~ಡಾ. ಜೆ ಎಸ್ ಪಾಟೀಲ.
ಶೂದ್ರರು ಬ್ರಾಹ್ಮಣ ಮತದ ಸ್ಥಾಪಕನೆಂದು ಕರೆಯಲಾಗುವ ಕಾಲ್ಪನಿಕ ಬ್ರಹ್ಮನ ಪಾದಗಳಿಂದ ಜನಿಸಿದವರು ಎಂದು ಬ್ರಾಹ್ಮಣ ಸಾಹಿತ್ಯಗಳಲ್ಲಿ ವ್ಯಾಖ್ಯಾನಿಸಲಾಗಿದೆ. ಈ ಮಡಿವಂತರು ಶೂದ್ರರನ್ನು ಶಾಶ್ವತವಾಗಿ ಗುಲಾಮರನ್ನಾಗಿ ಮಾಡಿದ್ದಾರೆ. ವೇದಗಳು, ರಾಮಾಯಣ-ಮಹಾಭಾರತ ಮುಂತಾದ ಕಾಲ್ಪನಿಕ ಮಹಾಕಾವ್ಯಗಳು, ರಾಮಚರಿತಮಾನಸ ಮತ್ತು ಇತರ ಗ್ರಂಥಗಳು ಆಹಾರ ಉತ್ಪಾದಕರು ಮತ್ತು ಕುಶಲಕರ್ಮಿಗಳು ಕಠಿಣ ಪರಿಶ್ರಮದ ಕೆಲಸ ಮಾಡಲು ಮಾತ್ರ ಅರ್ಹರು ಎಂದು ವ್ಯಾಖ್ಯಾನಿಸಿವೆ. ಅದೇ ಕ್ಷತ್ರೀಯರು, ಪುರೋಹಿತರು ಮತ್ತು ವೈಶ್ಯರು ಶ್ರಮದಾಯಕ ಕೆಲಸದಿಂದ ರಿಯಾಯತಿ ತಗೊಂಡು ಎಲ್ಲಾ ರೀತಿಯ ದುಡಿಮೆಯಿಂದ ದೂರವಿದ್ದರು. ಆದರೆ ಈ ರಾಷ್ಟ್ರವನ್ನು ಕಟ್ಟಿದ್ದು ಶೂದ್ರರ ಶ್ರಮಶಕ್ತಿ. ಮಾನವ ಸಮಾನತೆ ಮತ್ತು ಉತ್ಪಾದಕ ಕಾಯಕಗಳ ನೀತಿಯನ್ನು ಉತ್ತೇಜಿಸದ ಈ ಅನುತ್ಪಾದಕ ಬ್ರಾಹ್ಮಣ ವರ್ಗ ರಚಿಸಿದ ಪುಸ್ತಕಗಳಿಂದ ಈ ದೇಶದ ಸಂಪತ್ತನ್ನು ಉತ್ಪಾದಿಸಲಾಗುವುದಿಲ್ಲ ಎನ್ನುವ ಸ್ಪಷ್ಟ ಅಭಿಪ್ರಾಯ ಶೂದ್ರ ಚಳುವಳಿಕಾರರು ಹೊಂದಿದ್ದಾರೆ ಎನ್ನುವ ಬಗ್ಗೆ ಕಾಂಚ ಇಳಯ್ಯ ಸವಿಸ್ತಾರವಾಗಿ ವಿವರಿಸಿದ್ದಾರೆ.
ಆರೆಸ್ಸೆಸ್-ಬಿಜೆಪಿ ಗುಂಪು ಶೂದ್ರ ಮತ್ತು ಚಾಂಡಾಲರನ್ನು (ಮಾಜಿ ಅಸ್ಪೃಶ್ಯರು) ಹಿಂದೂಗಳು ಎಂದು ತನ್ನ ರಾಜಕೀಯ ಲಾಭಕ್ಕೋಸ್ಕರ ಬಾಯುಪಚಾರಕ್ಕಾಗಿ ಕರೆಯುತ್ತದೆ ಹೊರತು ಅದರಾಚೆಗೆ ಅವರನ್ನು ಸಮಾನವಾಗಿ ಕಾಣಲ್ಲ. ಆದರೆ ಆಚರಣೆಯಲ್ಲಿ, ಶೂದ್ರರಿಗೆ ಹಿಂದೂ ಮಂದಿರಗಳಲ್ಲಿ ಸಮಾನವಾದ ಆಧ್ಯಾತ್ಮಿಕ ಹಕ್ಕುಗಳನ್ನು ನಿರಾಕರಿಸುತ್ತದೆ ಅಥವಾ ಸಾವಿನ ನಂತರದ ಜೀವನದ ಅವರ ಯುಟೋಪಿಯನ್ ದರ್ಶನಗಳಿಗೆ ಪ್ರವೇಶವನ್ನು ನಿರಾಕರಿಸುತ್ತದೆ. ಮಂದಿರಗಳು ಇಂದಿಗೂ ಬ್ರಾಹ್ಮಣರ ನಿಯಂತ್ರಣದಲ್ಲಿವೆˌ ಮತ್ತು ಮೇಲಿನ ಮೂರು ಗಣ್ಯ ವರ್ಗಗಳನ್ನು ಹೊರತುಪಡಿಸಿ ಇತರ ಜಾತಿಗಳ ಹಿಂದೂಗಳಿಗೆ ಈ ಅಧಿಕಾರವನ್ನು ಆನಂದಿಸಲು ಮತ್ತು ಸಮಾನವಾಗಿ ಕಾಣಲು ಆರ್‌ಎಸ್‌ಎಸ್ ಎಂದಿಗೂ ಬಯಸುವುದಿಲ್ಲ ಎನ್ನುತ್ತಾರೆ ಕಾಂಚ ಇಳಯ್ಯ. ೨೦೧೪ ರ ಸಂಸತ್ತಿನ ಚುನಾವಣೆಯ ನಂತರದಲ್ಲಿ ಆರ್‌ಎಸ್‌ಎಸ್-ಬಿಜೆಪಿ ಶಕ್ತಿಗಳು ಶೂದ್ರರನ್ನು ಕೆಳ, ಮಧ್ಯಮ ಮತ್ತು ಮೇಲ್ವರ್ಗದ ಓಬಿಸಿಗಳಾಗಿ ವಿಭಜಿಸಿವೆ. ಪ್ರತಿ ಚುನಾವಣೆಯಲ್ಲೂ ಬಿಜೆಪಿಗೆ ಒಲವು ತೋರುವ ಬ್ರಾಹ್ಮಣ, ಕ್ಷತ್ರಿಯ ಮತ್ತು ಬನಿಯಾ ವರ್ಗದ ಮತಗಳ ಬಣಗಳೊಳಗೆ ಶೂದ್ರರನ್ನು ಸಜ್ಜುಗೊಳಿಸಿ ಬಿಜೆಪಿಗೆ ಶಕ್ತಿ ತುಂಬುವ ಹುನ್ನಾರ ಪ್ರತಿಗಾಮಿ ಶಕ್ತಿಗಳು ಮಾಡಿವೆ.
ಅಷ್ಟೇ ಅಲ್ಲದೆ ದೇಶದ ಪ್ರಾದೇಶಿಕ ಪಕ್ಷಗಳನ್ನು ದುರ್ಬಲಗೊಳಿಸಲು ಮತ್ತು ಹಿಂದುಳಿದ ಶೂದ್ರ, ದಲಿತ ಮತ್ತು ಆದಿವಾಸಿಗಳನ್ನು ಬಳಸಿಕೊಂಡು ತನ್ನದೇ ಆದ ಶಕ್ತಿಯನ್ನು ಬಲಪಡಿಸಿಕೊಂಡಿವೆ. ಇಡೀ ರಾಷ್ಟ್ರೀಯ ಸಂಪತ್ತು ಕೂಡ ಬ್ರಾಹ್ಮಣ-ಬನಿಯಾ ಕೈಗಾರಿಕೋದ್ಯಮಿಗಳ ಕೈಗೆ ವರ್ಗಾವಣೆಯಾಗುತ್ತಿದೆ ಎನ್ನುವುದನ್ನು ಅದಾನಿ ಎಂಟರ್‌ಪ್ರೈಸಸ್ ಪ್ರಕರಣದಲ್ಲಿ ಸಾಗರೋತ್ತರ ಮಾಧ್ಯಮಗಳು ಬಹಿರಂಗ ಪಡಿಸಿದವೆ ಹೊರತು ಮೇಲ್ವರ್ಗವೆ ನಿಯಂತ್ರಿಸುವ ಭಾರತೀಯ ಮಾಧ್ಯಮಗಳಲ್ಲ ಎನ್ನುವುದು ಹಿಂಡೆನ್‌ಬರ್ಗ್ ವರದಿ ತೋರಿಸಿದೆ ಎನ್ನುತ್ತಾರೆ ಕಾಂಚ ಇಳಯ್ಯ. ರಾಜರು, ಸರ್ವಾಧಿಕಾರಿಗಳು ಅಥವಾ ಧಾರ್ಮಿಕ ಮುಖಂಡರು ದೇಶದ ಅಧಿಕಾರದ ಚಕ್ರಗಳನ್ನು ನಿಯಂತ್ರಿಸುವ ಮಧ್ಯಪ್ರಾಚ್ಯ, ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದಲ್ಲಿ ಸಂಪ್ರದಾಯವಾದಿ ಮುಸ್ಲಿಂ ವ್ಯವಸ್ಥೆಗಳ ಮಾದರಿಯಲ್ಲಿ ಹಿಂದೂ ಧರ್ಮವನ್ನು ನಿಖರವಾಗಿ ಸಂಘಟಿಸಲು ಆರ್‌ಎಸ್‌ಎಸ್-ಬಿಜೆಪಿ ಹುನ್ನಾರ ಮಾಡುತ್ತಿವೆ. ಅದಕ್ಕಾಗಿಯೇ ಉತ್ತರ ಭಾರತದಲ್ಲಿ ಹಿಂದೂ ಸಾಂಪ್ರದಾಯವಾದಿ ಧಾರ್ಮಿಕ ನಾಯಕರು ಶೂದ್ರ ರಾಜಕಾರಣಿಗಳ ವಿರುದ್ಧ ಫತ್ವಾ ಹೊರಡಿಸುವುದನ್ನು ನಾವು ನೋಡುತ್ತಿದ್ದೇವೆ ಎನ್ನುತ್ತಾರೆ ಕಾಂಚ ಇಳಯ್ಯ. ಶೂದ್ರ ಸಮುದಾಯದಲ್ಲಿ ಜಾಗೃತಿ ಮತ್ತು ಶೂದ್ರ ಪ್ರಜ್ಞೆಯ ಅಸ್ಮಿತೆಯನ್ನು ಕೆರಳಿಸುವ ಮೂಲಕ ಚಳುವಳಿಕಾರರು ಒಂದು ಹೊಸ ಸಂಚಲನವನ್ನು ಜನಮಾನಸದಲ್ಲಿ ಮೂಡಿಸಿದ್ದಾರೆ.
ನಾವು ಇಡೀ ಶೂದ್ರ ವರ್ಗವನ್ನು ದೇಶದ ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಮಹತ್ತರ ಪಾತ್ರ ಹೊಂದಿರುವ ಘನತೆವೆತ್ತ ಜನಾಂಗವಾಗಿ, ಹಾಗು ದೇಶದ ಏಕೈಕ ಉತ್ಪಾದಕ ಶಕ್ತಿ ಎಂದು ಮರು ವ್ಯಾಖ್ಯಾನಿಸಬೇಕು. ಶೂದ್ರ ವರ್ಗವನ್ನು ಸಾರ್ವತ್ರಿಕವಾಗಿ ಮತ್ತು ಸಂಘಟನಾತ್ಮಕವಾಗಿ ಸಜ್ಜುಗೊಳಿಸಬೇಕಿದೆ. ಇಲ್ಲದಿದ್ದರೆ ಈ ಚಾರಿತ್ರಿಕ ಉತ್ಪಾದಕ ವರ್ಗದ ಸ್ಥಿತಿಗತಿ ತುಳಸಿದಾಸನ ಕಾಲಕ್ಕೆ ತಳ್ಳಲ್ಪಡುವ ಅಪಾಯವಿದೆ. ಆ ಕಾರಣದಿಂದ ನಾವೆಲ್ಲ ಇಂದು ಒಕ್ಕೂರಲಿನಿಂದ “ಹೆಮ್ಮೆಯಿಂದ ಹೇಳಿ, ನಾವು ಶೂದ್ರರು” ಎನ್ನುವ ಈ ಕಾಲಕ್ಕೆ ಪ್ರಸ್ತುತವಾದ ಘೋಷಣೆಯೊಂದಿಗೆ ಹೋರಾಟಕ್ಕಿಳಿಯಬೇಕಿದೆ. ಈ ದಿಶೆಯಲ್ಲಿ ಚಂದ್ರಶೇಖರ್ ಅವರು ಮನು ಧರ್ಮ ಶಾಸ್ತ್ರ, ರಾಮಚರಿತಮಾನಸ ಮತ್ತು ಆರ್‌ಎಸ್‌ಎಸ್‌ನ ಸೈದ್ಧಾಂತಿಕ ಗುರು ಎಂ.ಎಸ್.ಗೋಲ್ವಾಲ್ಕರ್ ಅವರ ಚಿಂತನಗಂಗಾ ಎನ್ನುವ ಜೀವವಿರೋಧಿ ವಿಚಾರಗಳನ್ನು ಒಂದೇ ಬುಟ್ಟಿಗೆ ಹಾಕಿ ವಿಶ್ಲೇಷಿಸಲು ಆರಂಭಿಸಿದಾಗ, ಶೂದ್ರರ ಸಂಘಟನೆಯ ಕುರಿತು ಒಂದು ನಿಖರವಾದ ಸ್ಪಷ್ಟತೆ ಹೊರಹೊಮ್ಮಿದೆ. ಈ ಶೂದ್ರ ಪ್ರಜ್ಞೆಯ ಜಾಗೃತಾ ಜ್ಞಾನವನ್ನು ಇಡೀ ದೇಶಾದ್ಯಂತ ಉತ್ತೇಜಿಸುವುದರಿಂದ ಈ ಪರಂಪರಾಗತ ಶೂದ್ರ-ದಲಿತ ಗುಲಾಮಗಿರಿಯನ್ನು ಹುಡಿಗೊಳಿಸಬಹುದಾಗಿದೆ. ಇಂದಿನ, ಓಬಿಸಿ-ದಲಿತ ವರ್ಗದ ಶಾಲಾ ಮಕ್ಕಳಿಗೆ ಶೂದ್ರ ವರ್ಗವು ಈ ದೇಶದ ನೈಜ ಉತ್ಪಾದಕ ಹಾಗು ಶ್ರಮಿಕ ವರ್ಗದ ತಮ್ಮ ಪೂರ್ವಿಕರನ್ನು ಪ್ರತಿನಿಧಿಸುತ್ತದೆ ಎಂಬ ಅರಿವಿಲ್ಲವಾಗಿದೆ. ಹಿಂದುತ್ವದ ಅಮಲಿಗೀಡಾಗಿರುವ ಶೂದ್ರ ಯುವ ಸಮುದಾಯದ ಆಧುನಿಕ ಗುಲಾಮಗಿರಿಯನ್ನು ತಡೆಯಲು ನಮಗೆ ಹೊಸ ಸಾಂಸ್ಕೃತಿಕ ಯುದ್ಧನೀತಿಯ ಅಗತ್ಯವಿದೆ ಎನ್ನುತ್ತಾರೆ ಲೇಖಕರು.
ಪೆರಿಯಾರ್ ರಾಮಸಾಮಿ ಅವರು ಬಹಳ ಹಿಂದೆ ತಮಿಳುನಾಡಿನಲ್ಲಿ ಈ ಹೋರಾಟವನ್ನು ಪ್ರಾರಂಭಿಸಿದರು, ಶೂದ್ರ-ದಲಿತ ವರ್ಗಗಳನ್ನು ದ್ರಾವಿಡತ್ವದ ತಳಹದಿಯಲ್ಲಿ ಒಗ್ಗೂಡಿಸಿದ್ದರು. ಮುಸ್ಲಿಮರು ಹಿಂದೂಗಳ ಶತ್ರುಗಳೆಂದು ಬಿಂಬಿಸಿ ಸಂಘದ ಬ್ರಾಹ್ಮಣರು ದ್ರಾವಿಡರ ಮತ್ತು ಶೂದ್ರ-ದಲಿತ-ಆದಿವಾಸಿಗಳ ಐಕ್ಯತೆಯನ್ನು ಒಡೆಯುವ ಯೋಜನೆ ರೂಪಿಸಿದ್ದಾರೆ. ಈ ರಾಷ್ಟ್ರಕ್ಕೆ ಮುಸ್ಲಿಮರಿಂದ ಬೆದರಿಕೆ ಇದೆ ಎಂದು ಕಪೋಲಕಲ್ಪಿತ ಸುಳ್ಳು ಸುದ್ದಿಯನ್ನು ಹರಡಿ ಶೂದ್ರರು ಮತ್ತು ದಲಿತರನ್ನು ಹಾದಿ ತಪ್ಪಿಸಿರುವ ಆರ್‌ಎಸ್‌ಎಸ್-ಬಿಜೆಪಿ ದೇಶದ ಮತ್ತು ಹಲವಾರು ರಾಜ್ಯಗಳಲ್ಲಿ ಅಧಿಕಾರ ಹಿಡಿದಿದೆ. ಆದರೆ ಬಿಜೆಪಿ ಮತ್ತು ಅದರ ಮಾತೃ ಸಂಸ್ಥೆಯ ಅಘೋಷಿತ ಅಜೆಂಡಾ ಶೂದ್ರ-ದಲಿತ ಶಕ್ತಿಗಳನ್ನು ಶಾಸ್ತ್ರೀಯ ಬ್ರಾಹ್ಮಣ ಪ್ರಾಬಲ್ಯಕ್ಕೆ ತಳ್ಳುವುದೇ ಆಗಿದೆ. ಈ ಎಲ್ಲಾ ಕಾರಣಗಳಿಗಾಗಿ, ಭಾರತೀಯ ಶೂದ್ರ ವರ್ಗವು ಬ್ರಾಹ್ಮಣ್ಯ ಪ್ರತಿಪಾದಿಸುವ ಸಂಸ್ಕೃತ ಸಾಹಿತ್ಯವನ್ನು ಓದುವ ಮತ್ತು ಮರು-ಓದುವ ಮೂಲಕ ಬೌದ್ಧಿಕ ಯುದ್ಧನೀತಿಯನ್ನು ಪ್ರಾರಂಭಿಸಬೇಕಿದೆ.
ಡಾ. ಬಿ ಆರ್ ಅಂಬೇಡ್ಕರ್ ಅವರ ಕಾಲದಲ್ಲಿ ಇದನ್ನೇ ಮಾಡಿದ್ದರು, ಆದರೆ ಆರ್‌ಎಸ್‌ಎಸ್-ಬಿಜೆಪಿ ಅಲ್ಪಸಂಖ್ಯಾತರ ಕುರಿತ ಬಾಬಾಸಾಹೇಬರ ನಿಲುವುಗಳನ್ನು ಆಯ್ದು ಉಲ್ಲೇಖಿಸಿ ಅವರ ಆಲೋಚನೆಗಳನ್ನು ಸಹ ಹೈಜಾಕ್ ಮಾಡಲು ಪ್ರಯತ್ನಿಸುತ್ತಿವೆ. ಆರೆಸ್ಸೆಸ್-ಬಿಜೆಪಿಯ ಬುನಾದಿ ಸಾಹಿತ್ಯವು ಸನಾತನ ಬ್ರಾಹ್ಮಣ ಧರ್ಮದ ಸಾಹಿತ್ಯವೆ ಹೊರತು ಸಮಗ್ರ ಹಿಂದೂ ಧರ್ಮದ ಸಾಹಿತ್ಯ ಅಲ್ಲವೆಂದು ಕರೆಯುವ-ಹೊಸ ನೆರೇಷನ್ ಶೂದ್ರರು ಆರಂಭವಾಗಬೇಕಿದೆ. ಉತ್ತರ ಭಾರತದ ಅನೇಕ ದಲಿತ ವಿದ್ವಾಂಸರು ಈ ಚರ್ಚೆಯಲ್ಲಿ ಭಾಗವಹಿಸಲು ಉತ್ಸಾಹ ತೋರುತ್ತಿಲ್ಲ ˌ ಏಕೆಂದರೆ ಅವರು ತಮ್ಮನ್ನು ದಲಿತ ಬೌದ್ಧರೆಂತಲು ಮತ್ತು ಹಿಂದೂ ಧಾರ್ಮಿಕ ಸಿದ್ಧಾಂತದೊಂದಿಗೆ ಹೋರಾಡುವ ಅಗತ್ಯವಿಲ್ಲವೆಂತಲು ಭಾವಿಸಿದ್ದಾರೆ. ಆದರೆ ಶೂದ್ರ ಬುದ್ಧಿಜೀವಿಗಳು ಮತ್ತು ರಾಜಕೀಯ ನಾಯಕರು ಈ ಸೈದ್ಧಾಂತಿಕ ಹೋರಾಟವನ್ನು ಸಮರೋಪಾದಿಯಾಗಿ ಸಂಘಟಿಸಬೇಕಿದೆ ಎನ್ನುವುದು ಇಳಯ್ಯನವರ ನಿಲುವಾಗಿದೆ.
ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ, ಶೂದ್ರ ನಾಯಕರು ಬಿಜೆಪಿ ಆಡಳಿತ ಅನುಷ್ಟಾನಗೊಳಿಸಿರುವ ಹೊಸ ಶಿಕ್ಷಣ ನೀತಿಯು ರಾಷ್ಟ್ರೀಯತೆಯ ಉಡುಪಿನಲ್ಲಿ ಶೂದ್ರ-ದಲಿತರ ಶಾಸ್ತ್ರೀಯ ಗುಲಾಮಗಿರಿಯನ್ನು ಪುನಃ ಹೇರುತ್ತಿದೆ ಎಂದು ಅರಿತುಕೊಂಡಿದ್ದಾರೆ. ಅದರ ಮೂಲಕ, ಆರೆಸ್ಸೆಸ್-ಬಿಜೆಪಿ ಆಡಳಿತವು ಶೂದ್ರ ವರ್ಗದ ಮಕ್ಕಳು ಮತ್ತು ಯುವಕರು ಅಧ್ಯಯನ ಮಾಡುವ ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಶೂದ್ರ ಮತ್ತು ದಲಿತ ವಿರೋಧಿ ಪುಸ್ತಕಗಳನ್ನು ಪವಿತ್ರ ಗ್ರಂಥಗಳು ಮತ್ತು ಪಾಠಗಳನ್ನಾಗಿ ಹೇರಲು ಬಯಸುತ್ತದೆ. “ಗರ್ವ್ ಸೇ ಕಹೋ ಹಮ್ ಶೂದ್ರ ಹೈ” ಎಂಬ ಘೋಷಣೆಯು ಒಂದು ಹೋರಾಟದ ಮಾರ್ಗವನ್ನು ಶೂದ್ರರಿಗೆ ತೋರಿಸುತ್ತಿದೆ. ಮೀಸಲಾತಿಗೆ ಒಳಪಟ್ಟಿರುವ ಮತ್ತು ಹೊರಗಿರುವ ಎಲ್ಲಾ ಉತ್ಪಾದಕ ವರ್ಗಗಳನ್ನು ಮತ್ತೆ ಒಂದುಗೂಡಿಸುವುದು ಇಂದು ಅತ್ಯವಶ್ಯಕವಾಗಿದೆ.
ವಿವಿಧ ಪ್ರಾದೇಶಿಕ ಪಕ್ಷಗಳು ಈ ಯುದ್ಧದಲ್ಲಿ ಸೇರಿಕೊಂಡರೆ, ಇದು ಪರಿವರ್ತನೆಯ ಖಚಿತ ಭರವಸೆಯನ್ನು ಒದಗಿಸಬಲ್ಲುದು. ಒಮ್ಮೆ ಈ ಐತಿಹಾಸಿಕ ವರ್ಗವು ಸಾಮಾಜಿಕ ಬದಲಾವಣೆಗಾಗಿ ಒಂದು ಸಾಮಾನ್ಯ ನಿರ್ಲಕ್ಷಿತ ವರ್ಗವಾಗಿ ರೂಪಾಂತರಗೊಂಡ ನಂತರ ಕರಿಯರನ್ನು ತಿರಸ್ಕರಿಸಿದ ಆಫ್ರಿಕನ್-ಅಮೆರಿಕನ್ ಸ್ಥಿತಿಗತಿಯಂತೆ ಮಂಡಲ್ ಕ್ರಾಂತಿಯ ನಂತರ ಭಾರತದಲ್ಲಿ ಸಾಮಾಜಿಕ ಚಳುವಳಿಯ ಮುಂದಿನ ಹಂತವನ್ನು ಅಭಿವೃದ್ಧಿಪಡಿಸಲು ನಾಂದಿ ಹಾಡಬೇಕಿದೆ. ಈ ಹೊಸ ಹೋರಾಟದ ಮಾರ್ಗವು ಭರವಸೆಯಿಂದ ತುಂಬಿದೆ ಮತ್ತು ಬಸವಣ್ಣ ˌ ಮಹಾತ್ಮ ಫುಲೆ, ಪೆರಿಯಾರ್ ರಾಮಸಾಮಿ ನಾಯ್ಕರ್ ಮತ್ತು ಅಂಬೇಡ್ಕರ್ ಅದರು ಈ ಹೋರಾಟಕ್ಕೆ ಮಾರ್ಗದರ್ಶಕ ದೀಪಗಳಾಗಿ ಪರಿಗಣಿಸುವ ಅಗತ್ಯವಿದೆ ಎನ್ನುವುದು ಕಾಂಚ ಇಳಯ್ಯನವರ ನಿಲುವಾಗಿದೆ.
~ಡಾ. ಜೆ ಎಸ್ ಪಾಟೀಲ.