುನ್ಮಾನ-ಡಿಜಿಟಲ್ ವಾಹಿನಿಗಳನ್ನು ಕಾರ್ಪೋರೇಟ್ ಸಮೂಹಗಳೇ, ವಿಲೀನ, ಸ್ವಾಧೀನ, ಖರೀದಿ ಮುಂತಾದ ಕಾನೂನಾತ್ಮಕ ಮಾರ್ಗಗಳನ್ನು ಅನುಸರಿಸಿ ವಶಪಡಿಸಿಕೊಳ್ಳುವುದು.
ಎರಡನೆಯದು ಜನಪರ ದನಿಯಾಗಿ, ಸಾಮಾನ್ಯ ಜನತೆಯ, ತಳಸಮಾಜದ ಜಟಿಲ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಬಿಂಬಿಸುತ್ತಾ, ಆಡಳಿತ ವ್ಯವಸ್ಥೆಯ ಲೋಪಗಳನ್ನು ಜನರ ಮುಂದೆ ತೆರೆದಿಡುವ ಸುದ್ದಿ ವಾಹಿನಿಗಳನ್ನು ಪ್ರತಿಬಂಧಕ ಕಾಯ್ದೆಗಳ ಮೂಲಕ ಕಟ್ಟಿಹಾಕಿ, ಜಾರಿ ನಿರ್ದೇಶನಾಲಯ, ಸಿಬಿಐ ಮುಂತಾದ ಸಾಂವಿಧಾನಿಕ ಸಂಸ್ಥೆಗಳನ್ನು ಬಳಸಿ, ಮಾಧ್ಯಮ ಸಂಸ್ಥೆಯನ್ನು ವಿಸರ್ಜಿಸಲು ಅಥವಾ ಮಾರಾಟ ಮಾಡಲು ಅನಿವಾರ್ಯ ಪರಿಸ್ಥಿತಿಯನ್ನು ಸರ್ಕಾರವೇ ಸೃಷ್ಟಿಸುವುದು. ಭಾರತ ಇಂದು 180 ರಾಷ್ಟ್ರಗಳ ಪೈಕಿ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 151 ರಿಂದ 157ನೆಯ ಸ್ಥಾನಕ್ಕೆ ಕುಸಿದಿರುವುದಕ್ಕೆ ಈ ಪ್ರಕ್ರಿಯೆಯೇ ಅಡಿಪಾಯ. ಇಲ್ಲಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ದಮನಕಾರಿ ನೀತಿಗಳು ಅಮೂರ್ತ ರೂಪದಲ್ಲಿರುತ್ತದೆ. ಮತ್ತೊಂದೆಡೆ ಸುದ್ದಿವಾಹಿನಿ ಸಮೂಹಗಳೇ (News media houses) ಸ್ವ ಇಚ್ಚೆಯಿಂದ ವಂದಿಮಾಗಧರಂತೆ ಸರ್ಕಾರದ ಧ್ವನಿಯನ್ನೇ ಮರುಧ್ವನಿಸುವುದು ಬಹುತೇಕ ಮಾಧ್ಯಮಗಳ ನೀತಿಯಾಗಿ ಪರಿಣಮಿಸಿತ್ತು.
ವ್ಯವಸ್ಥೆಯ ಒತ್ತಡ ಆಳ್ವಿಕೆಯ ಒತ್ತಾಸೆ
ಈ ಅಘೋಷಿತ ಷರತ್ತುಗಳು ಮತ್ತು ಅಗೋಚರ ಒತ್ತಡಗಳ ಫಲವನ್ನು ಪ್ರಾದೇಶಿಕ ಮತ್ತು ರಾಷ್ಟ್ರೀಯ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಪತ್ರಿಕೋದ್ಯಮ ಒಂದು ಕಾಲದಲ್ಲಿ ವೃತ್ತಿಯಾಗಿತ್ತು “ ಈಗ ವ್ಯಾಪಾರವಾಗಿದೆ-ಒಬ್ಬ ಮಾರಾಟಗೊಂಡ ಪತ್ರಕರ್ತ ಸಾವಿರ ಭಯೋತ್ಪಾದಕರಿಗೆ ಸಮ”. ಎಂಬ ಅಂಬೇಡ್ಕರ್ ಅವರ ಹೇಳಿಕೆ ಬಹಳಷ್ಟು ಚಾಲ್ತಿಯಲ್ಲಿದೆ. ಇಂದು ತಮ್ಮ ಹೊಟ್ಟೆಪಾಡಿಗಾಗಿ ಪತ್ರಿಕೋದ್ಯಮವನ್ನು ವೃತ್ತಿಧರ್ಮವನ್ನು ಬದಿಗಿಟ್ಟು ಅವಲಂಬಿಸುವ ಲಕ್ಷಾಂತರ ಪತ್ರಕರ್ತರಿಗೆ ಇದನ್ನು ಅನ್ವಯಿಸುವ ಬದಲು, ಪತ್ರಿಕಾ ಸಮೂಹಗಳಿಗೆ, ಟಿವಿ ವಾಹಿನಿಗಳಿಗೆ ಮತ್ತು ಡಿಜಿಟಲ್ ಮಾಧ್ಯಮ ಸೇತುವೆಗಳಿಗೆ ಅನ್ವಯಿಸಬಹುದು. ಏಕೆಂದರೆ ಸಂಪಾದಕ, ಟಿವಿ ನಿರೂಪಕ, ಸುದ್ದಿ ಸಂಗ್ರಹಕಾರ ಎಲ್ಲರೂ ಸಹ ಸಮೂಹದ ಮಾಲಿಕನ/ಮಾಲಿಕ ಸಂಸ್ಥೆಯ ಮರ್ಜಿಗೆ ಒಳಗಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ.
ಹಾಗಾಗಿ ಚುನಾಯಿತ ಸರ್ಕಾರಗಳ ತಪ್ಪು ಒಪ್ಪುಗಳನ್ನು ವಿಮರ್ಶೆಗೊಡ್ಡಿ, ಚರ್ಚಿಸಿ, ಜನತೆಗೆ ವಾಸ್ತವಗಳನ್ನು ಮುಟ್ಟಿಸುವ ನೈತಿಕ ಕರ್ತವ್ಯ, ವೃತ್ತಿ ಧರ್ಮದ ಜವಾಬ್ದಾರಿ ಮತ್ತು ಸಾಮಾಜಿಕ ಹೊಣೆಗಾರಿಕೆ ಈ ಎಲ್ಲ ಔದಾತ್ಯಗಳೂ ಮಾಧ್ಯಮ ಕ್ಷೇತ್ರದಲ್ಲಿ ಕಾಣೆಯಾಗಿವೆ. ಅಪರಾಧಿಕ ಜಗತ್ತನ್ನು ವಿಂಗಡಿಸಿ ನೋಡುವಂತೆಯೇ, ಈ ಅಪರಾಧಿಕ ಕ್ರೌರ್ಯಕ್ಕೆ ಬಲಿಯಾಗುವ ಜನಸಮುದಾಯಗಳನ್ನೂ ವಿಭಜಿಸಿ ನೋಡುವ ಒಂದು ಮಾದರಿಯನ್ನು ಮಾಧ್ಯಮಗಳು ಅಳವಡಿಸಿಕೊಂಡಿವೆ. ನೊಂದ ಜನರ ಪರವಾಗಿ ಕಿಂದರ ಜೋಗಿಗಳಾಗಿರಬೇಕಾದ ಮಾಧ್ಯಮ ಸೇತುವೆಗಳು ಶೋಷಕರ ಪರವಾದ ವಂದಿಮಾಗಧ ಪಡೆಗಳಾಗಿರುವುದು ವರ್ತಮಾನದ ದುರಂತ ಆದರೂ ಸತ್ಯ. ನೈಸರ್ಗಿಕ ವಿಕೋಪ, ಮಾನವ ಪ್ರೇರಿತ ವಿನಾಶ, ಕೋಮು ಗಲಭೆ, ಭಯೋತ್ಪಾದಕ ದಾಳಿಗಳು, ಜಾತಿ ಸಂಘರ್ಷಗಳು ಮತ್ತು ಮಹಿಳಾ ದೌರ್ಜನ್ಯಗಳು ಇವೆಲ್ಲವೂ ಸಹ ಸುದ್ದಿ ವಾಹಿನಿಗಳ ಪ್ರಯೋಗಾಲಯಗಳಲ್ಲಿ ತುಂಡರಿಕೆ ಅಥವಾ ಅಂಗಚ್ಛೇದನಕ್ಕೊಳಗಾಗಿ (Dissection) ಪರದೆಯ ಮೇಲೆ ಕಾಣಿಸುತ್ತವೆ. ಶವಗಳನ್ನು ಹೆಕ್ಕಿತೆಗೆಯುವ ಒಂದು ವಿಕೃತ ಪರಂಪರೆಗೆ ನಾಂದಿ ಹಾಡಿದ್ದು ಮಾಧ್ಯಮ ಲೋಕದ ಈ ಪ್ರವೃತ್ತಿಯೇ.
ಕಾರ್ಪೋರೇಟ್ ಔದ್ಯಮಿಕ ಆವರಣದಲ್ಲಿ
ಎಲ್ಲ ಭಾಷೆಗಳಲ್ಲೂ ಸುದ್ದಿ ವಾಹಿನಿಗಳು ರಾಜಕೀಯ ನಾಯಕರ, ರಾಜಕೀಯ ಬೆಂಬಲಿತ ಕಾರ್ಪೊರೇಟ್ ಉದ್ಯಮಿಗಳ ಒಡೆತನದಲ್ಲಿರುವುದರಿಂದ, ಸಾಮಾನ್ಯವಾಗಿ ಜನತೆಯನ್ನು, ನಿರ್ದಿಷ್ಟವಾಗಿ ನೊಂದ ಶೋಷಿತ ಜನರನ್ನು ಅಡ್ಡಡ್ಡಲಾಗಿ ಸಿಗಿದು ನೋಡುವ ಪ್ರವೃತ್ತಿಯೂ ಸಹ ವ್ಯಾವಹಾರಿಕವಾಗಿ ಜಾರಿಯಲ್ಲಿದೆ. ಯಾವುದೇ ಟಿವಿಯ ಸ್ಟುಡಿಯೋಗಳಲ್ಲಿ ನಡೆಯುವ ʼ ಪ್ಯಾನೆಲ್ ಚರ್ಚೆ ʼ ಹೆಸರಿನ ಕೂಗಾಟ ಅರಚಾಟವನ್ನು ನೋಡಿದರೂ ಇದು ಢಾಳಾಗಿ ಕಾಣುತ್ತದೆ. ಈ ಚರ್ಚೆಗಳ ನಿರೂಪಕರು ಬಹುತೇಕ ನಿಯಂತ್ರಕರಾಗಿಯೇ ಕಾಣುವುದಲ್ಲದೆ, ಚರ್ಚಿತ ವಿಷಯದಲ್ಲಿ ತಟಸ್ಥರಾಗಿರದೆ , ನಿರ್ದಿಷ್ಟ ಪಕ್ಷಗಳ ಪರ-ವಿರೋಧ ವಹಿಸುವುದನ್ನು ಸಹ ಗಮನಿಸಬಹುದು. ಮಹಿಳಾ ದೌರ್ಜನ್ಯಗಳ ಪ್ರಕರಣಗಳಲ್ಲಿ ವಿದ್ಯುನ್ಮಾನ ವಾಹಿನಿಗಳು ರೋಚಕತೆ ಮತ್ತು ಘಟನೆಯ ಆಕರ್ಷಕ ಚಿತ್ರಣಕ್ಕೆ ಗಮನ ನೀಡುವಷ್ಟು, ದೌರ್ಜನ್ಯಕ್ಕೊಳಗಾದ ಮಹಿಳೆಯ ಘನತೆ ಮತ್ತು ಬದುಕಿನ ಬಗ್ಗೆ ನೀಡದಿರುವುದನ್ನೂ ಕಾಣಬಹುದು.
ಮಾಧ್ಯಮ ಸಮೂಹಗಳ ಸಾಂಸ್ಥಿಕ ಅಸ್ತಿತ್ವ ಮತ್ತು ಅದಕ್ಕೆ ಅಗತ್ಯವಾದ ರಾಜಕೀಯ ಕೃಪಾಕಟಾಕ್ಷ ಇವೆರಡೂ ಸಹ ಸುದ್ದಿ ಪ್ರಸರಣಗಳನ್ನು ನಿರ್ದೇಶಿಸುವ ಪರ್ವದಲ್ಲಿ ನಾವಿದ್ದೇವೆ.
ಹಾಗಾಗಿಯೇ ಪ್ರಭುತ್ವಕ್ಕೆ ಮುಜುಗರ ಉಂಟುಮಾಡುವ ಮಹಿಳಾ ದೌರ್ಜನ್ಯ, ಅತ್ಯಾಚಾರ, ದಲಿತರ ಹತ್ಯೆ, ಅಲ್ಪಸಂಖ್ಯಾತರ ಮೇಲಿನ ದಾಳಿ ಅಥವಾ ತಳಸಮಾಜದ ಅಸಮಾನತೆಯ ಸಂಕಟಗಳು ಸುದ್ದಿವಾಹಿನಿಗಳಲ್ಲಿ ತುಲನಾತ್ಮಕವಾಗಿ ಬಿತ್ತರಿಸಲ್ಪಡುತ್ತವೆ. ಒಂದು ವರ್ಷದ ರೈತ ಮುಷ್ಕರ, ಸಿಎಎ ಹೋರಾಟಗಳು ಮತ್ತು ಈಗ ನಡೆಯುತ್ತಿರುವ ಎಸ್ಐಆರ್ ವಿರೋಧಿ ಚಳುವಳಿಗಳನ್ನು ಈ ಡಿಜಿಟಲ್ ಪರದೆಯ ಮೇಲೆ ಬಿತ್ತರಿಸಿದ ರೀತಿಯಲ್ಲಿ ಇದು ಸ್ಪಷ್ಟವಾಗುತ್ತದೆ. ಅರ್ಥಾತ್ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ನಾಲ್ಕನೆ ಆಧಾರ ಸ್ತಂಭವಾಗಿರಬೇಕಾದ ಸಂವಹನ ಮಾಧ್ಯಮಗಳು ಸಮಾಜಮುಖಿ-ಜನಮುಖಿ ಆಗಿರುವುದರ ಬದಲು, ಮಾರುಕಟ್ಟೆ ಮುಖಿಯಾಗಿ ಪರಿವರ್ತನೆ ಹೊಂದಿವೆ.
ಸಮಾಜಕ್ಕೆ ವಿಮುಖವಾಗುವ ಸಾಧನಗಳು
ಇದರ ಮುಂದುವರಿಕೆಯಾಗಿ ಯಾವುದೇ ಸುದ್ದಿ ವಾಹಿನಿಯಲ್ಲೂ ಸಹ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವ ಮೂಡಿಸುವಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದಿಲ್ಲ. ಕನ್ನಡದ ಸುದ್ದಿಮನೆಗಳು ಬೆಳಗಾನೆದ್ದು ಪೈಪೋಟಿಯ ಮೇಲೆ ವಾಸ್ತು, ಜೋತಿಷ್ಯ ಇತ್ಯಾದಿ ಮೌಢ್ಯಗಳನ್ನು ಆಕರ್ಷಕವಾಗಿ ಪ್ರಸಾರ ಮಾಡುತ್ತವೆ. ಮುದ್ರಣ ಮಾಧ್ಯಮಗಳಲ್ಲಿ ಕೆಲವು ಬರಹಗಳಾದರೂ ಈ ನಿಟ್ಟಿನಲ್ಲಿ ಕಾರ್ಯನಿರತವಾಗಿವೆ ಆದರೆ ವಿದ್ಯುನ್ಮಾನ ಮಾಧ್ಯಮಗಳು ಕೇವಲ ಮನರಂಜನೆ, ಟಿಆರ್ಪಿ ಶ್ರೇಣಿ, ಮಾರುಕಟ್ಟೆ ಲಾಭ ಮತ್ತು ಸಾಂಸ್ಥಿಕ ಉನ್ನತಿಯನ್ನು ದಾಟಿ ನೋಡುವುದೂ ಇಲ್ಲ. ಈ ದುರಂತದ ನಡುವೆಯೇ ನವ ಭಾರತ ಇನ್ನು 20 ವರ್ಷಗಳ ಒಳಗೆ ʼ ವಿಕಸಿತ ಭಾರತ ʼ ಆಗುವ ಮಹತ್ವಾಕಾಂಕ್ಷೆಯನ್ನು ಹೊತ್ತು ನಡೆಯುತ್ತಿದೆ. ಈ ವಿಕಾಸದ ಭಾಗಿದಾರರಾದ ದುಡಿಯುವ ಜನತೆ, ಯುವ ಜನಾಂಗ ಮತ್ತು ಶ್ರಮಜೀವಿ ವರ್ಗಗಳು ನವ ಮಾಧ್ಯಮಗಳಲ್ಲಿ ಸದಾ ನಿರ್ಲಕ್ಷಿತರಾಗಿಯೇ ಕಾಣುತ್ತಾರೆ. ಸ್ವಾಭಾವಿಕವಾಗಿ ವಿಕಾಸದ ಫಲಾನುಭವಿ ಸಮಾಜಗಳು, ಅಂದರೆ ಸಂಪತ್ತಿನ ಒಡೆಯರು, ಸಂಪನ್ಮೂಲಗಳ ಮಾಲಿಕರು ಮತ್ತು ಸಿರಿವಂತಿಕೆಯ ವಾರಸುದಾರರು ಅಲ್ಲಿ ಪ್ರತಿನಿಧಿಸಲ್ಪಡುತ್ತಾರೆ.
ಕೇಂದ್ರ ಬಿಜೆಪಿ ಸರ್ಕಾರ ಮತ್ತು ಒಂದು ಹಂತದಲ್ಲಿ ಕಾಂಗ್ರೆಸ್ ಸರ್ಕಾರಗಳೂ ಅನುಸರಿಸುತ್ತಿರುವ ಆಪ್ತ ಬಂಡವಾಳಶಾಹಿ (Crony capitalism) ಆರ್ಥಿಕ ನೀತಿಗಳಿಗೆ ಮಾಧ್ಯಮಗಳ ಧೋರಣೆಯೂ ಪೂರಕವಾಗಿರುತ್ತದೆ. ತತ್ಪರಿಣಾಮವಾಗಿ ಜನಮುಖಿ-ಸಮಾಜಮುಖಿ ಆಗಿರಬೇಕಾದ ಸಂವಹನದ ಸೇತುವೆಗಳು ತಮ್ಮ ಅಂತಃಸತ್ವವನ್ನು ಕಳೆದುಕೊಳ್ಳುವುದೇ ಅಲ್ಲದೆ, ನೈತಿಕ ಮೌಲ್ಯಗಳನ್ನೂ ಕಳಚಿ ಹಾಕಿ, ಕಾರ್ಪೋರೇಟ್ ಮಾರುಕಟ್ಟೆಯ ಸರಕುಗಳಾಗಿ ಬೆತ್ತಲಾಗಿ ನಿಂತಿವೆ. ಕೆಲವು ಅಪವಾದಗಳನ್ನು ಹೊರತುಪಡಿಸಿ ಬಹುಪಾಲು ಮಾಧ್ಯಮ ವಾಹಿನಿಗಳು, ಸಮೂಹಗಳು ಜನನಿಷ್ಠೆ ಮತ್ತು ಸಮಾಜನಿಷ್ಠೆಯನ್ನು ಕಡೆಗಣಿಸಿ, ಪ್ರಭು-ಪ್ರಭುತ್ವ ನಿಷ್ಠೆಗೇ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿರುವುದನ್ನು ವಿಷಾದದಿಂದಲೇ ಗುರುತಿಸಬೇಕಿದೆ.
ಇದರ ನೇರ ಪರಿಣಾಮ, ಪತ್ರಿಕೋದ್ಯಮ ಎನ್ನುವುದು ಕೊಡು ಕೊಳ್ಳುವಿಕೆಯ ವ್ಯಾವಹಾರಿಕ ಉದ್ಯಮವಾಗಿದೆ. ತಮ್ಮ ಜೀವನೋಪಾಯಕ್ಕಾಗಿ ಪತ್ರಿಕೋದ್ಯಮವನ್ನು ಆಶ್ರಯಿಸುವ ಕೆಳಸ್ತರ ಸಮಾಜದ ಯುವ ಜನಾಂಗ ವೈಯುಕ್ತಿಕ ಸೈದ್ಧಾಂತಿಕ ಭೂಮಿಕೆಗಳನ್ನು ಬದಿಗಿಟ್ಟು, ಪತ್ರಿಕೆಗಳ, ವಾಹಿನಿಗಳ ಇರಾದೆಯಂತೆ ಕಾರ್ಯನಿರ್ವಹಿಸಬೇಕಾಗಿದೆ. ತನಿಖಾ ಪತ್ರಿಕೋದ್ಯಮದ ಅವಸಾನಕ್ಕೆ ಇದೇ ಪ್ರಮುಖ ಕಾರಣವೂ ಆಗಿದೆ. ವಿಶ್ವವಿದ್ಯಾಲಯಗಳಲ್ಲಿ ಪತ್ರಿಕೋದ್ಯಮ ವಿಭಾಗಕ್ಕೆ ಸೇರುವವರ ಸಂಖ್ಯೆಯೂ ಕ್ರಮೇಣ ಕ್ಷೀಣಿಸುತ್ತಿದೆ. ಏಕೆಂದರೆ ಇಲ್ಲಿಂದ ಹೊರಬಂದು ನೇರವಾಗಿ ಮಾರುಕಟ್ಟೆಯ ಅಂಗಳದಲ್ಲಿ ಬೀಳುವ ಯುವ ಜನಾಂಗಕ್ಕೆ ತಮ್ಮ ಸ್ವಂತಿಕೆಯನ್ನು ಕಳೆದುಕೊಂಡು, ತಾತ್ವಿಕ ನೆಲೆಗಳನ್ನು ಕಳಚಿಕೊಂಡು ಮಾರುಕಟ್ಟೆಯ ಅವಶ್ಯಕತೆಗಳಿಗೆ ಅನುಗುಣವಾಗಿ ತಮ್ಮ ವೃತ್ತಿಯನ್ನು ಪಾಲಿಸಬೇಕಾಗುತ್ತದೆ.
ಬದಲಾಗಬೇಕಾದ ವಿಕೃತ ಪರಂಪರೆ
ರಾಜಕೀಯ ಪಕ್ಷಗಳಾಗಲಿ, ದಲಿತ ಸಂಘಟನೆಗಳಾಗಲಿ, ಸಾಮಾಜಿಕ ಚಳುವಳಿಗಳಾಗಲಿ ಈ ಗಂಭೀರ ಸಮಸ್ಯೆಯನ್ನು ಗಮನಿಸದಿರುವುದು ವಿಷಾದಕರ. ಇದು ಭವಿಷ್ಯ ಭಾರತವನ್ನು ಕಟ್ಟುವ ಹಾದಿಯಲ್ಲಿ ಅತಿದೊಡ್ಡ ತೊಡಕಾಗಬಹುದಾದ ಸಮಸ್ಯೆ. ಈಗಾಗಲೇ ಜಾತಿ, ಮತ, ಧರ್ಮ ಮತ್ತು ಸೈದ್ದಾಂತಿಕ ಅಸ್ಮಿತೆಗಳಲ್ಲಿ ವಿಘಟಿತವಾಗುತ್ತಿರುವ ಭಾರತೀಯ ಸಮಾಜಕ್ಕೆ ಸ್ವಾತಂತ್ರ್ಯದ ಪೂರ್ವಸೂರಿಗಳು, ದಾರ್ಶನಿಕರು ಅಪೇಕ್ಷಿಸಿದಂತೆ ಮಾನವೀಯ, ಸಂವೇದನಾಶೀಲ, ಸೌಹಾರ್ದಯುತ ದೂರಗಾಮಿತ್ವವನ್ನು ಕಲ್ಪಿಸುವ ನಿಟ್ಟಿನಲ್ಲಿ ಈ ಬೆಳವಣಿಗೆ ನಿರ್ಣಾಯಕವಾಗಲಿದೆ. ಸುದ್ದಿ ಮತ್ತು ಮಾಹಿತಿಗಳನ್ನು ಕ್ಷಣಮಾತ್ರದಲ್ಲಿ ಪಾತಾಳಕ್ಕೂ ಮುಟ್ಟಿಸುವ, ಅಂಗೈನಲ್ಲಿ ಹಿಡಿದಿಡುವ ಡಿಜಿಟಲ್ ಯುಗದಲ್ಲಿ ಸಂವಹನದ ಸೇತುವೆಗಳು ಆರೋಗ್ಯಕರವಾಗಿದ್ದರೆ ಮಾತ್ರ ಕುವೆಂಪು ಬಯಸಿದ ಸರ್ವಜನಾಂಗದ ಶಾಂತಿಯ ತೋಟವನ್ನು, ಠಾಗೋರರು ಆಶಿಸಿದ ವಿಶ್ವಮಾನವನನ್ನು, ಅಂಬೇಡ್ಕರ್ ಬಯಸಿದ ಸಮ ಸಮಾಜವನ್ನು, ಗಾಂಧಿ ಕನಸಿದ ಮಾನವೀಯ ಜಗತ್ತನ್ನು ಕಟ್ಟಲು ಸಾಧ್ಯವಾದೀತು.
ಈ ದೃಷ್ಟಿಯಿಂದ ನೋಡಿದಾಗ, ಮಾಧ್ಯಮ ಎಂಬ ವಿಶಾಲ ಜಗತ್ತು ಕೇವಲ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಧಾರ ಸ್ತಂಭ ಆಗದೆ, ಸಂವೇದನಾಶೀಲ ಮಾನವ ಜಗತ್ತಿಗೆ ಅಡಿಪಾಯವಾಗಬಹುದು. ಆದರೆ ಈ ಅಡಿಪಾಯವನ್ನು ನೆಲಮೂಲದಿಂದಲೇ ಅಸ್ಥಿರಗೊಳಿಸುವ ಕಾರ್ಪೋರೇಟ್ ಮಾರುಕಟ್ಟೆ, ಬಂಡವಾಳಶಾಹಿ ಆರ್ಥಿಕತೆ, ಬಲಪಂಥೀಯ ರಾಜಕಾರಣ, ಮತೀಯವಾದ ಮತ್ತು ಮತಾಂಧತೆ ಮತ್ತು ಇವೆಲ್ಲವನ್ನೂ ನಿರ್ದೇಶಿಸುವ ಪಿತೃಪ್ರಧಾನ-ಊಳಿಗಮಾನ್ಯ ಮೌಲ್ಯಗಳು, ವಿಕಸಿತ ಭಾರತವನ್ನು ಸಾಂಸ್ಕೃತಿಕವಾಗಿ, ನೈತಿಕ ನೆಲೆಯಲ್ಲಿ, ಮಾನವತೆಯ ಚೌಕಟ್ಟಿನಲ್ಲಿ ಮಧ್ಯಕಾಲೀನ ಯುಗದತ್ತ ಕರೆದೊಯ್ಯುತ್ತಿವೆ. ಈ ಹಿಂಪಯಣದ ವಿರುದ್ಧ ದನಿ ಎತ್ತುವುದು ನಮ್ಮ ಆದ್ಯತೆಯಾಗಬೇಕು ಎನ್ನುವುದು ದಿಟ. ಇದಕ್ಕಿಂತಲೂ ಮಿಗಿಲಾಗಿ ವಿಶ್ವವಿದ್ಯಾಲಯಗಳಲ್ಲಿರುವ ಪತ್ರಿಕೋದ್ಯಮ ವಿಭಾಗಗಳು ಮಾಧ್ಯಮಗಳ ಭವಿಷ್ಯದ ಜವಾಬ್ದಾರಿ ಯುವ ಜನಾಂಗದ ಪಾಲುದಾರಿಕೆಯನ್ನು ಕುರಿತು ಹೆಚ್ಚಿನ ಸಂಶೋಧನೆಗಳಿಗೆ ಉತ್ತೇಜನ ನೀಡಬೇಕಿದೆ. ಈ ನಿಟ್ಟಿನಲ್ಲಿ ಯೋಚಿಸುವ ಕನಿಷ್ಠ ವ್ಯವಧಾನವನ್ನಾದರೂ ಅಕಾಡೆಮಿಕ್ ಜಗತ್ತು ರೂಢಿಸಿಕೊಂಡರೆ, ಭವಿಷ್ಯದ ಭಾರತದಲ್ಲಿ ಬೆಳಕು ಕಾಣಲು ಸಾಧ್ಯ.
-೦-೦-೦-೦-೦





