ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ಹಾಗೂ ರಸ್ತೆ ಬದಿಯ ಪಾರ್ಕಿಂಗ್ ಸಮಸ್ಯೆಗೆ ಕಡಿವಾಣ ಹಾಕಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಹೊಸ ಪಾರ್ಕಿಂಗ್ ನೀತಿಯ ಕರಡು ಪ್ರಸ್ತಾವನೆ ಪ್ರಕಟಿಸಿದೆ. ಈ ನೀತಿ ಜಾರಿಗೆ ಬಂದರೆ ಮನೆ ಮುಂದೆ ಸಾರ್ವಜನಿಕ ರಸ್ತೆಯಲ್ಲಿ ವಾಹನ ನಿಲ್ಲಿಸುವವರಿಗೂ ವಾರ್ಷಿಕ ಪಾರ್ಕಿಂಗ್ ಶುಲ್ಕ ಪಾವತಿಸಬೇಕಾಗಬಹುದು.
ಕರಡು ಪ್ರಸ್ತಾವನೆ ಕುರಿತು ಸಾರ್ವಜನಿಕರಿಂದ ಸಲಹೆ ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಜಿಬಿಎ ಒಂದು ತಿಂಗಳ ಕಾಲಾವಕಾಶ ನೀಡಿದೆ. ಅಂತಿಮವಾಗಿ ಅನುಮೋದನೆ ದೊರೆತ ಬಳಿಕ ನಿಯಮಗಳು ಜಾರಿಗೆ ಬರಲಿವೆ.
ಸ್ವಂತ ಮನೆಯ ಕಾಂಪೌಂಡ್‌ನಲ್ಲಿ ವಾಹನ ನಿಲ್ಲಿಸಲು ಸ್ಥಳವಿಲ್ಲದವರು ಮನೆ ಹೊರಗಿನ ವಸತಿ ರಸ್ತೆಗಳಲ್ಲಿ ಕಾರು ನಿಲ್ಲಿಸಿದರೆ ಪಾಸ್ ಪಡೆಯಬೇಕಾಗುತ್ತದೆ ಎಂದು ಕರಡು ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ.
ವಾಹನದ ಗಾತ್ರಕ್ಕೆ ಅನುಗುಣವಾಗಿ ವಾರ್ಷಿಕ ಶುಲ್ಕ ನಿಗದಿಪಡಿಸುವ ಪ್ರಸ್ತಾವನೆ ಇದೆ.
- ಸಣ್ಣ ಕಾರು: ವರ್ಷಕ್ಕೆ ₹15,000
- ಮಧ್ಯಮ ಗಾತ್ರದ ಕಾರು: ವರ್ಷಕ್ಕೆ ₹20,000
- SUV: ವರ್ಷಕ್ಕೆ ₹25,000
ನಿಗದಿಪಡಿಸಿದ ಪಾರ್ಕಿಂಗ್ ಸ್ಥಳಗಳ ಹೊರಗೆ ವಾಹನ ನಿಲ್ಲಿಸಿದರೆ ನಿಯಮ ಉಲ್ಲಂಘನೆ ಎಂದು ಪರಿಗಣಿಸಿ ದಂಡ ವಿಧಿಸುವ ಸಾಧ್ಯತೆಯೂ ಇದೆ.

ನಗರದ ರಸ್ತೆಗಳನ್ನು ಎ, ಬಿ ಮತ್ತು ಸಿ ಎಂಬ ಮೂರು ವರ್ಗಗಳಾಗಿ ವಿಂಗಡಿಸಿ, ರಸ್ತೆ ಮೇಲಿನ ಪಾರ್ಕಿಂಗ್ ಹಾಗೂ ರಸ್ತೆ ಹೊರಗಿನ ಪಾರ್ಕಿಂಗ್‌ಗೆ ಪ್ರತ್ಯೇಕ ಶುಲ್ಕ ವಿಧಿಸುವ ಪ್ರಸ್ತಾವನೆ ಮಾಡಲಾಗಿದೆ.
ಎ ವರ್ಗದ ರಸ್ತೆ
- ಆನ್-ಸ್ಟ್ರೀಟ್: ದ್ವಿಚಕ್ರ ₹40, ಕಾರು ₹80 ಪ್ರತಿ ಗಂಟೆಗೆ
- ಆಫ್-ಸ್ಟ್ರೀಟ್: ದ್ವಿಚಕ್ರ ₹20, ಕಾರು ₹40 ಪ್ರತಿ ಗಂಟೆಗೆ
- ಮಾಸಿಕ ಪಾಸ್: ದ್ವಿಚಕ್ರ ₹2,000, ಕಾರು ₹4,000
ಬಿ ವರ್ಗದ ರಸ್ತೆ
- ಆನ್-ಸ್ಟ್ರೀಟ್: ದ್ವಿಚಕ್ರ ₹30, ಕಾರು ₹60 ಪ್ರತಿ ಗಂಟೆಗೆ
- ಆಫ್-ಸ್ಟ್ರೀಟ್: ದ್ವಿಚಕ್ರ ₹15, ಕಾರು ₹30 ಪ್ರತಿ ಗಂಟೆಗೆ
- ಮಾಸಿಕ ಪಾಸ್: ದ್ವಿಚಕ್ರ ₹1,500, ಕಾರು ₹3,000
ಸಿ ವರ್ಗದ ರಸ್ತೆ
- ಆನ್-ಸ್ಟ್ರೀಟ್: ದ್ವಿಚಕ್ರ ₹20, ಕಾರು ₹40 ಪ್ರತಿ ಗಂಟೆಗೆ
- ಆಫ್-ಸ್ಟ್ರೀಟ್: ದ್ವಿಚಕ್ರ ₹10, ಕಾರು ₹20 ಪ್ರತಿ ಗಂಟೆಗೆ
- ಮಾಸಿಕ ಪಾಸ್: ದ್ವಿಚಕ್ರ ₹1,000, ಕಾರು ₹2,000

ಹೊಸ ನೀತಿಯ ಪ್ರಮುಖ ಉದ್ದೇಶಗಳಲ್ಲಿ ಒಂದು ರಸ್ತೆಗಳನ್ನು ಖಾಸಗಿ ಪಾರ್ಕಿಂಗ್ ಸ್ಥಳಗಳಂತೆ ಬಳಸುವುದನ್ನು ತಡೆಯುವುದು. ಮನೆಯ ಮುಂದೆ ಸಾರ್ವಜನಿಕ ರಸ್ತೆ ಇದ್ದರೆ ಅಲ್ಲಿ ಬೇಕಾದಂತೆ ವಾಹನ ನಿಲ್ಲಿಸುವ ಹಕ್ಕು ಇರುವುದಿಲ್ಲ ಎಂಬ ನಿಯಮವನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ.ಮನೆ ಮಾಲೀಕರು ತಮ್ಮ ಬಾಡಿಗೆದಾರರಿಗೆ ಸಾಧ್ಯವಾದಷ್ಟು ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು. ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ವಾಹನ ನಿಲ್ಲಿಸಿದರೆ ದಂಡ ವಿಧಿಸುವ ಪ್ರಸ್ತಾವನೆ ಇದೆ.
ಹೊಸ ಕರಡು ನೀತಿಯ ಪ್ರಕಾರ, ಕೆಲವು ಪ್ರಮುಖ ಸ್ಥಳಗಳ ಸುತ್ತಮುತ್ತ ವಾಹನ ನಿಲ್ಲಿಸುವುದನ್ನು ಸಂಪೂರ್ಣವಾಗಿ ನಿಷೇಧಿಸುವ ಪ್ರಸ್ತಾವನೆ ಮಾಡಲಾಗಿದೆ.
- ಮೆಟ್ರೋ ಮತ್ತು ಬಸ್ ನಿಲ್ದಾಣಗಳ ಸುತ್ತಮುತ್ತ
- ಟ್ರಾಫಿಕ್ ಸಿಗ್ನಲ್‌ನಿಂದ 50 ಮೀಟರ್ ವ್ಯಾಪ್ತಿಯಲ್ಲಿ
- ಉಪಮುಖ್ಯ ರಸ್ತೆಗಳಿಂದ 25 ಮೀಟರ್ ವ್ಯಾಪ್ತಿಯಲ್ಲಿ
ಇಂತಹ ಪ್ರದೇಶಗಳಲ್ಲಿ ವಾಹನ ನಿಲ್ಲಿಸಿದರೆ ದಂಡ ವಿಧಿಸುವ ಸಾಧ್ಯತೆಯಿದೆ.

ನಗರದಲ್ಲಿರುವ ಖಾಲಿ ನಿವೇಶನಗಳನ್ನು ಪಾರ್ಕಿಂಗ್ ಸ್ಥಳಗಳಾಗಿ ಬಳಸಲು ಉತ್ತೇಜನ ನೀಡುವ ಪ್ರಸ್ತಾವನೆಯೂ ಕರಡಿನಲ್ಲಿದೆ.
ತಮ್ಮ ಖಾಲಿ ಜಾಗವನ್ನು ಸಾರ್ವಜನಿಕ ಪಾರ್ಕಿಂಗ್‌ಗೆ ನೀಡುವ ಮಾಲೀಕರಿಗೆ ಆಸ್ತಿ ತೆರಿಗೆಯಲ್ಲಿ ವಿನಾಯಿತಿ ನೀಡುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಇದರಿಂದ ನಗರದಲ್ಲಿ ಹೆಚ್ಚುವರಿ ಪಾರ್ಕಿಂಗ್ ಸ್ಥಳಗಳನ್ನು ಸೃಷ್ಟಿಸುವ ಉದ್ದೇಶ ಜಿಬಿಎ ಹೊಂದಿದೆ.
ಅಲ್ಲದೆ, ಆಫ್-ಸ್ಟ್ರೀಟ್ ಪಾರ್ಕಿಂಗ್ ಸ್ಥಳಗಳಲ್ಲಿ ರಾತ್ರಿ 8ರಿಂದ ಬೆಳಿಗ್ಗೆ 8ರವರೆಗೆ ರಾತ್ರಿ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸುವ ಪ್ರಸ್ತಾವನೆಯೂ ಇದೆ.
ಜಿಬಿಎ ಪ್ರಕಟಿಸಿರುವುದು ಸದ್ಯ ಕರಡು ಪಾರ್ಕಿಂಗ್ ನೀತಿ ಮಾತ್ರ. ಸಾರ್ವಜನಿಕರಿಂದ ಸಲಹೆ ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಿದ ಬಳಿಕ ನಿಯಮಗಳಲ್ಲಿ ಬದಲಾವಣೆ ಮಾಡುವ ಸಾಧ್ಯತೆಯಿದೆ. ಅಂತಿಮ ಅನುಮೋದನೆಯ ನಂತರವೇ ಶುಲ್ಕ ಮತ್ತು ಇತರ ನಿಯಮಗಳು ಜಾರಿಗೆ ಬರಲಿವೆ, ಈ ಪ್ರಸ್ತಾವನೆ ಜಾರಿಗೆ ಬಂದರೆ ಬೆಂಗಳೂರಿನಲ್ಲಿ ಮನೆ ಮುಂದೆ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸುವುದರಿಂದ ಹಿಡಿದು ವಾಣಿಜ್ಯ ಪ್ರದೇಶಗಳಲ್ಲಿ ಪಾರ್ಕಿಂಗ್ ಮಾಡುವವರೆಗೆ ವಾಹನ ಮಾಲೀಕರಿಗೆ ಹೆಚ್ಚುವರಿ ಶುಲ್ಕದ ಹೊರೆ ಬೀಳಬಹುದು. ಆದರೆ, ನಗರದ ಸಂಚಾರ ದಟ್ಟಣೆ ಮತ್ತು ಅಸ್ತವ್ಯಸ್ತ ಪಾರ್ಕಿಂಗ್‌ಗೆ ಇದರಿಂದ ಎಷ್ಟರ ಮಟ್ಟಿಗೆ ಪರಿಹಾರ ಸಿಗಲಿದೆ ಎಂಬುದು ನಿಯಮ ಜಾರಿಗೆ ಬಂದ ಬಳಿಕವಷ್ಟೇ ಸ್ಪಷ್ಟವಾಗಲಿದೆ.






