~ಡಾ. ಜೆ ಎಸ್ ಪಾಟೀಲ.
ಒಂದು ಸಮುದಾಯವಾಗಿ, ಇಡೀ ಮುಸ್ಲಿಮರನ್ನು ಈಗಾಗಲೇ ಗುರಿಯಾಗಿಸಲಾಗಿದೆ. ಅವರನ್ನು ಎಲ್ಲ ರೀತಿಯಿಂದ ಬಹಿಷ್ಕರಿಸಲಾಗುತ್ತಿದೆ. ಮುಸ್ಲಿಮರ ಮೇಲೆ ವಾಡಿಕೆಯಂತೆ ‘ಲವ್ ಜಿಹಾದ್’, ‘ಕರೋನಾ ಜಿಹಾದ್, ‘ಉದ್ಯೋಗ ಜಿಹಾದ್’ˌ ‘ಆಹಾರ ಜಿಹಾದ್’, ‘ಡ್ರೆಸ್ ಜಿಹಾದ್’, ‘ಚಿಂತನೆ ಜಿಹಾದ್’, ಅಷ್ಟೆ ಅಲ್ಲದೆ ಹಾಸ್ಯ ಷೋ ಕಲಾವಿದರನ್ನು ಗುರಿಯಾಗಿಸಿ ‘ನಗು ಜಿಹಾದ್’ ಇತ್ಯಾದಿ ಆರೋಪಗಳಿಂದ ಮಾನಸಿಕವಾಗಿ ಜರ್ಜಿರಿತಗೊಳಿಸಲಾಗುತ್ತಿದೆ ಎಂದು ಬಿಜೆಪಿ ಆಡಳಿತದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಎಸಗಲಾಗುತ್ತಿರುವ ಜನಾಂಗೀಯ ಭೇದದ ಅತಿರೇಕಗಳನ್ನು ಅರುಂಧತಿಯವರು ತಮ್ಮ ಭಾಷಣದಲ್ಲಿ ವಿವರಿಸಿದ್ದಾರೆ. ಭಾರತವು ಒಂದು ದೇಶವಾಗಿ, ಆಧುನಿಕ ರಾಷ್ಟ್ರ ˌ ಸಂವಿಧಾನಬದ್ಧ ಕಾನೂನುˌ ಬಹು ಧರ್ಮಗಳು, ಬಹು ಭಾಷೆಗಳು, ಮತ್ತು ಅನೇಕ ಜಾತಿ-ಜನಾಂಗಗಳ ನಡುವಿನ ಸಾಮಾಜಿಕ ಒಪ್ಪಂದವಾಗಿ ಮಾತ್ರ ಅಸ್ತಿತ್ವದಲ್ಲಿದೆ. ನಮ್ಮ ದೇಶವು ಬಹು ಸಂಖ್ಯಾತರ ಮತ್ತು ಅಲ್ಪಸಂಖ್ಯಾತರ ನಡುವಿನ ಸಾಮಾಜಿಕ ಒಡಂಬಡಿಕೆಯ ಸಂಕೇತವಾಗಿದೆ. ರಾಜಕೀಯ ಲಾಭಕ್ಕಾಗಿ, ಆ ಸಾಮಾಜಿಕ ಕಾಂಪ್ಯಾಕ್ಟ್ ಅನ್ನು ಕೃತಕವಾಗಿ ನಿರ್ಮಿಸಿ “ನೊಂದ ಹಿಂದೂ ಬಹುಸಂಖ್ಯಾತರು” ಎಂದು ಕೋಮುವಾದಿಗಳು ಬಿಂಬಿಸುತ್ತಿದ್ದಾರೆ. ಅದಕ್ಕೆ ಹಿಂದೂ ರಾಷ್ಟ್ರ ಮಾಡುವುದು ಏಕೈಕ ಪರಿಹಾರವೆಂದು ಜನರನ್ನು ನಂಬಿಸಲಾಗುತ್ತಿದೆ ಎನ್ನುತ್ತಾರೆ ಅರುಂಧತಿಯವರು.

ಭಾರತ ಉಪಖಂಡವು ವಿಭಜನೆಗೊಂಡು ನೂರಾರು ಸ್ವತಂತ್ರ ರಾಜಪ್ರಭುತ್ವಗಳು, ಒಂದುಗೂಡುವಾಗ ಭಾರತದಿಂದ ಪಾಕಿಸ್ತಾನಕ್ಕೆ, ಹಾಗು ಪಾಕಿಸ್ತಾನದಿಂದ ಭಾರತಕ್ಕೆ ಲಕ್ಷಾಂತರ ಜನ ಹಿಂದೂ, ಮುಸ್ಲಿಂ ಮತ್ತು ಸಿಖ್ಖರು ವಲಸೆ ಹೋದರು. ಒಂದು ಮಿಲಿಯನ್ ಜನರು ಕೊಲ್ಲಲ್ಪಟ್ಟರು. ಹತ್ತಾರು ಮಿಲಿಯನ್ ಜನರು ಸ್ಥಳಾಂತರಗೊಂಡರು. ಅಪಾಯಕಾರಿ ಸುಳ್ಳುಗಳನ್ನು ಹೆಣೆದ ಕೋಮುವಾದಿಗಳು ಇತಿಹಾಸವನ್ನು ತಿರುಚಿ ಯುವ ಜನಾಂಗದ ಮೇಲೆ ಭೀಕರ ದ್ವೇಷಮಯ ಪರಿಣಾಮಗಳನ್ನು ಹುಟ್ಟುಹಾಕಿದ್ದಾರೆ. ಉಪಖಂಡದಲ್ಲಿರುವ ನಾವೆಲ್ಲರೂ ನ್ಯಾಯದ ಹಂಚಿಕೆಯ ಕಲ್ಪನೆಯ ಕಡೆಗೆ ಕೆಲಸ ಮಾಡುವ ಆಯ್ಕೆಯನ್ನು ಹೊಂದಿದ್ದೇವೆ. ಭಾರತದ ಪ್ರಧಾನ ಮಂತ್ರಿ, ಅವರ ರಾಜಕೀಯ ಪಕ್ಷ ಮತ್ತು ಅದರ ಮಾತೃ ಸಂಸ್ಥೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂಬ ಫ್ಯಾಸಿಸ್ಟ್ ಸಂಘಟನೆ ಹೊತ್ತಿಸಿದ ಬೆಂಕಿಯು ಗೊತ್ತುಪಡಿಸಿದ ಹಾದಿಯನ್ನಷ್ಟೆ ಸುಡುವುದಿಲ್ಲ ˌ ಇದು ಇಡೀ ದೇಶವನ್ನು ಸುಡಬಹುದು. ಈಗ ಅದರ ಧಗೆ ಶುರುವಾಗಿದೆ. ಭಾರತ ಮತ್ತು ಕಾಶ್ಮೀರದ ಮುಸ್ಲಿಮರ ಜೊತೆಗೆ ಕ್ರಿಶ್ಚಿಯನ್ನರು ಕೂಡ ಹಿಂದುತ್ವವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಳೆದ ವರ್ಷವಷ್ಟೇ ಚರ್ಚ್‌ಗಳ ಮೇಲೆ ನೂರಾರು ದಾಳಿಗಳು ನಡೆದಿವೆ, ಕ್ರೈಸ್ತನ ಪ್ರತಿಮೆಗಳನ್ನು ಅಪವಿತ್ರಗೊಳಿಸಲಾಗಿದೆ, ಪಾದ್ರಿಗಳು ಮತ್ತು ಸನ್ಯಾಸಿನಿಯರ ಮೇಲೆ ದೈಹಿಕವಾಗಿ ಹಲ್ಲೆ ಮಾಡಲಾಗಿದೆ ಎಂದು ಅರುಂಧತಿಯವರು ಆತಂಕ ವ್ಯಕ್ತಪಡಿಸಿದ್ದಾರೆ.
ಸಾವಿರಾರು ಮುಸ್ಲಿಮರ ಸಾಮೂಹಿಕ ಹತ್ಯೆ, ಅಸಂಖ್ಯಾತ ಸುಳ್ಳುಗಳ ಸೃಷ್ಟಿಯ ಸಂಚುಗಳಿಂದ ತಯಾರಿಸಲ್ಪಟ್ಟ ಉನ್ಮಾದದ ಸರಣಿಯ ಮೇಲೆ ಅಧಿಕಾರಕ್ಕೆ ಏರಿದ ಮನುಷ್ಯರು ಭಾರತವನ್ನು ಆಳುತ್ತಿದ್ದಾರೆ. ಭಾರತದ ಪ್ರತಿಯೊಬ್ಬ ಜಾತಿಯ ದೇಶಭಕ್ತರುˌ ಮುಸ್ಲಿಂ ವಿರೋಧಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಚಳುವಳಿಕಾರರು, ಐತಿಹಾಸಿಕ ರೈತ ಚಳವಳಿಕಾರರುˌ ಮತ್ತು ಪಶ್ಚಿಮ ಬಂಗಾಳ, ತಮಿಳುನಾಡಿನ ಪ್ರಾದೇಶಿಕ ರಾಜಕೀಯ ಪಕ್ಷಗಳು ಕೋಮುವಾದಿಗಳ ಈ ಹುನ್ನಾರವನ್ನು ವಿರೋಧಿಸಿದ್ದಾರೆ. ಕೇರಳ, ಮತ್ತು ಮಹಾರಾಷ್ಟ್ರದ ಜನರು ಬಿಜೆಪಿಯನ್ನು ಸೋಲಿಸಿದ್ದಾರೆ. ಏಕೈಕ ರಾಷ್ಟ್ರೀಯ ಪಕ್ಷ ಹಾಗು ವಿರೋಧ ಪಕ್ಷ ˌ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ್ನು ದುರ್ಭಲಗೊಳಿಸಲಾಗುತ್ತಿದೆ. ಭಾರತದ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳನ್ನು ˌ ಪ್ರಜಾಪ್ರಭುತ್ವˌ ಜಾತ್ಯತೀತತೆˌ ಸಮಾಜವಾದಿ ಹಿನ್ನೆಲೆˌ ಗಣರಾಜ್ಯ, ಸಂವಿಧಾನವನ್ನು ನಗಣ್ಯಗೊಳಿಸಲಾಗುತ್ತಿದೆ. ಸಂಸತ್ತು ˌ ನ್ಯಾಯಾಂಗ ಮತ್ತು ಮಾಧ್ಯಮಗಳನ್ನು ಮುಕ್ತತೆಯಿಂದ ಹೊರಗಿಡಲಾಗಿದೆ. ಆಡಳಿತ ಯಂತ್ರ, ಗುಪ್ತಚರ ಸೇವೆಗಳು, ಪೋಲೀಸ್ ಮತ್ತು ಚುನಾವಣಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ೧೯೨೫ ರಲ್ಲಿ ಸ್ಥಾಪಿಸಲಾದ ಫ್ಯಾಸಿಸ್ಟ್, ಹಿಂದೂ ರಾಷ್ಟ್ರೀಯವಾದಿ ಸಂಘಟನೆ ಸಂವಿಧಾನವನ್ನು ದಿಕ್ಕರಿಸಿ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಲು ಸಂಚು ರೂಪಿಸಿದೆ. ಆರೆಸ್ಸೆಸ್ ಸಿದ್ಧಾಂತಿಗಳು ಹಿಟ್ಲರನನ್ನು ಬಹಿರಂಗವಾಗಿ ಮೆಚ್ಚಿದ್ದಾರೆ ಮತ್ತು ಭಾರತದ ಮುಸ್ಲಿಮರನ್ನು ಜರ್ಮನಿಯ ಯಹೂದಿಗಳೊಂದಿಗೆ ಸಮೀಕರಿಸಿದ್ದಾರೆ ಎಂದು ಅರುಂಧತಿಯವರು ವಿವರಿಸಿದ್ದಾರೆ.

ಆರ್ಯನ್ ರ ಶ್ರೇಷ್ಟತೆಯ ಸಿದ್ಧಾಂತದಂತೆ, ತಾವಷ್ಟೇ ಶ್ರೇಷ್ಟರು, ಈ ದೇಶದ ಇತರ ಪ್ರಜೆಗಳು ಕುಲೀನರು ಮತ್ತು ಅಸ್ಪೃಶ್ಯರು ಎಂಬ ಕಲ್ಪನೆಯು ಬ್ರಾಹ್ಮಣತ್ವದ ಮೂಸೆಯಲ್ಲಿ ರೂಪಿಸಿದ ತಾರತಮ್ಯದ ಸಿದ್ಧಾಂತವಾಗಿದೆ. ದುರಂತವೆಂದರೆ, ಅತ್ಯಂತ ತುಳಿತಕ್ಕೊಳಗಾದವರಲ್ಲಿ ಅನೇಕರು ಆರ್‌ಎಸ್‌ಎಸ್‌ನ ಹುಸಿ ದೇಶಭಕ್ತಿಯ ಚಕ್ರವ್ಯೂಹಕ್ಕೆ ಬಲಿಯಾಗಿದ್ದಾರೆ. ೨೦೨೫ ರಲ್ಲಿ ಆರ್‌ಎಸ್‌ಎಸ್ ನೂರನೇ ವರ್ಷ ಪೂರೈಸಲಿದೆ. ಐತಿಹಾಸಿಕವಾಗಿ ಆರ್‌ಎಸ್‌ಎಸ್ ಅನ್ನು ಪಶ್ಚಿಮ ಕರಾವಳಿಯ ಚಿತ್ಪಾವನ ಬ್ರಾಹ್ಮಣರ ಕೂಟವು ಬಿಗಿಯಾಗಿ ನಿಯಂತ್ರಿಸಿದೆ. ಇಂದು ಇದು ಹದಿನೈದು ಮಿಲಿಯನ್ ಸದಸ್ಯರನ್ನು ಹೊಂದಿದೆ, ಅವರಲ್ಲಿ ಮೋದಿ, ಅವರ ಹಲವಾರು ಕ್ಯಾಬಿನೆಟ್ ಮಂತ್ರಿಗಳು, ಮುಖ್ಯಮಂತ್ರಿಗಳು ಮತ್ತು ರಾಜ್ಯಪಾಲರೂ ಸೇರಿದ್ದಾರೆ. ಇದು ಈಗ ಒಂದು ಸಮಾನಾಂತರ ವಿಶ್ವವಾಗಿದೆ, ಸಾವಿರಾರು ಪ್ರಾಥಮಿಕ ಶಾಲೆಗಳುˌ ರೈತ, ಕಾರ್ಮಿಕ ಮತ್ತು ವಿದ್ಯಾರ್ಥಿ ಘಟಕಗಳು, ತನ್ನದೇ ಆದ ಪ್ರಕಾಶನ ವಿಭಾಗ, ಅರಣ್ಯ-ವಾಸಿ ಬುಡಕಟ್ಟು ಜನರನ್ನು “ಶುದ್ಧೀಕರಿಸಲು” ಮತ್ತು “ಹಿಂದುತ್ವೀಕರಿಸಲು” ಕೆಲಸ ಮಾಡುವ ಘಟಕಗಳು, ಮಹಿಳಾ ಘಟಕˌ ಮುಸೊಲಿನಿಯ ಕಪ್ಪು ಶರ್ಟ್‌ಗಳಿಂದ ಪ್ರೇರಿತವಾದ ಹಲವಾರು ಮಿಲಿಯನ್ ಸಶಸ್ತ್ರ ಮಿಲಿಟಂಟ್ ಗುಂಪು, ಮತ್ತು ಶೆಲ್ ಕಂಪನಿಗಳ ಪಾತ್ರವನ್ನು ನಿರ್ವಹಿಸುವ ಮತ್ತು ತೋರಿಕೆಯ ನಿರಾಕರಣೆ ಎಂದು ಕರೆಯಲ್ಪಡುವ ಊಹೆಗೂ ನಿಲುಕದ ಹಿಂಸಾತ್ಮಕ ಪಡೆ ಅದು ಹುಟ್ಟುಹಾಕಿದೆ ಎನ್ನುತ್ತಾರೆ ಅರುಂಧತಿಯವರು.
ಭಾರತವು ನಿರುದ್ಯೋಗ ಸಮಸ್ಯೆ ˌ ಆರ್ಥಿಕ ಹಿಂಜರಿತˌ ಜಾಗತಿಕ ಹಸಿವು ಸೂಚ್ಯಾಂಕ ಮುಂತಾದ ಮೂಲಭೂತ ಸಮಸ್ಯೆಗಳಲ್ಲಿ ಮುಳುಗುತ್ತಿರುವಾಗ, ಬಿಜೆಪಿ ಮತ್ತು ಅದನ್ನು ನಿಯಂತ್ರಿಸುವ ಅಸಂವಿಧಾನಿಕ ಧಾರ್ಮಿಕ ಉಗ್ರವಾದಿ ಸಂಸ್ಥೆಗಳು ಮಾತ್ರ ಸ್ಥಿರವಾಗಿ ಶ್ರೀಮಂತವಾಗಿ ಬೆಳೆದಿದೆ ಮತ್ತು ಈಗ ಬಿಜೆಪಿ ವಿಶ್ವದ ಶ್ರೀಮಂತ ರಾಜಕೀಯ ಪಕ್ಷವಾಗಿದೆ ಹೊರಹೊಮ್ಮಿದೆ. ಇತ್ತೀಚೆಗೆ ಪರಿಚಯಿಸಲಾದ ಅನಾಮಧೇಯ ಚುನಾವಣಾ ಬಾಂಡ್‌ಗಳ ವ್ಯವಸ್ಥೆಯಿಂದ ಕಾರ್ಪೊರೇಟ್ ನಿಧಿಯ ಅಪಾರದರ್ಶಕ ವ್ಯವಸ್ಥೆಯನ್ನು ಬಿಜೆಪಿ ಸಕ್ರಿಯಗೊಳಿಸಿದೆ. ಪ್ರತಿ ಭಾರತೀಯ ಭಾಷೆಯಲ್ಲಿನ ನೂರಾರು ಕಾರ್ಪೊರೇಟ್ ಕಳ್ಳರು ನಿಯಂತ್ರಿಸುವ ಸುದ್ದಿ ವಾಹಿನಿಗಳು ಬಿಜೆಪಿಯ ಎಲ್ಲಾ ಅನಾಚಾರಗಳನ್ನು ಬೆಂಬಲಿಸುತ್ತಿವೆ. ತಪ್ಪು ಮಾಹಿತಿಯಲ್ಲಿ ಪರಿಣತಿ ಹೊಂದಿರುವ ಸಾಮಾಜಿಕ ಮಾಧ್ಯಮ ಟ್ರೋಲ್‌ಗಳ ಸೈನ್ಯ ಕೂಡ ಸಾಮೂಹಿಕವಾಗಿ ಹುಟ್ಟುಹಾಕಲಾಗಿದೆ. ಬಿಜೆಪಿ ಇನ್ನೂ ಕೂಡ ಆರ್‌ಎಸ್‌ಎಸ್‌ನ ನಿಯಂತ್ರಣದಂತೆ ಕೆಲಸ ಮಾಡುತ್ತದೆ. ಈಗ ರಾಷ್ಟ್ರವು ತನ್ನ ಬಹುತ್ವದ ನೆಲೆಯಿಂದ ದೂರ ಸರಿಯುತ್ತಿದೆ. ಈಗಾಗಲೇ ವಿದೇಶಿ ರಾಜತಾಂತ್ರಿಕರು ಗೌರವ ಸಲ್ಲಿಸಲು ಆರ್‌ಎಸ್‌ಎಸ್ ಪ್ರಧಾನ ಕಚೇರಿಗೆ ದೌಡಾಯಿಸಲು ಪ್ರಾರಂಭಿಸಿದ್ದಾರೆ. ಯುನೈಟೆಡ್ ಸ್ಟೇಟ್ಸ್‌ನ ವಿಶ್ವವಿದ್ಯಾನಿಲಯ ಕ್ಯಾಂಪಸ್‌ಗಳು ನ್ಯಾಯಸಮ್ಮತತೆಯ ಈ ಹತಾಶ ಅನ್ವೇಷಣೆಯಲ್ಲಿ ಹೊಸ ಯುದ್ಧಭೂಮಿಯಾಗಿವೆ. ಅಪಾಯವೆಂದರೆ ಸದಾ ಆಪಾದನೆಯನ್ನು ಮುನ್ನಡೆಸುವವರು ಅನಿಯಂತ್ರಿತ ಬಂಡವಾಳಶಾಹಿ ಆರ್ಥಿಕತೆಯಲ್ಲಿ ನ್ಯಾಯಯುತವಾಗಿ ಗೆಲ್ಲಲಾಗದದನ್ನು ಬಹುಶಃ ಅವನ್ನು ಖರೀದಿಸಬಹುದು ಎಂದು ನಂಬುತ್ತಾರೆ ಎಂದು ಅರುಂಧತಿ ವ್ಯಂಗ್ಯವಾಡಿದ್ದಾರೆ.

2025 ರಲ್ಲಿ ಆರ್‌ಎಸ್‌ಎಸ್ ಶತಮಾನೋತ್ಸವ ಆಚರಣೆಯು ಭಾರತದ ಇತಿಹಾಸದಲ್ಲಿ ಪ್ರಮುಖ ಮೈಲಿಗಲ್ಲಾಗಲಿದೆ. ಅದಕ್ಕಿಂತ ಒಂದು ವರ್ಷ ಮೊದಲು ಅಂದರೆ ೨೦೨೪ˌ ನಮಗೆ ಸಾರ್ವತ್ರಿಕ ಚುನಾವಣೆಯ ವರ್ಷ. ಇದು ಬಹುಶಃ ಮುಂದಿನ ದಿನಗಳಲ್ಲಿ ಹಿಂಸಾತ್ಮಕ ಚಟುವಟಿಕೆಯ ಹಠಾತ್ ವೇಗವರ್ಧನೆಯನ್ನು ವಿವರಿಸುತ್ತದೆ. ಅಷ್ಟರಲ್ಲಿ ಮೋದಿ ಮುಖ ಸರ್ವವ್ಯಾಪಿಯಾಗಲಿದೆ. ನಮ್ಮ ಕೋವಿಡ್ ಲಸಿಕೆ ಪ್ರಮಾಣಪತ್ರಗಳಲ್ಲಿ ಈಗಾಗಲೇ ಅವರ ಮುಖ ಸೇರಿ ಕುಳಿತಿದೆ. ಭಾರತವನ್ನು ಹಿಂದೂ ರಾಷ್ಟ್ರ ಮಾಡುವ ಈ ಯುದ್ಧದಲ್ಲಿ ಆರೆಸ್ಸೆಸ್ ಗೆದ್ದರೆ, ಅದರ ಗೆಲುವು ಪುರಾತನ ಗ್ರೀಕರ ಯುದ್ಧ ನೃತ್ಯವಾಗಲಿದೆ. ಏಕೆಂದರೆ ಭಾರತ ಆಗ ತನ್ನ ಮೂಲ ಅಸ್ತಿತ್ವ ಕಳೆದುಕೊಳ್ಳುತ್ತದೆ. ಈಗಾಗಲೆ ನಾವು ಎಚ್ಚತ್ತುಕೊಳ್ಳುವುದು ತಡವಾಗಿದೆ. ಬೆಂಕಿಯ ಕೆನ್ನಾಲಿಗೆ ನಮ್ಮ ಮನೆಯ ಬಾಗಿಲಲ್ಲಿ ಬಂದು ನಿಂತಿದೆ ಎಂದು ಅರುಂಧತಿ ರಾಯ್ ಅವರು ಭಾರತದಲ್ಲಿನ ಫ್ಯಾಸಿಷ್ಟ ಆಡಳಿತದ ಅಪಾಯಗಳನ್ನು ಮಾರ್ಮಿಕವಾಗಿ ವಿವರಿಸಿದ್ದಾರೆ.
~ಡಾ. ಜೆ ಎಸ್ ಪಾಟೀಲ.